ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಣಾ ಸಾಮರ್ಥ್ಯ?

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮ್ಮ ದೇಶದಲ್ಲಿ ಮಾನವ–ಪ್ರಾಣಿ ಸಂಘರ್ಷದ ಮಟ್ಟ ತಾರಕಕ್ಕೇರಿದೆ, ಮುಂದೆಯೂ ಏರಲಿದೆ. ಕೃಷಿ, ತೋಟಗಾರಿಕೆ ಮತ್ತು ವಸತಿ ಪ್ರದೇಶಗಳ ಸ್ಥಾಪನೆಯ ನೆಪದಲ್ಲಾಗುತ್ತಿರುವ ಭೂಮಿಯ ಒತ್ತುವರಿ, ವಿಸ್ತರಣೆ ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದಾಗಿ ಪ್ರಾಣಿಸಂಕುಲ ತನ್ನ ನೆಲೆ ಕಳೆದುಕೊಳ್ಳುತ್ತಿರುವುದೇ ಇದಕ್ಕೆ ಮುಖ್ಯ ಕಾರಣ.

ವನ್ಯಜೀವಿಗಳ ಆವಾಸಸ್ಥಾನ ಒಂದೆಡೆ ತುಣುಕುಗಳಾಗಿ ಒಡೆದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಪ್ರತಿ ನೆಲೆಯಲ್ಲಿಯೂ ವನ್ಯಜೀವಿಗಳ ಸಾಂದ್ರತೆ ಅಧಿಕಗೊಳ್ಳುತ್ತಿದೆ. ಇದರ ಪ್ರತಿಫಲವೇ ವನ್ಯಪ್ರಾಣಿಗಳು ಮನುಷ್ಯನ ನೆಲೆಗಳಿಗೆ ನುಗ್ಗುತ್ತಿ ರುವುದು ಮತ್ತು ಮನುಷ್ಯನೊಂದಿಗೆ ಸಂಘರ್ಷಕ್ಕೆ ಇಳಿದಿರುವುದು. ಈ ಸಂಘರ್ಷವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ಆನೆಗಳು, ಚಿರತೆಗಳು,  ಕರಡಿಗಳು ಹಾಗೂ ಉತ್ತರದ ಭಾಗಗಳಲ್ಲಿ ಕೃಷ್ಣಮೃಗಗಳ ಹಾವಳಿಯ ಘಟನೆಗಳ ಮೂಲಕ ನಿರ್ದಿಷ್ಟವಾಗಿ ಗುರುತಿಸಬಹುದು.

ಇಂಥ ಸಂಘರ್ಷದಿಂದ ನಷ್ಟಕ್ಕೆ ಗುರಿಯಾಗಿರುವ ಜನರಿಗೆ ಪರಿಹಾರ ನೀಡುವುದು ಅವರ ಮನವೊಲಿಸುವ ಒಂದು ಮಾರ್ಗ. ಆದರೆ ಪರಿಹಾರ ನೀಡುವುದರಿಂದ ಮಾತ್ರವೇ ಆ ಸಮಸ್ಯೆ ಅಂತ್ಯಗಾಣುವುದಿಲ್ಲ. ಪ್ರಾಣಿನೆಲೆಗಳ ಉತ್ತಮ ನಿರ್ವಹಣೆಯಿಂದ ಪ್ರಾಣಿಗಳ ಸಂಖ್ಯೆಯ ಹೆಚ್ಚಳ ಮತ್ತು ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972ರ ಪರಿಣಾಮಕಾರಿ ಅನುಷ್ಠಾನದಿಂದ ವನ್ಯಜೀವಿಗಳ ಪ್ರಮಾಣದಲ್ಲಿ ಏರಿಕೆ ಯಾದಂತೆ ಸಂಘರ್ಷವೂ ಹೆಚ್ಚುತ್ತದೆ. ಈ ನೆಲೆಗಳಲ್ಲಿ ನಾವು ಎಷ್ಟು ವನ್ಯಪ್ರಾಣಿಗಳನ್ನು ಸುರಕ್ಷಿತವಾಗಿ ಇರಿಸಲು ಸಾಧ್ಯ ಎನ್ನುವುದನ್ನು ಕಾದು ನೋಡಬೇಕು.

ನಮ್ಮ ಅರಣ್ಯಗಳು ಮತ್ತು ನಮ್ಮ ಸಂರಕ್ಷಿತ ಪ್ರದೇಶಗಳ ಪ್ರಾಣಿ ನಿರ್ವಹಣಾ ಸಾಮರ್ಥ್ಯವೆಷ್ಟು? ದೇಶದ ಅರಣ್ಯ ಪ್ರದೇಶ ವಲಯಗಳ ವಿಸ್ತರಣೆಗೆ ಇರುವ ಅವಕಾಶ ಅತ್ಯಲ್ಪ. ಹೀಗಾಗಿ ನಾವು ಮಾನವ–ಪ್ರಾಣಿ ಸಂಘರ್ಷವನ್ನು ತಡೆಯುವ ಯೋಜನೆಯಲ್ಲಿ ಮೊದಲು ಈ ಕಾಡುಗಳ ಪ್ರಾಣಿ ನಿರ್ವಹಣಾ ಸಾಮರ್ಥ್ಯದ ಕುರಿತು ಚಿಂತಿಸಬೇಕಿದೆ. ಪರಿಹಾರ ವಿತರಣೆಯು ವನ್ಯಜೀವಿಗಳ ಅನುಕೂಲಗಳನ್ನು ಹೆಚ್ಚಿಸಲು ಅಥವಾ ಸುಧಾರಿಸಲು ನೆರವಾಗುವುದಿಲ್ಲ. ಅದು ಜನರನ್ನು ತಾತ್ಕಾಲಿಕವಾಗಿ ತಣಿಸುತ್ತದೆಯಷ್ಟೇ.

ಕರ್ನಾಟಕದಲ್ಲಿನ ಆನೆಗಳ ಸಂಖ್ಯೆ ಆರು ಸಾವಿರಕ್ಕೂ ಹೆಚ್ಚು. ಈ ಸಂಖ್ಯೆಯನ್ನು ಭರಿಸುವುದು ಅರಣ್ಯ ಪ್ರದೇಶಗಳಿಗೆ ಇರುವ ಸಾಮರ್ಥ್ಯವನ್ನೂ ಮೀರಿದ್ದು. ಇದರಿಂದಾಗಿ ಸುಮಾರು 300 ಆನೆಗಳು ಮಾನವ ವಸತಿ ಪ್ರದೇಶಗಳಿಗೆ ನುಗ್ಗಿವೆ. ನಮಗೆ ಚಿರತೆ ಮತ್ತು ಕಪ್ಪುಕರಡಿಗಳ ಸಂಖ್ಯೆ ಕುರಿತು ವಿಶ್ವಾಸಾರ್ಹ ಮಾಹಿತಿ ದೊರಕಿಲ್ಲ. ಆದರೆ ನಾವು ಮಾನವ ಮತ್ತು ಕಪ್ಪು ಕರಡಿ ಹಾಗೂ ಚಿರತೆಗಳೊಂದಿಗಿನ ಸಂಘರ್ಷ ಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ಅಂದಾಜು 138 ಚಿರತೆಗಳನ್ನು ಜನವಸತಿ ಪ್ರದೇಶಗಳಲ್ಲಿ ಹಿಡಿದು ಸಮೀಪದ ಅರಣ್ಯಗಳಲ್ಲಿ ಬಿಡಲಾಗಿದೆ. ಮಾನವ ನೊಟ್ಟಿಗೆ ಸಂಘರ್ಷದಲ್ಲಿ ತೊಡಗಿರುವ ಸುಮಾರು 150 ಆನೆಗಳನ್ನು ಸೆರೆಹಿಡಿದು ಬಂಧನದಲ್ಲಿರಿಸುವ ಅಗತ್ಯವಿದೆ.

ಹಾಸನ, ಕೊಡಗು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಿರುವ ಆನೆಗಳೊಂದಿಗಿನ ಸಂಘರ್ಷವನ್ನು ಹತ್ತಿಕ್ಕಲು ಇರುವುದು ಇದೊಂದೇ ಮಾರ್ಗ. ಸೆರೆಹಿಡಿದ ಆನೆಗಳನ್ನು ಬೇರೊಂದು ಪ್ರದೇಶದಲ್ಲಿ ಬಿಡುವುದು ಸಮಸ್ಯೆಗೆ ಪರಿಹಾರವಾಗಲಾರದು. ಏಕೆಂದರೆ ಆ ನೆಲೆಯೂ ಭರ್ತಿಯಾಗಿರುತ್ತದೆ. ಅವುಗಳನ್ನು ಸೆರೆಯಲ್ಲಿ ಇಟ್ಟುಕೊಳ್ಳುವುದೊಂದೇ ದಾರಿ. ನಾವು ಗಮನಿಸಬೇಕಾದ ಮುಖ್ಯ ಸಂಗತಿಯೇನೆಂದರೆ ನಮ್ಮಲ್ಲಿ ದೊಡ್ಡ ದಂತಗಳುಳ್ಳ ಆನೆಗಳೇ ಇಲ್ಲವಾಗಿ ಇರುವುದು.

ಈ ಹಿಂದೆ ಕಳ್ಳಬೇಟೆಯಾಡುವವರು ಬೃಹತ್‌ ದಂತಗಳುಳ್ಳ ಆನೆಗಳನ್ನು ಬೇಟೆಯಾಡಿದ್ದರು. ಇಂಥ ಉತ್ಕೃಷ್ಟ ದಂತಗಳ ಆನೆಗಳ ಸಂತತಿಯ ಮೂಲವೇ ಕಣ್ಮರೆಯಾಗಿದೆ. ಅರಣ್ಯ ಪ್ರದೇಶಗಳಲ್ಲಿರುವ ಇಂಥ ಉತ್ಕೃಷ್ಟ ದಂತಗಳ ಆನೆಗಳನ್ನು ಪತ್ತೆಹಚ್ಚಿ, ಹಿಡಿದು, ಸೆರೆಯಲ್ಲಿಟ್ಟು, ಅವುಗಳ ವೀರ್ಯ ಸಂಗ್ರಹಿಸಿ, ಸುರಕ್ಷಿತ ವಾಗಿರಿಸುವ ಮತ್ತು ನಾಡಾನೆಗಳಿಗೆ ಕೃತಕ ಗರ್ಭದಾರಣೆ ಮೂಲಕ ಆ ವೀರ್ಯ ಸೇರಿಸಿ ಅವುಗಳ ಸಂತತಿ ಉಳಿಸುವ ಕಾರ್ಯ ಮಾಡಬೇಕಿದೆ.

ಹೊಸತಳಿಯ ಗೂಳಿಯ ವೀರ್ಯಾಣುಗಳನ್ನು ಸಂಗ್ರಹಿಸಿ ಪಶುಗಳ ತಳಿಯನ್ನು ಸುಧಾರಣೆ ಮಾಡಲು ಹಸುಗಳಿಗೆ ಕೃತಕ ಗರ್ಭದಾರಣೆ ಮಾಡುವ ವ್ಯವಸ್ಥೆ ಇರುವಂತೆಯೇ, ಮೈಸೂರು ಆನೆ ಅಭಯಾರಣ್ಯದಲ್ಲಿನ ಏಷ್ಯಾ ಆನೆಯ ಸಂತತಿಯನ್ನು ಶಾಶ್ವತ ವಾಗಿರಿಸಲು ಉತ್ಕೃಷ್ಟ ದಂತಗಳ ಆನೆಗಳ ತಳಿಯನ್ನು ನಾವು ಅಭಿವೃದ್ಧಿಪಡಿಸಬೇಕಿದೆ. ಮುಂದಿನ ತಲೆಮಾರಿಗಾಗಿ ಈ ಉತ್ಕೃಷ್ಟ ದಂತದ ಆನೆಗಳ ಡಿ.ಎನ್‌.ಎ. ಸಂರಕ್ಷಿಸಿಡ ಬೇಕಾಗಿದೆ.

ನಮ್ಮಲ್ಲಿನ ಹುಲಿಗಳ ಸಂಖ್ಯೆ ಸುಮಾರು 300. ಇದು ಬಹುಶಃ, ಅರಣ್ಯ ನೆಲೆ ತನ್ನಲ್ಲಿ ಇರಿಸಿಕೊಳ್ಳಲು ಸಾಧ್ಯ ವಾಗುವಷ್ಟೇ ಮಿತಿಯಲ್ಲಿದೆ. ಇತ್ತೀಚೆಗೆ ಬಂಡೀಪುರದಲ್ಲಿ ಹುಲಿಯೊಂದು ಮೂರು ಮಂದಿಯನ್ನು ಕೊಂದ ಘಟನೆ ಅವುಗಳ ಸಂಖ್ಯೆಯ ಹೆಚ್ಚಳವನ್ನು ಸೂಚಿಸುತ್ತದೆ. ಕೆಲವು ಹುಲಿಗಳು ತಮ್ಮ ನೆಲೆಯಲ್ಲಿ ಎದುರಾಗುವ ಸಂಗಾತಿ ಗಳಿಗಾಗಿ ಮತ್ತು ಜಾಗಕ್ಕಾಗಿ ನಡೆಯುವ ಪೈಪೋಟಿಯ ಕಾರಣದಿಂದ ಮೂಲ ನೆಲೆ ಕಳೆದುಕೊಂಡು ಮಾನವನ ನೆಲೆಗೆ ಬಂದು ಆತನೊಟ್ಟಿಗೆ ಸಂಘರ್ಷಕ್ಕೆ ತೊಡಗುತ್ತವೆ.

ಕಪ್ಪು ಕರಡಿಗಳು, ಚಿರತೆಗಳಿಗೆ ಜಿ.ಪಿ.ಎಸ್‌. ಕಾಲರ್‌ ಅಳವಡಿಸುವುದರ ಮೂಲಕ ಒಮ್ಮೆ ಸಂಘರ್ಷಕ್ಕೆ ತೊಡಗಿದ್ದ ಪ್ರಾಣಿಯು ಅರಣ್ಯಪ್ರದೇಶದಲ್ಲಿ ಬಿಟ್ಟ ಬಳಿಕ ಮತ್ತೆ ಮಾನವನ ನೆಲೆಗೆ ಬರಲು ಹವಣಿಸುವುದೇ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಜಿ.ಪಿ.ಎಸ್‌. ಕಾಲರ್‌ ಅಳವಡಿಕೆಯು ಮುನ್ನೆಚ್ಚರಿಕೆ ನೀಡುವ ತಂತ್ರಜ್ಞಾನದ ವ್ಯವಸ್ಥೆ ಹೊಂದಿರುವುದರಿಂದ, ಪ್ರಾಣಿಯು ಮಾನವನ ನೆಲೆಯನ್ನು ಸಮೀಪಿಸಿದಾಗ ರಕ್ಷಣಾ ಸಿಬ್ಬಂದಿ ಮತ್ತು ಗ್ರಾಮಸ್ಥರಿಗೆ ಎಚ್ಚರಿಕೆ ನೀಡುವುದರಿಂದ ಹಾನಿ ಸಂಭವಿಸದಂತೆ ಮುಂಚಿತ ವಾಗಿಯೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯ.
(ಲೇಖಕರು: ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ–ವನ್ಯಜೀವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT