ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ರೈತರಲ್ಲಿ ಚಿಗುರೊಡೆದ ಕನಸು

Last Updated 27 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಎರಡು ವಾರಗಳಿಂದ ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಕಂಗಾಲಾಗಿದ್ದ ರೈತರ ಮೊಗದಲ್ಲಿ ಈಗ ಜೀವ ಕಳೆ ಚಿಗುರುತೊಡಗಿದೆ. ಸುಡುತ್ತಿದ್ದ ಸೂರ್ಯನ ಪ್ರಕೋಪ ನಿತ್ಯ ಅನುಭವಿಸುತ್ತಿದ್ದ ರೈತರ ಬಾಳು ಹಸನಾಗುವ ಲಕ್ಷಣ ಕಾಣತೊಡಗಿದೆ.

`ನಮ್ಮೂರಿಗೆ ಬರಾಗಲ ಬಂದಿದೆ. ನಮಗೆ ಸಹಾಯ ಮಾಡಿ~ ಎಂದು ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದ ಅನ್ನದಾತರು ಈಗ ಮತ್ತೆ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.

ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವುದು, ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ.
`ದೀಪಾವಳಿಯಲ್ಲಿ ದೀಪ ಹಿಡಿದುಕೊಂಡು ಪ್ರಾರ್ಥಿಸಿದರೂ ಮಳೆ ಬರಲ್ಲ~ ಎಂದು ನಿರಾಶೆಯಿಂದ ಮತನಾಡುತ್ತಿದ್ದ ಕೃಷಿಕರು ಈಗ ಆಶಾಜೀವಿಗಳಾಗಿದ್ದಾರೆ.

ಮಳೆಯಿಲ್ಲದೇ ಅಲ್ಪಸ್ವಲ್ಪ ಬೆಳೆ ನಷ್ಟವಾಗಿರಬಹುದು, ಆದರೆ ಈಗ ವರುಣ ಕೃಪೆ ತೋರಿರುವುದು ಮತ್ತೆ ಜೀವನೋತ್ಸಾಹ ಮೂಡಿಸಿದೆ. ಹೊಲದಲ್ಲಿ ತೆನೆ ಬಂದು, ಕಾಳು ಕಟ್ಟಿದರೆ ಅದಕ್ಕಿಂತ ಸಂತೋಷ ಇನ್ನೇನೂ ಬೇಕು ಎಂದು ರೈತರು ಹೇಳುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಮಳೆ ಬಾರದಿರುವುದು ಕಂಡು ಕಂಗಾಲಾಗಿದ್ದ ರೈತರು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಕೈಗೊಂಡು ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಾಗ, `ಬಾಗೇಪಲ್ಲಿ, ಗುಡಿಬಂಡೆ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳನ್ನು ಸಹ ಬರಪೀಡಿತವೆಂದು ಘೋಷಿಸಬೇಕು~ ಎಂದು ಒತ್ತಾಯಿಸಲಾಗಿತ್ತು.

ಪ್ರತಿಭಟನೆ, ನಿರಾಶೆ, ವಿದ್ಯುತ್ ಸಮಸ್ಯೆ, ರಸಗೊಬ್ಬರಗಳ ಬೆಲೆ ಏರಿಕೆ, ಬೆಳೆಗಳ ಒಣಗುವಿಕೆ ಮುಂತಾದವುಗಳ ನಡುವೆಯೇ ಮಳೆಯಾಗುತ್ತಿರುವುದು ಕೃಷಿಕರಲ್ಲಿ ಕೊಂಚ ಸಂತಸ ಮೂಡಿಸಿದೆ. `ನಾವು ಬೆಳೆದಿದ್ದ ದ್ರಾಕ್ಷಿ, ರಾಗಿ ಬೆಳೆಗಳು ಮುಂತಾದವು ಭಾಗಶಃ ಒಣಗಿದ್ದವು. ಆದರೆ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹೊಲದಲ್ಲಿ ತೆನೆ ಬರತೊಡಗಿದೆ.

ಇನ್ನೂ ಮೂರು ದಿನ ಇದೇ ರೀತಿಯಲ್ಲಿ ಮಳೆಯಾದರೆ, ಜಮೀನು ತೇವಗೊಳ್ಳುವುದಲ್ಲದೇ ಕಾಳು ಕಟ್ಟಲು ಕೂಡ ಸಾಧ್ಯವಾಗುತ್ತದೆ~ ಎಂದು ರೈತರು ಹೇಳುತ್ತಾರೆ.

`ದೀಪಾವಳಿ ಸಂದರ್ಭದಲ್ಲಿ ನಾವು ಎಂದಿಗೂ ಮಳೆಯನ್ನು ನಿರೀಕ್ಷಿಸಿರಲಿಲ್ಲ. ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲದ ಕಾರಣ ನಿರಾಶೆಗೊಂಡಿದ್ದೆವು. ಒಂದರ್ಥದಲ್ಲಿ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದೆವು.

ಎರಡು ವಾರಗಳಿಂದ ಮಳೆ ಸುರಿಯುವ ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಕೆಯಾಗುತ್ತಿರುವುದು ಸಂತಸ ತಂದಿತು. ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದರೂ ಕೊಳ್ಳದೇ ಬೇರೆ ಮಾರ್ಗವಿಲ್ಲ. ಮಳೆರಾಯ ಇದೇ ರೀತಿಯಲ್ಲಿ ಇನ್ನೂ ಕೆಲವು ದಿನ ಕೃಪೆ ತೋರಿದರೆ, ಕೃಷಿ ಚಟುವಟಿಕೆಗೆ ಸಹಕಾರಿಯಾಗುತ್ತದೆ~ ಎಂದು ರೈತ ಮುನಿರಾಜು ತಿಳಿಸಿದರು.

ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರವೂ ಸಹ ಮಳೆಯಾಗಿದ್ದು, ನಗರಪ್ರದೇಶದ ನಿವಾಸಿಗಳು ಸ್ವಲ್ಪ ತೊಂದರೆ ಎದುರಿಸಬೇಕಾಯಿತು. ಎಂ.ಜಿ.ರಸ್ತೆ, ಬಿ.ಬಿ.ರಸ್ತೆ, ಹಳೆಯ ಬಸ್ ನಿಲ್ದಾಣ, ಬಜಾರ್ ರಸ್ತೆ, ಸಂತೆಮಾರುಕಟ್ಟೆ ಬೀದಿ ಮುಂತಾದ ಕಡೆ ರಸ್ತೆಯಲ್ಲಿ ನೀರು ನಿಂತ ಕಾರಣ ಪಾದಚಾರಿಗಳು ನಡೆದಾಡಲು ಪ್ರಯಾಸಪಡಬೇಕಾಯಿತು.

ಹೊಸ ಬಸ್ ನಿಲ್ದಾಣ ಬಡಾವಣೆ, ಕೆಳಗಿನತೋಟ ಬಡಾವಣೆ ಸೇರಿದಂತೆ ತಗ್ಗುಪ್ರದೇಶಗಳಲ್ಲಿರುವ ಇತರ ಬಡಾವಣೆಗಳಲ್ಲಿನ ಮನೆಗಳಲ್ಲಿ ಮಳೆ ನೀರು ನುಗ್ಗಿದ ಕಾರಣ ನಿವಾಸಿಗಳು ಸಂಕಷ್ಟ ಎದುರಿಸಬೇಕಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT