ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಾರಿಗೆ ಹೆದ್ದಾರಿಗೆ ಸೀಮಿತ!

Last Updated 21 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ತುಮಕೂರು: ನಗರ ಸಾರಿಗೆಗೆ ಕೊನೆಗೂ ಚಾಲನೆ ದೊರೆತಿದೆ. ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರ ಪ್ರತಿನಿತ್ಯದ ಪ್ರಯಾಣ ಸಮಸ್ಯೆ ದೂರವಾಗಬಹುದು. ಆದರೆ ಬಸ್ ವ್ಯವಸ್ಥೆ ಕೇವಲ ಮುಖ್ಯ ರಸ್ತೆಗಳಿಗೆ ಸೀಮಿತವಾಗದಿದ್ದರೆ ಮಾತ್ರ ನಗರ ಸಾರಿಗೆಗೆ ಅರ್ಥ ಬರುತ್ತದೆ. ಇಡೀ ನಗರಕ್ಕೆ ಸಾರಿಗೆ ಸಂಪರ್ಕ ವಿಸ್ತರಿಸುವ ಜೊತೆಗೆ ಶಾಲೆ- ಕಾಲೇಜುಗಳನ್ನು ಗಮನದಲ್ಲಿಟ್ಟುಕೊಂಡು ಸಂಪರ್ಕ ಕಲ್ಪಿಸಬೇಕಾಗಿದೆ.

ಈಗ ನೀಡಲಾಗಿರುವ 10 ನೂತನ ಬಸ್‌ಗಳನ್ನು ಪ್ರಾಯೋಗಿಕವಾಗಿ 2 ರೂಟ್‌ಗಳಿಗೆ ಬಿಡಲಾಗಿದೆ. ಅದೂ ಈಗಾಗಲೇ ಬಸ್‌ಗಳಿದ್ದ ಪ್ರಮುಖ ರಸ್ತೆಗಳಿಗೆ ಮಾತ್ರ ಸೀಮಿತವಾಗಿದೆ. ನಗರದ ಕ್ಯಾತ್ಸಂದ್ರ ಮತ್ತು ಹೆಗ್ಗೆರೆ ಹೆದ್ದಾರಿಯಲ್ಲಿವೆ. ಎರಡು ಹೆದ್ದಾರಿಗಳಿಗೆ ನಗರ ಸಾರಿಗೆಯ 10 ಬಸ್‌ಗಳನ್ನು ಸೀಮಿತಗೊಳಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.


ನಗರ ಎಂದರೆ ಕೇವಲ ಹೆದ್ದಾರಿಯಲ್ಲಿರುವ ಪ್ರಮುಖ ಎರಡು ಸ್ಥಳಗಳಲ್ಲ ಎಂಬುದನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅರಿಯಬೇಕಾಗಿದೆ. ತುಮಕೂರು ನಗರ ಕೇಂದ್ರ ಸ್ಥಾನದಿಂದ ಸುತ್ತಮುತ್ತ ಸುಮಾರು 7ರಿಂದ 8 ಕಿ.ಮೀ. ಬೆಳೆದಿದೆ. ಸಾಕಷ್ಟು ಬಡಾವಣೆಗಳು ನಿರ್ಮಾಣವಾಗಿವೆ. ರಿಂಗ್ ರಸ್ತೆ ಇದೆ. ನಗರದ ಎಲ್ಲ ಬಡಾವಣೆಗಳಲ್ಲಿ ಜನವಸತಿ ಇದೆ. ಕೇವಲ ಹೆದ್ದಾರಿಯಲ್ಲಿ ಬಸ್ ಓಡಿಸಲು ನಗರ ಸಾರಿಗೆ ಏಕೆ ಬೇಕು? ಎಂಬುದು ಜನತೆ ಪ್ರಶ್ನೆ.

ಈಗ ನೀಡಿರುವ 10 ಬಸ್‌ಗಳನ್ನು ಈಗಾಗಲೇ ಬಸ್ ಇಲ್ಲದಿರುವ ಸ್ಥಳಗಳಿಗೆ ಬಿಡಬೇಕಾಗಿತ್ತು. ಕುಣಿಗಲ್ ರಸ್ತೆ, ಬೆಳಗುಂಬ ರಸ್ತೆ, ರಿಂಗ್ ರಸ್ತೆ ಮುಂತಾದ ಕಡೆಯಲ್ಲಿರುವ ಬಡಾವಣೆಗಳಿಗೆ ಯಾವುದೇ ಸಂಪರ್ಕ ಸಿಗುತ್ತಿಲ್ಲ. ಜನತೆ ಆಟೊ ಮತ್ತು ಖಾಸಗಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಈಗಾಗಲೇ ಗುಬ್ಬಿ ಮತ್ತು ಕ್ಯಾತ್ಸಂದ್ರ- ದಾಬಸ್‌ಪೇಟೆ ಮಾರ್ಗದಲ್ಲಿ ಬಸ್‌ಗಳಿವೆ. ಇರುವ ಸ್ಥಳಕ್ಕೆ ಮತ್ತೆ 10 ಬಸ್ ನೀಡಲಾಗಿದೆ. ಇನ್ನೂ 30 ಬಸ್ ಬರುವವರೆಗೆ ಉಳಿದ ಬಡಾವಣೆಗಳ ಜನತೆ ಕಾಯಬೇಕಾಗಿದೆ.ವಿದ್ಯಾರ್ಥಿಗಳ ಪರಿಪಾಟಲು: ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡಿದೆ. ಆದರೆ ಶಾಲೆ- ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ ನಿಲ್ದಾಣದಿಂದ ಶಾಲೆ- ಕಾಲೇಜುಗಳಿಗೆ ನಡೆದು ಹೋಗಬೇಕಾಗಿದೆ.


ತುಮಕೂರು ನಗರದಲ್ಲಿ ಸಾವಿರಾರು ಶಾಲಾ- ಕಾಲೇಜುಗಳಿವೆ. ಗ್ರಾಮೀಣ ಪ್ರದೇಶದಿಂದ ಹತ್ತಾರು ಸಾವಿರ ವಿದ್ಯಾರ್ಥಿಗಳು ಪ್ರತಿನಿತ್ಯ ನಗರಕ್ಕೆ ಬರುತ್ತಿದ್ದಾರೆ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆರಳೆಣಿಕೆಯ ಗ್ರಾಮಾಂತರ ಬಸ್‌ಗಳನ್ನು ಹಾಕಲಾಗಿದೆ. ಆದರೆ ಅವು ಶಿರಾ ರಸ್ತೆ,ಗುಬ್ಬಿ ರಸ್ತೆ, ಬೆಂಗಳೂರು ಮುಂತಾದ ಮುಖ್ಯರಸ್ತೆಯಲ್ಲಿ ಸಂಚರಿಸುತ್ತವೆ. ಗ್ರಾಮೀಣ ಪ್ರದೇಶಗಳಿಗೆ ಹೋಗುವ ಈ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಕಾಲೇಜು ತಲುಪಬೇಕು. ಅದೂ ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ಅಲ್ಲದೆ ಕಾಲೇಜುಗಳು ಒಂದೆಡೆ, ಹಾಸ್ಟೆಲ್‌ಗಳು ಮತ್ತೊಂದೆಡೆ ಇರುತ್ತವೆ. ಈ ಸಂದರ್ಭದಲ್ಲಿ ಬಸ್ ವ್ಯವಸ್ಥೆ ಇರುವುದಿಲ್ಲ.

ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆಯಾ ಕಾಲೇಜು ಮಾರ್ಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲ. ಅಲ್ಲದೆ ಕೆಲವೊಮ್ಮೆ ವಿದ್ಯಾರ್ಥಿಗಳನ್ನು ಬಸ್‌ಗಳಿಗೆ ಹತ್ತಿಸುವುದಿಲ್ಲ. ಸಾರ್ವಜನಿಕರಿಗೆ ಸ್ಥಳವಿಲ್ಲವೆಂಬ ನೆಪ ಹೇಳಿ, ಪಾಸ್ ಇರುವ ವಿದ್ಯಾರ್ಥಿಗಳನ್ನು ನಿರ್ವಾಹಕರು ಕೆಳಗಿಳಿಸಿದ ಉದಾಹರಣೆಗಳಿವೆ. ಬಸ್‌ಗಾಗಿ ವಿದ್ಯಾರ್ಥಿಗಳು ವರ್ಷ ಪೂರ್ತಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಆದರೆ ಕೆಎಸ್‌ಆರ್‌ಟಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಕಾಲೇಜು ಮುಖ್ಯಸ್ಥರು ವಿಷಾದಿಸುತ್ತಾರೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಗಂಟೆಗೊಮ್ಮೆ ಸಮಯದ ಪರಿವಿಲ್ಲದೆ ಅಪರೂಪಕ್ಕೆ ಬರುವ ಏಕೈಕ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ದನಗಳಂತೆ ತುಂಬಲಾಗುತ್ತದೆ. ಕೆಲವೊಮ್ಮೆ ಮೂರು- ನಾಲ್ಕು ಬಸ್‌ಗಳಿಗಾಗುವಷ್ಟು ವಿದ್ಯಾರ್ಥಿಗಳು ಗುಂಪುಗೂಡಿ ನಿಂತಿದ್ದರೂ ಬಸ್ ಮಾತ್ರ ಇರುವುದಿಲ್ಲ. ಮತ್ತೆ ಕೆಎಸ್‌ಆರ್‌ಟಿಸಿ ಪಾಸ್‌ನಿಂದ ಉಪಯೋಗ ಏನು ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಈಗ ನಗರ ಸಾರಿಗೆ ಆರಂಭವಾಗಿರುವುದರಿಂದ ಶಾಲಾ- ಕಾಲೇಜುಗಳನ್ನು ಸಹ ಗಮನದಲ್ಲಿಟ್ಟುಕೊಂಡು ನಗರ ಸಾರಿಗೆ ಸಂಚಾರ ಮಾರ್ಗ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಮನ ಹರಿಸುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT