ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ತಂಪಾದ ಇಳೆ

Last Updated 1 ಜೂನ್ 2013, 12:27 IST
ಅಕ್ಷರ ಗಾತ್ರ

ಸಕಲೇಶಪುರ: ಕಳೆದ ಒಂದು ತಿಂಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ `ಮುಂಗಾರು ಮಳೆ' ಶುಕ್ರವಾರ ಸಂಜೆ ತಾಲ್ಲೂಕಿನಾದ್ಯಂತ ಬಿಡುವಿಲ್ಲದೆ ಒಂದೇ ಸಮನೆ ಸುರಿದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮೇ ಎರಡನೇ ವಾರದಿಂದ ಮೋಡ ಮುಸುಕಿದ ವಾತಾವರಣ ಇತ್ತು. ಇನ್ನೇನು ಮಳೆ ಬೀಳುತ್ತದೆ ಎನ್ನುವಷ್ಟರಲ್ಲಿ ವೇಗವಾದ ಗಾಳಿಯೊಂದಿಗೆ ಮಳೆ ಮೋಡಗಳು, ಬಾಳ್ಳುಪೇಟೆ, ಹಾಸನ, ಬೇಲೂರು ಭಾಗದತ್ತ ಚಲಿಸಿ ಆ ಭಾಗದಲ್ಲಿ ಮಳೆ ಸುರಿಯುತ್ತಿತ್ತು. ಸತತ ಎರಡು ವಾರಗಳ ನಂತರ ಸಂಜೆ 6.15ರಿಂದ ಗುಡುಗು, ಮಿಂಚಿನೊಂದಿಗೆ ಶುರುವಾರ ಮಳೆ ಬಿಡುವಿಲ್ಲದಂತೆ ಸುರಿಯುತ್ತಲೇ ಇತ್ತು. ಕಳೆದ ವಾರ ತಾಲ್ಲೂಕಿನ ಹೆತ್ತೂರು, ಹಾನುಬಾಳು, ಬಾಳ್ಳುಪೇಟೆ, ಬೆಳಗೋಡು ಪಕ್ಕದ ಅರೇಹಳ್ಳಿ ಸುತ್ತಮುತ್ತ ಸರಾಸರಿ 30ಮಿ.ಮೀ. ಮಳೆಯಾಗಿತ್ತು. ಸಕಲೇಶಪುರ ಸುತ್ತಮುತ್ತ (ಕಸಬಾ ಹೋಬಳಿ) ಮಾತ್ರ ಕಳೆದ ಫೆಬ್ರುವರಿ ಯಿಂದ ಈವರೆಗೆ ಕೇವಲ 73 ಮಿ.ಮೀ. (ಮೂರು ಇಂಚು) ಮಳೆಯಾಗಿತ್ತು. 2011ರ ಮೇ 31ಕ್ಕೆ 290 ಮಿ.ಮೀ. (11.88 ಇಂಚು) 2012ರ ಮೇ 31ರ ವರೆಗೆ 220 ಮಿ.ಮೀ. (9 ಇಂಚು) ಮಳೆ ದಾಖಲಾಗಿತ್ತು. `ಪ್ರತಿ ವರ್ಷ ಮಳೆ ಬೀಳುವ ಪ್ರಮಾಣ ಕಡಿಮೆ ಆಗುತ್ತಲೇ ಇದ್ದು, ಕಾಫಿ ಹಾಗೂ ಕಾಳು ಮೆಣಸು ಬೆಳೆ ಮೇಲೆ ಭಾರಿ ದುಷ್ಪರಿಣಾಮ ಉಂಟಾಗುತ್ತಿದೆ' ಎಂದು ತೋಟದಗದ್ದೆ ವಿನಯ್ `ಪ್ರಜಾವಾಣಿ' ಗೆ ತಿಳಿಸಿದರು.

ಕಳೆದ ಎರಡು ತಿಂಗಳಿಂದ ಸತತವಾಗಿ ಮಳೆ ಬೀಳದೆ ಇರುವುದರಿಂದ ಭೂಮಿಯ ಶಾಖ ಹೆಚ್ಚಾಗಿ ಕಾಫಿ ಬೆಳೆಗೆ ಕಾಂಡ ಕೊರಕ ರೋಗ ಹೆಚ್ಚಾಗಿದೆ. ಕಾಳು ಮೆಣಸು ಬೆಳೆ ಇನ್ನೂ ಗರಿ ಕಟ್ಟಿಲ್ಲ, ಕಾಫಿ ಗಿಡದಲ್ಲಿ ಈಗಾಗಲೇ ಹೊಸ ಚಿಗುರುಗಳು ಬಂದು ಬೋಡೋ ಮಿಕ್ಚರ್ ಸಿಂಪಡಣೆ ಮಾಡಬೇಕಾಗಿತ್ತು. ಒಂದು ಸುತ್ತು ರಸಗೊಬ್ಬರ ಸಹ ಹಾಕಬೇಕಾಗಿತ್ತು. ಮಳೆ ಕೈಕೊಟ್ಟ ಕಾರಣ ಕಾಫಿ ತೋಟಗಳಲ್ಲಿ ಈ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಮುಂದಿನ ಒಂದು ವಾರದ ಒಳಗೆ ಇನ್ನೂ ಎರಡು ಹಂತದಲ್ಲಿ ಮಳೆ ಬಂದರೆ ಮಾತ್ರ ಭೂಮಿಯಲ್ಲಿ ತೇವಾಂಶ ಉಂಟಾಗಿ ರಸಗೊಬ್ಬರ ಹಾಕಬಹುದು. ಮುಂಗಾರು ಬಿಡುವು ನೀಡದಂತೆ ಶುರುವಾದರೆ ಗೊಬ್ಬರ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ವಿನಯ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT