ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿ-ಬೆಳಕಿನಲ್ಲಿ ರಾಯರಥ ನಾಳೆ

Last Updated 18 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಚಾಮರಾಜನಗರ: ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷದ ಸ್ಮರಣಾರ್ಥ ಹಮ್ಮಿಕೊಂಡಿರುವ ಧ್ವನಿ-ಬೆಳಕಿನ ಕಾರ್ಯಕ್ರಮವಾದ ‘ರಾಯರಥ’ ಪ್ರದರ್ಶನಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಸಜ್ಜಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತದಿಂದ ವಿಜಯನಗರ ಸಾಮ್ರಾಜ್ಯದ ಗತವೈಭವ ಕಟ್ಟಿಕೊಡುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಫೆ. 19 ಮತ್ತು 20ರಂದು ಸಂಜೆ 7ಗಂಟೆಗೆ ಧ್ವನಿ-ಬೆಳಕಿನ ಕಾರ್ಯಕ್ರಮ ನಡೆಯಲಿದೆ.

ಶ್ರೀಕೃಷ್ಣದೇವರಾಯರ ಜೀವನ, ಆತ ಅಧಿಕಾರಕ್ಕೆ ಬಂದಾಗ ನಡೆದ ಘಟನೆಗಳು, ಆಡಳಿತ ಕೌಶಲ್ಯ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ನೀಡಿದ್ದ ಮನ್ನಣೆ ಇತ್ಯಾದಿ ಬಗ್ಗೆ ಪ್ರದರ್ಶನ ನಡೆಯಲಿದೆ. ಕ್ರೀಡಾಂಗಣದಲ್ಲಿ 232 ಚದರ ಅಡಿ ವಿಸ್ತ್ರೀರ್ಣ ಹಾಗೂ 40 ಅಡಿ ಎತ್ತರದ ಸೆಟ್ ನಿರ್ಮಿಸಲಾಗಿದೆ. ಅಲ್ಟ್ರಾ ಡೈನಾಮಿಕ್ ಲೈಟಿಂಗ್ ಡಿಸೈನ್ ಉಪಯೋಗಿಸಿ ಪರಿಣಾಮಕಾರಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

ಪ್ರದರ್ಶನದಲ್ಲಿ ಸ್ಮಾರಕಗಳ ಕೃತಕ ರಚನೆಗಳಿವೆ. ವಿಠಲನ ದೇಗುಲ, ಕಲ್ಲಿನರಥ, ಲೋಟಸ್ ಮಹಲ್, ಉಗ್ರನರಸಿಂಹ, ಕಡಲೆಕಾಳು ಗಣಪ, ಸಾಸಿವೆಕಾಳು ಗಣೇಶ, ವಿರೂಪಾಕ್ಷ ದೇವಾಲಯ, ಹಂಪಿ ಬಜಾರ್, ಮಹಾನವಮಿ ದಿಬ್ಬ, ಆನೆ ಲಾಯ, ಅಂಜನಾದ್ರಿ ಬೆಟ್ಟ, ಅಕ್ಕತಂಗಿ ಬಂಡೆ, ತುಂಗಭದ್ರಾ ನದಿ, ಎದಿರು ಬಸವಣ್ಣ, ಬಡದಿಲಿಂಗ, ಎರಡು ಅಂತಸ್ತಿನ ಮಂಟಪ ಇತ್ಯಾದಿ ರಚನೆಗಳಿದ್ದು, ನಾಗರಿಕರಿಗೆ ರಸದೌತಣ ಉಣಬಡಿಸಲಿವೆ. ಪ್ರತಿ ಪ್ರದರ್ಶನಕ್ಕೂ ಜನರೇಟರ್ ಬಳಸಲಾಗುತ್ತಿದೆ. 350ಕ್ಕೂ ಹೆಚ್ಚು ವಿಶೇಷ ಲೈಟ್ ಫಿಕ್ಸರ್ ಬಳಸಲಾಗುತ್ತಿದೆ. 140 ಲೈಟಿಂಗ್ ಸರ್ಕ್ಯೂಟ್ಸ್ ಉಪಯೋಗಿಸಲಾಗುತ್ತಿದೆ. ಹೊರಾಂಗಣ ಆಡಿಯೋ ಸೆಟ್‌ಅಫ್ ಬಳಸಲಾಗಿದ್ದು, ಇದರ ಔಟ್‌ಪುಟ್‌ಗಳು 50 ಸಾವಿರ ವ್ಯಾಟ್ಸ್‌ನಷ್ಟು ಸಾಮರ್ಥ್ಯ ಹೊಂದಿವೆ. ಜತೆಗೆ, ಸಾರ್ವಜನಿಕರಿಗೆ 2,500 ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರದರ್ಶನ ಯಶಸ್ವಿಗೆ ಮನವಿ
ಚಾಮರಾಜನಗರ: ‘ರಾಜ್ಯದ 20 ಜಿಲ್ಲೆಗಳಲ್ಲಿ ಈ ಧ್ವನಿ-ಬೆಳಕಿನ ಪ್ರದರ್ಶನ ನಡೆಯುತ್ತಿದೆ. ಜಿಲ್ಲಾ ಕ್ರೀಡಾಂಗಣದಲ್ಲೂ ಯಶಸ್ವಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಕೆ. ಅಮರನಾರಾಯಣ ತಿಳಿಸಿದರು. ‘ಪ್ರದರ್ಶನ ದಿನದಂದು ಪ್ರತಿ ತಾಲ್ಲೂಕು ಕೇಂದ್ರಕ್ಕೂ ರಾತ್ರಿವೇಳೆ ತಲಾ ಎರಡು ಕೆಎಸ್‌ಆರ್‌ಟಿಸಿ ಬಸ್ ಓಡಿಸಲು ಸೂಚಿಸಲಾಗಿದೆ. ವಿವಿಧೆಡೆಯಿಂದ ನಾಗರಿಕರು ಬಂದು ಪ್ರದರ್ಶನ ವೀಕ್ಷಿಸಲು ಇದರಿಂದ ಅನುಕೂಲವಾಗಲಿದೆ.

ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಬೆಳಿಗ್ಗಿನ ವೇಳೆ ಸ್ಮಾರಕಗಳ ಕೃತಕ ರಚನೆ ನೋಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಶಾಲೆಯಿಂದಲೂ ಮಕ್ಕಳನ್ನು ಕರೆತಂದು ಗತಕಾಲದ ವೈಭವ ಪರಿಚಯಿಸುವ ಬಗ್ಗೆ ಶಿಕ್ಷಕರೇ ಜವಾಬ್ದಾರಿ ಹೊರಬೇಕು. ಈ ಸಂಬಂಧ ಡಿಡಿಪಿಐಗೆ ಸೂಚಿಸಲಾಗುವುದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಫಣೀಶ್, ಪ್ರದರ್ಶನದ ಉಸ್ತುವಾರಿ ಹೊತ್ತಿರುವ ಎಂ.ಕೆ. ಮಠ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT