ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಬದುಕು ಸಹನೀಯಗೊಳಿಸಿ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಗಾಳಿ ಮತ್ತು ನೀರು ಗಣನೀಯ ಪ್ರಮಾಣದಲ್ಲಿ ಮಲಿನಗೊಳ್ಳುತ್ತಿದೆ ಎಂಬ ಸಂಗತಿ ನಿಜಕ್ಕೂ ಕಳವಳಕಾರಿ. ಇದು ಹೊಸ ವಿಷಯವೇನಲ್ಲ. ಒಟ್ಟಾರೆ ಪರಿಸರವೇ ಹಾಳಾಗಿದೆ ಎಂಬುದು ಬೆಂಗಳೂರಿನ ಜನರ ಅನುಭವಕ್ಕೆ ಬಂದು ವರ್ಷಗಳೇ ಕಳೆದಿವೆ. ಹೊಸ ಬೆಳವಣಿಗೆ ಎಂದರೆ  ಸರ್ಕಾರ ಈ ಸಂಗತಿಯನ್ನು ಈಗ ಅಧಿಕೃತವಾಗಿ ಒಪ್ಪಿಕೊಂಡಿರುವುದು! ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಪರಿಸರ ಖಾತೆ ಸಚಿವರು ಈ ಕುರಿತು ಕೆಲವು ಆತಂಕಕಾರಿ ಅಂಕಿ ಅಂಶಗಳನ್ನು ಬಹಿರಂಗಗೊಳಿಸಿದ್ದಾರಷ್ಟೇ.

ಪೀಣ್ಯದ ಕೈಗಾರಿಕಾ ವಲಯ ಹಾಗೂ ಅದರ ಆಸುವಾಸಿನ ಪ್ರದೇಶಗಳಲ್ಲಿನ ಅಂತರ್ಜಲ ನಗರದ ಉಳಿದ ಪ್ರದೇಶಗಳಿಗಿಂತ ಹೆಚ್ಚು ಕಲುಷಿತವಾಗಿದೆ ಎಂಬುದು ಗಾಬರಿ ಹುಟ್ಟಿಸುವ ಸಂಗತಿ. ಇದು ನಿಜಕ್ಕೂ ಅಪಾಯಕಾರಿ ವಿದ್ಯಮಾನ. ಇನ್ನು ವಾಯು ಮಾಲಿನ್ಯದ ವಿಷಯದಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ದಿನದ 18 ತಾಸುಗಳ ಕಾಲ ನಿರಂತರವಾಗಿ ಓಡಾಡುವ ವಾಹನಗಳ ಸದ್ದು, ಅವು ಹೊರಚೆಲ್ಲುವ ಕಾರ್ಬನ್‌ ಹೊಗೆ, ದೂಳು ಇತ್ಯಾದಿಗಳಿಂದ  ವಾತಾವರಣ ಪ್ರತಿ ಕ್ಷಣವೂ ಕಲುಷಿತಗೊಳ್ಳುತ್ತಿದೆ.

ಇದರ ನಡುವೆಯೇ ಬದುಕುವ ಅನಿವಾರ್ಯ ಬೆಂಗಳೂರಿನ ಲಕ್ಷಾಂತರ ಜನರದು. ಬೆಂಗಳೂರು ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ನಗರ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಬೆಂಗಳೂರಿಗೆ ವಲಸೆ ಬರುವ ಜನರ ಪ್ರಮಾಣ ಮಿತಿ ಮೀರಿದೆ. ನಗರಕ್ಕೆ ಪೂರೈಕೆಯಾಗುತ್ತಿರುವ ಕಾವೇರಿ ನೀರು ಏನೇನೂ ಸಾಲದು. ಹೀಗಾಗಿ ಅಂತರ್ಜಲದ ಅವಲಂಬನೆ ಹೆಚ್ಚಾಗಿದೆ. ಅಂತರ್ಜಲ ವೃದ್ಧಿಗೆ ಕೈಗೊಂಡ ಇತ್ತೀಚಿನ ಕ್ರಮಗಳಿಂದ ಹೆಚ್ಚಿನ ಅನುಕೂಲ ಆಗಿಲ್ಲ. ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ ಅನೇಕ ಬಗೆಯ ತ್ಯಾಜ್ಯ ನೀರು ಭೂಮಿ ಸೇರುತ್ತಿದೆ. ಅದನ್ನು ತಡೆಗಟ್ಟುವ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಅಂತರ್ಜಲ ಮತ್ತು ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ.

ಬೆಂಗಳೂರಿನ ಪರಿಸರ ಹಾಳಾಗುತ್ತಿದೆ ಎಂದು ಸರ್ಕಾರ ಎಚ್ಚರಿಕೆಯ ಗಂಟೆ ಬಾರಿಸಿದರೆ ಸಾಲದು. ಪರಿಸರ ಎಷ್ಟು ಹಾಳಾಗಿದೆ ಎಂಬ ಬಗ್ಗೆ ಅಂಕಿ ಅಂಶಗಳನ್ನು ಜನರ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ಪರಿಸರವನ್ನು ಹಾಳುಗೆಡವುತ್ತಿರುವ ಸಮಾಜಘಾತುಕರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಮೂಲಕವೇ ಪರಿಸ್ಥಿತಿಯನ್ನು ನಿಯಂತ್ರಿಸಬೇಕು. ನಗರದ ವಸತಿ ಪ್ರದೇಶಗಳಲ್ಲಿರುವ ಸಾವಿರಾರು ಸಣ್ಣಪುಟ್ಟ ಅಪಾಯಕಾರಿ ಕೈಗಾರಿಕೆಗಳು, ಆಸ್ಪತ್ರೆ, ನರ್ಸಿಂಗ್‌ ಹೋಂ ಇತ್ಯಾದಿಗಳಿಂದ ಹೊರಬರುವ ದ್ರವ ಹಾಗೂ ಘನ ರೂಪದ ತ್ಯಾಜ್ಯಗಳಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ವಿಷಕಾರಿ ತ್ಯಾಜ್ಯ ಮಳೆಯ ನೀರಿನೊಂದಿಗೆ ಹರಿದು ಕೆರೆಗಳಲ್ಲಿ ಸಂಗ್ರಹವಾಗುತ್ತಿದೆ.

ಇದರಿಂದಾಗಿ ಬೆಂಗಳೂರು ಹೊರವಲಯದ ಕೃಷಿ ಹಾಳಾಗಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಜಾರಿಗೊಳಿಸುವ ವಿಷಯದಲ್ಲಿ ಸರ್ಕಾರ ಹಿಂಜರಿಯಬಾರದು. ಪರಿಸರ ಮಾಲಿನ್ಯ ನಿಯಂತ್ರಣ ಸರ್ಕಾರದ ಕೆಲಸವೇ ಆದರೂ ಅದಕ್ಕೆ ಸಾರ್ವಜನಿಕರ ಸಹಕಾರ ಬೇಕು. ಜನಪರ ಹಾಗೂ ಪರಿಸರ ಸಂಘಟನೆಗಳು ಜಾಗೃತಿ ಮೂಡಿಸುವ ಕೆಲಸವನ್ನು ಇನ್ನಷ್ಟು ತೀವ್ರಗೊಳಿಸುವ ಅಗತ್ಯವಿದೆ. ಈ ಕೆಲಸದಲ್ಲಿ ವಿಳಂಬವಾದರೆ ಬೆಂಗಳೂರು ಅಕ್ಷರಶಃ ನರಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT