ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ನೇರ ವರ್ಗಾವಣೆ ಸೌಲಭ್ಯ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಸುದ್ದಿ ಹಿನ್ನೆಲೆ......

ಹಲವಾರು ಕಲ್ಯಾಣ ಕಾರ್ಯಕ್ರಮಗಳ ಸಬ್ಸಿಡಿಯನ್ನು ಫಲಾನುಭವಿಗಳಿಗೆ ನೇರವಾಗಿ ಪಾವತಿಸುವುದನ್ನು (Direct Transfer of Cash Sub­sidies (DTCK-13)ಪ್ರಾಯೋಗಿಕವಾಗಿ ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರವು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸೋರಿಕೆ ಮತ್ತು ಭ್ರಷ್ಟಾಚಾರ ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ.

ರಾಜ್ಯದ ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆ ಸೇರಿದಂತೆ 14 ರಾಜ್ಯಗಳಲ್ಲಿನ ಒಟ್ಟು 51 ಜಿಲ್ಲೆಗಳಲ್ಲಿ ಈ ಯೋಜನೆ ಹೊಸ ವರ್ಷದ ಮೊದಲ ತಿಂಗಳಿನಿಂದಲೇ ಈ ನಗದು `ನೇರ ಪಾವತಿ' (cash transfer scheme - CTS) ಯೋಜನೆ ಜಾರಿಗೆ ಬರಲಿದೆ.

2013ರ ವರ್ಷಾಂತ್ಯದ ಹೊತ್ತಿಗೆ ದೇಶದ ಎಲ್ಲ 640 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಇದು ಫಲಾನುಭವಿಗಳ ಬ್ಯಾಂಕ್ ಖಾತೆ ಮತ್ತು `ಆಧಾರ್' ಕಾರ್ಡ್ ಆಧರಿಸಿದೆ. 

ಮೊದಲ ಹಂತದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ, ಪಿಂಚಣಿ ಮತ್ತು ವಿದ್ಯಾರ್ಥಿ ವೇತನ ಪಾವತಿಸಲು ಉದ್ದೇಶಿಸಲಾಗಿದೆ. ಕ್ರಮೇಣ ಈ ಸೌಲಭ್ಯವನ್ನು ಅಡುಗೆ ಅನಿಲ (ಎಲ್‌ಪಿಜಿ), ರಸಗೊಬ್ಬರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಇಂದಿರಾ ಆವಾಸ್ ಯೋಜನೆ ಸೇರಿದಂತೆ ಒಟ್ಟು 42 ಕಲ್ಯಾಣ ಕಾರ್ಯಕ್ರಮಗಳಿಗೆ  ವಿಸ್ತರಿಸುವ ಆಲೋಚನೆ ಇದೆ.

ಬ್ಯಾಂಕ್‌ಗೆ ತೆರಳಿ ಹಣ ಪಡೆಯಲು ಸಾಧ್ಯವಾಗದವರ ಮನೆ ಬಾಗಿಲಿಗೆ ಬ್ಯಾಂಕ್ ಪ್ರತಿನಿಧಿಗಳು ಮೂಲಕ ವಿತರಿಸುವುದು ಸರ್ಕಾರದ ಚಿಂತನೆಯಾಗಿದೆ.

ನಕಲಿ ಫಲಾನುಭವಿ ಪತ್ತೆ
ಸಾರ್ವಜನಿಕ ಹಣಕಾಸು ಮತ್ತು ನೀತಿಯ ರಾಷ್ಟ್ರೀಯ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ನಗದು ನೇರ ವರ್ಗಾವಣೆ (ಡಿಸಿಟಿ) ಜಾರಿಗೆ ಬರುವುದರಿಂದ ಸಬ್ಸಿಡಿ ದುರುಪಯೋಗದಂತಹ ಎಲ್ಲ ಬಗೆಯ ಸೋರಿಕೆಗಳನ್ನು ನಿಲ್ಲಿಸಲು ಸಾಧ್ಯವಾಗದಿದ್ದರೂ, ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅಷ್ಟರಮಟ್ಟಿಗಿನ ದುರ್ಬಳಕೆ ನಿಲ್ಲಿಸಬಹುದು.

ಒಟ್ಟು ಸಬ್ಸಿಡಿಯಲ್ಲಿ ಇಂತಹ ಸೋರಿಕೆ ಪ್ರಮಾಣವು ಶೇ 10ರಷ್ಟು ಇರುವ ಅಂದಾಜಿದೆ. ್ಙ 3 ಲಕ್ಷ ಕೋಟಿಯಷ್ಟು ಸಬ್ಸಿಡಿ ಮೊತ್ತದಲ್ಲಿನ ಸೋರಿಕೆಗೆ ತಡೆ ಹಾಕುವುದರಿಂದ ವರ್ಷಕ್ಕೆ ್ಙ 30 ಸಾವಿರ ಕೋಟಿ ಉಳಿತಾಯ ಸಾಧ್ಯವಾಗಲಿದೆ. ಈ ಉಳಿತಾಯದ ಮೊತ್ತವನ್ನು ಕಲ್ಯಾಣ ಕಾರ್ಯಕ್ರಮಗಳ ವೆಚ್ಚ ಹೆಚ್ಚಿಸಲು, ಇನ್ನಷ್ಟು ಫಲಾನುಭವಿಗಳನ್ನು ತಲುಪಲು ಸಾಧ್ಯವಾಗಲಿದೆ. ಅಂತಿಮ ಫಲಾನುಭವಿಗಳಿಗೆ ತಲುಪದ ಹಣದ ಸೋರಿಕೆ ನಿಲ್ಲಿಸುವುದರಿಂದ ಸರ್ಕಾರದ ವಿತ್ತೀಯ ಕೊರತೆ ಮೇಲಿನ ಹೊರೆಯೂ ಕಡಿಮೆಯಾಗಲಿದೆ.

ಆಕ್ಷೇಪದ ಕಾರಣಗಳು

ಆಹಾರ, ಇಂಧನ ಮತ್ತು ರಸಗೊಬ್ಬರದ ಸಬ್ಸಿಡಿಯನ್ನು ನಗದು ರೂಪದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವುದಕ್ಕೆ ನಮ್ಮಲ್ಲಿ ಇನ್ನೂ ಕಾಲ ಪಕ್ವವಾಗಿಲ್ಲ ಎನ್ನುವ ವಾದವೂ ಇದೆ. ಆಹಾರ ಸಬ್ಸಿಡಿಯನ್ನು ನಗದು ರೂಪದಲ್ಲಿ ಯಶಸ್ವಿಯಾಗಿ ನೀಡಲಾಗುತ್ತಿರುವ  ಮೆಕ್ಸಿಕೊ ಮತ್ತು ಬ್ರೆಜಿಲ್ ದೇಶಗಳಿಗೆ ಹೋಲಿಸಿದರೆ, ನಮ್ಮಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿಗೆ        (ಶೇ46ರಷ್ಟು)ಇದೆ.

ಕುಟುಂಬವೊಂದಕ್ಕೆ ತಿಂಗಳಿಗೆ ದೊರೆಯುತ್ತಿರುವ ಪಡಿತರಕ್ಕೆ ಹೋಲಿಸಿದರೆ ಅವರಿಗೆ ನೀಡುವ ನಗದು ನೆರವು ಕಡಿಮೆಯಾಗಲಿದೆ. ಉದಾಹರಣೆಗೆ- ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ರೂ 20ರಂತೆ ಇರುವ ಅಕ್ಕಿ ಬೆಲೆ ಆಧರಿಸಿ 25 ಕೆಜಿ ಅಕ್ಕಿ ನೀಡುವುದರ ಬದಲಾಗಿ ತಿಂಗಳಿಗೆ ರೂ 500 ಪಾವತಿಸಲಾಗುವುದು. ಅಕ್ಕಿ ಬೆಲೆಯನ್ನು ವರ್ತಕರು ಉದ್ದೇಶಪೂರ್ವಕವಾಗಿ ಹೆಚ್ಚಿಸಿದರೆ ಅಥವಾ ಹಣದುಬ್ಬರದ ಕಾರಣಕ್ಕೆ ಕೆಲವೇ ವಾರಗಳಲ್ಲಿ ್ಙ 500ಕ್ಕೆ ಬರುವ ಅಕ್ಕಿ 10 ಕೆಜಿಗೆ ಇಳಿಯಲೂಬಹುದು. ನಗದು ವರ್ಗಾವಣೆ ಕೂಡ ಸ್ಥಳೀಯವಾಗಿ ಆಹಾರ ಧಾನ್ಯಗಳ ಬೆಲೆ ಹೆಚ್ಚಿಸಬಹುದು.

ಸದ್ಯಕ್ಕೆ ಜಾರಿಯಲ್ಲಿ ಇರುವ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ, ಆಹಾರ ಉತ್ಪಾದನೆ, ಬೆಂಬಲ ಬೆಲೆಗೆ ಖರೀದಿ, ಸಂಗ್ರಹ, ವಿತರಣಾ ವ್ಯವಸ್ಥೆ ಮತ್ತು ನಿಯಂತ್ರಿತ ಬೆಲೆ ವ್ಯವಸ್ಥೆಯು ಏರುಪೇರಾಗಬಹುದು. ಆಹಾರಧಾನ್ಯ ಸ್ವಾವಲಂಬನೆಗೂ ಧಕ್ಕೆ ಒದಗಬಹುದು.

ಹಣದುಬ್ಬರ ಪ್ರಭಾವ
ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಇರುವಾಗ ನಗದು ವರ್ಗಾವಣೆಯು ಹೆಚ್ಚು ಪ್ರಯೋಜನ ನೀಡಲಾರದು ಎನ್ನುವ ಅಭಿಪ್ರಾಯವೂ ಇದೆ.ಪಡಿತರ ಬದಲಿಗೆ ಹಣ ನೀಡುವುದರಿಂದ ಆಹಾರ ಧಾನ್ಯ ಖರೀದಿಗೆ ಹಣದ ಸದ್ಬಳಕೆ ಆಗದಿದ್ದರೆ ಅಪೌಷ್ಟಿಕತೆ ಮತ್ತು ಹಸಿವು ಹೆಚ್ಚಲಿದೆ. ಸರ್ಕಾರವು ಒತ್ತಾಯಪೂರ್ವಕವಾಗಿ ಸಬ್ಸಿಡಿ ಕಡಿತ ಮಾಡಲು ಹೊರಟಿದೆ ಎನ್ನುವ ಟೀಕೆಯೂ ಕೇಳಿ ಬರುತ್ತಿದೆ. ನಗದು ನೆರವು, ಸಬ್ಸಿಡಿ ದರಕ್ಕೆ ದೊರೆಯುವ ಆಹಾರ ಧಾನ್ಯಗಳ ಹೆಚ್ಚುವ ವೆಚ್ಚಕ್ಕೆ ಪೂರಕವಾಗಿರಲಾರದು.

ಆಹಾರ ಧಾನ್ಯ, ರಸಗೊಬ್ಬರಗಳ ಸಮರ್ಪಕ ಪೂರೈಕೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ `ನಗದು ನೇರ ವರ್ಗಾವಣೆ'ಯ ಉದ್ದೇಶ ಈಡೇರಬಹುದು. ಪ್ರಾಯೋಗಿಕ ಜಾರಿ ಸಂದರ್ಭದಲ್ಲಿ ಕಂಡು ಬರುವ ದೋಷಗಳನ್ನೆಲ್ಲ ಸರಿಪಡಿಸಿ ಸಮರ್ಪಕವಾಗಿ ಜಾರಿಗೆ ತರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT