ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದಲ್ಲಿ ಸಮಾನತೆ ಮುಖ್ಯ- ಭರಣಿ

Last Updated 4 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹಿಂದೂ ಧರ್ಮ ವ್ಯಾಪಾರಸ್ಥರು ಹಾಗೂ ಜ್ಯೋತಿಷಿಗಳ ಕೈಗೆ ಸಿಕ್ಕಿ ನಲುಗುತ್ತಿದೆ. ಹಿಂದೂ ಧರ್ಮವು ಧರ್ಮವಾಗಿ ಉಳಿದಿಲ್ಲ. ಧರ್ಮದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕು~ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ ಅಭಿಪ್ರಾಯಪಟ್ಟರು.

ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ)ಯ ಎಸ್‌ಸಿ/ಎಸ್‌ಟಿ ನೌಕರರ ಸಂಘ, ಅಧಿಕಾರಿಗಳ ಸಂಘ ಹಾಗೂ ನೌಕರರ ಸಂಘದ ಆಶ್ರಯದಲ್ಲಿ ಕೆಎಸ್‌ಎಫ್‌ಸಿ ಭವನದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಅಂಬೇಡ್ಕರ್ ಅವರ ಬಗ್ಗೆ ದಲಿತರು, ಸವರ್ಣಿಯರೇ ಹೆಚ್ಚು ತಿಳಿದುಕೊಂಡಿಲ್ಲ. ಅವರನ್ನು ಹೆಚ್ಚು ಹೆಚ್ಚು ಅರಿತುಕೊಳ್ಳುವ ಕೆಲಸ ಆಗಬೇಕು. ಅಂಬೇಡ್ಕರ್ ಬಗ್ಗೆ ಭಾರತೀಯ ಲೇಖಕರು ಅತಿರಂಜಿತವಾಗಿ ಬರೆದಿದ್ದಾರೆ. ವಿದೇಶಿ ಲೇಖಕರ ಪುಸ್ತಕಗಳು ವಸ್ತುನಿಷ್ಠವಾಗಿದ್ದು, ಆ ಕೃತಿಗಳನ್ನು ಓದಬೇಕು~ ಎಂದು ಅವರು ಸಲಹೆ ನೀಡಿದರು.

`ಯಾವುದೇ ಪ್ರಾಣಿಗಳಲ್ಲಿ ಜಾತಿ ಇಲ್ಲ. ಬೇರೆ ರಾಷ್ಟ್ರಗಳಲ್ಲಿ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಮಾತ್ರ ಜಾತಿ ವ್ಯವಸ್ಥೆ ಇದೆ. ಹಿಂದೂ ಧರ್ಮ ಇರುವವರೆಗೆ ಜಾತಿ ವ್ಯವಸ್ಥೆ ಇರುತ್ತದೆ. ದಲಿತರು ದೇಶದ ಮೂಲನಿವಾಸಿಗಳು. ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಕೀಳಾಗಿ ನೋಡಲಾಗುತ್ತಿದೆ. ಈ ಪ್ರವೃತ್ತಿ ಹೋಗಬೇಕು~ ಎಂದು ಅವರು ತಿಳಿಸಿದರು.

`ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇನ್ನೂ ನಿರ್ಮೂಲನೆ ಆಗಿಲ್ಲ. ಪೌರಕಾರ್ಮಿಕರ ಹುದ್ದೆಗೆ ದಲಿತರು ಬಿಟ್ಟು ಬೇರೆಯವರು ಅರ್ಜಿ ಸಲ್ಲಿಸುತ್ತಿಲ್ಲ. ಅಂತಹ ದಿಗ್ಭಂದನ ಹೇರಲಾಗಿದೆ~ ಎಂದು ಅವರು ಕಿಡಿ ಕಾರಿದರು.
ಮೈಸೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೆ. ಸೋಮಶೇಖರ್ ಮಾತನಾಡಿ, `ಅಂಬೇಡ್ಕರ್ ಒಂದು ಜಾತಿಗೆ ಮಾತ್ರ ಸೀಮಿತ ಅಲ್ಲ. ಅವರ ಸಂದೇಶಗಳನ್ನು ಎಲ್ಲರೂ ಅರಿತು ಪಾಲಿಸುವ ಕೆಲಸ ಆಗಬೇಕು~ ಎಂದರು.

ಕೆಎಸ್‌ಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಎಂ. ಮದನ್‌ಗೋಪಾಲ್, ಪ್ರಧಾನ ವ್ಯವಸ್ಥಾಪಕ ಆರ್.ಡಿ. ಕಟ್ಟಿಮನಿ, ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ಮೂರ್ತಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT