ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಕೇಂದ್ರೀಕೃತ ಅಂಗವಿಕಲರ ಸೌಲಭ್ಯ

ನಗರಕ್ಕೆ ಬೆಣ್ಣೆ, ಹಳ್ಳಿಗರಿಗೆ ಸುಣ್ಣ, ಮಾಸಾಶನಕ್ಕೂ ದಲ್ಲಾಳಿ ಕಾಟ
Last Updated 3 ಡಿಸೆಂಬರ್ 2013, 5:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರ ಅಂಗವಿಕಲಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆಯಾದರೂ, ಆ ಸೌಲಭ್ಯಗಳು ನೈಜವಾಗಿರುವ ಅಂಗವಿಕಲರಿಗೆ ಹಾಗೂ  ಗ್ರಾಮೀಣ ಪ್ರದೇಶದಲ್ಲಿರುವ ಅಂಗವಿಕಲರಿಗೂ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ನಗರ ಕೇಂದ್ರೀಕೃತ ಹಾಗೂ ಅಕ್ಷರ ಬಲ್ಲ ಅಂಗವಿಕಲರಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪುತ್ತಿರುವುದರ ಹಿಂದೆ ಪ್ರಭಾವಿ ವ್ಯಕ್ತಿಗಳ ಶಿಫಾರಸು ಕೆಲಸ ಮಾಡುತ್ತಿದೆ ಎಂದು ಕೆಲವು ಸ್ವಯಂ ಸೇವಾ ಸಂಘಟನೆಗಳು ಆರೋಪಿಸುತ್ತಿವೆ. ಮತ್ತೊಂದೆಡೆ ಸಿಕ್ಕವರಿಗೇ  ಸೌಲಭ್ಯಗಳು ಸಿಗುತ್ತಿರುವುದನ್ನು ಅವು ಉಲ್ಲೇಖಿಸುತ್ತವೆ.

‘ಉದಾಹರಣೆಗೆ; ಚಿತ್ರದುರ್ಗ ವ್ಯಾಪ್ತಿಯಲ್ಲಿ 600 ಮಂದಿ ಅಂಗವಿಕಲರಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ (ಜಿ.ಪಂ, ತಾ.ಪಂ, ನಗರಸಭೆ, ಗ್ರಾ.ಪಂ) ಅಂಗವಿಕಲರ ಕ್ಷೇಮಾಭಿವೃದ್ಧಿಗಾಗಿ ಶೇ 3ರಷ್ಟು ಹಣ ತೆಗೆದಿಡುತ್ತೇವೆಂದರೂ, ಕನಿಷ್ಠರೂ 3 ರಿಂದ 4 ಕೋಟಿಯಷ್ಟಾಗುತ್ತದೆ. ಇಷ್ಟು ಹಣದಲ್ಲಿ 600 ಮಂದಿಗೆ ಎಷ್ಟು ಅಂತ ಸೌಲಭ್ಯ ನೀಡಲು ಸಾಧ್ಯ ? ಹೀಗಾಗಿ ಸಿಕ್ಕವರಿಗೆ ಸೌಲಭ್ಯಗಳು ಮತ್ತೆ ಮತೆ ಲಭ್ಯವಾಗುತ್ತಿವೆ’ ಎನ್ನುತ್ತಾರೆ ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರದ ಶಂಕರಪ್ಪ.

ಹಿಂದೆ ಉಳಿಯುವ ಹಳ್ಳಿ ಮಂದಿ : ‘ನನ್ನ ಮಗಳು ಲಕ್ಷ್ಮಿ ದೇವಮ್ಮಗೆ ಹುಟ್ಟಿದಾಗಿನಿಂದ ಎರಡೂ ಕಾಲುಗಳಿಲ್ಲ. ಕಷ್ಟಪಟ್ಟು ಓದಿಸಿದ್ದೇನೆ. ಸದ್ಯ ಚಿತ್ರದುರ್ಗದಲ್ಲಿ ದ್ವಿತೀಯ ಪಿಯು ಓದುತ್ತಿದ್ದಾಳೆ. ತೆವಳಿಕೊಂಡೇ ಕಾಲೇಜಿಗೆ ಬರುತ್ತಾಳೆ. ಆಕೆಗೆ ಓಡಾಡುವುದಕ್ಕೆ ತ್ರಿಚಕ್ರ ವಾಹನ ಬೇಕು. ಆ ಸೌಲಭ್ಯವನ್ನು ಸರ್ಕಾರದಿಂದ ಹೇಗೆ ಪಡೆಯಬೇಕು, ಯಾರ ಬಳಿ ಕೇಳಬೇಕೋ ಗೊತ್ತಿಲ್ಲ’ ಎನ್ನುತ್ತಾರೆ’ ಸಿರಿಗೆರೆ ಸಮೀಪದ ಓಬಳಾಪುರದ ಹನುಮಂತಪ್ಪ. ಇದು ಹಳ್ಳಿಗರು, ಹನುಮಂತಪ್ಪ ಮಾತ್ರವಲ್ಲ, ಕಬ್ಬಿನಗೆರೆ ಗೊಲ್ಲರಹಟ್ಟಿಯ ಶರಣಪ್ಪ, ರಾಮಜೋಗಿಯಳ್ಳಿಯ ಸುಮಾ ಬಾಯಿ, ತಿಪ್ಪೇಸ್ವಾಮಿ.. ಹೀಗೆ ಸೌಲಭ್ಯವನ್ನೇ ಪಡೆಯದ ಪ್ರಕರಣಗಳ ಪಟ್ಟಿ ಬೆಳೆಯುತ್ತದೆ.

ಹಳ್ಳಿ, ಪಟ್ಟಣಗಳಲ್ಲಿರುವ ಅಂಗವಿಕಲರನ್ನು ಗುರುತಿಸಲು ವಿ.ಆರ್.ಡಬ್ಲ್ಯೂ ಮತ್ತು ಎಂಆರ್ ಡಬ್ಲ್ಯೂ ಅವರನ್ನು ನೇಮಿಸಲಾಗಿದೆ. ರೂ 1,500 ಗೌರವಧನ ನೀಡಲಾಗುತ್ತದೆ. ಈ ಹುದ್ದೆ ಕೂಡ ಅಂಗವಿಕಲರಿಗೆ ಮೀಸಲಿರುವುದರಿಂದ, ಅವರು ಹಳ್ಳಿಗಳನ್ನು ಸುತ್ತಾಡಿ ಅಂಗವಿಕಲರನ್ನು ಪತ್ತೆ ಹಚ್ಚುವುದರಲ್ಲಿ ಯಶಸ್ವಿಯಾಗುವುದೇ ಕಷ್ಟವಾಗಿದೆ. ಇದರ ಜತೆಗೆ, ಸರ್ಕಾರ ಕೇಳುವ ದಾಖಲೆ ಪತ್ರಗಳು, ಅವುಗಳನ್ನು ಅಫಿಡವಿಟ್ ಮಾಡಿಸಬೇಕೆಂಬ ನಿಯಮಗಳು, ಅರ್ಜಿ ಸಲ್ಲಿಸಲು ಕಚೇರಿಗೆ ಅಲೆದಾಟ...ಈ ಎಲ್ಲ ಪ್ರಕ್ರಿಯೆಗಳು ಕೂಡ ಹಳ್ಳಿಯ ಮಂದಿಯನ್ನು ಸೌಲಭ್ಯದಿಂದ ಹಿಂದೆ ಉಳಿಯುವಂತೆ ಮಾಡಿದೆ.

ಅಂಗವಿಕಲರ ಹೆಸರಿನಲ್ಲಿ ಸೌಲಭ್ಯ ಬಳಕೆ: ‘ಅಂಗವಿಕಲರಿಗೆ ನೀಡುವ ಸೌಲಭ್ಯಗಳ ಹೆಸರಲ್ಲಿ ಕುಟುಂಬದವರು ಅದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂಬ ಆರೋಪವಿದೆ. ‘ಬುದ್ಧಿಮಾಂದ್ಯ ಹುಡುಗನೊಬ್ಬನಿಗೆ ಗ್ಯಾಸ್ ಕನೆಕ್ಷನ್, ಸ್ಟೌವ್ ವಿತರಿಸುತ್ತಾರೆ. ಆ ಹುಡುಗನ ಹೆಸರಲ್ಲಿ ಉಪಕರಣಗಳನ್ನು ಅವನ ಪೋಷಕರು ಮನೆಯಲ್ಲಿ ಬಳಸಿಕೊಳ್ಳುತ್ತಾರೆ. ಮೂಲವಾಗಿ, ಆ ಹುಡುಗನಿಗೆ  ಔಷಧ, ಕೌನ್ಸಿಲಿಂಗ್ ನಂತಹ ಚಿಕಿತ್ಸೆ ಅಗತ್ಯವಿರುವಾಗ, ಇಂಥ ಉಪಕರಣಗಳ ಅಗತ್ಯ ಏನಿ­ರುತ್ತದೆ ಎನ್ನುವುದು ಅಧಿಕಾರಿಯೊಬ್ಬರ ಪ್ರಶ್ನೆ.
ಅಂಗವಿಕಲರ ಸೌಲಭ್ಯಕ್ಕೆ ರಾಜಕಾರಣಿಗಳ ಶಿಫಾರಸು ನಡೆಯುತ್ತಿದೆ. ಎಂಎಲ್ಎ, ಎಂಪಿ ಖೋಟಾದ ಅಡಿ, ಅವರ ಸಂಬಂಧಿಕರಿಗೆ, ಹಿಂಬಾಲಕರಿಗೆ ಈ ಸೌಲಭ್ಯಗಳು ಲಭ್ಯವಾಗುತ್ತಿವೆ. ಇದನ್ನೆಲ್ಲ ನಿಯಂತ್ರಿಸ ಬೇಕಾದ  ಅಧಿಕಾರಿಗಳು ಮೌನವಹಿಸಿದ್ದಾರೆ ಎಂಬುದು ವಿಷಾದದ ಸಂಗತಿ.

ಬಲಿಷ್ಠರಿಗೇ ಸೌಲಭ್ಯ: ರಾಜಕೀಯವಾಗ ಗುರುತಿಸಿಕೊಳ್ಳುವ, ಪ್ರತಿಭಟನೆ, ಧರಣಿ, ಮೆರವಣಿಗಳಲ್ಲಿ ಪಾಲ್ಗೊಳ್ಳುವವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆ. ಅಂಗವೈಕಲ್ಯವನ್ನು ದೃಢಪಡಿಸುವ ವೈದ್ಯರಿಗೂ ಹಣ ಕೊಟ್ಟು ಪ್ರಮಾಣ ಪತ್ರ ಪಡೆಯುವಂತಹ ಪ್ರಕರಣಗಳಿಗೇನೂ ಕೊರತೆಯಿಲ್ಲ. ಜಿಲ್ಲಾ ಕೇಂದ್ರದಲ್ಲಿರುವ ಅಂಗವಿಕಲರಲ್ಲಿ ಕೆಲವರು, ಅಧಿಕಾರಿಗಳನ್ನೇ ಬ್ಲಾಕ್ ಮೇಲ್ ಮಾಡಿ, ಸೌಲಭ್ಯಗಳನ್ನು ಪಡೆಯುತ್ತಾರೆಂದು ಅಧಿಕಾರಿಗಳೇ ಆರೋಪ ಮಾಡುತ್ತಾರೆ.

ಇಷ್ಟು ಮಾತ್ರವಲ್ಲ, ಅಂಗವಿಕಲರ ಸಂಘದ ಸದಸ್ಯರೆಂದು ಹೇಳಿಕೊಳ್ಳುವ ಕೆಲವರು, ಗ್ರಾಮೀಣ ಪ್ರದೇಶದಲ್ಲಿರುವ ಅಂಗವಿಕಲರಿಗೆ ಸೌಲಭ್ಯಗಳನ್ನು ಕೊಡಿಸುವ ಆಮಿಷವೊಡ್ಡಿ ಮೋಸಮಾಡಿದ ಪ್ರಕರಣಗಳು ಸಾಕಷ್ಟಿವೆ. ಎರಡೂ ಕಾಲಿಲ್ಲದ ಕಬ್ಬಿನಗೆರೆ ಶರಣಪ್ಪ ನಂತಹವರು ನಾಲ್ಕೈದು ಬಾರಿ ಇಂಥ ‘ದಲ್ಲಾಳಿ’ತನಕ್ಕೆ ಮೋಸ ಹೋಗಿದ್ದಾರೆ. ಇದನ್ನು ನಿಯಂತ್ರಿಸುವ ಕೆಲಸ ಕೂಡ ಸರ್ಕಾರದ ವತಿಯಿಂದ ಆಗಬೇಕಿದೆ ಎನ್ನುತ್ತಾರೆ ಶಂಕರಪ್ಪ.

ಮಾಸಾಶನದಲ್ಲೂ ತಾರತಮ್ಯ: ಇಂತಿಷ್ಟು ಶೇಕಡಾವಾರು ಅಂಗವೈಕಲ್ಯವಿದ್ದರೆ, ಇಂತಿಷ್ಟು ಮಾಸಾಶನ ಎಂದ ಸರ್ಕಾರ ನಿಗದಿಪಡಿಸಿದೆ. ಅದು ರೂ 400 ರಿಂದ ರೂ 1,200ವರೆಗೂ ಇದೆ. ಆದರೆ ಆ ಹಣ ವೈದ್ಯರು ನೀಡುವ ಪ್ರಮಾಣ ಪತ್ರದ ಮೇಲೆ ನಿರ್ಧಾರವಾಗುತ್ತದೆ. ದುರಂತವೆಂದರೆ ಶೇ 75ರಷ್ಟು ಅಂಗವೈಕಲ್ಯವಿದ್ದರೂ, ಅಂಥವರಿಗಿನ್ನೂ ರೂ 400 ಮಾಸಾಶನ ಬರುತ್ತಿದೆ. ಎರಡೂ ಕಾಲುಗಳಿಲ್ಲದವರು ಮಾಸಾಶನದ ಮುಖವನ್ನೇ ಕಂಡಿರದಂತಹ ಉದಾಹರಣೆಗಳು ಸಿಗುತ್ತವೆ.

‘ಇಂಥ ಅವ್ಯವಸ್ಥೆಯನ್ನು ಪತ್ತೆ ಹಚ್ಚಲು ವೈಜ್ಞಾನಿಕ ವಿಧಾನದಲ್ಲಿ ಅಂಗವಿಕಲರ ಸಮೀಕ್ಷೆಯಾಗಬೇಕು. ಹಳ್ಳಿ, ತಾಂಡ್ಯ,
ಹಟ್ಟಿಗಳ ಒಳಹೊಕ್ಕು ಸಮೀಕ್ಷೆ ನಡೆಸಬೇಕು. ಸಮೀಕ್ಷೆಯಲ್ಲಿ ದೊರೆತ ಅಂಗವೈಕಲ್ಯ ವ್ಯಕ್ತಿಗಳಿಗೆ  ಅನುಗುಣವಾಗಿ ಸೌಲಭ್ಯಗಳನ್ನು ರೂಪಿಸಬೇಕು’ಎನ್ನುತ್ತಾರೆ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥ ಶಂಕರಪ್ಪ.

ಸರ್ಕಾರದ ವಿಶೇಷ ಸೌಲಭ್ಯಗಳು
*ಅಂಗವಿಕಲ ವ್ಯಕ್ತಿಯನ್ನು ಸಾಮಾನ್ಯ ವ್ಯಕ್ತಿ ವಿವಾಹವಾದಲ್ಲಿ ರೂ ೫೦,೦೦೦ ಪ್ರೋತ್ಸಾಹಧನವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಜಂಟಿ ಖಾತೆಯಲ್ಲಿ ಠೇವಣಿ ಇಡಲಾಗುವುದು. ೫ ವರ್ಷಗಳ ನಂತರ ದಂಪತಿ ಅನೋನ್ಯ ಸುಖ ಜೀವನ ನಡೆಸುತ್ತಿದ್ದಲ್ಲಿ ಅವರಿಗೆ ಠೇವಣಿ ಹಣವನ್ನು ಪಾವತಿಸಲಾಗುವುದು.  ೫ ವರ್ಷಗಳವರೆಗೆ ಖಾತೆಗೆ ಜಮಾ ಆಗುವ ಬಡ್ಡಿ ಹಣವನ್ನು ದಂಪತಿ ಕಾಲಕಾಲಕ್ಕೆ ಡ್ರಾ ಮಾಡಿಕೊಂಡು ಜೀವನೋಪಾಯಕ್ಕೆ ಬಳಸಬಹುದಾಗಿದೆ.  ೫ ವರ್ಷಗಳ ಅವಧಿಯಲ್ಲಿ ದಂಪತಿಗಳು ನಾನಾ ಕಾರಣಗಳಿಂದಾಗಿ (ಸಾವು ಹೊರತುಪಡಿಸಿ) ಬೇರ್ಪಟ್ಟಲ್ಲಿ ಠೇವಣಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

*ಅಂಧ ಮಹಿಳೆ (ಭಾಗಶಃ ಅಂಧತ್ವ ಶೇ. ೪೦ ಕ್ಕಿಂತ ಹೆಚ್ಚು) ಹೆರಿಗೆಯಾಗಿದ್ದಲ್ಲಿ ಶಿಶುವಿನ ಪಾಲನೆ ಪೋಷಣೆಗಾಗಿ ಶಿಶುಪಾಲನಾ ಭತ್ಯೆಯನ್ನು ಮಾಸಿಕ ರೂ ೨,೦೦೦ದಂತೆ ೨ ವರ್ಷಗಳವರೆಗೆ, ೨ ಹೆರಿಗೆಗಳಿಗೆ ನೀಡಲಾಗುತ್ತದೆ.

*೨೦೧೩–-೧೪ನೇ ಶೈಕ್ಷಣಿಕ ವರ್ಷದಿಂದ ಪಿ.ಯು ನಂತರದ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಂಗವಿಕಲ ವಿದ್ಯಾರ್ಥಿಗಳು ಭರಿಸಿದ ಶಿಕ್ಷಣದ ವೆಚ್ಚವನ್ನು ಮರುಪಾವತಿ ಮಾಡುವ ಯೋಜನೆ ನಿಬಂಧನೆಗಳಿಗೊಳಪಟ್ಟು ಜಾರಿಗೆ ಬಂದಿರುತ್ತದೆ. ಈ ಸೌಲಭ್ಯಗಳನ್ನು ಅರ್ಹ ವಿದ್ಯಾರ್ಥಿಗಳು ಹಾಗೂ ಮೊದಲೆರಡು ಯೋಜನೆಗಳ ಲಾಭವನ್ನು ಅರ್ಹ ವ್ಯಕ್ತಿಗಳು ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಚಿತ್ರದುರ್ಗ  ಇವರನ್ನು ಸಂಪರ್ಕಿಸಬಹುದು.

ಜಿಲ್ಲೆಯಲ್ಲಿ 36 ಸಾವಿರ ಅಂಗವಿಕಲರು
‘ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ೩೬,೧೭೦ ಅಂಕವಿಕಲರಿದ್ದಾರೆ. ಇದರಲ್ಲಿ ೧೫,೬೫೫ ದೈಹಿಕ ಅಂಗವಿಕಲರು. ೭,೫೦೩ ಅಂಧರು. ೭,೪೪೭ ಶ್ರವಣದೋಷ­ವುಳ್ಳವರು. ೩,೧೭೨ ಬುದ್ಧಿಮಾಂದ್ಯರು. ೪೬೪ ಮಾನಸಿಕ ಅಸ್ವಸ್ಥರು. ೧೧೧ ಕುಷ್ಠರೋಗ ನಿವಾರಿತ ಅಂಗವಿಕಲರು. ೧೮೧೮ ಬಹುವಿಧ ಅಂಗವಿಕಲತೆಯ  ವ್ಯಕ್ತಿಗಳಿದ್ದಾರೆ. ಸರ್ಕಾರ ಅವರಿಗೆಲ್ಲ ಗುರುತಿನ ಚೀಟಿ ನೀಡಿದೆ. ಅವರಲ್ಲಿ 12,929 ಮಂದಿ‌ ರೂ ೪೦೦ ಹಾಗೂ 10,775 ಮಂದಿ ರೂ ೧,೦೦೦, ಒಟ್ಟು ೨೩೭೦೪ ಜನ ಮಾಶಾಸನ ಪಡೆಯುತ್ತಿದ್ದಾರೆ.  ಇತ್ತೀಚಿನ ವರದಿಯ ಪ್ರಕಾರ ರೂ ೪೦೦ ರ ಮಾಶಾಸನ ರೂ ೫೦೦ ಹಾಗೂ ರೂ ೧,೦೦೦ ಮಾಶಾಸನವನ್ನು ರೂ ೧,೨೦೦ ರಂತೆ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ೧೮೫ ಗ್ರಾಮ ಪಂಚಾಯ್ತಿ, ೬ ತಾಲ್ಲೂಕು ಪಂಚಾಯ್ತಿ, ೧೬೦ ವಿ.ಆರ್.ಡಬ್ಲ್ಯೂ ಹಾಗೂ ೬ ಎಂ.ಆರ್.ಡಬ್ಲ್ಯೂಗಳು ಅಂಗವಿಕಲರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ೨ ವಿಶೇಷ ವಸತಿ ಶಾಲೆಗಳಿವೆ. ಮಾಳಪ್ಪನ ಹಟ್ಟಿಯ ತೀಕ್ಷ್ಣಅಂಧರ ವಸತಿ ಶಾಲೆ. ಇಲ್ಲಿ ೭೫ ಮಕ್ಕಳು ಸೌಲಭ್ಯ ಪಡೆದಿದ್ದಾರೆ.  ಚಳ್ಳಕೆರೆಯಲ್ಲಿ ಕಿವುಡ ಮೂಗರ ವಸತಿ ಶಾಲೆ ಇದೆ. ೫೦ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ
– ಬಿ. ಗುರಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಚಿತ್ರದುರ್ಗ

ಸರ್ಕಾರ ಜಿಲ್ಲೆಯತ್ತ ಗಮನಿಸಲಿ
ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕಾ ಸೌಲಭ್ಯಗಳಿಲ್ಲ. ಬೇರೆ ಜಿಲ್ಲೆಗೆ  ಹೋಲಿಸಿಕೊಂಡರೆ ಬಹಳ ಹಿಂದುಳಿದ ಜಿಲ್ಲೆ. ಇಲ್ಲಿನ ಅಂಗವಿಕಲರಿಗೆ ಸೌಲಭ್ಯಗಳು ಮರೀಚಿಕೆ. ಸರ್ಕಾರ ಗ್ರಾಮೀಣ ಭಾಗದ ಅಂಗವಿಕಲರಿಗೆ ಸೌಲಭ್ಯಗಳನ್ನು ತಲುಪಿಸಲು ವಿಶೇಷ ಆಸಕ್ತಿವಹಿಸಬೇಕು. ಅಂಗವೈಕಲ್ಯಕ್ಕೆ ಅನುಗುಣವಾಗಿ ಸೌಲಭ್ಯಗಳು ದೊರೆಯಬೇಕು. ಸರ್ಕಾರ ಎಲ್ಲ ಜಿಲ್ಲೆಗಿಂತ ಹೆಚ್ಚು ಇತ್ತ ಗಮನಹರಿಸಬೇಕು.
–ಶ್ರೀನಿವಾಸ್, ತೀಕ್ಷ್ಣ ಅಂಧರ ಮಕ್ಕಳ ಶಾಲೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT