ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕೃಷಿ ವಿವಿಯಲ್ಲಿ ಜೈವಿಕ ವನ

Last Updated 14 ಆಗಸ್ಟ್ 2012, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಹಾಗೂ ಕೃಷಿಕರಿಗೆ ಜೈವಿಕ ಇಂಧನದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ತನ್ನ ಆವರಣದಲ್ಲಿ `ಜೈವಿಕ ವನ~ ನಿರ್ಮಿಸಿದೆ.  ಈ ಮೂಲಕ ಭವಿಷ್ಯದ ಶಕ್ತಿ ಮೂಲ ಎನ್ನಲಾಗುವ ಜೈವಿಕ ಇಂಧನದ ಬಗ್ಗೆ ಜಾಗೃತಿ ಅಭಿಯಾನವನ್ನೇ ಆರಂಭಿಸಿದೆ.

ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕೃಷಿಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗಿದ್ದ ಎಂಟು ಎಕರೆ ಭೂಮಿಯಲ್ಲಿ 1,400 ಜೈವಿಕ ಇಂಧನ ಮೂಲದ ಸಸಿಗಳನ್ನು ನೆಡಲಾಗಿದೆ. ಜತ್ರೋಫಾ (ಕಾಡು ಹರಳು), ಹೊಂಗೆ, ಬೇವು, ಸೀಮಾ ರೂಬಾ, ಹಿಪ್ಪೆ, ಸುರಹೊನ್ನೆ, ಅಮೂರ, ನಾಗಸಂಪಿಗೆ ಹಾಗೂ ಸಾಲುಧೂಪ ಇಲ್ಲಿ ಸ್ಥಾನ ಪಡೆದಿವೆ.

ಈ ಮರಗಳ ಮೂಲದ ಎಣ್ಣೆಯನ್ನು ಡೀಸೆಲ್‌ಗೆ ಪರ್ಯಾಯ ಇಂಧನವಾಗಿ ಬಳಸ ಬಹುದು ಎಂಬುದು ಈಗಾಗಲೇ   ಸಿದ್ಧಗೊಂಡಿ ರುವುದರಿಂದ ಜೈವಿಕ ವನದಲ್ಲಿ ಈ ಆಯ್ದ ಸಸ್ಯಗಳನ್ನು ನೆಡಲಾಗಿದೆ ಎನ್ನುತ್ತಾರೆ ಕೃಷಿ ವಿವಿ ಶೈಕ್ಷಣಿಕ ವಿಭಾಗದ ಡೀನ್ ಡಾ.ಮಹದೇವ ಚಟ್ಟಿ.

`ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದ ದೇಶವು ಯಾವುದೇ ರಂಗದಲ್ಲಿ ಅಭಿವೃದ್ಧಿ ಸಾಧಿಸಲಿದೆ~ ಎಂಬ ಜಾಗತಿಕ ಮಂತ್ರವನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ,  ಜೈವಿಕ ಇಂಧನ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಬಜೆಟ್‌ನಲ್ಲಿ 1,100 ಕೋಟಿ ರೂಪಾಯಿ ಮೀಸಲಿಟ್ಟಿದೆ.

ದೇಶದ ಒಟ್ಟು ಇಂಧನದ ಬೇಡಿಕೆಯ ಶೇ 70 ರಷ್ಟು ಕಚ್ಚಾ ಇಂಧನವನ್ನು ರೂ 80,000 ಕೋಟಿ ವ್ಯಯಿಸಿ ಆಮದು ಮಾಡಿ ಕೊಳ್ಳಲಾಗುತ್ತಿದೆ.  ಇದನ್ನು ಕಡಿಮೆ ಮಾಡಲು ಪರ್ಯಾಯ ಇಂಧನದ ಉಪಯೋಗ ಅಗತ್ಯ ವಿದೆ ಎಂದು ಚಟ್ಟಿ ಹೇಳುತ್ತಾರೆ.

ಜೈವಿಕ ಇಂಧನದ ಸಸ್ಯಮೂಲಗಳನ್ನು ಬೆಳೆಸಿ ಅದರಲ್ಲಿ ಇಂಧನ ತಯಾರಿಸುವಲ್ಲಿ ಯಶಸ್ಸು ಸಾಧಿಸಿ, ಅದರ ಉಪಯುಕ್ತತೆಯನ್ನು ಪ್ರಾಯೋಗಿಕವಾಗಿ ರೈತಾಪಿ ವರ್ಗಕ್ಕೆ ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದು ಜೈವಿಕ ವನ ಸ್ಥಾಪನೆಯ ಉದ್ದೇಶ ಎನ್ನುತ್ತಾರೆ.

ಮುಂದಿನ ಐದು ವರ್ಷಗಳಲ್ಲಿ  ಜೈವಿಕ ವನ ಫಲ ನೀಡಲಿದ್ದು, ರೈತರಿಗೆ ಕ್ಷೇತ್ರ ಪ್ರಾತ್ಯಕ್ಷಿಕೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಎಣ್ಣೆ ತೆಗೆಯುವ ವಿಧಾನದ ಪ್ರಾಥಮಿಕ ಪಾಠಗಳನ್ನು ಅಲ್ಲಿಯೇ ಹೇಳಿಕೊಡಲಾಗುವುದು.

ಮುಂದಿನ ದಿನಗಳಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಉದ್ಯೋಗಾವಕಾಶ ಹಾಗೂ ರೈತರಿಗೆ ಹೆಚ್ಚಿನ ಆರ್ಥಿಕ ಸಹಾಯ ದೊರೆಯುವ ಅವಕಾಶವಿದೆ. ಇದಕ್ಕೆ ಕೃಷಿ ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ರೈತರನ್ನು ಸಜ್ಜುಗೊಳಿಸಲಾಗುವುದು ಎನ್ನುತ್ತಾರೆ ಚಟ್ಟಿ.

ಇಲ್ಲಿಯವರೆಗೆ ಜೈವಿಕ ಇಂಧನ ಕ್ಷೇತ್ರದ ಅಗತ್ಯತೆ ಹಾಗೂ ಬೆಳವಣಿಗೆ ಘೋಷಣೆಗಳಿಗೆ ಸೀಮಿತವಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜೈವಿಕ ಇಂಧನ ಬಳಕೆ ಆರಂಭಿಸಿದ ನಂತರ ಇದೀಗ ಹಾಸನದ ಬಳಿ ಮೊದಲ ಜೈವಿಕ ಇಂಧನ ಬಂಕ್ ತೆರೆಯಲು ಸರ್ಕಾರ ಮುಂದಾಗಿದೆ.

ಮಾರುಕಟ್ಟೆಯ ಬಗ್ಗೆ ಇದ್ದ ಗೊಂದಲಗಳು ಕ್ರಮೇಣ ನಿವಾರಣೆಯಾಗುತ್ತಿವೆ ಎನ್ನುವ ಅವರು, ವಿಶ್ವಸಂಸ್ಥೆ ಪ್ರತಿ ವರ್ಷ ಆಗಸ್ಟ್ 10ನೇ ದಿನಾಂಕವನ್ನು ವಿಶ್ವ ಜೈವಿಕ ಇಂಧನ ದಿನವಾಗಿ ಆಚರಿಸಲು ಮುಂದಾಗಿರುವುದು ಜೈವಿಕ ಇಂಧನದ ಮಹತ್ವಕ್ಕೆ ಸಾಕ್ಷಿ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT