ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು ರಸಬಾಳೆಗೆ ಕಾಯಕಲ್ಪ?

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ವಿಶ್ವಖ್ಯಾತಿ ಪಡೆದ, ವಿಶಿಷ್ಟ ರುಚಿಯ ನಂಜನಗೂಡು ರಸಬಾಳೆಗೆ ಭಾರೀ ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಷ್ಟು  ಹಣ್ಣು ಬೆಳೆಯುವ ವಾತಾವರಣ ಈಗ ಇಲ್ಲ. ಹೀಗಾಗಿ ವಿಶ್ವ ವಿಖ್ಯಾತ ರಸಬಾಳೆ ತಳಿಯ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ಇದೆ.
 
ನಂಜನಗೂಡು ರಸಬಾಳೆ ರುಚಿಗೆ ಸಾಟಿಯಾದ ಇನ್ನೊಂದು ತಳಿ ಇಲ್ಲ.ತಾಲ್ಲೂಕಿನ ದೇವರಸನಹಳ್ಳಿಯಲ್ಲಿ ಬೆಳೆಯುವ ರಸಬಾಳೆಗೆ ವಿಶಿಷ್ಟ ರುಚಿ. ಹೀಗಾಗಿ ಮಾರುಕಟ್ಟೆಯಲ್ಲಿ ದೇವರಸನಹಳ್ಳಿ ರಸಬಾಳೆಗೆ ಹೆಚ್ಚು ಬೇಡಿಕೆ.

1980ರ ದಶಕದಲ್ಲಿ  ದೇವರಸನಹಳ್ಳಿ ಹಾಗೂ ಆಸು-ಪಾಸಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ನಂಜನಗೂಡು ರಸಬಾಳೆ ಬೆಳೆಯಲಾಗುತ್ತಿತ್ತು.  ರೈತರಿಗೆ ಹಲಸಿನಕೆರೆಯ ನೀರು ಆಸರೆಯಾಗಿತ್ತು. ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿ ಕಪಿಲಾ ನದಿಗೆ 1975ರಲ್ಲಿ ಜಲಾಶಯ ನಿರ್ಮಿಸಲಾಯಿತು.

ಆನಂತರ ಈ ಜಲಾಶಯದ ಮುಂಭಾಗದಿಂದ  ಆರಂಭವಾಗುವ ಕಬಿನಿ ಬಲದಂಡೆ ನಾಲೆ ನಿರ್ಮಾಣವಾಯಿತು. ಈ ನಾಲೆಯು ನಂಜನಗೂಡು ತಾಲ್ಲೂಕಿನಲ್ಲಿ ಹಾದು ಹೋಗಿದೆ. ದೇವರಸನಹಳ್ಳಿ ಸೇರಿದಂತೆ ಸುತ್ತಲ ಭೂಮಿ ಈ ನಾಲೆಯಿಂದಾಗಿ ನೀರಾವರಿಗೆ ಒಳಪಟ್ಟಿತು.

ನಾಲೆಯಲ್ಲಿ ನೀರು ಹರಿಯಲು ಪ್ರಾರಂಭವಾದನಂತರ ರಸಬಾಳೆಗೆ `ಪನಾಮ~ ಎಂಬ ಹೆಸರಿನ ಶಿಲಿಂಧ್ರ ರೋಗ ಕಾಣಿಸಿಕೊಂಡಿತು. ರೋಗ ಉಲ್ಬಣಗೊಂಡು ಇಳುವರಿ ಕಡಿಮೆಯಾಯಿತು.

ಆ ನಂತರ ಈ ಭಾಗದ ರೈತರು ರಸಬಾಳೆ ಬೆಳೆಯುವುದನ್ನು ಹಂತ, ಹಂತವಾಗಿ ಕೈ ಬಿಟ್ಟರು ಎನ್ನುತ್ತಾರೆ ನಂಜನಗೂಡಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ.

ಬಾಳೆ ಬೆಳೆಯಲು ಹೆಚ್ಚು ನೀರು ಬೇಕಿಲ್ಲ. ಸದಾ ಹರಿಯುವ ನಾಲೆ ನೀರಿಗಿಂತ ಬೇಕಾದಾಗ ನೀರು ಬಳಸಿಕೊಳ್ಳುವ ಐಪಿ ಸೆಟ್ ನೀರಾವರಿ ಪದ್ಧತಿ ಹೆಚ್ಚು ಸೂಕ್ತ ಎನ್ನುತ್ತಾರೆ ನಂಜನಗೂಡಿನ ರೈತ ಎನ್.ಕೆ.ಜಯಕುಮಾರ್.

ಅವರು ರಸ ಬಾಳೆ ಬೆಳೆಯುತ್ತಾರೆ. ಸಮೀಪದ ಕೋಡಿ ನರಸೀಪುರ ಬಳಿ ಹತ್ತು ಎಕರೆ ಖುಷ್ಕಿ ಜಮೀನಿದೆ. ಐಪಿ ಸೆಟ್ ನೀರಾವರಿ ಸೌಲಭ್ಯವಿದೆ. ಆದರೆ ಅವರಿ ರಸಬಾಳೆಯನ್ನು ಏಕ ಬೆಳೆಯಾಗಿ  ಬೆಳೆಯುವುದಿಲ್ಲ. ಏಲಕ್ಕಿ, ಪಚ್ಚಬಾಳೆಯ ಜೊತೆಗೆ ಸುಮಾರು 200 ರಸಬಾಳೆ ಗಿಡಗಳನ್ನು ಬೆಳೆದಿದ್ದಾರೆ.

ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅವರ ತೋಟದ ಒದೊಂದು ರಸಬಾಳೆ ಗೊನೆಯಲ್ಲಿ 80 ರಿಂದ 100 ಕಾಯಿ ಬಿಟ್ಟಿವೆ. ಗಾತ್ರದ  ಮೇಲೆ ಒಂದು ಕಾಯಿಗೆ ರೂ. 1.50 ರಿಂದ 2 ರೂಪಾಯಿ ಬೆಲೆ ಸಿಗುತ್ತದೆ.

ಒಂದು ಗೊನೆ ಬೆಳೆಯಲು 50- 60 ರೂ. ವೆಚ್ಚವಾಗುತ್ತದೆ.  ಫಸಲು ಕೈ ಹತ್ತಿದರೆ ಒಂದು ಗಿಡದಿಂದ ರೂ. 150 ರಿಂದ 200 ರೂಪಾಯಿ ಲಾಭ ಪಡೆಯಬಹುದು ಎನ್ನುತ್ತಾರೆ ಜಯಕುಮಾರ್.

ಮೊದಲಿಗೆ ಕೇವಲ 20ಕಂದುಗಳನ್ನು ತಂದು ನಾಟಿ ಮಾಡಿದೆ. ಅವುಗಳಲ್ಲೇ ಉತ್ಪತ್ತಿಯಾದ ಮರಿ ಕಂದುಗಳನ್ನು ಸಸಿ ಮಾಡಿ ಈಗ ಕೋಡಿ ನರಸೀಪುರದಲ್ಲಿ ಸುಮಾರು 200 ಗಿಡಗಳು ಮತ್ತು ಪಟ್ಟಣದ ಹಳ್ಳದಕೇರಿ ಸಮೀಪದ ಜಮೀನಿನಲ್ಲಿ ಸುಮಾರು 400 ಗಿಡ ಬೆಳೆಸಿದ್ದೇನೆ ಎನ್ನುವ ಜಯಕುಮಾರ್  ಏಲಕ್ಕಿ ಬಾಳೆಯಲ್ಲಿ ಸತತ 6ನೇ ಬೆಳೆ ಪಡೆದಿದ್ದಾರೆ.

ಬೆಳೆಗಾರರ ಸಂಘ: ನಂಜನಗೂಡು ರಸಬಾಳೆ ತಳಿ ನಶಿಸಿ ಹೋಗದಂತೆ ತಡೆಯುವ ಸಲುವಾಗಿ ತೋಟಗಾರಿಕೆ ಇಲಾಖೆ ಪ್ರಯತ್ನಿಸಿದೆ. ಇದಕ್ಕೆ ಪೂರಕವಾಗಿ  `ರಸಬಾಳೆ ಬೆಳೆಗಾರರ ಸಂಘ~ವನ್ನು ಕಳೆದ  ಮಾರ್ಚ್‌ನಲ್ಲಿ ಅಸ್ತಿತ್ವಕ್ಕೆ ತಂದಿದೆ.

ಇನ್ನಷ್ಟು ಬೆಳೆಗಾರರನ್ನು ಸಂಘಟಿಸಿ ಹೆಚ್ಚು ಪ್ರದೇಶದಲ್ಲಿ ರಸಬಾಳೆ ಬೆಳೆ ತೆಗೆಯಲು ಪ್ರೋತ್ಸಾಹಿಸುವುದು ಸಂಘದ ಉದ್ದೇಶ. ಈಗ ನಂಜನಗೂಡು ತಾಲ್ಲೂಕಿನಲ್ಲಿ ರಸಬಾಳೆ ಬೆಳೆಯುವ ಪ್ರದೇಶ ಹತ್ತು ಎಕರೆಗಿಂತ ಹೆಚ್ಚಿಲ್ಲ.

ತಳಿ ಸಂರಕ್ಷಣೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಅಂಗಾಂಶ ಕೃಷಿ ಪ್ರಯೋಗಾಲಯ (ಟಿಶ್ಯೂ  ಕಲ್ಚರ್ ಲ್ಯಾಬ್) ಅಭಿವೃದ್ಧಿ ಪಡಿಸಿದ ಸುಮಾರು 50 ಸಾವಿರ ಸಸಿಗಳನ್ನು ಬರುವ ಆಗಸ್ಟ್ ತಿಂಗಳ ವೇಳೆಗೆ ನಂಜನಗೂಡು ತಾಲ್ಲೂಕಿನ ರೈತರಿಗೆ ಆದ್ಯತೆ ಮೇಲೆ ಪೂರೈಕೆ ಮಾಡಲಿದೆ ಎಂಬ ಸಂಗತಿ ರೈತರಿಗೆ ಹಾಗೂ ರಸಬಾಳೆ ಪ್ರಿಯರಿಗೆ ಹರ್ಷ ಉಂಟು ಮಾಡಿದೆ.

ಬೇರೆ ಭಾಗದಲ್ಲಿ ಬೆಳೆದರೆ ಅದು ತನ್ನ ಗುಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಸಸಿಗಳನ್ನು ನಂಜನಗೂಡು ತಾಲ್ಲೂಕಿನ ರೈತರಿಗೆ ಪೂರೈಸುವುದಾಗಿ ಇಲಾಖೆ ಹೇಳಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ರಸಬಾಳೆ ಬೆಳೆಯಲು ನೆರವು ಸಿಗುತ್ತಿದೆ.

ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ರೈತರಿಗೆ ಮನವಿ ಮಾಡಿದೆ.ನಂಜನಗೂಡು ರಸಬಾಳೆಗೆ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಬೇಡಿಕೆ ಇದೆ.

ಆದರೆ ತಾಲ್ಲೂಕಿನಲ್ಲಿ ಬೆಳೆಯುತ್ತಿರುವ ರಸಬಾಳೆ ನಂಜನಗೂಡು ಮಾರುಕಟ್ಟೆಗೇ ಸಾಲದು. ಇಲ್ಲಿ ಒಂದು ಬಾಳೆ ಹಣ್ಣಿಗೆ 3- 4 ರೂ. ಬೆಲೆ ಇದೆ. ಮೈಸೂರಿನಲ್ಲಿ ಇದೇ ಹಣ್ಣಿಗೆ 6ರಿಂದ 8 ಬೆಲೆಗೆ  ಮಾರಾಟವಾಗುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT