ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು: ಆಯೋಗದ ಕೆಂಗಣ್ಣು

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):   ವಿವಿಧ ಕಲ್ಯಾಣ ಕಾರ್ಯಕ್ರಮಗಳ  ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆ ಪ್ರಕಟಿಸಿರುವ ಕೇಂದ್ರ ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು, ಈ ಸಂಬಂಧ ಸೋಮವಾರ ಸಂಜೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಸಂಪುಟ ಕಾರ್ಯದರ್ಶಿಗೆ ಸೂಚಿಸಿದೆ.

`ಈ ತಿಂಗಳ ಅಂತ್ಯದಲ್ಲಿ ಗುಜರಾತ್‌ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಕೇಂದ್ರವು ಈ ಸಂದರ್ಭದಲ್ಲಿ ಯೋಜನೆ ಘೋಷಣೆ ಮಾಡಿರುವುದು ಸರಿಯಲ್ಲ' ಎಂದು ಆಯೋಗವು ಸಂಪುಟ ಕಾರ್ಯದರ್ಶಿಗೆ ಭಾನುವಾರ ಕಟುವಾಗಿ ಪತ್ರ ಬರೆದಿದೆ.
`ಯೋಜನೆಗೆ ಸಂಬಂಧಿಸಿ ವಸ್ತು ಸ್ಥಿತಿ ವರದಿ ಸಲ್ಲಿಸಲು ಸಂಪುಟ ಕಾರ್ಯದರ್ಶಿಗೆ ಸೂಚಿಸಿದ್ದೇವೆ. ಸೋಮವಾರ ಸಂಜೆಯೊಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಆಯೋಗದ ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

`ಈ ವಿಷಯದಲ್ಲಿ ಆಯೋಗವು ಸಂಪುಟ ಕಾರ್ಯದರ್ಶಿಗೆ ಎರಡನೇ ಬಾರಿ ಎಚ್ಚರಿಕೆ ನೀಡುತ್ತಿದೆ' ಎಂದು ಮೂಲಗಳು ಹೇಳಿವೆ.
`ಯೋಜನೆ ಘೋಷಣೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ' ಎಂದು ಆರೋಪಿಸಿ ಗುಜರಾತ್ ಬಿಜೆಪಿ ಘಟಕವು ಗುರುವಾರ ಆಯೋಗಕ್ಕೆ ದೂರು ನೀಡಿತ್ತು. ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕೂಡ ಮುಖ್ಯ ಚುನಾವಣಾ ಆಯುಕ್ತರನ್ನು ಖುದ್ದಾಗಿ ಭೇಟಿಯಾಗಿ ದೂರು ನೀಡಿದ್ದರು. `ಚುನಾವಣಾ ದಿನಾಂಕ ನಿಗದಿಯಾದ ನಂತರ ಇಂಥ ಘೋಷಣೆಗಳನ್ನು ಮಾಡುವಂತಿಲ್ಲ' ಎಂದೂ ಹೇಳಿದ್ದರು.

ಕಾಕತಾಳೀಯವೆಂದರೆ, ಜನವರಿ ಒಂದರಿಂದ ನಗದು ವರ್ಗಾವಣೆ ಯೋಜನೆಯು ಜಾರಿಯಾಗುತ್ತಿರುವ 51 ಜಿಲ್ಲೆಗಳಲ್ಲಿ ನಾಲ್ಕು ಜಿಲ್ಲೆಗಳು ಗುಜರಾತ್ ರಾಜ್ಯಕ್ಕೆ ಸೇರಿವೆ. ಡಿ. 13 ಹಾಗೂ 17ರಂದು ಇಲ್ಲಿ ಮತದಾನ ನಡೆಯಲಿದೆ.

1 ರೂಪಾಯಿಗೆ 3ರೂ ಖರ್ಚು!

`ಫಲಾನುಭವಿಗಳಿಗೆ ಒಂದು ರೂಪಾಯಿ ವರ್ಗಾವಣೆ ಮಾಡುವುದಕ್ಕೆ ಸರ್ಕಾರವು ಮೂರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಿಂದ ಹಣವು ಅನರ್ಹರ ಪಾಲಾಗುವುದನ್ನು ತಡೆಯಬಹುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಜತೆಗೆ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ಆಡಳಿತಾತ್ಮಕ ಹೊರೆ ಇಳಿಯುತ್ತದೆ' ಎಂದು ಹಣಕಾಸು ಸಚಿವ ಪಿ.ಚಿದಂಬರಂ ಅವರು ಸರ್ಕಾರದ ಈ ಕ್ರಮವನ್ನು ಈ ಮೊದಲು ಸಮರ್ಥಿಸಿಕೊಂಡಿದ್ದರು.

`ಈಗಿರುವ ವ್ಯವಸ್ಥೆಯಲ್ಲಿ ಫಲಾನುಭವಿಗಳು ಯೋಜನೆಗಳ ಲಾಭ ಪಡೆಯುವುದಕ್ಕೆ ವಿವಿಧ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ನೇರ ನಗದು ವರ್ಗಾವಣೆಯಲ್ಲಿ ಇಂಥ ತೊಂದರೆಗಳು ಬರುವುದಿಲ್ಲ' ಎಂದೂ ಅವರು ಯೋಜನೆಯ ಪ್ರಯೋಜನಗಳನ್ನು ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT