ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷೆ ವಿವಾದ: ಪಿಡಿಪಿ ಸಮರ್ಥನೆ

Last Updated 14 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಜಮ್ಮು ಮತ್ತು ಕಾಶ್ಮೀರದ ವಿವಾದಿತ ಪ್ರದೇಶಗಳನ್ನು ಪಾಕಿಸ್ತಾನ ಮತ್ತು ಚೀನಾದ ಭಾಗಗಳು ಎಂಬ ರೀತಿಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತನ್ನ ನಕ್ಷೆಯಲ್ಲಿ ಬಿಂಬಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಪಿಡಿಪಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಶ್ರೀನಗರದಲ್ಲಿ ಶನಿವಾರ ನಡೆದ ಪಕ್ಷದ ಚಿತ್ರ ಪ್ರದರ್ಶನವೊಂದರ ಸಂದರ್ಭದಲ್ಲಿ ಅಕ್ಸಾಯಿ ಚಿನ್ ಭಾಗವನ್ನು ಕೆಂಪು ಬಣ್ಣದಿಂದಲೂ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾಗವನ್ನು ಹಸಿರು ಬಣ್ಣದಿಂದಲೂ ಚಿತ್ರಿಸಲಾಗಿತ್ತು. ಅಂದರೆ ವಿವಾದಿತ ಪ್ರದೇಶಗಳು ಪಾಕಿಸ್ತಾನ ಮತ್ತು ಚೀನಾ ಭಾಗಗಳು ಎಂಬಂತೆ ಬಿಂಬಿಸಲಾಗಿತ್ತು.

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 2002ರಿಂದ 2008ರ ತನಕ ಪಿಡಿಪಿಯೊಂದಿಗೆ ಸೇರಿಕೊಂಡು ಸರ್ಕಾರ ನಡೆಸಿತ್ತು. ಆದರೆ ಆ ಸಂಬಂಧವನ್ನೂ ಬದಿಗೊತ್ತಿರುವ ಕಾಂಗ್ರೆಸ್ ಪಕ್ಷದವರು ಪಿಡಿಪಿಯ ಈ ವರ್ತನೆಯನ್ನು ಇದೀಗ ತೀವ್ರವಾಗಿ ಖಂಡಿಸಿದ್ದು, ತಕ್ಷಣ ಈ ವಿವಾದಾತ್ಮಕ ನಕ್ಷೆಯನ್ನು ಹಿಂದೆಗೆದುಕೊಳ್ಳಬೇಕು ಎಂದು ಹೇಳಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಬೇರೆ ಬೇರೆ ಬಣ್ಣಗಳಲ್ಲಿ ಕಾಶ್ಮೀರವನ್ನು ಚಿತ್ರಿಸಿರುವುದು ಆಕ್ಷೇಪಾರ್ಹ, ಇದರಿಂದ ರಾಜತಾಂತ್ರಿಕ ಸಮಸ್ಯೆಗಳೂ ಉದ್ಭವಿಸುತ್ತವೆ ಎಂದರು.

ಪಿಡಿಪಿಯ ಈ ವರ್ತನೆಗೆ ಭಾನುವಾರ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪರಸ್ಪರ ವ್ಯಾಪಾರ ಮತ್ತು ಚಲನವಲನಕ್ಕೆ ಗಡಿಗಳ ಅಗತ್ಯ ಇಲ್ಲ ಎಂಬ ನಮ್ಮ ಭಾವನೆಗೆ ವಿರುದ್ಧವಾಗಿ ನಕ್ಷೆಯಲ್ಲಿ ರಾಜ್ಯದ ಭಾಗವನ್ನು ಇತರ ದೇಶಗಳಿಗೆ ಉಡುಗೊರೆಯಾಗಿ ನೀಡಿರುವ ಪಕ್ಷದ ನಿಲುವನ್ನು ಒಪ್ಪಿಕೊಳ್ಳಲಾಗದು ಎಂದು ಅವರು ಹೇಳಿದ್ದರು.

ಪಿಡಿಪಿ ಸಮರ್ಥನೆ: ಪಕ್ಷದ ಈ ವಿವಾದಿತ ನಕ್ಷೆಯನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸಮರ್ಥಿಸಿಕೊಂಡಿದ್ದು, ಚೀನಾವು ಅಕ್ರಮವಾಗಿ ನಮ್ಮ ನೆಲವನ್ನು ಬಳಸಿಕೊಂಡದ್ದನ್ನು ನಕ್ಷೆಯಲ್ಲಿ ಸೇರಿಸಿಕೊಂಡ ಏಕೈಕ ಪಕ್ಷ ತಮ್ಮದು ಎಂದು ಹೇಳಿಕೊಂಡಿದ್ದಾರೆ.

‘ಚೀನಾವು ಆಕ್ರಮಿಸಿಕೊಂಡಿರುವ ನಮ್ಮ ಭೂ ಪ್ರದೇಶವನ್ನು ರಾಜ್ಯದ ಗಡಿಯೊಳಗೆ ಸೇರಿಸಿದ್ದು ನಾವು ಮಾತ್ರ. ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಾಗ ಇದೂ ಒಳಗೊಂಡಿರಬೇಕು. ಹೀಗಾಗಿ ನಮ್ಮ ಈ ಪ್ರಯತ್ನವನ್ನು ಕೇಂದ್ರ ಪ್ರಶಂಸಿಸಬೇಕು’ ಎಂದು ಅವರ ತಿಳಿಸಿದ್ದಾರೆ.

ತಮಗೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಬಗ್ಗೆ ಗೌರವವಿದ್ದರೂ, ಈ ವಿಚಾರದಲ್ಲಿ ಅವರು ಆತುರದಿಂದ ಪ್ರತಿಕ್ರಿಯೆ ನೀಡಿದಂತಿದೆ. ಅವರು ಇಂತಹ ವಿಚಾರಗಳತ್ತ ಗಮನ ಹರಿಸುವ ಬದಲಿಗೆ ಅಂಟಿಸಿದ ವೀಸಾದಂತಹ ಕಳವಳಕಾರಿ ವಿಚಾರಗಳತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT