ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಹೈಕೋರ್ಟ್ ಪೀಠವೇ ಇರಲಿ: ಅಭಿಮತ

ಕೊಪ್ಪಳ - ಬಳ್ಳಾರಿ ಜಿಲ್ಲೆ ಗುಲ್ಬರ್ಗ ಪೀಠದ ವ್ಯಾಪ್ತಿಗೆ ಸೇರಿಸಲು ವಿರೋಧ
Last Updated 20 ಜುಲೈ 2013, 8:14 IST
ಅಕ್ಷರ ಗಾತ್ರ

ಕೊಪ್ಪಳ: ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಗೆ ಧಾರವಾಡದ ಹೈಕೋರ್ಟ್ ಪೀಠವನ್ನೇ ಮುಂದುವರಿಸಬೇಕು. ಎರಡೂ ಜಿಲ್ಲೆಗಳನ್ನು ಗುಲ್ಬರ್ಗದ ಪೀಠಕ್ಕೆ ವರ್ಗಾಯಿಸಬಾರದು ಎಂದು ಶುಕ್ರವಾರ ಇಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಒತ್ತಾಯ ಮಾಡಲಾಯಿತು.

ಸಂಘದ ಅಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಗುಲ್ಬರ್ಗ ಹೈಕೋರ್ಟ್ ಪೀಠಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಈ ಎರಡೂ ಜಿಲ್ಲೆಗಳ ಜನತೆ ಭೌಗೋಳಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಧಾರವಾಡದ ಜತೆ ಹೊಂದಿಕೊಂಡಿದ್ದಾರೆ. ಮನೆ ಬಾಗಿಲಿಗೆ ನ್ಯಾಯ ಪರಿಕಲ್ಪನೆ ಅಡಿಯಲ್ಲಿ ಜನಸಾಮಾನ್ಯನಿಗೆ ನ್ಯಾಯವು ಹತ್ತಿರದಲ್ಲೇ ಕಡಿಮೆ ವೆಚ್ಚದಲ್ಲಿ ಸಿಗುವಂತಾಗಬೇಕು. ಆದರೆ, ಗುಲ್ಬರ್ಗ ಪೀಠದ ವ್ಯಾಪ್ತಿಗೆ ಈ ಜಿಲ್ಲೆಗಳನ್ನು ಒಳಪಡಿಸಿದರೆ ಎಲ್ಲ ದೃಷ್ಟಿಯಿಂದಲೂ ದೂರವಾಗುತ್ತದೆ. ಹೈದರಾಬಾದ್ -ಕರ್ನಾಟಕದ ವಿಶೇಷ ಸ್ಥಾನಮಾನಕ್ಕೂ ನ್ಯಾಯಪೀಠದ ವರ್ಗಾವಣೆಗೂ ಸಂಬಂಧವಿಲ್ಲ. ಹೈ-ಕ ವಿಶೇಷ ಸ್ಥಾನಮಾನವು ಜಿಲ್ಲೆಯ ಅಭಿವೃದ್ಧಿ, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಸಂಬಂಧಿಸಿದಂತೆ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯನ್ನು ಧಾರವಾಡ ಪೀಠದಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸಂಸತ್‌ನ ಮಾಜಿ ಸದಸ್ಯ ಕೆ.ವಿರೂಪಾಕ್ಷಪ್ಪ ಮಾತನಾಡಿ, ಗುಲ್ಬರ್ಗದಲ್ಲಿ 8 ಸಾವಿರ, ಧಾರವಾಡದಲ್ಲಿ 45 ಸಾವಿರ ಪ್ರಕರಣಗಳು ಇವೆ. ಗುಲ್ಬರ್ಗದಲ್ಲಿ ಪ್ರಕರಣಗಳ ವಿಲೇವಾರಿ ಆಗುವುದು ನಿಧಾನ. ಜಿಲ್ಲೆಗಳ ಪ್ರಕರಣಗಳನ್ನು ಗುಲ್ಬರ್ಗಕ್ಕೆ ವರ್ಗಾಯಿಸುವ ಬದಲು ಬೆಂಗಳೂರಿಗೇ ಕಳುಹಿಸಿ. ಕೋರ್ಟ್ ಕೆಲಸದ ಜತೆಗೆ ಇತರ ಕೆಲಸಗಳನ್ನೂ ಪೂರೈಸಬಹುದು. ಅಂತೆಯೇ ಹೈ-ಕ ವಿಶೇಷ ಸ್ಥಾನಮಾನದ ಸೌಲಭ್ಯಗಳು ಇಲ್ಲಿನ ಮೂಲ ನಿವಾಸಿಗಳಿಗಷ್ಟೇ ಸಿಗಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ಗುಲ್ಬರ್ಗದವರು ಎಲ್ಲವೂ ತಮಗೇ ಇರಲಿ ಎಂದು ಪ್ರತಿಪಾದಿಸುತ್ತಿರುವುದು ವಿಷಾದನೀಯ. ನಮಗೆ ಹತ್ತಿರವಿರುವ ನ್ಯಾಯಾಲಯವನ್ನು ದೂರವಿಡಬಾರದು ಎಂದು ಕೋರಿದರು.

ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಮಾತನಾಡಿ, ಹೈಕೋರ್ಟ್ ಸಂಚಾರಿ ಪೀಠ ಕಾಯಂ ಆದ ಬಳಿಕ ಕೊಪ್ಪಳ ಬಳ್ಳಾರಿ ಎರಡೂ ಜಿಲ್ಲೆಗಳನ್ನು ಜಗ್ಗಾಡುತ್ತಿದ್ದಾರೆ. ಗುಲ್ಬರ್ಗ ವಕೀಲರ ಸಂಘ ನಮಗೆ ಅನ್ಯಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜನರಿಗೆ ನ್ಯಾಯ ಒದಗಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ರಾಷ್ಟ್ರಪತಿ ಹಾಗೂ ಕಾನೂನು ಸಚಿವರು ಪ್ರಮುಖ ಪಾತ್ರ ವಹಿಸಬೇಕು ಎಂದು ಕೋರಿದರು.

ಸಾಹಿತಿ ಅಲ್ಲಮ ಪ್ರಭು ಬೆಟದೂರು ಮಾತನಾಡಿ, ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ಗುಲ್ಬರ್ಗದ ಹಿತ ಕಾಪಾಡಿದರೆ ಸಾಲದು. ಹೈ-ಕ ಎಂದ ಮಾತ್ರಕ್ಕೆ ಗುಲ್ಬರ್ಗಕ್ಕೇ ಹೋಗಬೇಕೇ? ಜನಪ್ರತಿನಿಧಿಗಳಾದವರು ಜನರ ಪರ ಅಭಿಪ್ರಾಯ ವ್ಯಕ್ತಪಡಿಸಬೇಕು. ಅದಕ್ಕಾಗಿ ಗಟ್ಟಿತನದಿಂದ ಹೋರಾಟ ಬಲಪಡಿಸೋಣ ಎಂದರು.

ಕಾರ್ಮಿಕ ಮುಖಂಡ ಜೆ. ಭಾರಾದ್ವಾಜ್, ಎಪಿಎಂಸಿ ಅಧ್ಯಕ್ಷ ಡಿ. ಮಲ್ಲಣ್ಣ, ರೈತ ಮುಖಂಡ ಹನುಮಂತಪ್ಪ ಹೊಳಿಯಾಚೆ, ಸಾಹಿತಿ ಮಹಾಂತೇಶ ಮಲ್ಲನಗೌಡರ್, ಇಂದಿರಾ ಬಾವಿಕಟ್ಟಿ, ಸಂಧ್ಯಾ ಮಾದಿನೂರು, ಆರ್.ವಿ.ಮಠದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT