ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 20ಕ್ಕೆ ಸಾಮಾಜಿಕ, ಆರ್ಥಿಕ, ಜಾತಿಗಣತಿ ಆರಂಭ

Last Updated 14 ಅಕ್ಟೋಬರ್ 2011, 6:50 IST
ಅಕ್ಷರ ಗಾತ್ರ

ಚಾಮರಾಜನಗರ: `ಬಡತನರೇಖೆಗಿಂತ ಕೆಳಗಿರುವ ಕುಟುಂಬ ಗುರುತಿಸಲು ಜಿಲ್ಲೆಯಲ್ಲಿ ನ. 20ರಿಂದ ಸಾಮಾಜಿಕ, ಆರ್ಥಿಕ, ಜಾತಿ ಗಣತಿ ಆರಂಭವಾಗಲಿದ್ದು, ಅಧಿಕಾರಿಗಳು ಒಂದು ವಾರದೊಳಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು~ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸ್ಥಾಯಿಸಮಿತಿ ಸಭಾಂಗಣದಲ್ಲಿ ಗುರುವಾರ ಗಣತಿ ಸಂಬಂಧ ನಡೆದ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ನಗರ ಬಡತನ ನಿರ್ಮೂಲನಾ ಇಲಾಖೆಯ ಆದೇಶದನ್ವಯ ನಿಗದಿತ ವೇಳೆಗೆ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಲು ಎಲ್ಲ ಸಿದ್ಧತೆ ಕೈಗೊಳ್ಳಬೇಕು ಎಂದರು.

ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯು ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಗಣತಿ ಆರಂಭವಾಗಲಿದೆ. ನ. 20ರಿಂದ ಡಿ. 30ರವರೆಗೆ ಗಣತಿ ಕಾರ್ಯ ನಡೆಯಲಿದೆ. ಈ ಗಣತಿಯು ಇತರೇ ಗಣತಿಗಿಂತ ಭಿನ್ನವಾಗಿದೆ. ಜನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಗುರುತಿಸಲು ಸಹಕಾರಿಯಾಗಿರುವ ಈ ಗಣತಿಯ ಯಶಸ್ವಿಗೆ ಅಧಿಕಾರಿಗಳು ವಿಶೇಷ ಆಸ್ಥೆವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಮಟ್ಟದಲ್ಲಿ ಗಣತಿ ಸಂಬಂಧ ಈಗಾಗಲೇ ರಚಿಸಿರುವ ಸಮಿತಿಯಂತೆ ತಾಲ್ಲೂಕುಮಟ್ಟದ ಸಮಿತಿ ರಚಿಸಬೇಕು. ಶೀಘ್ರವೇ, ಈ ಸಮಿತಿಯ ಸಭೆ ನಡೆಸಿ ಅಗತ್ಯ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು. ತಹಶೀಲ್ದಾರ್, ಪುರಸಭೆ, ನಗರಸಭೆ ಪೌರಾಯುಕ್ತರು ಸರ್ಕಾರದ ಸೂಚನೆಯಂತೆ ನಿಗದಿಪಡಿಸಿರುವ ವೇಳಾಪಟ್ಟಿ ಅನ್ವಯ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದರು. ಗಣತಿ ಕಾರ್ಯ ಕಾಗದರಹಿತವಾಗಿದೆ. ಗಣತಿ ವೇಳೆ ಪ್ರಶ್ನಾವಳಿ ಮತ್ತು ದಾಖಲು ಮಾಡಬೇಕಾದ ಮಾಹಿತಿ ಅಂಶಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸಿದ್ಧಪಡಿಸಿರುವ ವಿಶೇಷ ದಾಖಲು ಯಂತ್ರದಲ್ಲಿ(ಟ್ಯಾಬ್ಲೆಟ್ ಪಿಸಿ) ಸಂಗ್ರಹಿಸಬೇಕಿದೆ. ಗಣತಿ ಸಾಮಗ್ರಿ ಪಡೆದು ಅಧಿಕಾರಿಗಳಿಗೆ ತರಬೇತಿ ಪ್ರಕ್ರಿಯೆ ನಡೆಸಬೇಕು ಎಂದರು.

ಗಣತಿ ಕಾರ್ಯಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಬಾರದೆಂಬ ಆದೇಶವಿದೆ. ಇದನ್ನು ಪಾಲಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕಂದಾಯ ನಿರೀಕ್ಷಕರು, ಉನ್ನತ ಪ್ರೌಢಶಾಲೆಯ ಶಿಕ್ಷಕರು, ಉಪನ್ಯಾಸಕರು, ವಿವಿಧ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಇತರೇ ಸಿಬ್ಬಂದಿಯನ್ನು ಗಣತಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತಾಲ್ಲೂಕು ಮತ್ತು ಹೋಬಳಿಮಟ್ಟದಲ್ಲಿ ಎರಡು ಹಂತದಲ್ಲಿ ತರಬೇತಿ ಆಯೋಜಿಸಬೇಕು. ಬಿಇಎಲ್ ಸಂಸ್ಥೆಯಿಂದ ನೇಮಕಗೊಂಡ ಡಾಟಾ ಎಂಟ್ರಿ ಆಪರೇಟರ್‌ಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಬಿ.ಎಂ. ಸಿದ್ದಲಿಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ಜಿ.ಪಂ. ಸಹಾಯಕ ಕಾರ್ಯದರ್ಶಿ ಪಿ.ಜಿ. ವೇಣುಗೋಪಾಲ್ ತಹಶೀಲ್ದಾರ್‌ಗಳು ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT