ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜಿನ ಇತಿಹಾಸ ವರ್ತಮಾನಕ್ಕೆ ಒಳಿತಲ್ಲ

Last Updated 9 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ತಿಪಟೂರು: ‘ನಂಜಿನ ಇತಿಹಾಸ ಮುಂದಿಟ್ಟುಕೊಂಡು ವರ್ತಮಾನ ಕಟ್ಟುವ ಮನಸ್ಥಿತಿಯಿಂದ ಸಮಾಜಕ್ಕೆ ಒಳಿತಾಗುವುದಿಲ್ಲ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ರಹಮತ್ ತರೀಕೆರೆಅಭಿಪ್ರಾಯಪಟ್ಟರು.ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಾಪಕರ ವೇದಿಕೆಯಿಂದ ಮಂಗಳವಾರ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭಾರತದ ರಾಜಕಾರಣ ಇತಿಹಾಸದ ಅನಗತ್ಯ ಭಾರ ಹೊತ್ತುಕೊಂಡು ತಪ್ಪು ದಾರಿ ತುಳಿಯುತ್ತಾ ಬಂದಿದೆ. ಸ್ಥಾಪಿತ ಇತಿಹಾಸವನ್ನು ಕೆಲ ವರ್ಗಗಳು ರಾಜಕೀಯ ಅಸ್ತ್ರವಾಗಿ ಬಳಸಿ ವರ್ತಮಾನದ ತುರ್ತನ್ನು ಬದಿಗೊತ್ತಿ ಹೊಸ ಸಮಸ್ಯೆ ಸೃಷ್ಟಿಸುತ್ತಿವೆ. ಆದರೆ ಶ್ರೀಸಾಮಾನ್ಯರು ಇತಿಹಾಸದ ಅನಗತ್ಯ ಭಾರ ಹೊರುವುದಿಲ್ಲ ಎಂಬುದು ಜನಪದರ ಮೂಲಕ ಅರ್ಥವಾಗುತ್ತದೆ ಎಂದರು.

ಇತಿಹಾಸ ಪ್ರಜ್ಞೆ ಕುರಿತಾದ ಅಭಿಪ್ರಾಯಗಳೇ ದೋಷಪೂರ್ಣವಾಗಿವೆ. ಸಾಮಾಜಿಕ, ರಾಜಕೀಯವಾಗಿ ಮತ್ತೆ ಮತ್ತೆ ಸ್ಥಾಪಿತ ಇತಿಹಾಸದತ್ತ ಇಣುಕುವ ಹಳಹಳಿಕೆ ಕಾಣುತ್ತಿದೆ. ಆಳುವ ವರ್ಗದ ಪರವಾದ, ಪ್ರಭುತ್ವ ಪರವಾದ ಇತಿಹಾಸ ವಿಜೃಂಭಿಸುತ್ತಿದೆ ಹೊರತು ಅಂದಿನ ಜನಸಾಮಾನ್ಯರ ಬದುಕಿನ ಚರಿತ್ರೆ ದಾಖಲಾಗಿಯೇ ಇಲ್ಲ ಎಂದು ಹೇಳಿದರು.ಚರಿತ್ರೆ ಕಣ್ಣಲ್ಲಿ ವರ್ತಮಾನ ನೋಡಿ ಜಾತಿ, ಧರ್ಮಗಳ ನಡುವೆ ಅಪನಂಬಿಕೆ ಸೃಷ್ಟಿಸಲಾಗುತ್ತಿದೆ. ಜನಾಂಗ ದ್ವೇಷಕ್ಕೆ, ಸಮಾಜ ಹೊಡೆಯುವ ಕುಯುಕ್ತಿಗೆ ಇತಿಹಾಸವನ್ನು ಆಯುಧವಾಗಿ ಬಳಸುವುದಾದರೆ ಚರಿತ್ರೆಯ ಪುರುಷಾರ್ಥವಾದರೂ ಏನು.

ಚರಿತ್ರೆ ಘಟನೆಗಳಿಗೆ ಹೊಸ ತಲೆಮಾರನ್ನು ವಾರಸುದಾರರನ್ನಾಗಿ ಮಾಡಿ, ಜವಾಬು ಕೇಳುವುದು ಎಷ್ಟು ಸರಿ. ಚರಿತ್ರೆ ವಾದದ ಮೂಲಕ ವರ್ತಮಾನದ ನೆಮ್ಮದಿ ಕೆಡುವುದಾದರೆ ಅದರ ಔಚಿತ್ಯವಾದರೂ ಏನಿದೆ ಎಂದು ಪ್ರಶ್ನಿಸಿದರು.ಪ್ರೊ.ಪಾಲಾಕ್ಷ, ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಅವರನ್ನು ಸನ್ಮಾನಿಸಲಾಯಿತು. ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಸವಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ಕನ್ನಡಿಗರ ಬ್ರಿಟಿಷ್ ವಿರೋಧ ಸಶಸ್ತ್ರ ಬಂಡಾಯಗಳು- ಕೃತಿಯನ್ನು ಪ್ರಾಂಶುಪಾಲ ಪ್ರೊ.ಬೋರೇಗೌಡ ಬಿಡುಗಡೆ ಮಾಡಿದರು.

ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಮೂರ್ತಿ, ಇತಿಹಾಸ ಅಧ್ಯಾಪಕರ ವೇದಿಕೆಯ ಶಿವಕುಮಾರಸ್ವಾಮಿ, ಶಿವಪ್ರಕಾಶ್ ಮತ್ತಿತರರು ಇದ್ದರು. ಎಂ.ಕೆ.ಕುಮಾರಸ್ವಾಮಿ ಸ್ವಾಗತಿಸಿ, ಟಿ.ಎಸ್.ಮಹದೇವಪ್ಪ ವಂದಿಸಿದರು. ನಂತರ ಕರ್ನಾಟಕದಲ್ಲಿ ನಾಥ ಪಂಥ ಕುರಿತು ಪ್ರೊ.ರಮಮತ್ ತರೀಕೆರೆ ಹಾಗೂ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಚಳವಳಿ ಕುರಿತು ಡಾ.ಅಶ್ವತ್ಥನಾರಾಯಣ ವಿಚಾರ ಮಂಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT