ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವೀಕರಣ!

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

`ಕಥೆಯಲ್ಲಿ ಅದ್ದೂರಿ ಇದೆ, ಸಿನಿಮಾ ಮೇಕಿಂಗ್‌ನಲ್ಲಿ ಅದ್ದೂರಿ ಇದೆ, ಹಾಡುಗಳಲ್ಲಿ ಅದ್ದೂರಿ ಇದೆ.... ಒಟ್ಟಿನಲ್ಲಿ ಇದು `ಅದ್ದೂರಿ~ಮಯ ಚಿತ್ರ ಎಂದು ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡರು ನಟ ಧ್ರುವ ಸರ್ಜಾ. ಅವರ ಮೊದಲ ಚಿತ್ರ `ಅದ್ದೂರಿ~ ಇಂದು ತೆರೆಕಾಣುತ್ತಿದೆ.

ಭಯ ಮತ್ತು ಖುಷಿ ಎರಡರಲ್ಲೂ ಅವರು ಮುಳುಗಿದ್ದಾರೆ! ಮೊದಲ ಚಿತ್ರವೆಂಬ ಖುಷಿ ಒಂದೆಡೆಯಾದರೆ, ಜನ ಹೇಗೆ ತಮ್ಮನ್ನು ಸ್ವೀಕರಿಸುತ್ತಾರೋ ಎಂಬ ಭಯವೂ ಅವರನ್ನು ಕಾಡುತ್ತಿದೆ.

ಸಿನಿಪ್ರಿಯರಿಗೂ ಚಿತ್ರದ ಬಗ್ಗೆ ಒಂದು ರೀತಿಯ ಕುತೂಹಲ. ಏಕೆಂದರೆ ಅರ್ಜುನ್ ಸರ್ಜಾ ಕುಟುಂಬದ ಮತ್ತೊಂದು ಪ್ರತಿಭೆ ಧ್ರುವ ಸರ್ಜಾ. ಈಗಾಗಲೇ ಅಣ್ಣ ಚಿರಂಜೀವಿ ಸರ್ಜಾ ಸಣ್ಣ ಮಟ್ಟಿಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಬಹು ನಿರೀಕ್ಷೆಯ `ವರದನಾಯಕ~ ಸಹ ಸಿದ್ಧವಾಗುತ್ತಿದೆ. ಈ ಮಧ್ಯೆ ಧ್ರುವ `ಅದ್ದೂರಿ~ ಚಿತ್ರರಂಗದಲ್ಲಿ ತಮಗೊಂದು ಭದ್ರ ನೆಲೆ ಕಲ್ಪಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಅರ್ಜುನ್ ಸರ್ಜಾ ತಮ್ಮ ಸಹೋದರಿಯ ಮಕ್ಕಳಾದ ಚಿರಂಜೀವಿ ಮತ್ತು ಧ್ರುವ ಇಬ್ಬರಿಗೂ ಸಿನಿಮಾ ಮಾತ್ರವಲ್ಲ ಬದುಕಿನ ಪಾಠವನ್ನೂ ಕಲಿಸಿದವರು. ಎಂಟನೇ ತರಗತಿ ಓದುವಾಗಲೇ ತಾವು ಮುಂದೆ ಹೀರೋ ಆಗಬೇಕೆಂಬ ಬಯಕೆಯನ್ನು ಅರ್ಜುನ್ ಸರ್ಜಾ ಮುಂದಿಟ್ಟಿದ್ದರಂತೆ ಧ್ರುವ. `ನೀನು ಹೀರೋ ಆಗುವ ಮುನ್ನ ಮೊದಲು ನಟನಾಗು.

ಜೊತೆಯಲ್ಲಿ ಒಳ್ಳೆಯ ನಡತೆ ನಿನ್ನಲ್ಲಿರಬೇಕು~ ಎಂದು ಸಿನಿಮಾದ ಮೊದಲ ಹೆಜ್ಜೆಯನ್ನು ಎಲ್ಲಿಡಬೇಕೆಂದು ಹೇಳಿಕೊಟ್ಟರಂತೆ ಅರ್ಜುನ್ ಸರ್ಜಾ. ಅವರ ಮಾರ್ಗದರ್ಶನದಂತೆ ಜಿಮ್ನಾಸ್ಟಿಕ್, ಕುದುರೆ ಸವಾರಿ, ವ್ಯಾಯಾಮ, ಕತ್ತಿವರಸೆ, ನೃತ್ಯ ಹೀಗೆ ಎಲ್ಲವನ್ನೂ ಕಲಿತೆ. ಒಂದು ದಿನ ಅವುಗಳ ವಿಡಿಯೋವನ್ನು ಅಂಕಲ್‌ಗೆ ತೋರಿಸಿದಾಗ ಅವರು ಮೆಚ್ಚಿಕೊಂಡು ನಟನೆಯ ಸಲಹೆ ಸೂಚನೆಗಳನ್ನು ನೀಡಿದರಂತೆ.

`ಅಭಿನಯ ತರಂಗ~ದಲ್ಲಿ ನಾಟಕಗಳಿಗೆ ಬಣ್ಣಹಚ್ಚುತ್ತಿದ್ದ ಧ್ರುವ ಅವರನ್ನು ನಿರ್ದೇಶಕ ಎ.ಪಿ.ಅರ್ಜುನ್ ನೋಡಿದ್ದು `ಊರು ಭಂಗ~ ನಾಟಕದ ಸಂದರ್ಭದಲ್ಲಿ. ಆಗಲೇ ಅವರು `ಅದ್ದೂರಿ~ಯ ಕಥೆ ಹೇಳಿದ್ದು. ಕಥೆ ತುಂಬಾ ಚೆನ್ನಾಗಿತ್ತು. ನಾನು ನಾಯಕನಾಗಿ ಚಿತ್ರರಂಗಕ್ಕೆ ಕಾಲಿಡಲು ಇದೇ ಸೂಕ್ತ ಚಿತ್ರ ಎಂದು ಧ್ರುವ ನಿರ್ಧರಿಸಿದರಂತೆ.

ಅರ್ಜುನ್ ಸರ್ಜಾ ಕಲಿಸಿದ್ದು ಬದುಕಿನ ಹೊಣೆಗಾರಿಕೆಗಳನ್ನು, ಅಣ್ಣ ಚಿರಂಜೀವಿ ಕಲಿಸಿದ್ದು ಸದಾ ನಗುತ್ತಿರುವುದನ್ನು. ಎರಡನ್ನೂ ನಾನು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ ಧ್ರುವ. ಅಂದಹಾಗೆ, ಕಲಾವಿದರ ಕುಟುಂಬವಾದರೂ ಅವರ ಮನೆಯಲ್ಲಿ ಸಿನಿಮಾಗಳ ಬಗ್ಗೆ ಚರ್ಚಿಸುವುದು ನಿಷಿದ್ಧವಂತೆ.

`ಅದ್ದೂರಿ~ಯಲ್ಲಿ ಅವರದು ಸದಾ ನಗುತ್ತಿರುವ, ನಾಯಕಿಯ ಹಿಂದೆ ಬೀಳುವ ಹುಡುಗನ ಪಾತ್ರ. ಚಿತ್ರದಲ್ಲಿ ಬದುಕಿನ ಎಲ್ಲಾ ಮಜಲುಗಳೂ ಇವೆ. ಇದೊಂದುನೈಜಕಥೆಯನ್ನಾಧರಿಸಿದ ಚಿತ್ರ. ಎಲ್ಲರೂ ಪ್ರೀತಿಯನ್ನು ಒಂದೊಂದು ರೀತಿ ನೋಡುತ್ತಾರೆ. ಪ್ರೇಮಕಥೆಯೇ ಎಂದು ಇದನ್ನು ಬೇರೆ ಚಿತ್ರಗಳಿಗೆ ಹೋಲಿಸುವಂತಿಲ್ಲ.

ಏಕೆಂದರೆ ಅರ್ಜುನ್ ತುಂಬಾ ವಿಭಿನ್ನವಾಗಿ ಚಿತ್ರಕಥೆ ಹೆಣೆದಿದ್ದಾರೆ. ಸಂಭಾಷಣೆ ಮತ್ತೊಂದು ಅಸ್ತ್ರ. ನನ್ನ ಪ್ರಯತ್ನ ಮೀರಿ ಇಲ್ಲಿ ನಟಿಸಿದ್ದೇನೆ. ಡ್ಯೂಪ್ ಇಲ್ಲದೆ 65 ಅಡಿ ಎತ್ತರದಿಂದ ಜಿಗಿದಿದ್ದೇನೆ ಎನ್ನುವ ಧ್ರುವ ನಟಿ ರಾಧಿಕಾ ಪಂಡಿತ್‌ರಿಂದ ನಟನೆಯ ಪಾಠ ಕಲಿತಿದ್ದಾರಂತೆ. ಗೊತ್ತಿಲ್ಲದಿದ್ದಾಗ ಅವರನ್ನು ನೇರವಾಗಿ ಕೇಳುತ್ತಿದ್ದೆ. ಅವರೆದುರು ನಿಂತಾಗ ಅಭಿನಯ ತಾನಾಗಿಯೇ ಬರುತ್ತದೆ ಎನ್ನುತ್ತಾರೆ.

ಚಿತ್ರ ಬಿಡುಗಡೆಗೆ ಮುನ್ನವೇ ಹಲವು ಅವಕಾಶಗಳು ಧ್ರುವ ಅವರನ್ನು ಅರಸಿ ಬಂದಿವೆ. ಆದರೆ ಈಗ `ಅದ್ದೂರಿ~ಯದ್ದೇ ಗುಂಗು ತಲೆಯಲ್ಲಿದೆ. ಚಿತ್ರಕ್ಕೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಸಿಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಧ್ರುವ ಮೂವರು ಸೇರಿ ಚಿತ್ರ ಮಾಡುವ ಉದ್ದೇಶವೂ ಇದೆಯಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT