ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ವಿರುದ್ಧ ಕಾರ್ಯಾಚರಣೆ : ಅಂದು ವೆಂಕಟೇಶ್, ಇಂದು ಮಾನೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ನಾಲ್ಕು ವರ್ಷಗಳ ಹಿಂದೆ ನಕ್ಸಲರ ವಿರುದ್ಧ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಬಲಿಯಾದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ (ಎಎಸ್‌ಐ) ಬಿ.ಎ. ವೆಂಕಟೇಶ್ ಅವರಿಗೆ ತಗುಲಿದ್ದು ಯಾರ ಗುಂಡು ಎಂಬುದು ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

2007ರ ಜುಲೈ 17ರಂದು ಸಂಜೆ ತೀರ್ಥಹಳ್ಳಿಯ ಆಗುಂಬೆ ಸಮೀಪದ ತಲ್ಲೂರು ಬಳಿಯ ಎಳ್ಳುಹಕ್ಲಬೈಲ್‌ನಲ್ಲಿ ಗುಂಡೇಟಿಗೆ ಬಲಿಯಾದ ಮಾಳೂರು ಪೊಲೀಸ್ ಠಾಣೆ ಎಎಸ್‌ಐ ಬಿ.ಎ. ವೆಂಕಟೇಶ್ ಸಾವಿನ ಬಗ್ಗೆ ಪೊಲೀಸ್ ಇಲಾಖೆ ಅಥವಾ ಸರ್ಕಾರ ಇದುವರೆಗೂ ಒಂದೇ ಒಂದು ಹೇಳಿಕೆ ನೀಡದಿರುವುದು ತೀರ್ಥಹಳ್ಳಿಯ ಹೆಗ್ಗೋಡಿನ ಅವರ ಕುಟುಂಬವನ್ನು ಇನ್ನೂ ಗೊಂದಲದಲ್ಲಿ ಮುಳುಗಿಸಿದೆ.

ನಕ್ಸಲರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅವರ ಜತೆಗಿನ ಗುಂಡಿನ ಚಕಮಕಿಯಲ್ಲೇ ವೆಂಕಟೇಶ್ ಸಾವು ಕಂಡರು ಎಂದು ಪೊಲೀಸ್ ಇಲಾಖೆ ಘಟನೆ ನಡೆದಾಗ ಪ್ರತಿಪಾದಿಸಿತ್ತು. ಸಾಲದ್ದಕ್ಕೆ ನಕ್ಸಲರು ಎಳ್ಳುಹಕ್ಲಬೈಲ್‌ನ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾಗ ಈ ಕೃತ್ಯ ನಡೆದಿದೆ ಎಂಬಂತೆ ಚಿತ್ರಿಸಿತ್ತು. ಆದರೆ, ವೆಂಕಟೇಶ್ ಮನೆಯವರು, ಆ ಸ್ಥಳ ನೋಡಿದ ಸಾರ್ವಜನಿಕರು, ಕೆಲವು ಹಿರಿಯ ಪೊಲೀಸರು, ಸ್ವತಃ ಆ ಮನೆಯ ಮಾಲೀಕ ಕೂಡ ಈ ಘಟನೆ ನಡೆದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಆಗ ಪೂರ್ವ ವಲಯದ ಐಜಿಪಿಯಾಗಿದ್ದ ಎಚ್.ಎನ್. ಸತ್ಯನಾರಾಯಣರಾವ್ ಕೂಡ `ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು ನಿಜ. ಈ ಘರ್ಷಣೆಯಲ್ಲಿ ಪೊಲೀಸರ ಗುಂಡು ವೆಂಕಟೇಶ್‌ಗೆ ಬಿದ್ದು ಸಾವು ಕಂಡಿರಬಹುದು. ಫೋರೆನ್ಸಿಕ್ ವರದಿ ಬಂದ ನಂತರ ತಿಳಿಯುತ್ತದೆ~ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಫೋರೆನ್ಸಿಕ್ ತನಿಖೆಗೆ ಒಪ್ಪಿಸಿತ್ತು. ಒಂದು ವರ್ಷದ ನಂತರ ಬಂದ ಈ ವರದಿಯನ್ನು ಪೊಲೀಸ್ ಇಲಾಖೆ ಇದುವರೆಗೂ ಬಹಿರಂಗಪಡಿಸಿಲ್ಲ. ಕೊನೆ ಪಕ್ಷ ವೆಂಕಟೇಶ್ ಕುಟುಂಬಕ್ಕೂ ಅವರ ಸಾವಿನ ಬಗ್ಗೆ ಇಲಾಖೆ ಸತ್ಯ ಹೇಳಿಲ್ಲ.

ವೆಂಕಟೇಶ್ ಗುಂಡೇಟಿನ ಫೋರೆನ್ಸಿಕ್ ವರದಿ ಬಂದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಸ್. ಮುರುಗನ್ ಮಾಧ್ಯಮಗಳ ಎದುರು, `ಫೋರೆನ್ಸಿಕ್ ವರದಿ ಬಗ್ಗೆ ನೀವು ಕೇಳಲೂ ಬಾರದು; ನಾವು ಹೇಳಲೂ ಬಾರದು~ ಎಂದು ಕಣ್ಣು ಮಿಟುಕಿಸಿದ್ದರು.

`24 ಗಂಟೆನೂ ಕೆಲಸ ಅಂತಿದ್ರು. ಆದರೆ, ಅವರ ಸಾವು ಹೇಗೆ ಆಯ್ತು ಎಂಬುದು ನಮಗೆ ಇನ್ನೂ ತಿಳಿದಿಲ್ಲ~ ಎಂದು ಪತಿಯ ಸಾವಿನ ದುಃಖದಿಂದ ಹೊರಬರದ ಪತ್ನಿ ಹಾಲಮ್ಮ ಈಗಲೂ ಕಣ್ಣೀರು ಹಾಕುತ್ತಾರೆ.

`ಅಪ್ಪನ ಸಾವಿನ ಬಗ್ಗೆ ಇಲಾಖೆ ಇಷ್ಟು ವರ್ಷವಾದರೂ ಏನ್ನನ್ನೂ ಹೇಳದಿರುವುದು ಅನುಮಾನ ಹುಟ್ಟಿಸಿದೆ~ ಎಂದು ಮಗ ಸುಧೀರ್ ಕೂಡ ಇದನ್ನೇ ಪುನರುಚ್ಚರಿಸುತ್ತಾರೆ.

ಇಷ್ಟಲ್ಲದೇ, ವೆಂಕಟೇಶ್ ಸಾವು ಕಂಡಾಗ ಸರ್ಕಾರ ಘೋಷಣೆ ಮಾಡಿದ್ದ ಐದು ಲಕ್ಷ ರೂ ಪರಿಹಾರವನ್ನು ಸಾಕಷ್ಟು ಸತಾಯಿಸಿ ಎರಡು ವರ್ಷಗಳ ನಂತರ ನೀಡಲಾಯಿತು. ಡಿಗ್ರಿ ಮುಗಿಸಿದ ಮಗನಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಕಷ್ಟು ಕಚೇರಿಗಳನ್ನು ಸುತ್ತಿಸಿ ಈಗ್ಗೆ ಎರಡು ವರ್ಷದ ಹಿಂದಷ್ಟೇ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೀಡಲಾಗಿದೆ.

ಮೊನ್ನೆ ಮಾನೆ ಅವರ ಬೆನ್ನಿಗೆ ಬಿದ್ದ ಗುಂಡು ಯಾರದು ಎನ್ನುವ ಸಂಶಯವೂ ಎದ್ದಿದೆ. ಇದರ ಬಗ್ಗೆಯೂ ತನಿಖೆ ಆರಂಭವಾಗಿದೆ. ತನಿಖೆ ಯಾವ ದಾರಿ ಹಿಡಿಯುತ್ತದೋ ಯಾರಿಗೆ ಗೊತ್ತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT