ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಪಂ: ಬಿಜೆಪಿ ಮಡಿಲಿಗೆ

Last Updated 5 ಜನವರಿ 2011, 9:40 IST
ಅಕ್ಷರ ಗಾತ್ರ

ಧಾರವಾಡ: ಈ ಬಾರಿ ಧಾರವಾಡ ಜಿಲ್ಲಾ ಪಂಚಾಯತಿ ಕೇಸರಿಮಯವಾಗಿದೆ. ಪಂಚಾಯತ್ ವ್ಯವಸ್ಥೆ ಜಾರಿಯಾದಾಗಿನಿಂದ ಅಧಿಕಾರದಲ್ಲಿಯೇ ಇದ್ದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವ ಮೂಲಕ ಜಿಲ್ಲಾ ಪಂಚಾಯತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಜಿಲ್ಲಾ ಪಂಚಾಯತಿಯ ಒಟ್ಟು 22 ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. 6 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ಸ್ಥಾನವನ್ನು ಜೆಡಿಎಸ್ ತನ್ನದಾಗಿಸಿಕೊಂಡಿದೆ.

ಮೀಸಲಾತಿ ಅದಲು-ಬದಲು ಮಾಡಿದ್ದರಿಂದ ಕಳೆದ ಬಾರಿಯ ಸದಸ್ಯರ ಪೈಕಿ ಇಬ್ಬರು ಮಾತ್ರ ಸ್ಪರ್ಧಿಸಿದ್ದರು. ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ಕ್ಷೇತ್ರದಿಂದ ಕಳೆದ ಅವಧಿಯಲ್ಲಿ ಜಿಪಂ ಅಧ್ಯಕ್ಷರೂ ಆಗಿದ್ದ ಎಸ್.ಆರ್. ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ. ಧಾರವಾಡ ತಾಲ್ಲೂಕಿನ ಕೊಟೂರು ಕ್ಷೇತ್ರದಿಂದ ಕಳೆದ ಬಾರಿ ಆಯ್ಕೆಯಾಗಿದ್ದ ಜೆಡಿಎಸ್‌ನ ಅಮೃತ ದೇಸಾಯಿ ಈಗ ಗರಗ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ.

ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಅವರ ಪತ್ನಿ ಕಸ್ತೂರಿ ಅಷ್ಟಗಿ ಉಪ್ಪಿನಬೆಟಗೇರಿಯಿಂದ ಹಾಗೂ ಅದರಗುಂಚಿ ಕ್ಷೇತ್ರದಲ್ಲಿ ಗದಿಗೆಪ್ಪ ಕಳ್ಳಿಮನಿ ಅವರ ಪತ್ನಿ ರತ್ನವ್ವ ಕಳ್ಳಿಮನಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ನವಲಗುಂದ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳ ತಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಬಾವುಟ ಹಾರಿಸಿದೆ. ಈ ಎರಡೂ ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೂಳಿಪಟವಾಗಿವೆ. ಕುಂದಗೋಳದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ತೆಕ್ಕೆಗೆ ತೆಗೆದುಕೊಂಡಿದ್ದು, ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಕಲಘಟಗಿಯಲ್ಲಿ ಕಾಂಗ್ರೆಸ್ ಶಾಸಕ ಸಂತೋಷ ಲಾಡ್ ಅವರ ಪ್ರಭಾವದ ನಡುವೆಯೂ ‘ಕಮಲ’ದ ಬಿರುಗಾಳಿಗೆ ‘ಕೈ’ ಕೊಚ್ಚಿಕೊಂಡು ಹೋಗಿದೆ. ಆದರೆ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ‘ಕೈ’ ಹೊಡೆತಕ್ಕೆ ‘ಕಮಲ’ ಮುದುಡಿಕೊಂಡಿದೆ.

ಇಡೀ ಜಿಲ್ಲೆಯಲ್ಲಿ ಗರಗ ಕ್ಷೇತ್ರದಲ್ಲಿ ಮಾತ್ರ ‘ತೆನೆ ಹೊತ್ತ ಮಹಿಳೆ’ ಮುನ್ನಡೆದಿದ್ದಾಳೆ. ಗರಗ ಕ್ಷೇತ್ರದಲ್ಲಿ ಜೆಡಿಎಸ್‌ನ ಅಮೃತ ದೇಸಾಯಿ ತಮ್ಮ ಸಮೀಪದ ಅಭ್ಯರ್ಥಿ ಬಿಜೆಪಿಯ ಬಸವರಾಜ ಜೀವಣ್ಣವರ ಅವರಿಗಿಂತ 3680 ಹೆಚ್ಚಿಗೆ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಜಿಪಂನ ಕಲಘಟಗಿ ತಾಲ್ಲೂಕಿನ ತಬಕದ ಹೊನ್ನಿಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಬಸವರಾಜ ಕರಡಿಕೊಪ್ಪ 4075 ಮತಗಳ ಅತಂರದಿಂದ ಅಂದರೆ ಅತೀ ಹೆಚ್ಚು ಅಂತರದಿಂದ ಜಯಗಳಿಸಿದ್ದರೆ, ಕುಂದಗೋಳ ತಾಲ್ಲೂಕಿನ ಗುಡಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕನಗೌಡ್ರ ಹಿರೇಗೌಡ್ರ ಕಡಿಮೆ ಮತಗಳ ಅಂತರದಿಂದ, ಅಂದರೆ ಕೇವಲ 106 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಿಜಯೋತ್ಸವ:

ಜಯಗಳಿಸಿದ ಅಭ್ಯರ್ಥಿಗಳ ಬೆಂಬಲಿಗರು, ಅಭಿಮಾನಿಗಳು ಗುಲಾಲು ತೂರಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದರೂ, ಇದನ್ನು ಲೆಕ್ಕಿಸದೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಸಮೀಪವೇ ವಿಜಯೋತ್ಸವ ಆಚರಿಸಿದರು. ಜಯಗಳಿಸಿದ ತಮ್ಮ ನಾಯಕನನ್ನು ಹೆಗಲ ಮೇಲೆ ಹೊತ್ತು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಬಿಗಿ ಬಂದೋಬಸ್ತ್:
ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿತ್ತು. ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳ ಮತ ಎಣಿಕಾ ಕೇಂದ್ರದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT