ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಡಿತರ ಚೀಟಿ- ಸರ್ಕಾರಕ್ಕೆ ವರದಿ

Last Updated 18 ಫೆಬ್ರುವರಿ 2011, 11:00 IST
ಅಕ್ಷರ ಗಾತ್ರ

ಉಡುಪಿ: ನಕಲಿ ಪಡಿತರ ಚೀಟಿ ಹಗರಣದ ಕುರಿತು ಸರ್ಕಾರಕ್ಕೆ ಸೋಮವಾರ ವರದಿ ಸಲ್ಲಿಸಲಾಗಿದ್ದು ಆ ಬಗ್ಗೆ ವಿಚಾರಣೆ ಮುಂದುವರಿಯಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಇಲ್ಲಿ ತಿಳಿಸಿದರು.ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ‘ಎಂ ಬ್ಯಾಟಲ್ಡ್’ ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಸುಮಾರು 1.20 ಕೋಟಿ ಅರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಆದರೆ ಸುಮಾರು 1.59 ಕೋಟಿಯಷ್ಟು ಬಿಪಿಎಲ್ ಪಡಿತರ ಚೀಟಿ ಹೆಚ್ಚು ಹಂಚಿಕೆಯಾಗಿದೆ. ರಾಜ್ಯದಲ್ಲಿ ಸುಮಾರು 40 ಲಕ್ಷದಷ್ಟು ಹೆಚ್ಚು ಪಡಿತರ ಚೀಟಿ ಹಂಚಿಕೆ ಮಾಡಲಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಕಳೆದ ಬಾರಿ ಲೋಕಸಭಾ ಚುನಾವಣೆ ಸಂದರ್ಭ ಇಂತಹ ಭಾರಿ ಹಂಚಿಕೆ ನಡೆದಿದೆ. ಮನೆಯಿಲ್ಲದೇ ಇದ್ದ ಬಡವರಿಗೆಲ್ಲ ಅಪಿಢವಿತ್ ಸಲ್ಲಿಕೆ ಮಾಡುವ ಮೂಲಕ ವ್ಯಾಪಕವಾಗಿ ಕಾರ್ಡ್ ಹಂಚಿಕೆ ಮಾಡಲಾಗಿದೆ ಎಂದರು.

ಸದ್ಯವೇ ರಾಜ್ಯ ಬಜೆಟ್ ಮಂಡಿಸಲಾಗುತ್ತದೆ. ಸರ್ಕಾರ ಕೂಡ ಈ ದೋಷವನ್ನು ಬಜೆಟ್ ಮೂಲಕ ಸರಿಪಡಿಸುವ ಭರವಸೆ ನೀಡಿದೆ. ಹೀಗಾಗಿ ಅಲ್ಲಿಯವರೆಗೂ ಕಾಯಲಾಗುವುದು ಎಂದರು.‘ಎರಡನೇ ಬಾರಿಗೆ ತಾವು ಯಾಕೆ ಲೋಕಾಯುಕ್ತರಾಗಿ ಮುಂದುವರಿಯುವುದಿಲ್ಲ?’ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾನೂನು ಪ್ರಕಾರ ಒಂದೇ ಅವಧಿಗೆ ಮಾತ್ರ ಲೋಕಾಯುಕ್ತರು ಮುಂದುವರಿಯಲು ಅವಕಾಶವಿದೆ. ನನ್ನ ನಂತರ ಬರುವವರು ಇನ್ನೂ ಒಳ್ಳೆಯ ಕೆಲಸ ಮಾಡ–ಲಿ. ಮುಂದಿನ 5 ತಿಂಗಳಲ್ಲಿ ನನ್ನ ಇನ್ನೂ ಎರಡು ವರದಿ ಕೆಐಡಿಬಿ ಮತ್ತು ಗಣಿ ವರದಿ ಸಿದ್ಧವಾಗಲಿದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ಈವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಶೇ 10-20ರಷ್ಟು ಕೂಡ ಅಲ್ಲಿ ನೆರೆ ಪರಿಹಾರ ಕಾರ್ಯ ಕೆಲಸ ಆಗಿಲ್ಲ ಎಂದು ವಿಷಾದಿಸಿದರು.

ಜನಪ್ರತಿನಿಧಿಗಳಿಂದ ಸಂಸತ್ತು, ವಿಧಾನಸಭೆ ಪಾವಿತ್ರ್ಯ ಹಾಳು: ನಂತರ ಸಮಾರಂಭದಲ್ಲಿ ಮಾತನಾಡಿದ ಲೋಕಾಯುಕ್ತರು, ನಮ್ಮ ಜನಪ್ರತಿನಿಧಿಗಳ ನಡವಳಿಕೆಗಳಿಂದಾಗಿ ಲೋಕಸಭೆ ಹಾಗೂ ವಿಧಾನಸಭೆಯ ಪಾವಿತ್ರ್ಯವೇ ಹಾಳಾಗಿದೆ ಎಂದು ಟೀಕಿಸಿದರು.

ಇತ್ತೀಚೆಗೆ ಬೆಳಕಿಗೆ ಬಂದಿರುವ 2ಜಿ-ತರಂಗಾಂತರ ಹಗರಣದಲ್ಲಿ 1.75 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಸಿಎಜಿ ವರದಿ ಹೇಳಿದರೂ ಕೂಡ ಈವರೆಗೂ ತನಿಖೆ ಸುಗಮವಾಗಿ ನಡೆಯುತ್ತಿಲ್ಲ. ಒಬ್ಬರು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯಾಗಬೇಕು ಎಂದು ಪಟ್ಟು ಹಿಡಿದರೆ ಇನ್ನೊಬ್ಬರು ಪಿಸಿಎ ಮುಂದೆ ತನಿಖೆ ನಡೆದರೆ ಸಾಕು ಎನ್ನುತ್ತಾರೆ ಎಂದು ಲೇವಡಿ ಮಾಡಿದರು.

ಕಳೆದ 60 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ. ಅದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. 2006ರಲ್ಲಿ 142 ಭ್ರಷ್ಟ ಅಧಿಕಾರಿಗಳು ಬಲೆಗೆ ಬಿದ್ದರು. 2010ರಲ್ಲಿ  342 ಅಧಿಕಾರಿ ಬಲೆಗೆ ಬಿದ್ದರು. 2011ರಲ್ಲಿ 46 ಮಂದಿ ಬಲೆಗೆ ಬಿದ್ದಿದ್ದಾರೆ. ಎಲ್ಲೆಡೆ ವ್ಯಾಪಿಸಿಕೊಂಡಿರುವ ಈ ಭ್ರಷ್ಟಾಚಾರ ನಿರ್ಮೂಲ–ನೆಯಲ್ಲಿ ಯುವ ಜನರು ಕೈಜೋಡಿಸಬೇಕು ಎಂದರು.

ಲಂಚ ಕೊಡುವುದಿಲ್ಲ, ಲಂಚವನ್ನು ಪಡೆಯುವುದೂ ಇಲ್ಲ ಎಂದು ಪ್ರತಿಜ್ಞೆ ಮಾಡದೇ ಇದ್ದರೂ ಮನಸ್ಸಿನಲ್ಲಿಯಾದರೂ ಪ್ರಾಮಾಣಿಕತೆಯ ಬಗ್ಗೆ ಲಕ್ಷ್ಯವಿರಬೇಕು. ಹಣದ ಬಗೆಗಿನ ವ್ಯಾಮೋಹದ ಮನೋಭಾವ ಬದಲಾಗಬೇಕು, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.ರೆ.ಫಾ.ಬ್ಯಾಪ್ಟಿಸ್ಟ್ ಮಿನೇಜಸ್, ಕಾಲೇಜಿನ ಫ್ರೆಡ್ ಮಸ್ಕರೇನಸ್, ವಿಜಯ ಲೋಬೋ, ಪೀಟರ್ ಡಿಸೋಜ, ಲೆವಿತ್ ಬೆನೆಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT