ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹೆಸರಿನಲ್ಲಿ ಅನಿಷ್ಟ ಪದ್ಧತಿ ಸಲ್ಲ: ಜಯಚಂದ್ರ

ಧರ್ಮಸ್ಥಳದಲ್ಲಿ ಸರ್ವ ಧರ್ಮ ಸಮ್ಮೇಳನ
Last Updated 2 ಡಿಸೆಂಬರ್ 2013, 8:22 IST
ಅಕ್ಷರ ಗಾತ್ರ

ಉಜಿರೆ: ಜಾತಿ, ಮತ, ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯ, ಶೋಷಣೆ, ಮೂಢನಂಬಿಕೆ ಹಾಗೂ ಇತರ ಅನಿಷ್ಟ ಪದ್ಧತಿಗಳನ್ನು ಸಾಮಾಜಿಕ ಆಂದೋಲನದ ರೀತಿಯಲ್ಲಿ ನಿವಾರಣೆ ಮಾಡಬೇಕು. ಎಲ್ಲಾ ಧರ್ಮಗಳೂ ಪರಸ್ಪರ ಪೂರಕವಾಗಿರಬೇಕು. ಮಾರಕವಾಗಬಾರದು. ಧರ್ಮ, ಧರ್ಮದ ಮಧ್ಯೆ ಇರುವ ಕಂದಕ ನಿವಾರಣೆಯಾಗಬೇಕು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಏರ್ಪಡಿಸಿದ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ವಧರ್ಮ ಸಮ್ಮೇಳನಗಳಿಂದ ಎಲ್ಲಾ ಧರ್ಮಗಳ ಮಧ್ಯೆ ಸಾಮರಸ್ಯ ಸಾಧ್ಯವಾಗುತ್ತದೆ. ನಂಬಿಕೆ ಇರಬೇಕು. ಆದರೆ, ಮೂಢನಂಬಿಕೆ ಸಲ್ಲದು. ಸರ್ವ ಧರ್ಮ ಸಮ್ಮೇಳನಗಳಲ್ಲಿ ವಿವಿಧ ಧರ್ಮಗಳ ಬಗ್ಗೆ ಚಿಂತನೆ, ಸಂವಾದ, ಚರ್ಚೆ ನಡೆದು ಸಮಾಜಕ್ಕೆ ಸಾರ್ಥಕ ಸಂದೇಶ ನೀಡುವಂತಾಗಬೇಕು’ ಎಂದು ಅವರು ಹೇಳಿದರು.

‘ಜಾತಿ ಪದ್ಧತಿಯ ವ್ಯವಸ್ಥೆಯನ್ನು ಮೀರಿ ನಾವು ಧರ್ಮಾತೀತರಾಗಿ ಮಾನವ ಧರ್ಮವನ್ನು ಪಾಲಿಸಿ ಉತ್ತಮ ಮನುಷ್ಯರಾಗಿ ಬಾಳಿ ಬದುಕಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಇರುವ ಅಸ್ಪೃಶ್ಯತೆ, ಮೂಢನಂಬಿಕೆ ಮೊದಲಾದ ಅನಿಷ್ಟ ಪದ್ಧತಿಗಳನ್ನು ಸರ್ವ ಧರ್ಮ ಸಮ್ಮೇಳನಗಳಿಂದ ಮಾತ್ರ ನಿವಾರಿಸಲು ಸಾಧ್ಯ. ಅಲ್ಲಲ್ಲಿ ಇಂತಹ ಸರ್ವಧರ್ಮ ಸಮ್ಮೇಳನಗಳು ನಡೆದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು’ ಎಂದು ಜಯಚಂದ್ರ ಹೇಳಿದರು.

ಧರ್ಮ ಮತ್ತು ಜಾತಿ ಎಂಬುದು ನಮಗೆ ಚರ್ಮ ಇದ್ದಂತೆ. ಸತ್ವಪೂರ್ಣವಾಗಿ, ತತ್ವ ಪೂರ್ಣವಾಗಿದ್ದಾಗ ಮಾತ್ರ ಅದಕ್ಕೆ ಶಕ್ತಿ- ಸಾಮರ್ಥ್ಯ ಇರುತ್ತದೆ. ಕಳೆ ಬರುತ್ತದೆ ಎಂದು ಸಚಿವರು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಾಂತಿಕಾರಿ ಬದಲಾವಣೆಯಾಗಿದೆ. ಫಲಾನುಭವಿಗಳಲ್ಲಿ ಶ್ರಮ ಸಂಸ್ಕೃತಿ, ಸ್ವಾವಲಂಬಿ ಭಾವನೆಯ ಜಾಗೃತಿಯಾಗಿದೆ ಎಂದು ಡಾ. ಹೆಗ್ಗಡೆಯವರ ಸೇವೆಯನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ ಗದಗ ಜಿಲ್ಲೆಯ ಬಾಳೆಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಮಾತ್ರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಸದಾ ಸತ್ಯವನ್ನು ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ನಮ್ಮ ಕಾರ್ಯ ಹಾಗೂ ಜೀವನ ಪೂರ್ಣವಾಗುತ್ತದೆ ಎಂದರು.

ಎಲ್ಲರೂ ಅಧ್ಯಯನಶೀಲರಾಗಿ ಧರ್ಮಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದ ಅವರು, ನಿಮ್ಮ ನೆರೆಕರೆಯವರನ್ನು ಪ್ರೀತಿಸಿ, ನೊಂದವರಿಗೆ ನಿಸ್ವಾರ್ಥ ಸೇವೆ ಮಾಡಿ. ಪರೋಪಕಾರ ಮಾಡಿ ಎಂದು ಅವರು ಸಲಹೆ ನೀಡಿದರು.

ಮಾನವ ಜನಾಂಗದ ಕಲ್ಯಾಣವೇ ಧರ್ಮದ ಗುರಿ
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಾರ್ಥಕ ಬದುಕಿಗೆ ಬೆಳಕನ್ನು ನೀಡಿ ದಾರಿ ತೋರಿಸುವ ಸಾಧನವೇ ಧರ್ಮ. ಶಾಶ್ವತವೂ, ನಿತ್ಯವೂ ಆದ ಧರ್ಮವನ್ನು ಯಾವುದೇ ಕಾರಣಕ್ಕೂ ತ್ಯಜಿಸಬಾರದು. ಸಮಸ್ತ ಮಾನವ ಜನಾಂಗದ ಕಲ್ಯಾಣವೇ ಧರ್ಮದ ಗುರಿಯಾಗಿದ್ದು, ಧರ್ಮದ ಚೌಕಟ್ಟಿನಲ್ಲಿ ಅರ್ಥ ಮತ್ತು ಕಾಮವನ್ನು ಬಳಸಿಕೊಳ್ಳಬೇಕು. ವಿಶ್ವದಲ್ಲಿರುವ ಅನೇಕ ಧರ್ಮಗಳ ಆಚರಣೆ, ಸ್ವರೂಪ ಮತ್ತು ಕ್ರಿಯೆಯಲ್ಲಿ ವ್ಯತ್ಯಾಸವಿದ್ದರೂ ಎಲ್ಲಾ ಧರ್ಮಗಳ ಅಂತಿಮ ಗುರಿ ಮಾನವ ಕಲ್ಯಾಣವೇ ಆಗಿದೆ. ಧರ್ಮವು ಜನರನ್ನು ಒಗ್ಗೂಡಿಸುವ ದಿವ್ಯ ಶಕ್ತಿಯನ್ನು ಹೊಂದಿದ್ದು, ಧರ್ಮ ಸಂರಕ್ಷಣೆ ಎಂದರೆ ಸಮಾಜದ ಸಂರಕ್ಷಣೆಯೇ ಆಗಿದೆ ಎಂದರು.

ಮೈಸೂರಿನ ಡಾ.ಸರಸ್ವತಿ ವಿಜಯ ಕುಮಾರ್ ‘ಜೈನ ಧರ್ಮದಲ್ಲಿ ಸಮನ್ವಯ’ ವಿಷಯದ ಮೇಲೆ, ಬೆಂಗಳೂರಿನ ಯಾಸಿನ್ ಮಲ್ಪೆ ‘ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ’ ವಿಷಯದ ಮೇಲೆ ಹಾಗೂ ಗುಲ್ಬರ್ಗದ ಅನಿಲ್ ಪ್ರಸಾದ್ ‘ಕ್ರೈಸ್ತ ಧರ್ಮದಲ್ಲಿ ಸಮನ್ವಯ ದೃಷ್ಟಿ’ ವಿಷಯದ ಮೇಲೆ ಉಪನ್ಯಾಸ ನೀಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಪ್ರೊ.ಎಸ್. ಪ್ರಭಾಕರ್ ಮತ್ತು ಡಿ.ಸುರೇಂದ್ರ ಕುಮಾರ್ ಇದ್ದರು.
ಚೆನ್ನೆೈನ ಊರ್ಮಿಳಾ ಸತ್ಯನಾರಾಯಣ ಮತ್ತು ಬಳಗದವರಿಂದ ಭರತನಾಟ್ಯ ಪ್ರದರ್ಶನವಿತ್ತು. ಬಳಿಕ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

ಇಂದು ಲಕ್ಷ ದೀಪೋತ್ಸವ
ಸೋಮವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದ್ದು ನಾಡಿನೆಲ್ಲೆಡೆಯಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಧರ್ಮಸ್ಥಳಕ್ಕೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT