ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜಧಾರಿಯಾಗಲು ಸುಶೀಲ್ ಅರ್ಹ: ಲಿಯಾಂಡರ್ ಪೇಸ್

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲು ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಆಯ್ಕೆ ಮಾಡಿರುವ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ನಿರ್ಧಾರವನ್ನು ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಸಮರ್ಥಿಸಿದ್ದಾರೆ.

ಬೀಜಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸುಶೀಲ್‌ಗೆ ಈ ಬಾರಿಯ ಕೂಟದಲ್ಲಿ ತಕ್ಕ ಗೌರವ ಸಲ್ಲಬೇಕು ಎಂದು ಖಾಸಗಿ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2008ರ ಒಲಿಂಪಿಕ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಪಡೆದಿದ್ದ ಶೂಟರ್ ಅಭಿನವ್ ಬಿಂದ್ರಾ ಈ ಗೌರವ ಪಡೆಯಬೇಕಿತ್ತು. ಆದರೆ ಲಂಡನ್ ಕೂಟದ ಉದ್ಘಾಟನೆಯ ಮೂರು ದಿನಗಳ ನಂತರ ಬಿಂದ್ರಾ ಸ್ಪರ್ಧಿಸಲಿದ್ದಾರೆ. ಆದ್ದರಿಂದ ಅವರು ಇನ್ನಷ್ಟು ಅಭ್ಯಾಸ ಮಾಡುವತ್ತ ಗಮನ ಕೇಂದ್ರೀಕರಿಸಲು ಬಯಸಿದ್ದಾರೆ. ಬಾಕ್ಸರ್ ವಿಜೇಂದರ್ ಸಿಂಗ್ ಉದ್ಘಾಟನಾ ಸಮಾರಂಭದ ಮರುದಿನವೇ ಮೊದಲ ಬೌಟ್‌ನಲ್ಲಿ ಸೆಣಸಲಿದ್ದಾರೆ.

ಈ ಕಾರಣಕ್ಕಾಗಿ ನಂತರದ ಆಯ್ಕೆಯಾಗಿ ಕಾಣಿಸಿದ್ದು ಸುಶೀಲ್. ದೇಶಕ್ಕೆ ಒಲಿಂಪಿಕ್‌ನಲ್ಲಿ ಪದಕ ಗೆದ್ದುಕೊಟ್ಟಿರುವ ಕುಸ್ತಿಪಟುವಿಗೆ ಧ್ವಜಧಾರಿ ಆಗುವ ಅವಕಾಶ ನೀಡಿದ್ದು ಸರಿ ಎನ್ನುವುದು ಪೇಸ್ ಅಭಿಪ್ರಾಯ.

`ನಾನು ಈಗಾಗಲೇ ಒಮ್ಮೆ ಈ ಗೌರವ ಪಡೆದಿದ್ದೇನೆ (2000, ಸಿಡ್ನಿ ಒಲಿಂಪಿಕ್ಸ್). ಆದ್ದರಿಂದ ಬೇರೊಬ್ಬರಿಗೆ ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ಸುಶೀಲ್ ಸರಿಯಾದ ಆಯ್ಕೆ~ ಎಂದು ತಿಳಿಸಿದ್ದಾರೆ ಟೆನಿಸ್ ಡಬಲ್ಸ್ ಆಟಗಾರ ಪೇಸ್.

`ಒಲಿಂಪಿಕ್ ವರ್ಷ ವರ್ಷವೂ ನಡೆಯುವುದಿಲ್ಲ. ಕ್ರೀಡಾಪಟುಗಳಿಗೆ ನಾಲ್ಕು ವರ್ಷಗಳ ನಿರೀಕ್ಷೆಯ ನಂತರ ಸಿಗುವ ಅವಕಾಶ. ಇದರಲ್ಲಿ ಧ್ವಜ ಹಿಡಿದು ನಡೆಯುವುದು ಕೂಡ ಹೆಮ್ಮೆಯ ಕ್ಷಣ~ ಎಂದ ಅವರು `ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಕೂಡ ಎಷ್ಟು ಕಷ್ಟವೆಂದು ಗೊತ್ತು. ಪದಕ ಗೆದ್ದವರಿಗೆ ಹೆಮ್ಮೆಯ ಅನುಭವ ಆಗುವಂತೆ ನೋಡಿಕೊಳ್ಳಬೇಕು~ ಎಂದಿದ್ದಾರೆ.

ವಿವಾದದಿಂದ ನೋವು: ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಯು ಒಲಿಂಪಿಕ್ಸ್‌ಗೆ ಟೆನಿಸ್ ತಂಡವನ್ನು ಪ್ರಕಟಿಸಿದಾಗ ಎದ್ದ ವಿವಾದದ ಬಿರುಗಾಳಿಯಿಂದ `ನೋವಾಗಿದ್ದು ನಿಜ~ ಎಂದು ಹೇಳಿದ್ದಾರೆ ಪೇಸ್.

`ಬಹಳ ಒತ್ತಡ ಅನುಭವಿಸಿದ ಕಾಲವದು. ಆದರೆ ಬದುಕು ಹೀಗೆಯೇ ಸಾಗುತ್ತದೆ ಎನ್ನುವ ಸತ್ಯವನ್ನು ಅರಿತಿದ್ದೇನೆ~ ಎಂದ ಅವರು `ಆಗ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಆಡುತ್ತಿದ್ದೆ. ಮಾಧ್ಯಮಗಳಲ್ಲಿನ ವರದಿಗಳನ್ನು ನೋಡಿದಾಗ ನೋವಾಗುತಿತ್ತು. ಆಟದ ಅಂಗಳದಲ್ಲಿ ಗಮನ ಕೇಂದ್ರೀಕರಿಸುವುದೂ ಕಷ್ಟವೆನಿಸಿತ್ತು~ ಎಂದರು.

`ಸವಾಲಿನ ಅಂಥ ಕ್ಷಣಗಳಲ್ಲಿಯೂ ನಾನು ಎಲ್ಲ ಕ್ರೀಡಾ ರಾಜಕೀಯವನ್ನು ಮರೆತು ಉತ್ತಮ ಪ್ರದರ್ಶನದಿಂದ ಸಾಮರ್ಥ್ಯ ಸಾಬೀತುಪಡಿಸಲು ಯತ್ನಿಸಿದೆ. ಗಟ್ಟಿ ಮನಸ್ಸು ಮಾಡಿಕೊಂಡು ನನ್ನ ಮನಸ್ಸಿನ ಎಲ್ಲ ಬಾಗಿಲು ಮುಚ್ಚಿಕೊಂಡು ಆಟದತ್ತ ಗಮನ ಹರಿಸಿದೆ. ನನಗೆ ಟೆನಿಸ್ ಆಡುವುದು ಗೊತ್ತು. ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆಗುವುದು ಹಾಗೂ ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವುದು ಹೇಗೆಂದು ಕೂಡ ಸಾಧಿಸಿ ತೋರಿಸಿದ್ದೇನೆ. ಆದ್ದರಿಂದ ಬೇರೆ ಅಂಶಗಳು ನನ್ನ ಮೇಲೆ ಪರಿಣಾಮ ಮಾಡುವುದಿಲ್ಲ~ ಎಂದು ಹೇಳಿದರು.

ಒಲಿಂಪಿಕ್ ಪಂದ್ಯಗಳು ನಡೆಯಲಿರುವುದು ವಿಂಬಲ್ಡನ್ ಟೂರ್ನಿ ನಡೆದ ಅಂಗಳದಲ್ಲಿ. ಆದ್ದರಿಂದ ಅಲ್ಲಿ ಆಡುವುದು ಕಷ್ಟವಾಗದು. ಈ ಬಾರಿಯ ವಿಂಬಲ್ಡನ್ ಮಿಶ್ರ ಡಬಲ್ಸ್‌ನ ಫೈನಲ್‌ನಲ್ಲಿ ನಿರಾಸೆ ಕಾಡಿತು. ಆದರೆ ಒಲಿಂಪಿಕ್‌ನಲ್ಲಿ ಇನ್ನೂ ಉತ್ತಮವಾದ ರೀತಿಯಲ್ಲಿ ಯೋಜಿಸಿಕೊಂಡು ಆಡುವ ವಿಶ್ವಾಸವಿದೆ ಎಂದು ವಿವರಿಸಿದ್ದಾರೆ ಲಿಯಾಂಡರ್.

ಪುರುಷರ ಡಬಲ್ಸ್‌ನಲ್ಲಿ ವಿಷ್ಣುವರ್ಧನ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೆ ಆಡಲು ಕಾತರದಿಂದ ಕಾಯ್ದಿರುವುದಾಗಿ ಹೇಳಿದ ಅವರು `ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಸಾನಿಯಾ ಅವರೊಂದಿಗೆ ಆಡಿದ್ದೆ. ಪ್ರತಿಭಾವಂತ ಆಟಗಾರ್ತಿ ಅವಳು. ಇನ್ನೂ ಉನ್ನತ ಸಾಧನೆ ಮಾಡುವ ಶಕ್ತಿ ಹೊಂದಿದ್ದಾಳೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT