ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ಹೋಟೆಲ್‌ಗೆ ಬೀಗಮುದ್ರೆ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶುಚಿತ್ವ ಪಾಲಿಸದ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿರುವ ನಂದಿನಿ ಡೀಲಕ್ಸ್ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೋಟೆಲ್‌ಗೆ ಬಿಬಿಎಂಪಿಯು ಮಂಗಳವಾರ ಬೀಗಮುದ್ರೆ ಹಾಕಿದೆ.

ಬಿಬಿಎಂಪಿಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ವೆಂಕಟೇಶಬಾಬು ನೇತೃತ್ವದ ತಂಡವು ನಡೆಸಿದ ತಪಾಸಣೆಯಲ್ಲಿ ನಂದಿನಿ ಹೋಟೆಲ್ ಶುಚಿತ್ವ ಕಾಪಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲಗೊಂಡಿರುವುದು ಅರಿವಿಗೆ ಬಂತು.

ಹೋಟೆಲ್‌ನ ಅಡುಗೆ ಮನೆಗೆ ಹೊಕ್ಕ ಅಧ್ಯಕ್ಷರು ನೆಲ ತೊಳೆಯದೇ ಎಣ್ಣೆ ಜಿಡ್ಡಿನಿಂದ ಕೊಳಕಾಗಿರುವುದನ್ನು ಗಮನಿಸಿದರು. ಕೋಳಿ, ಕುರಿ ಮಾಂಸ, ಸೀಗಡಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ, ಮಲಿನಗೊಂಡ ಫ್ರಿಜ್‌ನಲ್ಲಿ ತುಂಬ ದಿನಗಳಿಂದ ಶೇಖರಿಸಿಡಲಾಗಿದ್ದನ್ನು ಪರಿಶೀಲಿಸಿದ ಅವರು, ಕರಿದ ಪದಾರ್ಥಗಳು, ಹಳಸಿದ ಬಿರಿಯಾನಿ, ಹಾಳಾದ ಉಪ್ಪಿನಕಾಯಿಯನ್ನು ಕಂಡು ಹೋಟೆಲ್ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೆಲವು ಆಹಾರ ಪದಾರ್ಥಗಳಿಗೆ ಶಿಲೀಂದ್ರ ಬಂದಿರುವುದನ್ನು ಗಮನಿಸಿದ ಅವರು, ಹೊಟೇಲ್ ಸಿಬ್ಬಂದಿ 15 ದಿನಗಳಿಗೊಮ್ಮೆ ಮಸಾಲೆ ತಯಾರಿಸಿಟ್ಟುಕೊಳ್ಳುತ್ತಿರುವುದರ ಬಗ್ಗೆ ಆಕ್ಷೇಪಿಸಿದರು. ಹೋಟೆಲ್ ನಿಯಮಗಳನ್ನು ಗಾಳಿಗೆ ತೂರಿರುವುದಕ್ಕೆ ಆರೋಗ್ಯಾಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ದೂರಿದರು. ನಂದಿನಿ ಡೀಲಕ್ಸ್ ಹೊಟೇಲ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿ,. ಕೂಡಲೇ ಬೀಗಮುದ್ರೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ವಸಂತನಗರದಲ್ಲಿರುವ ಇಂಪೀರಿಯಲ್ ಹೋಟೆಲ್‌ಗೆ ಭೇಟಿ ನೀಡಿ ಅಲ್ಲಿನ ಅಡುಗೆ ಮನೆ ತಪಾಸಣೆ ನಡೆಸಿದರು. ಹೋಟೆಲ್‌ನಲ್ಲಿ ಬಾಲಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಅನುಮಾನಗೊಂಡು ಹೊಟೇಲ್‌ನ ಮಾಲೀಕರನ್ನು ಪ್ರಶ್ನಿಸಿದರು. `ಅವರೆಲ್ಲ ಮಣಿಪುರಿಯವರು, ತುಸು ಕುಳ್ಳಗೆ ಇರುವುದರಿಂದ ಹಾಗೇ ಕಾಣಿಸುತ್ತದೆ. 18ಕ್ಕೂ ಮೇಲ್ಪಟ್ಟ ಯುವಕರೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ~ ಎಂದು ಮಾಲೀಕರು ಉತ್ತರ ನೀಡಿದರು.

ಆಹಾರ ಪರವಾನಗಿ ಪತ್ರವನ್ನು ಪಡೆಯದೇ ಇರುವ ಇಂಪೀರಿಯಲ್ ಹೋಟೆಲ್‌ಗೆ ನೋಟಿಸ್ ಜಾರಿಗೊಳಿಸಿದರು. ಅದೇ ರಸ್ತೆಯಲ್ಲಿ ತುಸು ದೂರದಲ್ಲಿರುವ ಎಂಪೈರ್ ಹೋಟೆಲ್‌ನಲ್ಲಿ ಅಸಮರ್ಪಕ ನಿರ್ವಹಣೆ ಮತ್ತು ಆಹಾರ ಪರವಾನಗಿ ಇಲ್ಲದೇ ಇರುವುದಕ್ಕೆ ನೋಟಿಸ್ ಜಾರಿ ಮಾಡಿ, ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್‌ಬಾಬು, `ಶುಚಿತ್ವ ಪಾಲಿಸದ ಹೊಟೇಲ್‌ಗೆ ಬೀಗಮುದ್ರೆ ಹಾಕಿ ದಂಡ ವಿಧಿಸಲಾಗಿದೆ. ದಂಡ ಕಟ್ಟಿದ ನಂತರವೂ ಒಂದೆಡೆರಡು ದಿನಗಳ ಒಳಗೆ ಹೋಟೆಲ್ ಶುಚಿತ್ವಕ್ಕೆ ಆದ್ಯತೆ ನೀಡುವ ಕಾರ್ಯಕ್ಕೆ ಚಾಲನೆ ನೀಡಬೇಕು.
 
ನಂತರವಷ್ಟೆ ಹೋಟೆಲ್ ಆರಂಭಿಸಲು ಅನುಮತಿ ನೀಡಲಾಗುವುದು. ಇಲ್ಲವಾದರೆ ಮತ್ತೆ ಇದೇ ರೀತಿ ತಪಾಸಣೆ ನಡೆಸಿ ದಂಡ ವಿಧಿಸಲಾಗುವುದು~ಎಂದು ಎಚ್ಚರಿಸಿದರು. ಪೂರ್ವ ವಲಯದ ಉಪ ಆರೋಗ್ಯಾಧಿಕಾರಿ ಡಾ.ಸುರೇಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT