ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ನಿರ್ವಹಣೆ ಸವಾಲಿನ ಕೆಲಸ

Last Updated 6 ಮಾರ್ಚ್ 2011, 9:30 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಹೆಚ್ಚುತ್ತಿರುವ ಕೈಗಾರಿಕೆಗಳು, ಜನಸಂಖ್ಯೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ ಎಂದು ಕೆನಡಾದ ಪರಿಸರ ವಿಜ್ಞಾನಿ ಡಾ.ಸಿ. ರಾಜಶೇಖರಮೂರ್ತಿ ಕಳವಳ ವ್ಯಕ್ತಪಡಿಸಿದರು.

ನಗರದ ಬಾಪೂಜಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆರಂಭವಾದ ‘ಭಾರತದಲ್ಲಿ ಪರಿಸರ ಪರಿಣಾಮ ನಿರ್ಣಯಗಳ ಪುನರ್ ಅಭಿಯೋಜನೆ’ ವಿಷಯ ಕುರಿತ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿವರ್ಷವೂ ನಗರಗಳಿಗೆ ಗ್ರಾಮೀಣ ಪ್ರದೇಶದಿಂದ ವಲಸೆ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೈಗಾರಿಕೆಗಳು ಬೃಹತ್ ಪ್ರಮಾಣದಲ್ಲಿ ಸ್ಥಾಪನೆಯಾಗುತ್ತಿವೆ. ಇದರ ಪರಿಣಾಮ ಸೃಷ್ಟಿಯಾಗುತ್ತಿರುವ ಘನತ್ಯಾಜ್ಯದ ನಿರ್ವಹಣೆ, ಚರಂಡಿಯ ಕೊಳಕು ನೀರು, ಪರಿಸರ ಮಾಲಿನ್ಯ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಆವಶ್ಯಕತೆ ಇದೆ. ಅದನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಹೆಚ್ಚುತ್ತಿರುವ ನಗರದ ಜನಸಂಖ್ಯೆಗೆ ಸಾಕಷ್ಟು ಕುಡಿಯುವ ನೀರು ಪೂರೈಸಲು ಆಡಳಿತ ನಡೆಸುವವರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ, ಶುದ್ಧ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡುತ್ತಿಲ್ಲ. ಘನತ್ಯಾಜ್ಯ, ಕೊಳಕು ನೀರು ನಿರ್ವಹಣೆ ಜತೆಗೆ ಪುನರ್ ಬಳಕೆಗೂ ಒತ್ತು ನೀಡಬೇಕು. ಪರಿಸರ ನಿರ್ವಹಣೆಗೂ ಮೊದಲು ಸಂಪನ್ಮೂಲ ನಿರ್ವಹಣೆಗೆ ಆದ್ಯತೆ ನೀಡಬೇಕು. ಕೈಗಾರಿಕೆ ಸ್ಥಾಪನೆಗೆ ಇರುವ ರಾಷ್ಟ್ರ, ಅಂತರರಾಷ್ಟ್ರೀಯ ನಿಯಮಗಳನ್ನು ಸರಿಯಾಗಿ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಉದ್ಯಮಿ ರಾಜಶೇಖರ್ ಮಾತನಾಡಿ, ಕೈಗಾರಿಕೆಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಪರಿಸರ ಮಾಲಿನ್ಯ, ಜಲಮಾಲಿನ್ಯ ಹಾಗೂ ವಾಯುಮಾಲಿನ್ಯ ತಡೆಗೆ ಕೈಗಾರಿಕೋದ್ಯಮಿಗಳು ಪ್ರಾಶಸ್ತ್ಯ ನೀಡಬೇಕು. ಚೀನಾ ಅಂತಹ ಪ್ರಯತ್ನಗಳಿಗೆ ಮಾದರಿಯಾಗಿದೆ ಎಂದು ಹಲವು ಉದಾಹರಣೆ ನೀಡಿದರು.
ಡಾ.ಗಂಜಿಗಟ್ಟಿ, ಬಿಐಇಟಿ ನಿರ್ದೇಶಕ ಪ್ರೊ.ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಬಿ.ಟಿ. ಅಚ್ಯುತ್, ಡಾ.ಎಸ್. ಮಂಜಪ್ಪ, ಪ್ರೊ.ಬಿ.ಇ. ರಂಗಸ್ವಾಮಿ, ಡಾ.ಜಿ.ಬಿ. ದೇಸಾಯಿ, ಡಾ.ಎಚ್.ಬಿ. ಅರವಿಂದ ಮತ್ತಿತರರು ಉಪಸ್ಥಿತರಿದ್ದರು. ಪ್ರೊ.ಬಿ.ಎಸ್. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT