ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಲೀಲೆಯ ನೋವು

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಸಿಗರೇಟು ಸೇವನೆ ಕೆಲವರಿಗೆ ಚಟವಷ್ಟೇ ಅಲ್ಲ, ಶೋಕಿಯೂ ಹೌದು. ಸ್ಮೋಕಿಂಗ್ ಹಾಗೂ ನಾನ್ ಸ್ಮೋಕಿಂಗ್ ಜೋನ್ ನಡುವಿನ ವ್ಯತ್ಯಾಸದ ಗೆರೆ ತೆಳುವಿರುವ ಬೆಂಗಳೂರಲ್ಲಂತೂ ಧೂಮಲೀಲೆ ಜೋರು. ವೈದ್ಯರು, ಪೊಲೀಸರು ಹೇಳುವ ಮಾತುಗಳಿಗೆ ಕಿವಿಗೊಡಿ.ಅಂದಹಾಗೆ, ಇಂದು `ವಿಶ್ವ ತಂಬಾಕು ರಹಿತ ದಿನ~.
___________________________________________________

ಮನೆಯ ಹಿರಿಯರಿಗೆಲ್ಲಾ ತಿಳಿಯಬಾರದೆಂದು ಬಚ್ಚಲಿಗೋ, ಹಿತ್ತಲಿಗೋ ಹೋಗಿ ಬೀಡಿ ಸೇದಿ, ಮಾವಿನ ಮರದ ಎಲೆಯಲ್ಲಿ ಬಾಯುಜ್ಜಿಕೊಂಡು ಬರುತ್ತಿದ್ದ ಕಾಲವೊಂದಿತ್ತು. ಎಷ್ಟಾದರೂ ಇದು 21ನೇ ಶತಮಾನ, ತಾವು ಯಾವುದರಲ್ಲೂ ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳಲು ಮುಚ್ಚುಮರೆಯಿಲ್ಲದೇ ದಮ್ಮು ಬಿಡುವುದು ಹೊಸ ಜಮಾನದವರ ಶೋಕಿ.

`ಇವೆಲ್ಲಾ ಬೇಡ ಮಗನೇ~ ಎನ್ನಲು ಅಪ್ಪನಿಗೂ ಅಳುಕು. ಮಗನ ಸ್ವಾತಂತ್ರ್ಯಕ್ಕೆ ಅದು ಅಡ್ಡಗಾಲಾದೀತೇನೋ ಎಂಬ ಹಿಂಜರಿಕೆ.ಕಾಲೇಜಿಗೆ ಹೋಗುವ ಆತನಿಗೆ ಗೆಳೆಯರ ಮುಂದೆ ತಲೆಯೆತ್ತಿ ನಡೆಯಬೇಕಾದರೆ ಹೊಗೆಯಲ್ಲೇ ಬಗೆಬಗೆಯ ಚಿತ್ರ ಮೂಡಿಸುವ ಶೈಲಿಯನ್ನು ಕಲಿತಿರಬೇಕು ಎಂಬ ತಪ್ಪುಕಲ್ಪನೆಯೂ ಇದೆ.

ಅವನ ದೃಷ್ಟಿಯಲ್ಲಿ ಸಿಗರೇಟ್ ಸೇದುವುದು ದುಶ್ಚಟ ಅಲ್ಲ, ಅದು ಕೇವಲ ಫ್ಯಾಶನ್. ಹುಡುಗಿಯರ ಮುಂದೆ ತಾನು ತುಂಬಾ `ಬೋಲ್ಡ್~ ಎಂದು ತೋರಿಸಿಕೊಳ್ಳಲು ಕಂಡುಕೊಂಡ ದಾರಿ.

`ಸಿಗರೇಟ್‌ನಲ್ಲಿ ನಿಕೋಟಿನ್ ಅಂಶ ಜಾಸ್ತಿ ಇರುತ್ತದೆ. ಅದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ವರ್ಷ ನಾವು ಹೇಳುತ್ತಲೇ ಇರುತ್ತೇವೆ, ಆದರೆ ಸೇವನೆ ಮಾಡುವವರು ಇದರ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. `ಸ್ಮೋಕ್~ ಮಾಡದಿದ್ದರೆ ಗೆಳೆಯರ ಗುಂಪಿನಿಂದ ಹೊರಕ್ಕೆ ಎಂಬ ಭಾವ ಅವರಲ್ಲಿದೆ.

ಸಣ್ಣ ವಯಸ್ಸಿನಲ್ಲಿ ಸಿಗರೇಟು ಸೇವನೆ ಮಾಡುವುದರಿಂದ ಉಸಿರಾಟದ ಸಮಸ್ಯೆಯೂ ಉಂಟಾಗುತ್ತದೆ. ಕೆಲವೊಮ್ಮೆ ಇದು ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು~ ಎನ್ನುತ್ತಾರೆ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಪದ್ಮಶ್ರೀ.
ಮೊದಲೆಲ್ಲಾ ಎಲ್ಲೋ ಅಪರೂಪಕ್ಕೆ ವಿದೇಶಿ ಮಹಿಳೆಯರು ಸಿಗರೇಟು ಸೇದುವ ಚಿತ್ರ ಮೇಲ್ ಇನ್‌ಬಾಕ್ಸ್‌ಗಳಲ್ಲೋ ಸಂಜೆ ಪತ್ರಿಕೆಗಳಲ್ಲೋ ಕಣ್ಣಿಗೆ ಬಿದ್ದರೆ `ಅಯ್ಯೋ, ಕಾಲ ಕೆಟ್ಹೋಯ್ತು~ ಎಂದು ಮೂಗು ಮುರಿಯುತ್ತಿದ್ದವರೇ ಹೆಚ್ಚು.

ಇಂದು ದೃಶ್ಯ ಸಾಮಾನ್ಯ ಎಂಬಂತಾಗಿದೆ. ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದು ಸುತ್ತು ಬಂದರೆ ಇಂತಹ ನೂರಾರು ಮಂದಿ ರಾಜಾರೋಷವಾಗಿ ಹೊಗೆ ಉಗುಳುವುದು ರಾಚುತ್ತದೆ.

ಸಂಶೋಧನೆಯೊಂದರ ಪ್ರಕಾರ ವಿಶ್ವದ ಶೇ 20ರಷ್ಟು ಅಂದರೆ ಸುಮಾರು ನೂರು ಕೋಟಿಗೂ ಹೆಚ್ಚು ಮಹಿಳೆಯರು ಸಿಗರೇಟು ಸೇದುತ್ತಾರೆ. ಅಲ್ಲದೆ ಈ ಪ್ರಮಾಣ ಸಾಂಕ್ರಾಮಿಕ ರೋಗದಂತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಆಧುನಿಕತೆಯ ಪ್ರಭಾವದಿಂದ ಸಿಗರೇಟು ಸೇವನೆಯನ್ನು ಹವ್ಯಾಸವಾಗಿ ಬಳಸಿಕೊಂಡಿರುವ ಮಹಿಳೆಯರ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳು ಉಂಟಾಗುತ್ತಿವೆ. ಅದರಲ್ಲೂ ಗರ್ಭಿಣಿಯರ ಮೇಲೆ ಧೂಮಪಾನದ ಪರಿಣಾಮ ಬಹಳ ಹೆಚ್ಚು. ಹೆರಿಗೆ ಬಳಿಕ ಮಗುವಿಗೆ ದೊರಕುವ ಆಮ್ಲಜನಕದ ಮತ್ತು ಆಹಾರದ ಪ್ರಮಾಣ ಕಡಿಮೆಯಾಗುತ್ತದೆ.

ಕಡಿಮೆ ತೂಕದ ಮಗುವಿನ ಜನನ ಹಾಗೂ ಶಿಶು ಮರಣಕ್ಕೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಧೂಮಪಾನವೂ ಒಂದು ಎಂಬುದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಬಂಜೆತನ, ಗರ್ಭಪಾತ ಸೇರಿದಂತೆ ಶಿಶುಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳನ್ನೂ ಹೆಚ್ಚಿಸುವಲ್ಲಿ ಧೂಮಪಾನದ ಕೊಡುಗೆ ಬಹಳ ಹೆಚ್ಚು ಎನ್ನುತ್ತಾರೆ ವೈದ್ಯರು.

ಧೂಮಪಾನವನ್ನು ಮುಂದುವರೆಸುವುದು ಮಹಿಳೆ ಹಾಗೂ ಪುರುಷರಿಬ್ಬರಲ್ಲಿ ಬಂಜೆತನದ ಪ್ರಮಾಣವನ್ನು ಹೆಚ್ಚಿಸುತ್ತದೆ. ಪುರುಷರಲ್ಲಿ ವೀರ‌್ಯಾಣುಗಳ ಸಂಖ್ಯೆ ಕಡಿಮೆಯಾಗಿಸುತ್ತದೆ.

 ಹಲವಾರು ಸಂಶೋಧನೆಗಳು ಧೂಮಪಾನ ಮಾಡುವ ಮಹಿಳೆಯರಲ್ಲಿ  ಫಲವತ್ತತೆಯನ್ನು ಕಡಿಮೆಗೊಳಿಸುವುದನ್ನು ಸ್ಪಷ್ಟಪಡಿಸಿವೆ. ಅಲ್ಲದೆ ಅಂಡೋತ್ಪತ್ತಿ, ಇಂಪ್ಲಾಂಟೇಶನ್ ಹಾಗೂ ಟ್ಯೂಬಲ್ ಟ್ರಾನ್ಸ್‌ಪೋರ್ಟ್ ಸೇರಿದಂತೆ ಹಲವು ಕ್ಲಿಷ್ಟ ಕಾರ್ಯಚಟುವಟಿಕೆಗಳಲ್ಲಿ ಅನೇಕ ತೊಡಕುಗಳು ಕಂಡುಬರುತ್ತವೆ.

ಸಿಗರೇಟು ಸೇವನೆ ಮಾಡುವವರಿಗೆ ಅದರಿಂದ ಎಷ್ಟು ಕೆಡುಕಿದೆಯೋ ಅದರ ದುಪ್ಪಟ್ಟು ದುಷ್ಪರಿಣಾಮ ಆ ಹೊಗೆ ಸೇವಿಸುವವರಿಗೂ ಇದೆ. ನಿಮ್ಮ ರೋಗವನ್ನು ಅವರಿಗೂ ದಾಟಿಸುವ ಮುನ್ನ ಕೊಂಚ ಚಿಂತಿಸಿ...

ಪೊಲೀಸ್ ಬೈಟ್
ಅನೇಕ ನೋ ಸ್ಮೋಕಿಂಗ್ ಬೋರ್ಡ್‌ಗಳಿದ್ದರೂ ಜನ ಅಲ್ಲಿ ಸಿಗರೇಟ್ ಸೇದುತ್ತಾರೆ. ದಂಡ ವಿಧಿಸಿದರೂ ಪರವಾಗಿಲ್ಲ, ನಾವು ಸಿಗರೇಟ್ ಮಾತ್ರ ಬಿಡುವುದಿಲ್ಲ ಎಂಬ ಮನೋಭಾವ ಅವರಲ್ಲಿದೆ. ಶಾಲೆ, ಥಿಯೇಟರ್, ಮಾಲ್, ಹೋಟೆಲ್ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇವನೆ ನಿಷಿದ್ಧ.

ಅದಕ್ಕೆ ರೂ. 200 ದಂಡ ವಿಧಿಸಿದರೂ ಅವರಿಗದು ಲೆಕ್ಕಕ್ಕಿಲ್ಲ. ಬಿಬಿಎಂಪಿ, ಪೊಲೀಸ್ ಇನ್ಸ್‌ಪೆಕ್ಟರ್, ಹೀಗೆ ಕೆಲ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರವಿದೆ ಎನ್ನುತ್ತಾರೆ ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ಹೇಳುತ್ತಾರೆ. ಕಳೆದ ಜನವರಿ ತಿಂಗಳೊಂದರಲ್ಲೇ ಧೂಮಪಾನದ ದಂಡವಾಗಿ 70,000 ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಸೇರಿದೆ.

ಸ್ಟೂಡೆಂಟ್ ಬೈಟ್
`ನಾನು ಕಾಲೇಜು ದಿನಗಳಿಂದ ಸಿಗರೇಟು ಸೇವನೆ ಮಾಡುತ್ತಿದ್ದೇನೆ. ಯಾಕೆ ಮಾಡುತ್ತೇನೆ ಎಂಬುದಕ್ಕೆ ಉತ್ತರವಿಲ್ಲ. ಮೊದಲೆಲ್ಲಾ ಪರೀಕ್ಷೆ ಬಂದಾಗ ಆತಂಕವಾಗುತ್ತಿತ್ತು. ಫ್ರೆಂಡ್ಸ್ ಜತೆ ಸೇರಿ ಸ್ಮೋಕ್ ಮಾಡುವುದು ಕಲಿತುಕೊಂಡೆ. ಮತ್ತೆ ಅದೇ ಚಟವಾಗಿ ಉಳಿದುಕೊಂಡಿದೆ. ಆರು ವರ್ಷಗಳಿಂದ ನಾನು ಸಿಗರೇಟು ಸೇವನೆ ಮಾಡುತ್ತಿದ್ದೇನೆ.
 
ಸತತ ಮೂರುಗಂಟೆ  ಸ್ಮೋಕ್ ಮಾಡಿಲ್ಲ ಎಂದರೆ ತಲೆನೋವು ಬರುತ್ತದೆ. ಕೆಲವು ಬಾರಿ ದಿನಕ್ಕೆ ಎರಡರಿಂದ ಮೂರು ಪ್ಯಾಕೆಟ್ ಕಾಲಿ ಮಾಡಿದ್ದೂ ಇದೆ~ ಎಂದು ಹೇಳುತ್ತಾರೆ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಅಭಿಷೇಕ್.

`ಧೂಮ ರಹಿತ ವಲಯ~
ಧೂಮಲೀಲೆ ಬೀರುವ ಮಂದಿಗಾಗಿಯೇ ನಗರದ ಅನೇಕ ಹೊಟೇಲ್‌ಗಳಲ್ಲಿ `ನಾನ್ ಸ್ಮೋಕಿಂಗ್ ಜೋನ್~ಗಳ ನಿರ್ಮಾಣವಾಗಿದೆ. ಲಾ ಗಾರ್ಡೇನಿಯಾ, ಶೆರಟಾನ್ ಸೇರಿದಂತೆ ಹಲವು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಸಿಗರೇಟು ಸೇದುವವರಿಗಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಿಲಾಗಿದೆ.

`ನಮ್ಮ ದಿನನಿತ್ಯದ ಗ್ರಾಹಕರಿಗೆ ಸಿಗರೇಟು ಸೇದುವವರಿಂದ ತೊಂದರೆಯಾಗಬಾರದೆಂಬ ಕಾರಣಕ್ಕೆ ಅವರಿಗಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಿದ್ದೇವೆ. ಇದರಿಂದ ಧೂಮಪಾನ ಮಾಡದ ಒಂದಷ್ಟು ಮಂದಿಯನ್ನಾದರೂ ಕ್ಯಾನ್ಸರ್‌ನಿಂದ ದೂರವಿಡಬಹುದು. ಹೋಟೆಲ್‌ಗಳಲ್ಲಿ ತಿಂಡಿ ತಿಂದು ಹೊರಗೆ ನಿಂತು ಹೊಗೆ ಬಿಡುವ ಈ ದುಶ್ಚಟ, ನಿಷೇಧದಿಂದ ಸ್ವಲ್ಪವಾದರೂ ಕಡಿಮೆಯಾದೀತು ಎಂಬ ನಂಬಿಕೆ ನಮ್ಮದು~ ಎನ್ನುತ್ತಾರೆ ಹೋಟೆಲ್ ಉದ್ಯಮಿಯೊಬ್ಬರು.

ಜೈಲಿನಲ್ಲೂ...!
ಪರಪ್ಪನ ಅಗ್ರಹಾರದಲ್ಲಿ ಬೀಡಿ, ಸಿಗರೇಟುಗಳಿಗೆ ಬರವಿಲ್ಲ. ಅದನ್ನು ಕೊಂಡು ಇತರರ ಮುಂದೆ ಸೇದಿ ಅವರ ಆರೋಗ್ಯಕ್ಕೆ ಹಾನಿ ಮಾಡುವುದನ್ನು ತಡೆಯಲೆಂದೇ ಜೈಲಿನಲ್ಲಿ `ನೋ ಸ್ಮೋಕಿಂಗ್ ಜೋನ್~ ಇದೆ. ಬ್ಲಾಕ್ 3, ಬಿ ಹಾಗೂ 9ರಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಇನ್ನೂ ಹತ್ತು ಬ್ಲಾಕ್‌ಗಳಲ್ಲಿ ನಿಷೇಧಿಸುವ ಯೋಚನೆಯಿದೆ. ಇದು ಧೂಮಪಾನ ಇಷ್ಟಪಡದ ಒಂದಷ್ಟು ಮಂದಿ ನೀಡಿದ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ದುಶ್ಚಟವನ್ನು ದೂರಾಗಿಸಿ ಜೈಲಿನಲ್ಲಿ ಧೂಮಪಾನ ನಿಷೇಧಗೊಳಿಸುವ ನಿಟ್ಟಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ ಎನ್ನುತ್ತಾರೆ ಜೈಲು ಸೂಪರಿಂಟೆಂಡೆಂಟ್‌ ಟಿ.ಎಚ್.ಲಕ್ಷ್ಮಿನಾರಾಯಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT