ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್‌ಪೀಡಿತ ಪ್ರದೇಶ ಕಡೆಗಣನೆ: ಪ್ರತಿಭಟನೆ

Last Updated 16 ಫೆಬ್ರುವರಿ 2013, 11:12 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ನಕ್ಸಲ್‌ಪೀಡಿತ ಪ್ರದೇಶಗಳಿಗೆ ಸರ್ಕಾರ ಸಮರ್ಪಕ ಸೌಲಭ್ಯ ನೀಡುತ್ತಿಲ್ಲ. ಈ ಪ್ರದೇಶವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಆಗುಂಬೆ ಹೋಬಳಿ ಮೇಗರವಳ್ಳಿ ಸಮೀಪ ಹನಸ, ಬಿಳುಮನೆ, ಕರುಣಾಪುರ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿಯೇ ಶುಕ್ರವಾರ ಮಹಾತ್ಮ ಗಾಂಧೀಜಿ ಭಾವಚಿತ್ರ ಇರಿಸಿ ಪ್ರತಿಭಟನೆ ನಡೆಸಿದರು.

ಕರುಣಾಪುರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೇಗರವಳ್ಳಿ ಗ್ರಾಮ ಪಂಚಾಯ್ತಿಯ ಹನಸ, ಬಿಳುಮನೆ ಗ್ರಾಮದ ಕೆಲವು ಭಾಗ ವರಾಹಿ ಯೋಜನೆಯಲ್ಲಿ ಮುಳುಗಡೆಯಾಗಿದೆ. ಈ ಭಾಗದ ಅಳಿದುಳಿದ ಪ್ರದೇಶದಲ್ಲಿ ಮನೆ, ಸಾಗುವಳಿ ಭೂಮಿ ಅವಲಂಬಿಸಿ ಜೀವನ ನಡೆಸುತ್ತಿರುವ ನಮಗೆ ಸರ್ಕಾರ ಮೂಲ ಸೌಕರ್ಯವನ್ನು ಒದಗಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಹನಸ, ಬಿಳುಮನೆ ಗ್ರಾಮದ ಮಜರೆ ಹಳ್ಳಿಗಳನ್ನು 2005ರಲ್ಲಿ ನಕ್ಸಲ್‌ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ರಸ್ತೆ, ಕುಡಿಯುವ ನೀರು, ವಸತಿ ಸೌಕರ್ಯ ಕಲ್ಪಿಸಲಾಗಿದ್ದರೂ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಬಾಕಿ ಇವೆ. ಕುಡಿಯುವ ನೀರಿಗಾಗಿ ಬಿಡುಗಡೆಗೊಂಡ ರೂ30 ಲಕ್ಷ ಮೊತ್ತದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹನಸ ರಾಮನಾಯ್ಕರ ಮನೆ ಮಾರ್ಗದಿಂದ ಪುಟ್ಟಪ್ಪಗೌಡರ ಕುಂಬ್ರಿಮನೆ ಕಡೆಗೆ ಹೋಗುವ ರಸ್ತೆಗೆ ಜೆಲ್ಲಿ ಬಿಚಾವಣೆ ಮಾಡಿ ಡಾಂಬರೀಕರಣ ಮಾಡಬೇಕು. ಹನಸ ಮತ್ತು ಪಣತ ರಸ್ತೆ ಅಭಿವೃದ್ಧಿ, ಕರುಣಾಪುರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಹಕ್ಕು ಪತ್ರ ಮತ್ತು ವಸತಿ ಸೌಲಭ್ಯ, ಬಿಳುಮನೆ ಮಾರ್ಗದ ರಸ್ತೆ ದುರಸ್ತಿ. ಅಗತ್ಯವಿರುವಲ್ಲಿ ತೆರೆದ ಬಾವಿ ನಿರ್ಮಾಣ ಸೇರಿದಂತೆ ಅನುಷ್ಠಾನಗೊಂಡ ರೂ30 ಲಕ್ಷ ಕುಡಿಯುವ ನೀರಿನ ಕಾಮಗಾರಿ ಕುರಿತು ಲೋಕಾಯುಕ್ತ ತನಿಖೆ ನಡೆಯಬೇಕು ಎಂಬ ಬೇಡಿಕೆಗಳ ಮನವಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ನೀಡಿದರು.

ಪ್ರತಿಭಟನಾ ನೇತೃತ್ವವನ್ನು ನಾಗರಿಕ ವೇದಿಕೆ ಗದ್ದೆಮನೆ ಶ್ರೀನಿವಾಸ್, ಪಣತ ಸತೀಶ್, ಮಧು, ಗುರುರಾಜ್ ವಹಿಸಿದ್ದರು.

ಪ್ರತಿಭಟನಾ ಸ್ಥಳದಲ್ಲಿ ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಎಲ್. ಸುಂದರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ಅಧ್ಯಕ್ಷ ಎಂ.ಆರ್. ಪ್ರಮೋದ್ ಹೆಗ್ಡೆ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಭೋಜರಾಜ್, ರೈತ ಮುಖಂಡ ಕೊರೋಡಿ ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT