ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯ ತುಂಬಿದ ಅನುಭವ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ರಸ್ತೆ ಮತ್ತು ಬದುಕಿನಲ್ಲಿ ಅಸುರಕ್ಷಿತವೆನ್ನುವುದು ನಿರಂತರ ಅನುಭವ. ಬೆಳಗಾವಿಯಲ್ಲಿ  1980ರ ಸಾಲಿನಲ್ಲಿ 10 ವರ್ಷದ ಬಾಲಕಿಯಾಗಿದ್ದ ನಾನು ಹತ್ತಿರದ್ಲ್ಲಲೇ ಇದ್ದ ಶಾಲೆಗೆ ನಡೆದು ಹೋಗುತ್ತಿದ್ದೆ. ಅಡ್ರೆಸ್ ಕೇಳುವ ನೆಪದಲ್ಲಿ ಸೈಕಲ್ ಮೇಲೆ ಬಂದ ಮಧ್ಯವಯಸ್ಕ ವ್ಯಕ್ತಿಯೊಬ್ಬ ಅಶ್ಲೀಲ ಚಿತ್ರಗಳನ್ನು ತೋರಿಸಿ ಇದೇನೆಂದು ಕೇಳಿದ.
 
ಏನೊಂದೂ ತಿಳಿಯದ ನಾನು ತಬ್ಬಿಬ್ಬಾಗಿದ್ದೆ.  ತದನಂತರದ ಹೈಸ್ಕೂಲಿನ ದಿನಗಳಲ್ಲಿ ವೇಗವಾಗಿ ಸೈಕಲ್ ತುಳಿಯುತ್ತಾ ಬರುವ ಪುಂಡು ಹುಡುಗರು ಎಲ್ಲೆಂದರಲ್ಲಿ ಚಿವುಟಿಯೋ, ತಳ್ಳಿಯೋ ಹೋಗುವಾಗ ಅಸಹಾಯಕ ಸ್ಥಿತಿಯಲ್ಲಿ ಒದ್ದಾಡಿದ್ದೆ.

ಕಾಲೇಜಿಗೆ ಹೋಗುವಾಗ ಕಾಲೇಜಿನ ಕ್ಲಾಸಿನವರೆಗೂ ಹಿಂಬಾಲಿಸಿ ಬರುವ ಅನಾಮಿಕರು, ಬಸ್ಸಿನಲ್ಲಿ ಬೇಕೆಂದೇ ಪಕ್ಕದಲ್ಲಿ ಕುಳಿತು ಹಿಂಸೆ ಕೊಡುವ ಪುರುಷರನ್ನು ಪ್ರತಿಭಟಿಸಲು ಆಗದ ಎಳೆಯ ವಯಸ್ಸಿನಲ್ಲಿ ರಸ್ತೆ, ಬಸ್ಸು ಎಲ್ಲದರ ಬಗ್ಗೆಯೂ ಭಯ ತುಂಬಿತ್ತು.

 1990ರ ಸಾಲಿನಲ್ಲಿ ಪ್ರಥಮ ಬಾರಿಗೆ ತಂದೆಯೊಟ್ಟಿಗೆ ಬೆಳಗಾವಿ ಬಿಟ್ಟು ಬೆಂಗಳೂರಿಗೆ ಸರ್ಕಾರಿ ಉದ್ಯೋಗಕ್ಕೆಂದು ರಾತ್ರಿ ಬಸ್ಸಿನಲ್ಲಿ ಬರುವಾಗ ಹಿಂದೆ ಸೀಟಿನಲ್ಲಿ ಕುಳಿತ ಯುವಕನೊಬ್ಬ ಅಲ್ಲಿ ಇಲ್ಲಿ ಕೈತಾಗಿಸಿ ಹಿಂಸೆ ಕೊಡುವಾಗ, ತಂದೆಗೆ ಹೇಳಿದರೆ ರಂಪವಾಗಿ ಎಲ್ಲಿ ಬಸ್ಸಿನಲ್ಲಿ ಎಲ್ಲರ ನೋಟಕ್ಕೆ ಗುರಿಯಾಗಬಹುದು ಎಂದು ಊಹಿಸಿ, ಚೂಡಿದಾರಕ್ಕೆ ಸಿಕ್ಕಿಸಿದ ಪಿನ್ನನ್ನು ಅಸ್ತ್ರವಾಗಿ ಬಳಸಿ ಗೆದ್ದ ಮೇಲೆ ಎಲ್ಲೋ ಅಲ್ಪ ಸ್ವಲ್ಪ ಧೈರ್ಯ ತುಂಬ ತೊಡಗಿತು.
 
ಮೆಜಿಸ್ಟಿಕ್‌ನ ದಾರಿಯಲ್ಲಿ ಪ್ರತಿ ಹೆಣ್ಣನ್ನು ಕೀಳು ನೋಟದಲ್ಲಿ ನೋಡುವ ಕಾಮುಕರ ದೃಷ್ಟಿಗೆ ಎದೆ ನಡುಗಿತ್ತು.  ಪ್ರತಿ ಬಾರಿ ಬೆಂಗಳೂರಿನ ಹಾಸ್ಟೆಲ್‌ನಿಂದ ಬೆಳಗಾವಿಗೆ ಹೋಗುವುದು ಒಂದು ಸಾಹಸದ ಅನುಭವವಾಗಿತ್ತು. ಆಗಿನ್ನೂ ಬಸ್‌ಗಳಲ್ಲಿ ಸಿಂಗಲ್ ಸೀಟ್‌ನ ಕಲ್ಪನೆ ಇರಲಿಲ್ಲ. 

ಇತ್ತೀಚಿಗಷ್ಟೆ, ಗಾಂಧೀಬಜಾರ್‌ಗೆ ಹಬ್ಬಕ್ಕೆಂದು ಎಳ್ಳು ಕೊಳ್ಳಲು ಹೋದಾಗ ಕೈಯಲ್ಲಿರುವ ದುಡ್ಡು ತುಂಬಿದ ಪರ್ಸ್ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ, ಅತಿ ದುರದೃಷ್ಟಕರ ಅಪಫಾತಗಳನ್ನು ಕಂಡಾಗ  ರಸ್ತೆಗಳು ಎಂದೆಂದಿಗೂ ಅಸುರಕ್ಷಿತ ತಾಣಗಳು ಎಂಬುದು ದೃಢವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT