ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡಕ್ಕೆ ಕರೆಸುವ ಯತ್ನ ಫಲ ಕೊಡಲಿಲ್ಲ...

`ಹೆಗಲ ಮೇಲೆ ಕೈ ಹಾಕಿ ಮಾತನಾಡಿದ ಸ್ನೇಹ ಜೀವಿ'
ಅಕ್ಷರ ಗಾತ್ರ

ಹದಿನೈದು ವರ್ಷಗಳ ಹಿಂದೆ ಪಣಜಿಯ ಕಲಾ ಅಕಾಡೆಮಿಯಲ್ಲಿ ಕೇಸರ್‌ಬಾಯಿ ಕೇಳ್ಕರ್ ಅವರ ಸ್ಮರಣಾರ್ಥ ನಡೆದಿದ್ದ ಸಂಗೀತೋತ್ಸವವದಲ್ಲಿ ರವಿಶಂಕರ್ ಸಿತಾರ್ ವಾದನ ನಡೆಸಿಕೊಟ್ಟಿದ್ದರು. ಅಲ್ಲಿನ ಅಕಾಡೆಮಿ ಕಟ್ಟಡದ ಅಂದಕ್ಕೆ ಮಾರುಹೋಗಿದ್ದ ಅವರು, ಕಾರ್ಯಕ್ರಮದ ಬಳಿಕ ಕಟ್ಟಡ ನೋಡಲು ನನ್ನನ್ನೂ ಕರೆದೊಯ್ದರು. ಇಡೀ ಕಟ್ಟಡ ನೋಡುವವರೆಗೂ ನನ್ನ ಹೆಗಲ ಮೇಲೆ ಕೈ ಹಾಕಿ ಆಪ್ತತೆ ತೋರಿದ ಸ್ನೇಹ ಜೀವಿ. ಅತ್ಯಂತ ಸರಳ ವ್ಯಕ್ತಿತ್ವದವರು.

`ಸಿತಾರ್ ವಾದನದ ನಾದಸುಧೆಯನ್ನು ಅಮೆರಿಕ, ಯೂರೋಪ್ ಸೇರಿದಂತೆ ಹಲವು ರಾಷ್ಟ್ರ ಹಾಗೂ ಖಂಡಗಳಲ್ಲಿ ಅವರು ನೀಡಿದ್ದರಿಂದಲೇ ಸಿತಾರ್‌ಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ. ನನ್ನ ಅಜ್ಜ ರಹಿಮತ್ ಖಾನ್‌ರ ಸಿತಾರ್ ವಾದನವನ್ನು ಕೇಳಿ ಮೆಚ್ಚಿಕೊಂಡ ವಿಷಯವನ್ನು ಪಂ.ರವಿಶಂಕರಜೀ ನನ್ನೊಂದಿಗೆ ಹಂಚಿಕೊಂಡಿದ್ದರು. `ಮೆಹನತ್ ಕರೊ, ಬಹುತ್ ಮೆಹನತ್ ಕರೊ, ಬಹುತ್ ಆಗೆ ಬಢೋಗೆ' (ಪರಿಶ್ರಮ ಪಡು, ಬಹಳಷ್ಟು ಪರಿಶ್ರಮ ಪಡು, ಮುಂದಕ್ಕೆ ಬರುವೆ) ಎನ್ನುವ ಮೂಲಕ ನನ್ನನ್ನು ಆಶೀರ್ವದಿಸಿದ್ದರು.

ಪಂ.ರವಿಶಂಕರ್ ಕಾರ್ಯಕ್ರಮ ಇದೆ ಎಂದರೆ ಅವರಿಗೆ ತಬಲಾ ಸಾಥ್ ನೀಡಲು ಉಸ್ತಾದ್ ಅಲ್ಲಾ ರಖಾ ಇದ್ದಾರೆಂದೇ ಅರ್ಥ. ಈ ಇಬ್ಬರ ಜೋಡಿ ಅಸಂಖ್ಯ ಕಾರ್ಯಕ್ರಮಗಳನ್ನು ನೀಡಿದೆ. ಕೆಲ ಕಛೇರಿಗೆ ಅಲ್ಲಾ ರಖಾ ಪುತ್ರ ಪಂ.ಝಾಕಿರ್ ಹುಸೇನ್ ಅವರೂ ತಬಲಾ ಸಾಥ್ ನೀಡಿದ್ದರು. ಪಣಜಿಯ ಕಲಾ ಅಕಾಡೆಮಿಯಲ್ಲಿ ನೀಡಿದ್ದ ಸಿತಾರ್ ಕಛೇರಿಗೆ ಮಾತ್ರ ಕುಮಾರ್ ಬೋಸ್ ತಬಲಾ ಸಾಥ್ ನೀಡಿದ್ದರು.

ಅವರ ಅತ್ಯಂತ ಜನಪ್ರಿಯವಾದ ರಾಗ್ ಭೂಪಾಲಿ ತೋಡಿಯನ್ನು ನಾನು ಚಿಕ್ಕವನಿದ್ದಾಗ ಕೇಳಿದ್ದೆ. ಅತ್ಯಂತ ಖುಷಿ ಕೊಟ್ಟ ರಾಗಗಳಲ್ಲಿ ಇದೂ ಒಂದು. ಅವರು ಲಯಕಾರಿಯಲ್ಲಿ ಹೊರಡಿಸುತ್ತಿದ್ದ ನಾದ ವಿಶಿಷ್ಟವಾದುದು. ಅದರಲ್ಲೇ ಚಪಕಾ, ಚಪಕಾ, ಜಮ್ ಜಮಾ ಶೈಲಿಯ ನಾದ ಅವರ ವೈಶಿಷ್ಟ್ಯ. ಅವರು ಹಲವು ರಾಗಗಳನ್ನು ನುಡಿಸುತ್ತಿದ್ದರಷ್ಟೇ ಅಲ್ಲ, ಹೊಸ ರಾಗಗಳನ್ನೂ ಆವಿಷ್ಕರಿಸಿದ್ದರು. ತಿಲಕ್ ಕಾಮೋದಿ ಹಾಗೂ ಶ್ಯಾಮ್ ಕಲ್ಯಾಣ್ ರಾಗಗಳನ್ನು ಕೂಡಿಸಿ ತಮ್ಮದೇ ಆದ ತಿಲಕ್ ಶ್ಯಾಮ್ ಎಂಬ ನೂತನ ರಾಗವನ್ನು ಆವಿಷ್ಕರಿಸಿದ್ದರು. ಅದನ್ನು ಅಷ್ಟೇ ತನ್ಮಯತೆಯಿಂದ ಹಾಡುತ್ತಿದ್ದರು. ಪರಮೇಶ್ವರಿ ರಾಗವನ್ನೂ ಪ್ರೀತಿಯಿಂದ ಹಾಡುತ್ತಿದ್ದರು. ಅವರ ಸಿತಾರ್ ವಾದನಕ್ಕೆ ರವಿಶಂಕರ್ ಪ್ರಕಾರವೆಂದು ಹೆಸರಿಸಬಹುದು. ಅದು ನಾವು ಅವರಿಗೆ ಸಲ್ಲಿಸುವ, ಅವರಿಗೆ ಸಲ್ಲುವ ಯೋಗ್ಯ ಗೌರವವೂ ಹೌದು.

ಸುಮಾರು 20 ವರ್ಷಗಳ ಹಿಂದಿನ ಮಾತು. ಈ ಸಿತಾರ್ ಮೋಡಿಗಾರನನ್ನು ಧಾರವಾಡಕ್ಕೆ ಕರೆಸಬೇಕೆಂಬ ಪ್ರಯತ್ನವೂ ನಡೆದಿತ್ತು. ನನ್ನ ಹಿರಿಯ ಅಣ್ಣ ಉಸ್ತಾದ್ ಬಾಲೇ ಖಾನ್ ಅವರು ಈ ಪ್ರಯತ್ನ ಮಾಡಿದ್ದರು. ಆದರೆ ಆಗ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ಇರಲಿಲ್ಲ. ಹೀಗಾಗಿ ಇಲ್ಲಿಗೆ ಅವರನ್ನು ಕರೆತರಲು ಆಗಲಿಲ್ಲ.

1982ರಲ್ಲಿ ನವದೆಹಲಿಯಲ್ಲಿ ನಡೆದ 9ನೇ ಏಷ್ಯನ್ ಕ್ರೀಡಾಕೂಟದ `ಸ್ವಾಗತಂ, ಅಥ ಸ್ವಾಗತಂ, ಆನಂದಮಂಗಲ ಮಂಗಲಂ...' ಎಂಬ ಸ್ವಾಗತ ಗೀತೆಯನ್ನು ಪಂ.ರವಿಶಂಕರ್ ಸಂಯೋಜಿಸಿದ್ದರು. ಆ ಇಡೀ ಹಾಡನ್ನು ಮರೆಯಲು ಸಾಧ್ಯವೇ ಇಲ್ಲ.

ರವಿಶಂಕರ್ ಅವರನ್ನು ಕಳೆದುಕೊಂಡು ಇಡೀ ಸಂಗೀತ ಲೋಕವೇ ಅನಾಥವಾಗಿದೆ. ದಶಕಗಳವರೆಗೆ ಅವರ ಒಡನಾಡಿಯಾಗಿದ್ದ ಸಿತಾರ್‌ಗೆ ಈಗ ಯಾರು ದಿಕ್ಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT