ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮ ಧೂಮ... ಸಿಗಾರೋಮ...

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಬೆಂಗಳೂರಿನಲ್ಲಿ ಮದ್ಯಪ್ರೀತಿಯಾಗಲೀ, ಸಿಗರೇಟ್ ಮೇಲಿನ ತುಡಿತವಾಗಲೀ ಕಡಿಮೆಯಾಗಿಲ್ಲ. ಲೈಫ್‌ಸ್ಟೈಲ್ ಉತ್ಪನ್ನಗಳಿಗೆ ಬಹುಬೇಗನೆ ಒಗ್ಗಿಕೊಳ್ಳುವುದು ಬೆಂಗಳೂರಿಗರ ಜಾಯಮಾನ. ಇದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರಿನಲ್ಲಿ ಸಿಗಾರ್‌ಗಾಗಿಯೇ ಮಳಿಗೆಯೊಂದು ಆರಂಭವಾಗಿದೆ.

ಗಾಡ್‌ಫ್ರೆ ಫಿಲಿಪ್ಸ್ ಇಂಡಿಯಾ ಸಂಸ್ಥೆಯು `ಸಿಗಾರೋಮ~ ಎಂಬ ಸಿಗಾರ್ ಮಳಿಗೆಯನ್ನು ವಿಠ್ಠಲ ಮಲ್ಯ ರಸ್ತೆಯ ಯುಬಿ ಸಿಟಿಯಲ್ಲಿ ಪ್ರಾರಂಭಿಸಿದೆ. ಫೋರ್‌ಸ್ಕ್ವೇರ್, ಸ್ಟೆಲ್ಲಾರ್, ರೆಡ್ ಅಂಡ್ ವೈಟ್ ಇತ್ಯಾದಿ ಸಿಗರೇಟ್ ತಯಾರಿಕಾ ಕಂಪೆನಿಯಾಗಿರುವ ಗಾಡ್‌ಫ್ರೆ ಫಿಲಿಪ್ಸ್ ದೇಶದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ವಿನೂತನ ಸಿಗಾರ್ ಮಳಿಗೆಯನ್ನು ಪ್ರಾರಂಭಿಸಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಕೈಯಲ್ಲೇ ತಯಾರಿಸುವ ಸಿಗಾರ್‌ಗಳು ಹಾಗೂ ಯಂತ್ರಗಳ ಮೂಲಕ ತಯಾರಾದ ಸಿಗರಲ್ಲೋಗಳು ಇಲ್ಲಿ ಲಭ್ಯ. ನೂರಕ್ಕೂ ಹೆಚ್ಚು ವೈವಿಧ್ಯಮಯ ಸಿಗಾರ್‌ಗಳಿರುವ ಈ ಮಳಿಗೆ ಕೇವಲ ಸಿಗಾರ್‌ಗಳಿಗೆ ಮಾತ್ರವಲ್ಲ, ಸಿಗಾರ್‌ಗೆ ಹೊಂದಿಕೊಂಡ ಇತರ ಪರಿಕರಗಳೂ ಅಷ್ಟೇ ಆಕರ್ಷಕವಾಗಿವೆ.

ತುಂಡು ತಂಬಾಕುಗಳನ್ನು ಕಾಗದದ ಕೊಳವೆಯೊಳಗಿಟ್ಟು ಯಂತ್ರಗಳ ಮೂಲಕ ತಯಾರಾಗುವ ಸಿಗರೇಟುಗಳಿಗಿಂಥ ಸಿಗಾರ್‌ಗಳು ಭಿನ್ನ. ಹತ್ತಕ್ಕೂ ಹೆಚ್ಚು ಬಗೆಯ ತಂಬಾಕು ಎಲೆಗಳನ್ನು ಆಯ್ದು ತಂದು, ಹದ ಮಾಡಿ, ಅವುಗಳನ್ನು ನಯವಾಗಿ ಸುತ್ತಿ ಸಿದ್ಧಪಡಿಸಲಾದ ಸಿಗಾರ್ ಸೇಯುವುದು ಪ್ರತಿಷ್ಠೆಯ ಸಂಕೇತವೆನ್ನುವುದು ಧೂಮಪಾನ ಪ್ರಿಯರ ಅಂಬೋಣ. ಸಿಗಾರ್‌ಗಳಿಗೆ ಹೆಸರುವಾಸಿಯಾಗಿರುವ ಕ್ಯೂಬಾದ ಹಾಬಾನೊಸ್ ಎಸ್‌ಎ, ಸ್ವಿಟ್ಜರ್‌ಲೆಂಡ್‌ನ ಓಟಿಂಗರ್ ಡೆವಿಡಾಫ್, ಹಾಲೆಂಡ್‌ನ ಆಲ್ಟಡೀಸ್ ಹಾಗೂ ಸ್ಕಾಂಡಿನೇವಿಯನ್ ಟೊಬ್ಯಾಕೊ ಸೇರಿದಂತೆ ಅನೇಕ ಬ್ರಾಂಡ್‌ಗಳ ಸಿಗಾರ್‌ಗಳು ಆಮದು ಮಾಡಿಕೊಳ್ಳಲಾಗಿದೆ. ಸಿಗಾರ್‌ಗಳನ್ನು ನಿಗದಿತ 23 ಡಿಗ್ರಿ ತಾಪಮಾನದಲ್ಲಿಡಬೇಕಾದ್ದರಿಂದ ಹ್ಯುಮಿಡರ್ ವ್ಯವಸ್ಥೆ ಇದೆ. ಹೀಗಾಗಿ ತಯಾರಕರಿಂದ ಬಳಕೆದಾರರವರೆಗೂ ಸಿಗಾರ್‌ಗಳ ತಾಜಾತನ ಕಾಪಾಡಲು ಸಿಗಾರೋಮ ಒತ್ತುನೀಡಿದೆ.

ಸಿಗಾರ್ ಮಳಿಗೆ ದೇಶದಲ್ಲೇ ಪ್ರಥಮವಾಗಿ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗೆ ಗಾಡ್‌ಫ್ರೆ ಫಿಲಿಪ್ಸ್ ಸಂಸ್ಥೆಯ ಉಪಾಧ್ಯಕ್ಷ ಅರುಣ್ ಜೋಶಿ ಉತ್ತರಿಸಿದ್ದು ಹೀಗೆ. `ಮೊದಲನೆಯದಾಗಿ ಬೆಂಗಳೂರು ವಿವಿಧ ಸಂಸ್ಕೃತಿ ಹಾಗೂ ನಾನಾ ಪ್ರದೇಶಗಳಿಂದ ಬಂದ ಜನರನ್ನು ಹೊಂದಿರುವ ಮಹಾನಗರ. ಜತೆಗೆ ಇಲ್ಲಿ ಯುವಜನತೆಯ ಸಂಖ್ಯೆ ಹೆಚ್ಚಿದೆ. ದೇಶ ವಿದೇಶಗಳಿಗೆ ಅಡ್ಡಾಡುವ ಮಂದಿಯ ಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕೂ ಹೆಚ್ಚಾಗಿ ವ್ಯಾವಹಾರ ಭಾಷೆಯಲ್ಲಿ ಮಾತನಾಡಬೇಕೆಂದರೆ ಇಲ್ಲಿ ಜಿಡಿಪಿ ವೃದ್ಧಿ ಅಧಿಕವಾಗಿದೆ. ಲೈಫ್‌ಸ್ಟೈಲ್‌ಗೆ ಸಂಬಂಧಿಸಿದಂತೆ ಹೊಸಬಗೆಯ ಉತ್ಪನ್ನಗಳಿಗೆ ಬೆಂಗಳೂರಿಗರು ಬಹುಬೇಗನೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಹೊಸತನ್ನು ಅನುಭವಿಸುವ ಅಭಿರುಚಿ ಇಲ್ಲಿನವರಿಗಿದೆ. ಹೀಗಾಗಿ ಇಂಥ ವಿನೂತನ ಮಾದರಿಯ ಸಿಗಾರ್ ಮಳಿಗೆ ಆರಂಭಿಸಲು ನಮಗೆ ಇಷ್ಟು ಕಾರಣಗಳು ಸಾಕಾದವು~ ಎಂದು ಸಿಗಾರ್ ಕೈಯಲ್ಲಿ ಹಿಡಿದು ಮಳಿಗೆಯ ಇತರ ವಿಭಾಗಗಳತ್ತ ಹೆಜ್ಜೆ ಹಾಕಿದರು.

ಇಲ್ಲಿ ಪ್ರತಿ ನಿಮಿಷಕ್ಕೆ ಸಾವಿರಗಳಷ್ಟು ತಯಾರಾಗುವ ಸಿಗರಲ್ಲೋಗಳಿಂದ ಹಿಡಿದು ದಿನಕ್ಕೆ 80ರಷ್ಟು ತಯಾರಾಗುವ ಅತ್ಯಂತ ಶ್ರೇಷ್ಠ ಗುಣಮಟ್ಟದ ಸಿಗಾರ್‌ಗಳಿವೆ. ಬೆಂಗಳೂರಿನ ಸಿಗಾರ್ ಪ್ರಿಯರ ಅಪೇಕ್ಷೆ ಮೇರೆಗೆ ಇಲ್ಲಿ ಈ ಮಳಿಗೆ ಸ್ಥಾಪಿಸಿ ಇಂಥ ವೈವಿದ್ಯಮಯ ಸಿಗಾರ್‌ಗಳನ್ನು ಇಡಲಾಗಿದೆ ಎನ್ನುವುದು ಅವರ ಅಭಿಮತ.

ಸಿಗಾರೋಮ ಮಳಿಗೆಯಲ್ಲಿ ಯಂತ್ರಗಳಿಂದ ತಯಾರಾದ ಸಿಗರಲ್ಲೋ ಒಂದಕ್ಕೆ 15 ರೂಪಾಯಿಯಿಂದ ಹಿಡಿದು ಮೂರೂವರೆ ಸಾವಿರ ರೂಪಾಯಿಯ `ಮಾಂಟೆ ಕ್ರಿಸ್ಟೋ~ ಎಂಬ ಸಿಗಾರ್‌ವರೆಗೂ ಇಲ್ಲಿ ಹಲವು ಬ್ರಾಂಡ್‌ನ ಸಿಗಾರ್‌ಗಳು ಲಭ್ಯ. ಕೇವಲ ಸಿಗಾರ್‌ಗಳು ಮಾತ್ರವಲ್ಲದೆ ಅವುಗಳನ್ನು ಶೇಖರಿಸಿಡುವ ಆಕರ್ಷಕ ಹ್ಯುಮಿಡರ್‌ಗಳನ್ನು ಫ್ರಾನ್ಸ್, ಯುರೋಪ್, ಕ್ಯೂಬಾ, ಸ್ವಿಟ್ಜರ್‌ಲೆಂಡ್‌ನಿಂದ ತರಿಸಲಾಗಿದೆ. ಜತೆಗೆ ಸಿಗಾರ್ ಕಟ್ಟರ್‌ಗಳು, ಆಕರ್ಷಕ ಲೈಟರ್‌ಗಳು ಸೇರಿದಂತೆ ಮುಷ್ಟಿಯಲ್ಲಿ ಸಿಗಾರ್ ಹಿಡಿದು ಸೇದುವವರೆಗೂ ಏನೇನು ಪರಿಕರಗಳು ಬೇಕೋ ಅವೆಲ್ಲವೂ ಇಲ್ಲಿವೆ.

ಮಳಿಗೆಗೆ ಭೇಟಿ ನೀಡುವವರಿಗೆ ಹಾಗೂ ಸಿಗಾರ್ ಕುರಿತು ಆಸಕ್ತಿ ಹೊಂದಿದವರಿಗೆ ಹೆಚ್ಚಿನ ಮಾಹಿತಿಗೆ ಡೆವಿಡಾಫ್ ಸೇರಿದಂತೆ ಹಲವು ಪುಸ್ತಕಗಳನ್ನು ಇಡಲಾಗಿದೆ. ಸಿಗಾರ್ ಕುರಿತು ವಿವರಿಸುವ ಪರಿಚಾರಕರು ಇಲ್ಲಿದ್ದಾರೆ. ಬೆಂಗಳೂರಿನಿಂದ ಆರಂಭವಾಗಿರುವ ಸಿಗಾರೋಮ ಪಯಣ, ದೆಹಲಿ, ಮುಂಬೈಗಳಲ್ಲೂ ಮುಂದಿನ ದಿನಗಳಲ್ಲಿ ಆರಂಭವಾಗಲಿವೆ. ಬೆಂಗಳೂರಿನ ಯುಬಿ ಸಿಟಿಯಲ್ಲಿ ಆರಂಭವಾದ ಮಳಿಗೆಯಿಂದ ಹಿಡಿದು ಪುಟ್ಟ ಪುಟ್ಟ ಸಿಗಾರ್ ಕುಟೀರಗಳನ್ನು ಸ್ಥಾಪಿಸುವುದು ಸಂಸ್ಥೆಯ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT