ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಾಹಿ ನಿರ್ದೇಶನ ದೊಡ್ಡ ಸವಾಲು

Last Updated 24 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಸಿನಿಮಾಕ್ಕಿಂತ ಇಂದು ಟಿವಿ ಧಾರಾವಾಹಿ ನಿರ್ದೇಶನ ಕಷ್ಟ ಎನಿಸುತ್ತಿದೆ. ತೀವ್ರ ಸ್ಪರ್ಧೆಯ ದಿನಗಳಲ್ಲಿ ನಾವಿದ್ದೇವೆ. ರಿಯಾಲಿಟಿ ಶೋಗಳು ಧಾಂ ಧೂಂ ಎನ್ನುತ್ತಿವೆ. ಭಾರೀ ಆಕರ್ಷಣೆ ಅವುಗಳದ್ದು. ಬಗೆಬಗೆಯ ಆಮಿಷಗಳು! ಇವನ್ನು ಮೀರಿ ವೀಕ್ಷಕರನ್ನು ಧಾರಾವಾಹಿಗೆ ಆಕರ್ಷಿಸಬೇಕು. ಪ್ರತಿ ದಿನ ಪ್ರತಿ ಸಂಚಿಕೆಯನ್ನು ಹೇಗೆ ಆಕರ್ಷಕ ಮಾಡಬೇಕು ಎನ್ನುವುದಕ್ಕೆ ದೊಡ್ಡ ಹೋರಾಟವನ್ನೇ ಮಾಡಬೇಕು. ಟಿ.ಆರ್.ಪಿ.ಯ ತೂಗುಕತ್ತಿ ಬೇರೆ...’

ವಿನೋದ ದೋಂಢಾಳೆ ಹೀಗೆ ಹೇಳುತ್ತಲೇ ಹೋದರು. ಕಳೆದ ಎರಡು ವರ್ಷಗಳಿಂದ ಟಿ.ಎನ್. ಸೀತಾರಾಂರ ‘ಮುಕ್ತ ಮುಕ್ತ’ ಧಾರಾವಾಹಿಯ ಸಂಚಿಕೆಯ ನಿರ್ದೇಶಕರಾಗಿ ಮಧ್ಯಮ ವರ್ಗದ ಸಂಕಟ, ರಾಜಕೀಯ ದೊಂಬರಾಟದ ಸೂಕ್ಷ್ಮಗಳನ್ನು ಯಶಸ್ವಿಯಾಗಿ ತೆರೆಯ ಮೇಲೆ ತಂದವರು ಅವರು.

*‘ಮುಕ್ತ ಮುಕ್ತ’ ಧಾರಾವಾಹಿಯ ಪರಿಕಲ್ಪನೆ, ಬರವಣಿಗೆ ಸೀತಾರಾಂ ಅವರದು. ಸಂಚಿಕೆಯ ನಿರ್ದೇಶಕರಾಗಿ ಅವರ ಕನಸನ್ನು ಅಷ್ಟೊಂದು ಕರಾರುವಕ್ಕಾಗಿ ನನಸು ಮಾಡಲು ಹೇಗೆ ಸಾಧ್ಯವಾಯಿತು?
ಭೂಮಿಕಾ ಸಂಸ್ಥೆಯ ಧಾರಾವಾಹಿಗಳಲ್ಲಿ ಸೂಕ್ಷ್ಮತೆಗೆ ಆದ್ಯತೆ. ಚಿತ್ರದ ತಾಂತ್ರಿಕ ಅಂಶಗಳಿಗಿಂತ ಇದು ಬಹಳ ಮುಖ್ಯ. ಇದು ರೂಢಿಯಾಗಿರುವ ನನಗೆ ಸೀತಾರಾಂ ಮಾರ್ಗದರ್ಶನದಲ್ಲಿ ತುಂಬಾ ಹೊಂದಾಣಿಕೆಯಾಯಿತು. ನಾನು ಪಿ.ಶೇಷಾದ್ರಿ ಅವರ ಬಳಿ 8 ವರ್ಷ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅವರೂ ಸಹ ಚಿತ್ರದ ಸೂಕ್ಷ್ಮಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ. ಒಂದು ಷೆಡ್ಯೂಲ್‌ನಲ್ಲಿ ಏನೇನನ್ನು ಚಿತ್ರಿಸಬೇಕು ಎಂದು ಮೊದಲೇ ಚರ್ಚೆ ಮಾಡಿರುತ್ತೇವೆ. ಅಂತಹ ಗುಂಪು ಚರ್ಚೆ ನಿರ್ದೇಶಕನಿಗೆ ಬಹಳ ಸಹಾಯ ಮಾಡುತ್ತೆ.

*ಸಿನಿಮಾ ನಿರ್ದೇಶಕನ ಮಾಧ್ಯಮ. ಟಿವಿಯೂ ಅಷ್ಟೇ ಅಲ್ಲವೆ?
ಧಾರಾವಾಹಿ ನಿರ್ದೇಶಕನ ಮಾಧ್ಯಮ ಎನ್ನುವುದಕ್ಕಿಂತ ಹೆಚ್ಚಾಗಿ ಟೀಂ ವರ್ಕ್. ಸಿನಿಮಾದಲ್ಲಿ ನಿರ್ದೇಶಕನ ಕೈಯಲ್ಲೇ ಬಹುಪಾಲು ಸೂತ್ರ ಇರುತ್ತದೆ. ಧಾರಾವಾಹಿಯಲ್ಲಿ ನಿರಂತರತೆ ಕಾಪಾಡಿಕೊಂಡು ಹೋಗಬೇಕು. ಇಲ್ಲಿ ಪ್ರತಿದಿನ ಅಗ್ನಿಪರೀಕ್ಷೆ. ಬರಹಗಾರರು, ಕಲಾವಿದರು ಎಲ್ಲರೂ ಮುಖ್ಯ. ಎಷ್ಟೋ ವಿಷಯಗಳಿಗೆ ಇಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು. ತುಂಬಾ ಜನರನ್ನು ಡಿಪೆಂಡ್ ಆಗಬೇಕು.

*ಸಿನಿಮಾದಂತೆ ಟಿವಿಯಲ್ಲೂ ಕ್ಯಾಮೆರಾದಂತಹ ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಆದ್ಯತೆ ಬೇಕಲ್ಲವೆ?
ತಾಂತ್ರಿಕ ಅಂಶಗಳು ಧಾರಾವಾಹಿಯ ಸನ್ನಿವೇಶಗಳಿಗೆ ಅಡ್ಡಿಪಡಿಸಬಾರದು. ಎಷ್ಟು ಬೇಕೋ ಅಷ್ಟು ಮಾತ್ರ ಇರಬೇಕು. ಆ ಸಂದರ್ಭಕ್ಕೆ, ಸಂಭಾಷಣೆಗೆ ತಾಂತ್ರಿಕ ಅಂಶಗಳು ಪೂರಕವಾಗಿರಬೇಕು, ಅದೇ ಪ್ರಧಾನವಾಗಬಾರದು.

*ಸಿನಿಮಾ ನಿರ್ದೇಶಕನಾಗುವ ಕನಸಿಲ್ಲವೇ? ಸಿದ್ಧತೆ ಸಾಲದೆ?
ಶೇಷಾದ್ರಿ ಅವರ ‘ಅತಿಥಿ’, ‘ಬೇರು’, ‘ತುತ್ತೂರಿ’ ಸಿನಿಮಾಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ. ಸಿನಿಮಾ ನಿರ್ದೇಶನ ಮಾಡುವ ಯೋಜನೆ ಇದೆ. ನನಗೆ ವೈಯಕ್ತಿಕವಾಗಿ ಆರ್ಥಿಕ ಸ್ಥಿರತೆ ಬೇಕಾಗಿದೆ. ಧಾರಾವಾಹಿಗಳಲ್ಲಿ ಕೆಲವು ಕಮಿಟ್‌ಮೆಂಟ್ ಇವೆ. ಕೈಯಲ್ಲಿರುವ ಯೋಜನೆಗಳಿಗೆ ಒಳ್ಳೆಯ ಆರಂಭ ಸಿಕ್ಕಿ ಸುಸೂತ್ರವಾಗಿ ಮುನ್ನಡೆಯಬೇಕು. ನನ್ನ ಸಿನಿಮಾಕ್ಕೆ ಹಚ್ಚಹಸಿರಿನ, ಮಂಜಿನ ವಾತಾವಾರಣ ಬೇಕು. ವಸಂತನ ಆಗಮನಕ್ಕಾಗಿ ಕಾಯುತ್ತಿದ್ದೇನೆ. ಮುಂದಿನ ವರ್ಷ ಆಗಬಹುದೇನೋ?

*ನೀವೊಬ್ಬ ಯಶಸ್ವಿ ಧಾರಾವಾಹಿ ನಿರ್ದೇಶಕರು. ಸಿನಿಮಾ ನಿರ್ದೇಶನಕ್ಕೆ ತೊಡಗಿದರೆ ಕೈಯಲ್ಲಿರುವ ಧಾರಾವಾಹಿಗಳಿಗೆ ಹೇಗೆ ನ್ಯಾಯ ಸಲ್ಲಿಸ್ತೀರಿ?
ಮಧ್ಯದಲ್ಲಿ ಸಮಯ ಹೊಂದಿಸಿಕೊಂಡು ಮಾಡಬಹುದು. ‘ಮುಕ್ತ ಮುಕ್ತ’ದಲ್ಲಿ ಕೋರ್ಟ್ ದೃಶ್ಯಗಳು ಶುರುವಾದರೆ ಆ ಸಂಚಿಕೆಗಳನ್ನೆಲ್ಲ ಸೀತಾರಾಂ ನಿರ್ದೇಶಿಸ್ತಾರೆ.

*ಶೇಷಾದ್ರಿಯವರ ಬಳಿ ಸಹಾಯಕರಾಗಿದ್ದ ನಿಮ್ಮ ಒಲವೂ ಕಲಾತ್ಮಕ ಚಿತ್ರಗಳತ್ತಲೇ?
ಕಲಾತ್ಮಕ ಚಿತ್ರ ಎಂದು ಹೇಳುವ ಪರಿಕಲ್ಪನೆಯೇ ಸರಿ ಇಲ್ಲ. ಹಾಗೆ ಕಲಾತ್ಮಕ ಹಣೆಪಟ್ಟಿ ಪಡೆದುಕೊಂಡಿರುವ ಚಿತ್ರಗಳು ಬರೀ ಪ್ರಶಸ್ತಿಗಳನ್ನು ಪಡೆಯಲು, ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲು ಮಾತ್ರ ಸೀಮಿತವಾಗಿವೆ. ಅವು ಜನಕ್ಕೆ ತಲುಪುತ್ತಿಲ್ಲ. ಪುಟ್ಟಣ್ಣ ಕಣಗಾಲ್ ಚಿತ್ರಗಳು ಕಲಾತ್ಮಕ ಅಲ್ಲವೇ? ಅಮೃತ ವರ್ಷಿಣಿ, ಬಂಗಾರದ ಮನುಷ್ಯ, ನಮ್ಮೂರ ಮಂದಾರ ಹೂವೆ- ಯಾವ ಕಲಾತ್ಮಕ ಚಿತ್ರಗಳಿಗಿಂತ ಕಡಿಮೆ ಇವೆ. ಜನರಿಗೆ ತಲುಪಿರುವ ಚಿತ್ರಗಳು ಇವು. ಕಲಾತ್ಮಕ ಎಂದು ಹೆಸರಿಟ್ಟುಕೊಂಡು ನಾನು ಸಿನಿಮಾ ಮಾಡಲ್ಲ, ಜನ ನೋಡುವಂತಹ ಸಿನಿಮಾ ಮಾಡಬೇಕಾಗಿದೆ.

*ಸಿನಿಮಾದಲ್ಲಿ ದೊಡ್ಡ ಹೆಸರು ಮಾಡೋಕಾಗುತ್ತೆ. ಧಾರಾವಾಹಿಗಳಲ್ಲಿ ಯಾಕಿಲ್ಲ? 
ಸಿನಿಮಾದಲ್ಲಿ ಹಣ, ಕೀರ್ತಿ ದೊಡ್ಡದಾಗಿದೆ. ಆದರೆ ಇಂದು ಅದೇ ಪರಿಸ್ಥಿತಿ ಉಳಿದಿಲ್ಲ.

*ಧಾರಾವಾಹಿ ನಿರ್ದೇಶನ ಮಾಡಿದವರು ಸಿನಿಮಾದಲ್ಲಿ ಯಶಸ್ಸು ಗಳಿಸಲು ಸಾಧ್ಯವೆ?
ಯೋಗರಾಜ್‌ಭಟ್, ಶೇಷಾದ್ರಿ ಸೇರಿದಂತೆ ಇನ್ನೂ ಹಲವರು ಮೊದಲು ಧಾರಾವಾಹಿ ನಿರ್ದೇಶನ ಮಾಡಿದವರೇ. ಸಿನಿಮಾದವರೆಲ್ಲ ಸೀರಿಯಲ್‌ಗೆ ಬರ್ತಾ ಇದ್ದಾರೆ. ಈಗ ಟಿವಿ ಧಾರಾವಾಹಿಗಳದೂ ದೊಡ್ಡ ಆಕರ್ಷಣೆಯೇ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT