ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ಹಿಂಸೆ: ಆದಿವಾಸಿಗಳ ಬದುಕು ಬರ್ಬರ

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಕ್ಸಲರು ಆದಿವಾಸಿ ಜನರನ್ನು ರಕ್ಷಿಸುವ ಬದಲು ಅವರನ್ನು ಗುರಾಣಿಗಳನ್ನಾಗಿ ಮಾಡಿಕೊಂಡು ತಮ್ಮ ಹೋರಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಒಂದೆಡೆ ಪ್ರಭುತ್ವ ಹಾಗೂ ಮತ್ತೊಂದೆಡೆ ನಕ್ಸಲರ ಹಿಂಸೆಯಿಂದ ಆದಿವಾಸಿಗಳ ಬದುಕು ಬರ್ಬರವಾಗಿದೆ~ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಅಭಿಪ್ರಾಯಪಟ್ಟರು.
 
ನಕ್ಸಲ್ ನಿಗ್ರಹದ ಹೆಸರಿನಲ್ಲಿ ಅಮಾಯಕರ ಬಂಧನ ಕುರಿತು ಕರ್ನಾಟಕ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ, ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಆಶ್ರಯದಲ್ಲಿ ನಗರದ ಎಸ್‌ಸಿಎಂ ಹೌಸ್ ಮೊದಲ ಮಹಡಿಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ವಿವಿಧ ಸಂಘಟನೆಗಳ ಐಕ್ಯ ವೇದಿಕೆಯಾದ ರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, `ನಕ್ಸಲ್ ಸಮಸ್ಯೆಯನ್ನು ಸರ್ಕಾರ ಸಾಮಾಜಿಕ ಸಮಸ್ಯೆಯಾಗಿ ಪರಿಗಣಿಸದೆ ಕಾನೂನು ಸಮಸ್ಯೆಯಾಗಿ ಅರ್ಥೈಸಿದೆ. ಪ್ರಭುತ್ವವೇ ನಕ್ಸಲ್ ಹಾಗೂ ಉಗ್ರವಾದಿಗಳ ಸೃಷ್ಟಿಗೆ ಕಾರಣವಾಗಿದೆ~ ಎಂದು ಆರೋಪಿಸಿದರು.

ಕರ್ನಾಟಕ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿಯ ಸದಸ್ಯ ಬಯ್ಯಾ ರೆಡ್ಡಿ ಮಾತನಾಡಿ, `ರಸ್ತೆ, ಕುಡಿಯುವ ನೀರು, ಮನೆಗಳಿಗೆ ಹಕ್ಕುಪತ್ರ ಹಾಗೂ ಜಮೀನುಗಳಿಗೆ ಸಾಗುವಳಿ ಚೀಟಿಗಳಿಲ್ಲದೆ ಆದಿವಾಸಿ ಜನರು ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಸಂಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ, ಆತನ ತಂದೆ ನಿಂಗಣ್ಣ ಮಲೆಕುಡಿಯ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ವಿಠಲನನ್ನು ಬೇಡಿ ಸಮೇತ ಪರೀಕ್ಷಾ ಕೊಠಡಿಗೆ ಹಾಜರುಪಡಿಸಿದ್ದಾರೆ. ಪೊಲೀಸರು ನಿಂಗಣ್ಣನ ಕಾಲು ಮುರಿದ್ದ್ದಿದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಅಗತ್ಯ~ ಎಂದರು.

ಹಿರಿಯ ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, `ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿಗಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಇಂದು ಅರಣ್ಯ ನ್ಯಾಯವನ್ನು ಅನುಭವಿಸುತ್ತಿರುವುದು ತೀರಾ ವಿಷಾದನೀಯ.

ಆದಿವಾಸಿಗಳ ಪರವಾಗಿ ಇತರ ಎಲ್ಲ ಪ್ರಗತಿಪರ ಸಂಘಟನೆಗಳು ಹೋರಾಟ ಮಾಡುವ ವರೆಗೆ ಆದಿವಾಸಿಗಳ ಮೇಲಿನ ನಕ್ಸಲ್ ಹಿಡಿತ ತಪ್ಪುವುದಿಲ್ಲ. ಆದಿವಾಸಿಗಳ ಸಮಸ್ಯೆ ವಿರುದ್ಧ ದಲಿತರು, ಅಲ್ಪಸಂಖ್ಯಾತರು, ಪ್ರಗತಿಪರರು ಒಟ್ಟಾಗಿ ಹೋರಾಟ ಮಾಡಬೇಕು~ ಎಂದರು.

ವಿಠಲ ಮಲೆಕುಡಿಯ ಹಾಗೂ ನಿಂಗಣ್ಣ ಮಲೆಕುಡಿಯ ಬಿಡುಗಡೆಗೆ ಆಗ್ರಹಿಸಿ ವಿಚಾರವಾದಿ ಪ್ರೊ.ಜಿ.ಕೆ. ಗೋವಿಂದ ರಾವ್ ನೇತೃತ್ವದಲ್ಲಿ ರಕ್ಷಣಾ ಸಮಿತಿ ರಚಿಸಲಾಯಿತು. ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಸಿಪಿಎಂ ಕಾರ್ಯದರ್ಶಿ ಜಿ.ಎನ್. ನಾಗರಾಜ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ವಕೀಲ ಶಂಕರಪ್ಪ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ, ರವಿಕೃಷ್ಣ ರೆಡ್ಡಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT