ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಖರೆವಾಲಿಯ ನಖಾಲಂಕಾರ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ನಾಜೂಕಿನ ಬೆರಳುಗಳು ಮೊಬೈಲ್ ಕೀಲಿಮಣಿಯ ಮೇಲೆ ಆಡುತ್ತವೆ. ಹಾಗೆಯೇ ತೋರುಬೆರಳಿನಿಂದ ಮುಂಗುರಳನ್ನು ತೀಡುತ್ತವೆ. ಕಪ್ಪು ಕೂದಲ ನಡುವೆ ಒಂದು ಮಿಂಚು ಸುಳಿದಂತೆ, ಬೆಳಕಿನ ಕಿರಣ ಮೂಡುತ್ತದೆ.

ಕಂಪ್ಯೂಟರ್ ಕೀಲಿಮಣಿಯ ಮೇಲೆ ನೃತ್ಯಪಟುವಿನ ಕಾಲುಗಳಂತೆ ಬೆರಳು ಚಲಿಸುವಾಗ ಕಣ್ಮಿಂಚಿಗೂ ಸವಾಲೊಡ್ಡುವ ಮಿಂಚೊಂದು ಸುಳಿದು ಹೋಗುತ್ತದೆ. ಅದು ಉಂಗುರವೇ? ವಜ್ರದುಂಗುರವೇ...? ಅಲ್ಲ, ಅದು ಬಂಗಾರವಿಲ್ಲದ ಬೆರಳು... ಆದರೂ ಮಿನುಗುತ್ತದೆ. ಬೆರಳಿನ ಮೆರಗಿಗೆ ಬೆರಗು ಹುಟ್ಟುತ್ತದೆ.

ಇದು ನಖಾಲಂಕಾರ. ಚಂದಕಾಣಿಸ ಬೇಕೆನ್ನುವ, ಎಲ್ಲರ ಚಿತ್ತ ತಮ್ಮ ಕೈಯತ್ತಲೇ ಸೆಳೆಯಬೇಕೆನ್ನುವ ಚಕೋರಿಯರ ಉಗುರಿನಲಂಕಾರ.

ಗಾಢವರ್ಣದ ಉಗುರು ಬಣ್ಣದ ಮೇಲೆ ನಾಜೂಕಿನ ಸ್ವರೋಸ್ಕಿ ಹರಳುಗಳ ಅಲಂಕಾರ ಅದು. ಉಗುರಿನ ಬೆಲೆಯೇ ಸಾವಿರಗಳಷ್ಟು ದಾಟುತ್ತದೆ. ಈಗ ಕನಿಷ್ಠ 250 ರೂಪಾಯಿಗಳಿಂದ 25 ಸಾವಿರ ರೂಪಾಯಿಗಳ ವರೆಗೂ ಬೆಲೆಬಾಳುವ ಅಲಂಕಾರ ಮಾಡಲಾಗುತ್ತದೆ ಎನ್ನುತ್ತಾರೆ ಸೌಂದರ್ಯ ತಜ್ಞೆ ರೇಖಾ ಜಗನ್ಮೋಹನ್. 

ನಖಾಲಂಕಾರದ ವೆಚ್ಚದ ವಿಷಯವೇ ಉಗುರು ಕಚ್ಚುವಂತಿದೆ. ಉಗುರಿನ ತುದಿಗೆ ಗಾಢವರ್ಣದ ಹಿನ್ನೆಲೆ. ತಿಳಿ ವರ್ಣಗಳ ತರುಲತೆಗಳೂ ಜೀವದಾಳುತ್ತವೆ.

ಈಗ ತಮ್ಮನ್ನು ತಾವು ಪ್ರೀತಿಸುವ `ಟ್ರೆಂಡ್~ ಬೆಳೆಯುತ್ತಿದೆ. ಇಲ್ಲಿ ತನ್ನನ್ನು ತಾನು ಸ್ವೀಕರಿಸುವ ಮನೋಭಾವಕ್ಕಿಂತಲೂ ತನ್ನನ್ನು ತಾನು ಪ್ರಸ್ತುತ ಪಡಿಸುವ ಮನೋಭಿಲಾಷೆಯೇ ಇಂಥದ್ದೆಲ್ಲ ಅಲಂಕಾರದ ತುಡಿತವನ್ನು ಹುಟ್ಟಿಸುತ್ತದೆ ಎನ್ನುವುದು ರೇಖಾ ಜಗನ್ಮೋಹನ್ ಅಭಿಪ್ರಾಯ.

ನಾಲ್ಕು ಜನರಲ್ಲಿ ಎದ್ದು ಕಾಣುವಂತಿರಬೇಕು ಎನ್ನುವುದು ಎಲ್ಲರ ಸಹಜ ಆಸೆ. ಆದರೆ ಗಮನ ಸೆಳೆಯುವುದು ಅಷ್ಟೇ ಅಲ್ಲ, ಗಮನ ಕೇಂದ್ರೀಕೃತವಾಗಲಿ ಎಂದು ಬಯಸುವುದೂ ಸಹಜವಾಗಿದೆ.

ಇದೇ ಕಾರಣಕ್ಕೆ ಇಂದು ಹಿಂದೆಂದಿಗಿಂತ ಹೆಚ್ಚಿನ `ಬ್ಯೂಟಿ ಕೇರ್~ ಪ್ರಜ್ಞೆ ಜಾಗೃತವಾಗುತ್ತಿದೆ.

ಮೆನಿ ಕ್ಯೂರ್, ಪೆಡಿಕ್ಯೂರ್‌ನಿಂದ ಮುಂಗೈ, ಮುಂಗಾಲುಗಳ ಸೌಂದರ್ಯ ಕಾಪಿಡುವುದು ಸಾಮಾನ್ಯವಾಗಿತ್ತು. ಅದು ಕೇವಲ ಸ್ವಚ್ಛ, ಪರಿಶುದ್ಧ ತ್ವಚೆ ಮತ್ತು ಉಗುರುಗಳ ಕಾಳಜಿ ಇತ್ತು. ನಂತರ ಆರಂಭವಾಗಿದ್ದೇ ಚಂದದ ಕೈ ಕಾಲುಗಳು ಇನ್ನಷ್ಟು ಚಂದಗಾಣಲಿ ಎಂಬ ಖಯಾಲಿ. 

ಆಗ ಆರಂಭವಾಗಿದ್ದು ಈ ನೇಲ್ ಆರ್ಟ್. ಉಡುಪಿಗೆ ಹೊಂದುವಂಥ ಬಣ್ಣವಷ್ಟೇ ಅಲ್ಲ, ಅದರ ಮೇಲಿನ ವಿನ್ಯಾಸಕ್ಕೆ ಹೊಂದುವಂಥ ಅಲಂಕಾರ ಕಲೆ ಹೆಚ್ಚು ಜನಪ್ರಿಯಗೊಳ್ಳಲಾರಂಭಿಸಿತು.

ಔದ್ಯೋಗಿಕ ಮಹಿಳೆಯರಿಗೆ ಯಾವತ್ತೂ ಪ್ರಿಯವೆನಿಸುವ ಕಪ್ಪು ಬಿಳುಪಿನ ವರ್ಣ, ಮದುವೆಯಂಥ ಸಮಾರಂಭಗಳಲ್ಲಿ ಕಣ್ಣು ಕೋರೈಸುವ ಗಾಢ ವರ್ಣಗಳು. ಹರಳು, ಚಿನ್ನದ ಪಕ್ಕಳೆಗಳ ಮೆರುಗು ಎಲ್ಲವೂ ಗಮನ ಸೆಳೆಯುತ್ತಿವೆ. ಅಲ್ಪಾವಧಿಯ ಅಲಂಕಾರವಾದರೂ ಹೆಂಗಳೆಯರ ಗಮನ ಸೆಳೆದಿರುವುದಂತೂ ಸುಳ್ಳಲ್ಲ.

ಮೊದಲು ಕೇವಲ ಬಣ್ಣಗಳ ಆಟವಾಗಿದ್ದ `ನೇಲ್ ಆರ್ಟ್~ಗೆ ರಾಯಲ್ ಎಂಬಂಥ ಸ್ಪರ್ಶ ನೀಡಿದ್ದು, ಸ್ವರೋಸ್ಕಿ ಹರಳುಗಳಿಂದ. ಇದೀಗ ಹರಳುಗಳಷ್ಟೇ ಅಲ್ಲ, ಚಿನ್ನದ ಲೇಪನವಿರುವ ಪಕಳೆಗಳು, ರೂಬಿ, ಪಚ್ಚೆಗಳೂ ಉಗುರನ್ನು ಅಲಂಕರಿಸುತ್ತಿವೆ.

ಕೈ ಬೆರಳ ತುದಿಯಲ್ಲಿ ಕುಣಿಸಬೇಕೆನ್ನುವ ಮನದನ್ನೆ ಈಗ ಉಗುರುಗಳಿಂದಲೇ ಸೆಳೆಯುವ ಯತ್ನದಲ್ಲಿದ್ದಾಳೆ. ಇದಕ್ಕಾಗಿ ಬೆಂಗಳೂರಿನ ಹಲವಾರು ನೇಲ್ ಬಾರ್ ಸಲೂನ್‌ಗಳು ಸಾಲುಗಟ್ಟಿವೆ!


ಕಲಾತ್ಮಕ ಉಗುರಿನ ಖದರು
ನಖ ಕಲೆಯನ್ನು ಹೇಳಿಕೊಡುವ ಕೋರಮಂಗಲದ ರೇಖಾ ಜಗನ್ಮೋಹನ್ ಪ್ರಕಾರ ಈಗ ಈ ಕಲೆಯಲ್ಲಿಯೂ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ.

10 ಉಗುರುಗಳಿಗೂ ಒಂದೇ ಬಗೆಯ ವಿನ್ಯಾಸವನ್ನು ಕೇವಲ ಎರಡು ಸೆಕೆಂಡುಗಳಲ್ಲಿಯೇ ಮುಗಿಸಬಹುದು ಎಂದೂ ಹೇಳುತ್ತಾರೆ. ಸಣ್ಣ ಉಗುರುಗಳಿದ್ದರೆ ಕೃತಕ ಉಗುರು ಅಂಟಿಸಲಾಗುತ್ತದೆ.
 
ಆದರೆ ಈ ಉಗುರುಗಳ ದೇಖರೇಖಿಯೂ ಬಹಳ ನಾಜೂಕಿನದ್ದು. ಸಾಧ್ಯವಿದ್ದಷ್ಟೂ ಉಗುರುಗಳಿಗಾಗಿ ಬಳಸುವ ವಿಶೇಷ ಜೆಲ್‌ಗಳನ್ನೇ ಬಳಸಬೇಕು ಎಂದು ಸಲಹೆ ನೀಡುತ್ತಾರೆ. ನೇಲ್ ಆರ್ಟ್ ಕಲಿಯಲು ಕೊನೆಯ ಪಕ್ಷ 20 ತರಗತಿಗಳ ತರಬೇತಿ ಅವಶ್ಯ ಎಂದೂ ಹೇಳುತ್ತಾರೆ. ಈಗ 2-ಡಿ, 3-ಡಿ ಬಗೆಯ ಕಲೆಯನ್ನೂ ಮಾಡಲಾಗುತ್ತಿದೆ ಎಂದೆಲ್ಲ ವಿವರಿಸುತ್ತಾರೆ. ಹೆಚ್ಚಿನ ಮಾಹಿತಿಗೆ ರೇಖಾ ಅವರನ್ನೇ ಸಂಪರ್ಕಿಸಬಹುದು. 9886603285

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT