ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಯೋಜನೆ ಅವ್ಯವಸ್ಥೆ ನಿವಾರಣೆಗೆ ಅಗತ್ಯ ಕ್ರಮ: ಮೇಯರ್

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ನಗರ ಯೋಜನೆ ವಿಭಾಗದಲ್ಲಿನ ಅವ್ಯವಸ್ಥೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾನೂನು ಜಾರಿಗೊಳಿಸುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.
-ಇದು ಮೇಯರ್ ಪಿ. ಶಾರದಮ್ಮ ಅವರ ಖಡಕ್ ನುಡಿ.

`ಅಕ್ರಮ ನಿರ್ಮಾಣ- ಇಲ್ಲ ನಿಯಂತ್ರಣ~ ಸರಣಿ ಲೇಖನಮಾಲೆ ಹಿನ್ನೆಲೆಯಲ್ಲಿ `ಪ್ರಜಾವಾಣಿ~ಗೆ ಸಂದರ್ಶನ ನೀಡಿದ ಅವರು, `ಅಕ್ರಮ ಕಟ್ಟಡಗಳ ನಿರ್ಮಾಣ ಕುರಿತು ಸಾರ್ವಜನಿಕರು ನೀಡುವ ದೂರನ್ನಾಧರಿಸಿ ಕ್ರಮ ಜರುಗಿಸದ ಅಧಿಕಾರಿಗಳ ಬಗ್ಗೆ ಲಿಖಿತ ದೂರು ಬಂದಲ್ಲಿ ಖಂಡಿತಾ ಕ್ರಮ ಜರುಗಿಸಲಾಗುವುದು~ ಎಂದು ಭರವಸೆ ನೀಡಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ.

ಪ್ರಶ್ನೆ:  ಅಕ್ರಮ ಕಟ್ಟಡಗಳ ಬಗ್ಗೆ ಇದುವರೆಗೆ ನಿಮಗೆ ದೂರು ಬಂದಿಲ್ಲವೇ?
ಮೇ: ಕಟ್ಟಡ ನಿರ್ಮಾಣ ಉಪವಿಧಿಗಳನ್ನು ಉಲ್ಲಂಘಿಸಿ ಅನೇಕ ಕಟ್ಟಡಗಳು ನಗರದಲ್ಲಿ ತಲೆಯೆತ್ತಿರುವ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ದೂರು ಬಂದಿರಬಹುದು. ಆದರೆ ನನಗೆ ಇದುವರೆಗೆ ಲಿಖಿತವಾಗಿ ಯಾವುದೇ ದೂರು ಬಂದಿಲ್ಲ. ದೂರು ಬಂದಲ್ಲಿ ಖಂಡಿತಾ ಪರಿಶೀಲಿಸುತ್ತೇನೆ.

ಪ್ರಶ್ನೆ: ಪಾಲಿಕೆ ಎಂಜಿನಿಯರ್‌ಗಳ ಬಗ್ಗೆಯೇ ವ್ಯಾಪಕ ದೂರುಗಳಿವೆಯಲ್ಲಾ?
ಮೇ: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಮಾಲೀಕರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿದರೆ ಎಂಜಿನಿಯರ್‌ಗಳು ದೂರು ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಅಂತಹ ಹುದ್ದೆಗಳ ಅಗತ್ಯವೇನಿದೆ? ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಅಂತಹ ಅಧಿಕಾರಿಗಳ ಅವಶ್ಯಕತೆಯೂ ಪಾಲಿಕೆಗೆ ಇಲ್ಲ. ಪಾಲಿಕೆಗೆ ಕಳಂಕ ತರುವ ಅಧಿಕಾರಿಗಳ ಸೇವೆ ಬೇಕಿಲ್ಲ.

ಪ್ರಶ್ನೆ:  ಎರವಲು ಸೇವೆ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಹೆಚ್ಚು ನಡೆಯುತ್ತಿದೆ ಎಂಬ ಸಾರ್ವತ್ರಿಕ ಆರೋಪದ ಬಗ್ಗೆ ಏನು ಹೇಳುತ್ತೀರಿ?
ಮೇ: ದಕ್ಷ ಅಧಿಕಾರಿಗಳ ಸೇವೆ ಪಾಲಿಕೆಗೆ ಅಗತ್ಯವಿದೆ. ಆದರೆ, ಭ್ರಷ್ಟ ಅಧಿಕಾರಿಗಳು ಬೇಕಾಗಿಲ್ಲ. ಇಂತಹ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸು ಕಳಿಸಲು ಆಯುಕ್ತರು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ.

ಪ್ರಶ್ನೆ:  ಕಟ್ಟಡ ನಿರ್ಮಾಣ ಉಪವಿಧಿಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ಬಗ್ಗೆ ಪಾಲಿಕೆಯ ಮುಂದಿನ ಕಾರ್ಯ ಯೋಜನೆ ಏನು?
ಮೇ: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ದಂಡ ವಿಧಿಸಲು ಈಗಾಗಲೇ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ತೆರಿಗೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ.

ಪ್ರಶ್ನೆ:  ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದಂತಹ ಪ್ರದೇಶಗಳಲ್ಲಿ ಯದ್ವಾತದ್ವ ಅಕ್ರಮ ಕಟ್ಟಡಗಳು ತಲೆಯೆತ್ತುತ್ತಿವೆಯಲ್ಲಾ?
ಮೇ:
ಇದುವರೆಗೆ ಈ ಪ್ರದೇಶ ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿದ್ದವು. ಹೀಗಾಗಿ, ಬಿಬಿಎಂಪಿಯ ನಿಯಂತ್ರಣ ಇರಲಿಲ್ಲ. ಇನ್ನು ಮುಂದೆ ಗಮನಹರಿಸುತ್ತೇವೆ.

ಪ್ರಶ್ನೆ:  ರೆವಿನ್ಯೂ ನಿವೇಶನಗಳಲ್ಲಿ ಮನೆ ಕಟ್ಟಿದವರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ?
ಮೇ: ಇಂತಹ ಕಟ್ಟಡಗಳನ್ನು ಸಕ್ರಮಗೊಳಿಸಲು ಸರ್ಕಾರದ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಕಾಯುತ್ತಿದ್ದೇವೆ. ಸರ್ಕಾರದ ತೀರ್ಮಾನವೇ ಅಂತಿಮ. ಮಾನವೀಯತೆ ದೃಷ್ಟಿಯಿಂದ ಯಾವುದೇ ಅಕ್ರಮ ಕಟ್ಟಡಗಳನ್ನು ಒಡೆಯಲು ಪಾಲಿಕೆ ಮುಂದಾಗುವುದಿಲ್ಲ.

ಪ್ರಶ್ನೆ:  ಅಕ್ರಮ- ಸಕ್ರಮ ಯೋಜನೆ ಶೀಘ್ರ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಲು ಪಾಲಿಕೆ ಪ್ರಯತ್ನಿಸಲಿದೆಯೇ?
ಮೇ: ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆದಿದೆ. ಈಗಾಗಲೇ ನಗರ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದೆ. ರಾಜ್ಯಪಾಲರ ಬಳಿ ಕಡತ ಇದೆ. ಈ ಸಂಬಂಧ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಪಾಲಿಕೆ ಬದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT