ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಬಾಲಕ, ಬಾಲಕಿಯರು ಚಾಂಪಿಯನ್

Last Updated 5 ಅಕ್ಟೋಬರ್ 2012, 9:55 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಗುರುವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಶಾಲಾ ಹಾಕಿ ಪಂದ್ಯಾವಳಿಯಲ್ಲಿ ಧಾರವಾಡ  ಶೈಕ್ಷಣಿಕ ಜಿಲ್ಲೆಯ ಬಾಲಕ, ಬಾಲಕಿಯರ ತಂಡಗಳು ಜಯ ಸಾಧಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.

ಏಕಪಕ್ಷೀಯವಾಗಿದ್ದ ಬಾಲಕರ ವಿಭಾಗದ ಫೈನಲ್‌ನಲ್ಲಿ ಧಾರವಾಡ ತಂಡ 3-0 ಗೋಲುಗಳ ಅಂತರದಿಂದ ಬಾಗಲಕೋಟೆ ತಂಡವನ್ನು ಪರಾಭವ ಗೊಳಿಸಿತು. ಧಾರವಾಡ ತಂಡದ ಪರವಾಗಿ ಮೌಲವಾಲಿ, ಕಾರ್ತಿಕ್ ಮತ್ತು ಬಸವರಾಜ ತಲಾ ಒಂದೊಂದು ಗೋಲು ಬಾರಿಸಿದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಧಾರವಾಡ ತಂಡ 3-0 ಗೋಲು ಗಳಿಂದ ಬಾಗಲಕೋಟೆ ತಂಡದ ವಿರುದ್ಧ ಜಯ ಸಾಧಿಸಿತು. ಧಾರವಾಡದ ಪರವಾಗಿ ತನುಜಾ ಎರಡು ಮತ್ತು ಸಹನಾ ಒಂದು ಗೋಲು ತಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಬೆಳಗಾವಿ ವಿಭಾಗದ ಬಾಗಲಕೋಟೆ, ಹಾವೇರಿ, ಬೆಳಗಾವಿ, ವಿಜಾಪುರ, ಚಿಕ್ಕೋಡಿ, ಗದಗ, ಧಾರವಾಡ ಶೈಕ್ಷಣಿಕ ಜಿಲ್ಲಾ ತಂಡಗಳ 224 ಬಾಲಕ- ಬಾಲಕಿಯರು ಭಾಗವಹಿಸಿದ್ದರು. ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ.

ಉದ್ಘಾಟನೆ: ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಬಿವಿವಿಎಸ್ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿ.ಎಂ.ಅಥಣಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ದೈಹಿಕ ಸಾಮಾರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಬೆಳಸಿಕೊಂಡು, ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಧ್ವಜವನ್ನು ಆರೋಹಣ ಮಾಡಿದ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ದೇಶದಲ್ಲಿ ಹಾಕಿ ಬಗ್ಗೆ ಆಸಕ್ತಿ ಕಡಿಮೆಯಾಗಿದೆ, ಹಾಕಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಅಲ್ಲ, ಅನೇಕ ದೇಶೀಯ ಕ್ರೀಡೆಗಳೂ ಇವೆ. ಯುವ ಜನತೆ ದೇಶೀಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಬಾಗಲಕೋಟೆ ಡಿಡಿಪಿಐ ಎ.ಎಂ.ಮಡಿವಾಳರ, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ, ಬಾಗಲಕೋಟೆ ತಾ.ಪಂ.ಉಪಾಧ್ಯಕ್ಷ ರಾಜಶೇಖರ ಮುದೇನೂರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಡಿ.ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ, ಬಾಗಲಕೋಟೆ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಮಾಚಾ, ಕಾರ್ಯದರ್ಶಿ ಪಿ.ಬಿ.ಪಾಟೀಲ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಂ. ರಾಂಪುರ, ಸ್ವಾಗತ ಸಮಿತಿ ಸದಸ್ಯ ಎಸ್.ಎಸ್.ಕಾತರಕಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT