ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಾರಿಗೆಗೆ ತುಮಕೂರು ಮಾದರಿ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ನಗರ ಮತ್ತು ಪಟ್ಟಣ­ಗಳ ನಗರ ಸಾರಿಗೆ ವ್ಯವಸ್ಥೆಯನ್ನು ದೇಶದ ಇತರ ರಾಜ್ಯಗಳೂ ಅನುಸರಿಸ­ಬೇಕು ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಸಂಸ್ಥೆಯ ಮುಖ್ಯಸ್ಥೆ ಸುನಿತಾ ನಾರಾಯಣ್ ಅಭಿಪ್ರಾಯಪಟ್ಟರು.

ನವದೆಹಲಿಯಲ್ಲಿ ಗುರುವಾರ ನಡೆದ 'ಉತ್ತಮ ಗಾಳಿ ಮತ್ತು ಸುಸ್ಥಿರ ಸಾರಿಗೆ' (ಕಾನ್ ಕ್ಲೇವ್ ಆಫ್ ಚೇಂಜ್ ಮೇಕರ್ಸ್ ಫಾರ್ ಕ್ಲೀನ್ ಏರ್ ಅಂಡ್ ಸಸ್ಟೈನಬಲ್ ಮೊಬಿಲಿಟಿ) ಕಾರ್ಯಾ­ಗಾರದಲ್ಲಿ ಮಾತನಾಡಿದ ಅವರು, ‘ನಗರ ಸಾರಿಗೆ ನಿರ್ವಹಣೆಯಲ್ಲಿ ಕರ್ನಾಟಕ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದೆ. ತುಮಕೂರಿನಲ್ಲಿರುವ ನಗರ ಸಾರಿಗೆ ವ್ಯವಸ್ಥೆಯನ್ನು ಇತರ ರಾಜ್ಯಗಳ ಅಧಿಕಾರಿಗಳು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಮಂಜುನಾಥ್ ಪ್ರಸಾದ್ ಮಾತನಾಡಿ, ‘ತುಮಕೂರಿನಲ್ಲಿ ನಗರ ಸಾರಿಗೆ ಸೌಲಭ್ಯ ಆರಂಭಿಸಲು ಸಂಸ್ಥೆಯು ನಡೆಸಿದ ಪ್ರಯೋಗದ ಫಲಿತಾಂಶ ಗಮನಿಸಿದ ಕೇಂದ್ರ ಸರ್ಕಾರವು ಇತರ ರಾಜ್ಯಗಳಲ್ಲೂ ಇದೇ ಮಾದರಿ ಅನುಸರಿಸಲು ಉದ್ದೇಶಿಸಿದೆ. ತನ್ನ ಸಣ್ಣ ಮತ್ತು ಮಧ್ಯಮ ನಗರಗಳ ಅಭಿವೃದ್ಧಿ ನಿಧಿಯಿಂದ ಹಲವು ರಾಜ್ಯಗಳಲ್ಲಿ ನಗರ ಸಾರಿಗೆ ಪ್ರಾರಂಭಿ­ಸಲು ಸಹಾಯಧನ ನೀಡುತ್ತಿದೆ’ ಎಂದರು.

ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಕಡಿಮೆ ದರದ ಸೇವೆಯಿಂದಾಗಿ ಕರ್ನಾಟಕದಲ್ಲಿ ‘ನಗರ ಸಾರಿಗೆ’ ಜನಪ್ರಿಯಗೊಂಡಿದೆ. ಪ್ರಸ್ತುತ ರಾಜ್ಯದ 15 ನಗರ/ಪಟ್ಟಣಗಳಲ್ಲಿ 367 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಈ ಸೇವೆಯನ್ನು ರಾಜ್ಯದ ಇತರ 15 ನಗರ/ಪಟ್ಟಣಗಳಿಗೆ ಶೀಘ್ರ ವಿಸ್ತರಿಸಲಾಗುವುದು ಎಂದರು.

ಇಂಧನ ಸಬ್ಸಿಡಿ
ವಿದ್ಯಾರ್ಥಿ ಪಾಸ್‌ಗಳಿಗೆ ಸಾರಿಗೆ ಸಂಸ್ಥೆಗಳು ವ್ಯಯಿಸುವ ಹಣವನ್ನು ಕೇಂದ್ರ/ರಾಜ್ಯ ಸರ್ಕಾರಗಳು ಸಂಪೂರ್ಣ ಮರುಪಾವತಿಸಬೇಕು. ಸಾರಿಗೆ ಸಂಸ್ಥೆಗೆ ವಿವಿಧ ಹಂತದಲ್ಲಿ ತೆರಿಗೆ ವಿನಾಯಿತಿ, ಇಂಧನ ದರದಲ್ಲಿ ಸಬ್ಸಿಡಿ ಒದಗಿಸಿದರೆ ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಿಎಂಟಿಸಿಯ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಸಿ.ಜಿ.ಆನಂದ್ ಮಾತನಾಡಿ, ನಗರ ಯೋಜನೆ ಸಂದರ್ಭದಲ್ಲಿ ಬಸ್ ಡಿಪೊ ನಿರ್ಮಾಣಕ್ಕೆ ಕಡ್ಡಾಯವಾಗಿ ಸ್ಥಳ ಮೀಸಲಿಡಬೇಕು ಎಂದರು. ವಿಮಾನ ನಿಲ್ದಾಣಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಬೆಂಗಳೂರಿನ ವಿವಿಧ ಸಿಟಿ ಬಸ್ ನಿಲ್ದಾಣಗಳಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗಮನ ಸೆಳೆದ ವರದಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ಬಿ.ನಾಗಪ್ಪ ಪ್ರಸ್ತುತ ಪಡಿಸಿದ ‘ಮನುಷ್ಯನ ಸರಾಸರಿ ಎತ್ತರದಲ್ಲಿ ವಾಯು ಮಾಲಿನ್ಯ’ (ಬ್ರೀತಿಂಗ್ ಲೆವೆಲ್ ಸ್ಟಡಿ) ವರದಿ ಎಲ್ಲರ ಗಮನ ಸೆಳೆಯಿತು.

ಬಸ್ ಬಳಕೆ ಪ್ರೋತ್ಸಾಹಿಸುವ ಮೂಲಕ ವಾಯು ಮಾಲಿನ್ಯ ತಗ್ಗಿಸುವುದು, ನಗರ ವಾಸಿಗಳಿಗೆ ಪಾದಚಾರಿ ಮಾರ್ಗದ ಹಕ್ಕು ನೀಡುವುದು, ಸೈಕಲ್‌ಗಳಿಗೆ ನಿರ್ದಿಷ್ಟ ಪಥ ಮೀಸಲಿಡುವ ಬಗ್ಗೆ ವಿಚಾರ ಗೋಷ್ಠಿಯಲ್ಲಿ ಮೌಲಿಕ ಚರ್ಚೆಗಳು ನಡೆದವು.

ಸಿಎಸ್ಇ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಅನುಮಿತಾ ಚೌಧರಿ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಭುರೆಲಾಲ್, ಬೆಂಗಳೂರಿನ ‘ನಮ್ಮ ಸೈಕಲ್’ ಸಂಸ್ಥೆಯ ಎಚ್.ಆರ್.ಮುರಳಿ ಮಾತನಾಡಿದರು.

ಇದೇ ಸಂದರ್ಭ ವಾಯು ಮಾಲಿನ್ಯದ ಸ್ಥಿತಿಗತಿ ಮತ್ತು ನಿಯಂತ್ರಣ ಕುರಿತು ಸಿಎಸ್‌ಇ ಪ್ರಕಟಿಸಿರುವ ‘ದಿ ಗುಡ್ ನ್ಯೂಸ್ ಅಂಡ್ ದಿ ಬ್ಯಾಡ್ ನ್ಯೂಸ್’ ಪುಸ್ತಕವನ್ನು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಅಮಿಕಸ್ ಕ್ಯೂರಿ ಹರೀಶ್ ಸಾಳ್ವೆ ಬಿಡುಗಡೆ ಮಾಡಿದರು.

ನಗರ ಸಾರಿಗೆ ಆರಂ­ಭಿಸಲು ಮತ್ತು ಸೇವೆ ಸುಧಾರಿ­ಸಲು ಬಸ್ ಖರೀದಿ­ಗೆ ಕೇಂದ್ರ ಅನುದಾನ ನೀಡಿದೆ. ಊರು ಮತ್ತು ಬಸ್‌ ವಿವರ ಇಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT