ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸೇರಿ ಬೆಳೆದ ಜಾತಿ

ಜಾತಿ ಸಂವಾದ : ಜಾತಿ ಏಕೆ? ಜಾತಿ ಬೇಕೆ?
ಅಕ್ಷರ ಗಾತ್ರ

ಜಾತಿ ಪದ್ದತಿಯು ನಗರಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಬಗೆಯನ್ನು ಅರ್ಥಮಾಡಿಕೊಳ್ಳುವುದು ಕುತೂಹಲಕಾರಿಯಾದುದು. ಆಧುನಿಕೋತ್ತರ ಕಾಲಘಟ್ಟದಲ್ಲಿ ಭಾರತದ ಜಾತಿವ್ಯವಸ್ಥೆಯನ್ನು ನಿರ್ವಚಿಸಿಕೊಳ್ಳದ ಹೊರತು ನಗರಗಳ ಜಾತಿಸ್ವರೂಪವನ್ನು ಗ್ರಹಿಸುವುದು ಕಷ್ಟ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೈಗಾರಿಕೀಕರಣ ಮತ್ತು ನಗರೀಕರಣ ಹಾಗೆಯೇ 1990 ರ ನಂತರದ ಜಾಗತೀಕರಣ ಮತ್ತು ಖಾಸಗೀಕರಣ ಅಪಾರ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡಿದೆ. ಭಾರತದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಜಾತಿಯ ಸ್ವರೂಪವನ್ನು ಮತ್ತಷ್ಟು ಸಂಕೀರ್ಣ ಗೊಳಿಸಿದೆ. ಭಾರತದಲ್ಲಿ ಜಾತಿಯ ತಾರತಮ್ಯಗಳನ್ನು ಹೋಗಲಾಡಿಸಿ ವಿಸ್ತಾರವಾದ ಏಕರೂಪಿಯಾದ ಧರ್ಮದ ಅಡಿಗೆ ಸಮಾಜವನ್ನು ತರುವ ಸಾಧ್ಯತೆ ಬೌದ್ಧ, ಇಸ್ಲಾಮ್ ಹಾಗೂ ಕ್ರೈಸ್ತ ಧರ್ಮಗಳ ಪ್ರವೇಶದ ಸಂದರ್ಭದಲ್ಲಿ ಇದ್ದವು. ಆದರೆ ಬಹುತೇಕ ನಗರ ಹಿನ್ನೆಲೆಯಲ್ಲಿ ಉಳಿದು ಬೆಳೆದ ಈ ಧರ್ಮಗಳು ಜಾತಿ ವ್ಯವಸ್ಥೆಯನ್ನೇ ತನ್ನದಾಗಿಸಿಕೊಂಡು ತಾನೇ ಬಹುರೂಪಿ ಸ್ವರೂಪವನ್ನು ಪಡೆದುಕೊಂಡಿವೆ.

ಜಾತಿಯನ್ನು ಕುರಿತು ಎಲ್ಲ ಪ್ರದೇಶಗಳಿಗೂ ಅಂದರೆ ನಗರ, ಗ್ರಾಮ, ಪಟ್ಟಣ ಪ್ರದೇಶಗಳಿಗೆ ಅನ್ವಯವಾಗುವ ಸಾಮಾನ್ಯವಾದ ಒಂದು ವಿವರಣೆಯನ್ನು ನೀಡಲು ಸಾಧ್ಯವಿಲ್ಲ. ಅದರಲ್ಲೂ ಭಾರತದಲ್ಲಿ ನಗರ ಗ್ರಾಮಗಳ ಬದುಕಿನ ಕ್ರಮದಲ್ಲಿ ತೀವ್ರವಾದ ಅಂತರ ಬೆಳೆದಿದೆ. ನಗರಗಳ ಸಾಮಾಜಿಕ ಬದುಕನ್ನು ರೂಪಿಸಿರುವ ಪ್ರಮುಖವಾದ ಅಂಶಗಳು ಕೈಗಾರಿಕೆ, ವ್ಯಾಪಾರ, ಶಿಕ್ಷಣ ವ್ಯವಸ್ಥೆಗಳಾಗಿವೆ. ನಗರಗಳು, ಆಡಳಿತ ಕೇಂದ್ರಗಳು, ಮನರಂಜನಾ ತಾಣಗಳು ಆಗಿ ವಿವರಿಸಿಕೊಂಡರೆ ಸಾಲದು, ಭಾರತದ ಸಂದರ್ಭದಲ್ಲಿ ಇವೆಲ್ಲವನ್ನೂ ಮೀರಿ ಅವು ಜಾತಿಯ ತೇರುಗಳನ್ನು ಹೊತ್ತು ಸಾಗುತ್ತಿವೆ.

ನಗರವೊಂದು ಅದು ಏಕಕಾಲದಲ್ಲಿ ರೂಪಿತವಾದ ಜಗತ್ತೇನೂ ಅಲ್ಲ. ಹಲವಾರು ಪೀಳಿಗೆಗಳಿಂದ ಅಲ್ಲಿಯೇ ನೆಲೆಸಿದ್ದು, ಗ್ರಾಮ, ಬುಡಕಟ್ಟು ಪ್ರದೇಶಗಳು ಸೇರಿಹೋದ ಈ ನಗರಗಳಿಗೆ ಸಣ್ಣ ಪಟ್ಟಣಗಳಿಂದ ವಲಸೆ ಬಂದ ಲಕ್ಷಾಂತರ ಜನ ಇದರಲ್ಲಿ ಸೇರಿಹೋಗಿದ್ದಾರೆ. ಇದರಿಂದಾಗಿ ಜಾತಿಯು ಜನರು ವಾಸಿಸುವ ಪ್ರದೇಶ, ನಿರ್ದಿಷ್ಟ ಸಂಧರ್ಭ, ವ್ಯಕ್ತಿತ್ವ ಆಧರಿಸಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ನಗರ ಪ್ರದೇಶಗಳಲ್ಲಿ ಕಂಡುಬರುವ ಜಾತಿಯ ಸ್ವರೂಪವನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದು ಮೇಲ್ನೋಟಕ್ಕೆ ಕಂಡು ಬರುವ ಜಾತಿ ವ್ಯವಸ್ಥೆ. ಮತ್ತೊಂದು  ಅಮೂರ್ತ ಸ್ವರೂಪದಲ್ಲಿ ಕಂಡುಬರುವ ರೀತಿ. ಮೊದಲನೆಯದಾಗಿ ಮೂರ್ತ ಸ್ವರೂಪದಲ್ಲಿ ಕಂಡುಬರುವ ಜಾತಿ ವ್ಯವಸ್ಥೆಯನ್ನು ಗಮನಿಸಬಹುದು.

ಸಸ್ಯಾಹಾರ ಮತ್ತು ಮಾಂಸಾಹಾರದ ನೆವದಲ್ಲಿ ಮನೆ, ಅಂಗಡಿ ಮಳಿಗೆ ನೀಡದಿರುವುದು, ನಿವೇಶನ, ಮನೆ ಮಾರಾಟವನ್ನು ಕೊಳ್ಳುವ ಮಾರಾಟ ಮಾಡದಿರುವ ನಿರ್ಧಾರ ಕೈಗೊಳ್ಳುವುದು, ಶಾಲಾ ಕಾಲೇಜುಗಳಲ್ಲಿ ತಮ್ಮ ಜಾತಿಯ, ದೇವರ, ಧರ್ಮ ಗುರುಗಳ ಭಾವಚಿತ್ರಗಳನ್ನು ಪ್ರದರ್ಶಿಸುವುದು ಶಾಲಾ ಸೀಟುಗಳನ್ನು ಹಂಚುವಾಗ ಜಾತಿಯನ್ನು ಆಧರಿಸುವುದು, ಮಠ, ಸಂಘ, ಶಾಲೆಗಳಿಗೆ ಜಾತಿಯನ್ನು ಪ್ರತಿನಿಧಿಸುವ ಸಾಧ್ಯತೆ ಇರುವ ಹೆಸರುಗಳನ್ನಿಟ್ಟುಕೊಳ್ಳುವುದು, ಹೋಟೆಲ್‌ಗಳಿಗೆ ಉಡುಪಿ ಬ್ರಾಹ್ಮಣರ ಹೋಟೆಲ್, ಅಡಿಗಾಸ್, ಅಯ್ಯಂಗಾರ್ಸ್‌ ಬೇಕರಿ, ಕಾಮತ್ ವೀರಶೈವ ಖಾನಾವಳಿ ಗೌಡರ ಮುದ್ದೆಮನೆ ಮುಂತಾದ ಹೆಸರುಗಳನ್ನಿಟ್ಟು ಗಿರಾಕಿಗಳನ್ನು ಆಕರ್ಷಿಸುವುದು, ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಹೇರ್ ಸಲೂನ್, ವಾಶಿಂಗ್ ಲಾಂಡ್ರಿಗಳು, ಲೋಹಕೆಲಸಿಗರು ಶೇಕಡಾ 95 ರಷ್ಟು ಒಂದೇ ಜಾತಿಗೆ ಸೇರಿರುವುದು ಗೊತ್ತಿರುವ ವಿಚಾರ.

ಹಾಗೆಯೇ ವ್ಯಾಪಾರಿ ಮಳಿಗೆಗಳು ನಿರ್ದಿಷ್ಟ ವಸ್ತುಗಳನ್ನು ಮಾರುವ ಮತ್ತು ಕೊಳ್ಳುವ ಗುಂಪುಗಳು, ಸಿನೆಮಾ, ಮುದ್ರಣ ಮಾಧ್ಯಮ, ಮಾಹಿತಿ ತಂತ್ರಜ್ಞಾನ ಆಯಾ ಜಾತಿಯ ಒಡೆತನಕ್ಕೆ ಒಳಪಟ್ಟಿರುತ್ತವೆಯೋ ಅದರ ಆಧಾರದ ಮೇಲೆ ಆ ಜಾತಿಯ ಜನರನ್ನು ಕಾಣಬಹುದು. ಅರ್ಚಕರು, ಪುರೋಹಿತರು, ಮದುವೆ ದಲ್ಲಾಳಿಗಳು, ಜ್ಯೋತಿಷಿಗಳು ಕೆಲವು ಅಪವಾದಗಳನ್ನೊಳಪಡಿಸಿ ನಿರ್ದಿಷ್ಟ ಜಾತಿ ಗುಂಪುಗಳಿಗೆ ಸೇರಿರುತ್ತಾರೆ ಎನ್ನಲು ಅಡ್ಡಿ ಇಲ್ಲ. ಜಾತಿ ಸೂಚಕಗಳಾದ ಮುದ್ರೆ, ವಿಭೂತಿ ಪಟ್ಟೆ, ನಾಮ ಶಿವದಾರ, ಜನಿವಾರ ಇತ್ಯಾದಿ, ಹೆಸರಿನ ಜೊತೆಗೆ ತಳುಕು ಹಾಕಿಕೊಂಡಿರುವ ರಾವ್, ಶಾಸ್ತ್ರಿ, ಶರ್ಮ ಭಟ್ಟ, ಅಡಿಗ, ಅಯ್ಯಂಗಾರ್, ಅಯ್ಯರ್, ಗೌಡ, ರೆಡ್ಡಿ, ಮಠ ಮತ್ತು ಪ್ರಕೃತಿ ಮತ್ತು ಸ್ಥಳೀಯ ದೇವತೆಗಳ ಹೆಸರಿರುವ ಜನರ ಜಾತಿಯನ್ನು ಮೇಲ್ನೋಟಕ್ಕೆ ಗುರುತಿಸಬಹುದು.

ಹಾಗಾಗಿ ನಗರಪ್ರದೇಶದಲ್ಲಿ ಮೂರ್ತ ಸ್ವರೂಪದಲ್ಲಿ ಕಾಣಬರುವ ಜಾತಿ ಪದ್ದತಿಯನ್ನು ಗುರುತಿಸಲು ಸಾಮಾನ್ಯ ಜ್ಞಾನವಿರುವ ಯಾರಿಗೂ ಕಷ್ಟವಿಲ್ಲ. ಆದರೆ ಸಮಸ್ಯೆ ಇರುವುದು ಅಮೂರ್ತ ಸ್ವರೂಪದಲ್ಲಿ ಕಂಡುಬರುವ ಜಾತಿ. ನಗರ ಪ್ರದೇಶದಲ್ಲಿರುವ ಜಾತಿಯು ವರ್ಗದ ಸ್ವರೂಪವನ್ನು ತಾಳುತ್ತದೆ. ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದ ವಿವಾಹ ವೃತ್ತಿ, ಸಾಮಾಜಿಕ ಸಂಪರ್ಕ, ಆಹಾರ, ಮತ್ತು  ಹೊರಗಿಡುವಿಕೆಯ ಮೇಲಿನ ನಿರ್ಬಂಧಗಳು ಸಡಿಲವಾಗಿವೆ, ಅಂತಹ ಸಂದರ್ಭದಲ್ಲಿ ಮೇಲೆ ನೀಡಿರುವ ಮೂರ್ತ ಸ್ವರೂಪದ ಜಾತಿಯು ಪ್ರಕಟಗೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಜಾತಿಯನ್ನು ಕುರಿತ ವಿವರಣೆಯು ಅಮೂರ್ತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಾತಿಯನ್ನು ಕಂಡಂತೆ ವಿವರಿಸಬಹುದು.

ಜಾತಿಯೆನ್ನುವುದು ವ್ಯಕ್ತಿಯೊಬ್ಬನು/ಳು ತಾನು ಹುಟ್ಟಿದ ಕುಟುಂಬ, ಜಾತಿಯ ಸಾಂಸ್ಕೃತಿಕ ಸಾಮಾಜೀಕರಣದಿಂದ ರೂಪುಗೊಂಡ ಅವನ/ಳ ಭಾಷೆ, ಆಂಗಿಕ ಭಾಷೆ, ಮೌಲ್ಯ, ಗ್ರಹಿಕೆಯ ಸಾಮರ್ಥ್ಯ, ಇತರರೊಡನೆ ನಡೆಸುವ ಸಂವಹನ, ತನ್ನದಲ್ಲದ ಆಹಾರ, ಉಡುಗೆ-ತೊಡುಗೆಗಳ ಬಗೆಗೆ ವ್ಯಕ್ತಪಡಿಸುವ ಅಭಿಪ್ರಾಯ, ಮೇಲರಿಮೆ-ಕೀಳರಿಮೆ, ಅಧೀನತೆ-ಅಧಿಕಾರ, ಸೃಜನ ಶೀಲತೆ ಮತ್ತು ಜೀವನ ಶೈಲಿ, ಸಮಾಜದ ಭವಿಷ್ಯದ ನಕಾಶೆ, ಆಶಯ-ವಿಚಾರ ಮೊದಲಾದವುಗಳ ನಡುವೆ ಏರ್ಪಡುವ ಸಾವಯವ ಸಂಬಂಧದಿಂದ ರೂಪುಗೊಳ್ಳುವ ವ್ಯಕ್ತಿತ್ವ ಮತ್ತು ಅಂತಹ ವ್ಯಕ್ತಿತ್ವದಿಂದ ಹೊರಹೊಮ್ಮುವ ಅಭಿವ್ಯಕ್ತಿಯೇ ಜಾತಿಯಾಗಿದೆ. ಪ್ರತಿ ವ್ಯಕ್ತಿಯೂ ಈ ಬಗೆಯ ಅಭಿವ್ಯಕ್ತಿಯನ್ನು ಪುನರುತ್ಪಾದಿಸುತ್ತಿರುತ್ತಾನೆ. ಈ ಮೂಲಕ ಜಾತಿಯ ಅರಿವು ದೃಢಗೊಳ್ಳುತ್ತದೆ.

ಅರಿವು ಮತ್ತು ಅಭಿವ್ಯಕ್ತಿ ಸೂಕ್ಷ್ಮವಾಗಿ ತನ್ನ ಜಾತಿಯ ಸಾಂಸ್ಕೃತಿಕ ಹಾಗು ಸಾಮಾಜಿಕ ತರಂಗಗಳನ್ನು ಹೆಣೆದು ಅಂತಿಮವಾಗಿ ಜಾತಿಯ ಜಾಲವಾಗಿ ಪರಿಣಮಿಸುತ್ತದೆ. ಇಲ್ಲಿ ಭಾಷೆ, ಸಂಕೇತ, ಆಂಗಿಕ ಭಾಷೆ, ಸಂಪರ್ಕ ಮತ್ತು ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯಲ್ಲಿ ಹೊರಡುವ ಧ್ವನಿ, ವ್ಯಾಕರಣ, ಪದಸಂಪತ್ತು, ನಿಚ್ಚಳವಾಗಿ ಜಾತಿಯನ್ನು ಅಭಿವ್ಯಕ್ತಿಸುತ್ತವೆ. ಜಾತಿಯ ಸಂಕೇತವಾದ ಅಚರಣೆಗಳು ಮಾಹಿತಿ ತಂತ್ರಜ್ಞಾನ ಕಂಪನಿಗಳ ಅಧಿಕೃತ ಭೋಜನ ಕೂಟಗಳಲ್ಲಿ ಕೆಲವೊಮ್ಮೆ ಸಸ್ಯಾಹಾರವನ್ನು ಕಡ್ಡಾಯ ಮಾಡಿ ಮಾಂಸಾಹಾರವನ್ನು ನಿಷೇಧಿಸಲಾಗುತ್ತದೆ.

ಹಾಗೆಯೇ ಕಣ್ಣಿನ ನಡುವಿನ ಸಂಪರ್ಕ, ಹೆಗಲ ಮೇಲೆ ಕೈ ಹಾಕಿ ಸ್ಪರ್ಷಿಸುವ, ಮೆಚ್ಚುವ ಶೈಲಿಯಲ್ಲಿ ಬೆನ್ನು ತಟ್ಟುವ, ದೇಹವನ್ನು ಸಂಕೋಚದಿಂದ ಕುಬ್ಜಗೊಳಿಸಿಕೊಳ್ಳುವ ರೀತಿಯ ಆಂಗಿಕ ಭಾಷೆಯು ಸೂಕ್ಷ್ಮವಾದ ಜಾತಿಯ ಅಭಿವ್ಯಕ್ತಿಯಾಗಿದೆ. ಹಾಗೆಯೇ ಮೇಲಿನ ಅಂಶಗಳೆಲ್ಲವೂ ಸಂಪರ್ಕ ಮತ್ತು ಸಂವಹನದ ರೂಪ ತಾಳಿ, ಜಾತಿಯ ಸಾಂಪ್ರದಾಯಿಕ ಬಾಹ್ಯ ಸಂಕೇತಗಳನ್ನು ತ್ಯಜಿಸಿದ್ದರೂ ಕೂಡ ಜಾತಿಯೇ ವ್ಯಕ್ತಿತ್ವವಾಗಿಬಿಡುತ್ತದೆ. ಹೀಗಾಗಿ ಜಾತಿಯು ತನ್ನ ಜನರಲ್ಲಿ ಒಂದು ರೀತಿಯ ಸಾಮಾಜಿಕ ಕೆಮಿಸ್ಟ್ರಿಯನ್ನುಂಟುಮಾಡುತ್ತದೆ. ಆದುದರಿಂದಲೇ ನಗರ ಪ್ರದೇಶಲ್ಲಿರುವ ಕ್ಯಾಸ್ಟ್ ಕೆಮಿಸ್ಟ್ರಿಯನ್ನು ಅರ್ಥೈಸಲು ಮತ್ತಷ್ಟು ಸೂಕ್ಷ್ಮವಾದ ಅಧ್ಯಯನಗಳು ಅವಶ್ಯಕ.

ಕ್ರಾಂತಿ ಎಂಬ ಭ್ರಾಂತಿ
ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾನು, ಹಳ್ಳಿಗಾಡಿನಲ್ಲಿ ದಲಿತರನ್ನು ಕಾಣುತ್ತಿದ್ದ, ಶೋಷಿಸುತ್ತಿದ್ದ ಬಗೆಯನ್ನು ಬಾಲ್ಯದಿಂದಲೇ ತೀರ ಹತ್ತಿರದಿಂದ ಬಹುಸೂಕ್ಷ್ಮವಾಗಿ ಅರಿತಿದ್ದೆ. ಮುಂದೆ ನನಗೆ ಹೆಚ್ಚು ಆಕರ್ಷಿಸಿದ್ದು ಬುದ್ಧ, ಬಸವ, ಲೋಹಿಯಾ, ಮಾರ್ಕ್ಸ್, ಅಂಬೇಡ್ಕರ್ ಮೊದಲಾದವರ ವಿಚಾರಧಾರೆಗಳು. ಇವರು ಜಾತಿವಿನಾಶ ಅಂತರ್ಜಾತಿ ವಿವಾಹಗಳಿಂದ ಸಾಧ್ಯವೆಂದಿರುವುದು ಯೌವ್ವನದ ಹಂತದಲ್ಲಿ ನನ್ನ ಮನಸ್ಸನ್ನು ನಾಟಿದ್ದು ಸುಳ್ಳಲ್ಲ. ಕನ್ನಡ ಎಂ.ಎ. ಪದವಿಗೆ ಸೇರಿದಾಗ ದಲಿತ-ಬಂಡಾಯ ಸಾಹಿತ್ಯದ ಅಬ್ಬರಕ್ಕೆ ಮನಸೋತು, ಕವಿತೆ ಗೀಚಿ ಕ್ರಾಂತಿ, ಕವಿ, ಸಮಾನತೆ, ಹೋರಾಟ.... ಎಂಬ ಭ್ರಾಂತಿಗೆ ಒಳಗಾಗಿದ್ದೆ.

ನಂತರ ನಾನೇ ಓದಿದ್ದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಪಡೆದೆ. ಆದರೆ ದಲಿತರೊಬ್ಬರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದ ಕಾರಣಕ್ಕಾಗಿ ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಅದರ ನಂತರ ಬೇರೆ ಊರಿಗೆ ಹೋಗಿ ಮೂಲಜಾತಿಯಲ್ಲಿಯೇ ಗುರುತಿಸಿಕೊಂಡು ಪ್ರತಿಭೆ ಮತ್ತು ನಾನು ಗಳಿಸಿದ ಅಂಕಗಳ ಆಧಾರದ ಮೇಲೆ ಕೆಲಸ ಪಡೆದೆ. ಅಲ್ಲಿಯೂ ನನ್ನ ವೈಯಕ್ತಿಕ ಬದುಕು ಗೊತ್ತಾದ ಕೆಲದಿನಗಳಲ್ಲಿಯೇ ಕೆಲಸವನ್ನು ಕಳೆದುಕೊಂಡೆ. ಇನ್ನು ಕೆಲ ಖಾಸಗಿ ಸಂಸ್ಥೆಯಲ್ಲಿಯೂ ಇದೇ ಕಾರಣಕ್ಕಾಗಿ ಅವಕಾಶದಿಂದ ವಂಚಿತಳಾದೆ.

ಸರ್ಕಾರಿ ಕೆಲಸ ಸಿಗದಿದ್ದರೂ ಅಕ್ಷರಸ್ಥರು, ಸುಶಿಕ್ಷಿತರೂ ಎಂಬ ಹಣೆಪಟ್ಟಿ ಹೊತ್ತವರು “ಇನ್ನೇನಪ್ಪ ಗೌರ್ಮೆಂಟ್ ಬ್ರಾಹ್ಮಣತಿ; ನಿನಗೆ ಕೆಲಸ ಗ್ಯಾರಂಟಿ” ಎಂದು ಕುಟುಕುತ್ತಿದ್ದಾಗ ನೋವಾಗುತ್ತಿತ್ತು. ಇನ್ನು ಕೆಲವರು `ನೀನು ಏನು ಪಾಪ ಮಾಡಿದ್ದಿ? ' ಎಂದಾಗ ಪುನರ್ಜನ್ಮದ ಬಗ್ಗೆ ತಲೆಕೆಡಿಸಿ ಕೊಂಡಿದ್ದೇನೆ. “ಬ್ರಾಹ್ಮಣತಿ-ಹೊಲೆಯ ಓ.....ಹೋ.... ಎಂದು ಕೆಲವರು ತಲೆಕೆಡಿಸಿಕೊಂಡು, ಹೇಗೆ ಬದುಕೋದು? ಎಷ್ಟು ದಿನ? ನಾವೂ ನೋಡ್ತೀವಿ” ಎಂದಾಗ ಕೇಳಿಯೂ ಕೇಳದ ಹಾಗೆ ನನ್ನ ಬದುಕನ್ನು ಮತ್ತಷ್ಟು ಗಟ್ಟಿಮಾಡಿಕೊಂಡಿದ್ದೇನೆ. ಕೆಲವರು ನೋಡಿದಾಗಲೆಲ್ಲ ಮೂತಿ ತಿರುವಿದನ್ನು, ಕನಿಕರದಿಂದ ನನ್ನ ನೋಡಿದ್ದನ್ನು, ಪಿಸುಗುಟ್ಟಿ ಕಿಸಕ್ಕನೆ ನಕ್ಕಿದನ್ನು ಕಂಡು ಕಾಣದ ಹಾಗೆ ಮುಂದೆ ಸಾಗಿದ್ದೇನೆ.

ಇವೆಲ್ಲ ಜಾತಿಕಾರಣದಿಂದಾದ ಶೋಷಣೆ, ತಾರತಮ್ಯ ಕ್ರೌರ್ಯ ಅಂಥ ಹೇಳಬಹುದಾದರೂ ಕುಳಿತು ಚಿಂತಿಸಿದಾಗ ಇವೆಲ್ಲ ನನಗೆ ಅತ್ಯುನ್ನತ ಅನುಭವಗಳನ್ನು ಕೊಟ್ಟು ನನ್ನ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಹಾಗೂ ಬದುಕನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿಯನ್ನು ಕರುಣಿಸಿದೆ. ನನ್ನ ಯೌವ್ವನದ ಕ್ರಾಂತಿ ಎಂಬ ಭ್ರಾಂತಿ ಕಳಚಿ ವಾಸ್ತವ ಸ್ಥಿತಿ ಅರಿವಾಗಿದೆ. ಕಹಿಯನ್ನು ಸಹಿಸುವ ಶಕ್ತಿ ಗಳಿಸಿದಂತೆ ಜೀವನ ಮತ್ತಷ್ಟು ಬಲಗೊಳ್ಳುತ್ತದೆ ಅಲ್ಲವೆ?
(ಮೈಸೂರಿನ ಈ ಪತ್ರದ ಲೇಖಕಿಯ ಕೋರಿಕೆ ಮೇರೆಗೆ ಹೆಸರು ಗೌಪ್ಯವಾಗಿ ಇಡಲಾಗಿದೆ)

ನಗರಗಳ್ಲ್ಲಲೇ ಜಾತಿ ಹೆಚ್ಚು
ಕರ್ನಾಟಕದ ನಗರಗಳಲ್ಲಿ ಜಾತಿಯ ಸಮ್ಮೇಳನಗಳು ನಿರಂತರವಾಗಿ ತಮ್ಮದೇ ಆದ ಮಠ ಮಾನ್ಯಗಳ ಕೃಪಾಕಟಾಕ್ಷದಿಂದ ವ್ಯವಸ್ಥಿತವಾಗಿ ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಅಧಿಕಾರ ದಾಹಕ್ಕಾಗಿ ರಾಜಕೀಯ ಪಕ್ಷಗಳು ಸಹ ಪರೋಕ್ಷವಾಗಿ ಪ್ರೊತ್ಸಾಹಿಸುತ್ತಿವೆ. ಇವತ್ತು ನಗರಗಳಲ್ಲಿ ಜಾತಿಗೊಂದರಂತೆ ಮಠಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಸ್ಥೆಗಳು ತಲೆ ಎತ್ತುತ್ತಿವೆ. ಇಷ್ಟೇ ಏಕೆ ಸಹಕಾರ ಸಂಘಗಳು ಸಹ ಜಾತಿ ಆಧಾರಗಳ ಮೇಲೆ ನಡೆಯುತ್ತಿವೆ. ಹೀಗಾಗಿ ನಗರೀಕರಣದಿಂದ ಖಂಡಿತವಾಗಿಯೂ ಜಾತಿ ವಿನಾಶ ಸಾಧ್ಯವಿಲ್ಲ. ಇಂದು ಸರ್ಕಾರಗಳು ಸ್ವಲಾಭಕ್ಕಾಗಿ ಘೋಷಿಸುತ್ತಿರುವ ಆಕರ್ಷಕ ಆರ್ಥಿಕ ಯೋಜನೆಗಳನ್ನು ಪಡೆದುಕೊಳ್ಳಲು ಹೊಸ ಹೊಸ ಜಾತಿಗಳು ಸೃಷ್ಟಿಯಾಗುತ್ತಿರುವುದು ಸುಳ್ಳಲ್ಲ.
- ಡಿ.ಎಸ್.ವೆಂಕಟಾಚಲಪತಿ, ಯಲಹಂಕ

ಐಡೆಂಟಿಟಿ ಕ್ರೈಸಿಸ್
ಬೇರೆ ಬೇರೆ ಭಾಗಗಳಿಂದ ನಗರಗಳಿಗೆ ವಲಸೆ ಬಂದು ನೆಲೆಸುವ ಪ್ರತಿಯೊಬ್ಬರು ಒಂದು ರೀತಿ ಅಭದ್ರತೆಯ ಭಾವನೆಯಲ್ಲಿರುತ್ತಾರೆ. ಹೀಗಾಗಿ ಇಲ್ಲೊಂದು ``ಐಡೆಂಟಿಟಿ'' ಅನಿವಾರ‌್ಯವಾಗಿರುತ್ತದೆ. ಇಂತಹ ಐಡೆಂಟಿಟಿಯ ಭಾಗವಾಗಿಯೆ ಜಾತಿ ಸಂಘಟನೆಗಳು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಜಾತಿ ಅನ್ನೋದು ಒಂದು ``ಐಡೆಂಟಿಟಿ'' ಇದರಿಂದಾಗಿಯೇ  ``ಐಡೆಂಟಿಟಿ ಕ್ರೈಸಿಸ್''. ಹತ್ತು ಜನರ ಮಧ್ಯೆ ನನ್ನದೊಂದು ಬೇರೆ ಜಾತಿಯಾದಾಗ ಅದು `ಐಡೆಂಟೆಟಿ ಕ್ರೈಸಿಸ್'ಗೆ ದಾರಿ ಮಾಡಿಕೊಡುತ್ತದೆ.  ಅದೇ ಹತ್ತರಲ್ಲಿ ನನ್ನ ಜಾತಿಯವರೇ ಪ್ರಧಾನವಾಗಿ ಎದ್ದು ಕಂಡರೆ ಅದು ನನ್ನ ಎಲ್ಲಾ ದೌರ್ಬಲ್ಯಗಳಿಗೂ ಉತ್ತರವೆಂಬಂತೆ ಐಡೆಂಟಿಟಿ ಆಗಿಬಿಡುತ್ತದೆ. ಹೀಗಾಗಿಯೇ `ಐಡೆಂಟಿಟಿ ಕ್ರೈಸಿಸ್'ನಿಂದ ಹೊರಬರಲು ಜಾತಿಯೆ `ಐಡೆಂಟಿಟಿ'ಯಾಗುತ್ತಿದೆ.

ನಗರೀಕರಣದ ಪ್ರಭಾವದಿಂದ ಬ್ರಾಹ್ಮಣರಿಂದ ದಲಿತರ ವರೆಗೆ ಎಲ್ಲರಿಗೂ ಜಾತಿ ಒಂದು ``ಐಡೆಂಟಿಟಿ'' ಅದರ ಜೊತೆಗೆ ``ಐಡೆಂಟಿಟಿ ಕ್ರೈಸಿಸ್'' ಎರಡನ್ನೂ ತಂದು ಕೊಟ್ಟಿದೆ. ಅದಕ್ಕೆ ಜಾತಿ  ``ಐಡೆಂಟಿಟಿ ಕ್ರೈಸಿಸ್'' ಎದುರಾದಾಗ ನಾವು ಜಾತಿಯೊಂದು ರೋಗ ಅಂತೀವಿ. ಅದೇ ``ಐಡೆಂಟಿಟಿ'' ಆದಾಗ ಏಕರಾಗದಲ್ಲಿ ಅದನ ಸಮರ್ಥಿಸಿ ಜಾತಿ ಸಮಾವೇಶಗಳನ್ನು ಮಾಡಿ ಮೆರೆಯುತ್ತೇವೆ. ಇಂತಹ `ಐಡೆಂಟಿಟಿ'ಗಾಗಿಯೆ ಅನ್ಯಮತಕ್ಕೆ ವಿಶೇಷವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರೂ ಅಲ್ಲಿ ಅದೇ ಜಾತಿಯ ಜೊತೆಗೆ `ದಲಿತ ಕ್ರೈಸ್ತರು, ರೆಡ್ಡಿ ಕ್ರೈಸ್ತರು' ಅಂತ ಧರ್ಮದ ಜೊತೆಗೆ ಜಾತಿಯನ್ನು ಸಮೀಕರಿಸಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಅಮೆರಿಕಾದಿಂದ ಬಂದು ಸ್ವಜಾತಿ ಹುಡುಗಿಯನ್ನೇ ಹುಡುಗ ಯಾಕೆ ಮದುವೆಯಾಗುತ್ತಾನೆ? ವಿದೇಶಗಳಲ್ಲೂ ಯಾಕೇ ಜಾತಿ ಸಂಘಟನೆಗಳಿವೆ? ಅದು ತಪ್ಪು ಅನ್ನೋದು ನನ್ನ ಭಾವನೆ ಕೂಡ ಅಲ್ಲ. ಅದು ಕೂಡ ``ಐಡೆಂಟಿಟಿ'' ಆಗಿ ಅಲ್ಲಿ ಕೆಲಸ ಮಾಡುತ್ತದೆ. ನನ್ನ ಊರಲ್ಲದ ಊರಿನಲ್ಲಿ ನನ್ನ (ವ್ಯಕ್ತಿಯೊಬ್ಬನ) ವಿಶ್ವಾಸಕ್ಕೆ ನಾಲ್ಕು ಜನ ಬೇಕು ಅಂದಾಗ ನಮ್ಮ ಕಡೆಯವರು , ನಮ್ಮ ಭಾಷಿಕರು, ನಮ್ಮ ಜಾತಿಯವರು ಹೀಗೆ ಮೂರು ವರ್ಗಗಳ ಜನ ಸಿಗುತ್ತಾರೆ, ಇದರಲ್ಲಿ ನಮಗೆ ಹೆಚ್ಚಿನ ವಿಶ್ವಾಸ ಮೂಡಿಸೋದು ನಮ್ಮ ಜಾತಿಯವರು.  ಹೀಗೆ ಎಲ್ಲಾ ಹಂತದಲ್ಲೂ ಜಾತಿಗೊಂದಿಗೆ ಹೆಜ್ಜೆ ಹಾಕುವ ನಾವುಗಳು ಅದರಿಂದ ದೂರವಾಗಿ ಬದುಕುಬಹುದು ಅನ್ನೋದು ಮಾತಿನಲ್ಲಿ ಹೇಳಿದಷ್ಟು ಸುಲಭವಾಗಿ ಆಚರಣೆಗೆ ತರಲು ಸಾಧ್ಯವಾಗದ ಮಾತು.
- ರವೀಂದ್ರ ಕೊಟಕಿ, ಬೆಂಗಳೂರು

`ಮುಸಲ್ಮಾನರಿಗೆ ಕೆಲಸ ಇಲ್ಲ'
ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಯಡಿಯೂರು ಕೆರೆಯ ಹತ್ತಿರ ಒಂದು ಮೆಡಿಕಲ್ ಕಂಪೆನಿಗೆ ನಾನು ಮತ್ತು ನನ್ನ ಸ್ನೇಹಿತ ಹೋಗಿದ್ದೆವು. ಅಲ್ಲಿನ ನೋಟಿಸ್ ಬೋರ್ಡ್ ನೋಡಿ ಬೇಸರವಾಯಿತು, ಕೋಪವೂ ಬಂತು. ಅಲ್ಲಿ “ಮುಸಲ್ಮಾನರಿಗೆ ಕೆಲಸವಿಲ್ಲ.“ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು. ಬಹುಷ: ಮುಸಲ್ಮಾನರೆಲ್ಲಾ ಭಯೋತ್ಪಾ ದಕರು ಎಂಬ ಭಾವನೆ ಆ ಕಂಪೆನಿ ಮಾಲೀಕರಿ ಗಿರಬಹುದು.`ಪ್ರತಿಭೆ ಇದ್ದರೆ ಸಾಕು ನಾವು ಜಾತಿ ಯನ್ನು ಪರಿಗಣಿಸುವುದೇ ಇಲ್ಲ' ಎಂಬ ಭಾರತದ ಪ್ರಮುಖವಾಗಿ ಮೇಲ್ಜಾತಿಯ ಜನರೇ ಇರುವ ಖಾಸಗಿ ಉದ್ಯಮಪತಿಗಳ ವಾದವೂ ಎಷ್ಟು ಸುಳ್ಳೆಂಬುದನ್ನು ಯುಜಿಸಿ ಅಧ್ಯಕ್ಷರಾಗಿದ್ದ ಪ್ರೊ. ಸುಖದೇವ್ ಥೋರಟ್ ಸಾಬೀತು ಪಡಿಸಿದ್ದಾರೆ.

2005ರಲ್ಲಿ ಅವರು ದೇಶದ 500 ಉದ್ಯಮಪತಿಗಳಿಗೆ ಸಮಾನ ವಿದ್ಯಾರ್ಹತೆ ಹೊಂದಿದ್ದ ಒಬ್ಬೊಬ್ಬ ದಲಿತ, ಹಿಂದುಳಿದ ಜಾತಿ, ಮುಸ್ಲಿಮ್ ಮತ್ತು ಬ್ರಾಹ್ಮಣ ಅಭ್ಯರ್ಥಿಗಳ ಹುಸಿ ಅರ್ಜಿಗಳನ್ನು ಕಳಿಸಿದ್ದರು. ಪ್ರತಿಭೆಯೇ ಮುಖ್ಯ ವಾಗಿದ್ದರೆ ಜಾತಿ ಭೇದವಿಲ್ಲದೆ ಎಲ್ಲರಿಗೂ ಸಂದರ್ಶನದ ಕರೆ ಬರಬೇಕಿತ್ತು. ಆದರೆ ಆದದ್ದೇನು? ಬ್ರಾಹ್ಮಣ ಹೆಸರಿನ ಅಭ್ಯರ್ಥಿಗಳಿಗೆ ಎಲ್ಲಾ ಉದ್ಯಮಿಗಳಿಂದ ಕರೆ ಬಂದಿದ್ದರೆ ದಲಿತರಿಗೆ ಶೇ.30ರಷ್ಟು ಕರೆಗಳು ಮತ್ತು ಮುಸ್ಲಿಮ್ ಅಭ್ಯರ್ಥಿಗಳಿಗೆ ಕೇವಲ ಶೇ.10ರಷ್ಟು ಕರೆಗಳು ಬಂದಿದ್ದವು. ಇದು ಪ್ರತಿಭೆ ಮತ್ತು ಅರ್ಹತೆ ಇದ್ದರೂ ಜಾತಿಪೂರ್ವಗ್ರಹವು ಹೇಗೆ ದಲಿತರನ್ನು ಮತ್ತು ಇತರ ಹಿಂದುಳಿದವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತದೆ ಎಂಬುದಕ್ಕೆ ಸಾಕ್ಷಿ.
- ಜಬೀವುಲ್ಲಾ ಖಾನ್, ಬೆಂಗಳೂರು

ಹಳ್ಳಿಗಿಂತ ನಗರದೇವರು ವಾಸಿ

ನಗರದಲ್ಲಿ ನಡೆಯುವ ಜಾತಿ ಸಮಾವೇಶಗಳು, ಜಾತಿ ಸಂಘಟನೆಗಳು, ಜಾತಿಯನ್ನು ಮತ್ತಷ್ಟು ಪೋಷಿಸುತ್ತಿವೆ. ಅಂತರ್ಜಾತಿ ವಿವಾಹ ಸಮಾವೇಶಗಳು ದೊಡ್ಡ ಮಟ್ಟದಲ್ಲಿ ನಡೆದರೆ ಜಾತಿ ವಿನಾಶ ಕಡಿಮೆಯಾಗಬಹುದು. ಬಾಡಿಗೆ ಮನೆಯಲ್ಲಿ ವಾಸಿಸುವ ದಲಿತರು ಅಂಬೇಡ್ಕರ್ ಫೋಟೋವನ್ನು ಧೈರ್ಯವಾಗಿ ಹಾಕಲಾರದ ಸ್ಥಿತಿ ಯಲ್ಲಿದ್ದಾರೆ, ಕಾರಣ ಮನೆಗೆ ಬರುವಾಗಲೇ ಒಕ್ಕಲಿಗ ನೆಂತಲೋ, ಕುರುಬನೆಂತಲೋ, ಈಡಿಗನೆಂತಲೋ ಹೇಳಿ ಕೊಂಡಿರುತ್ತಾರೆ. ಹಾಗಾಗಿ ತಮ್ಮ ಮೂಲಜಾತಿಯ ಆಚಾರ, ಸಂಪ್ರದಾಯಗಳನ್ನು ಕೂಡಾ ಕದ್ದುಮುಚ್ಚಿ ಆಚರಿಸ ಬೇಕಾಗುತ್ತದೆ. ಇಷ್ಟಾಗಿಯೂ ಜಾತಿಯ ವಿಷಯ ಬಂದರೆ ಹಳ್ಳಿಗಿಂತ ನಗರ ಮೇಲು. ಕಾರಣ ದೇವಸ್ಥಾನದ ಮುಕ್ತ ಪ್ರವೇಶ, ಹೋಟೆಲ್‌ನಲ್ಲಿ ಭೇದ ಇಲ್ಲದೆ ಎಲ್ಲರೂ ಜೊತೆಯಾಗುವುದು. ಇದರಿಂದ ನಗರದಲ್ಲಿ ಶ್ರೀಮಂತರ ದೇವರುಗಳು ಇದ್ದರೂ ಎಲ್ಲರನ್ನು ಮುಕ್ತವಾಗಿ ಆಹ್ವಾನಿ ಸುತ್ತವೆ. ಹಳ್ಳಿಯ ಬಡದೇವರುಗಳು, ಮಂಟಪಗಳಲ್ಲಿ, ಕಲ್ಲು ಗೋಪುರಗಳಲ್ಲಿ ವಾಸ ಮಾಡುತ್ತಿದ್ದರೂ ದಲಿತರಿಗೆ ಮುಕ್ತ ಪ್ರವೇಶ ಮಾಡದೇ ಇರುವುದು ವಿಪರ್ಯಾಸ.
ಡಾ. ಬ್ಯಾಡರಹಳ್ಳಿ ಶಿವರಾಜ, ಹುಲಿಯೂರು ದುರ್ಗ, ಕುಣಿಗಲ್.

ಗಿಡಮರಗಳಿಗೂ ಅಸ್ಪೃಶ್ಯತೆ?

ನಗರಗಳಲ್ಲಿಯೂ ಸಹ ಜಾತಿ ಸಂಪೂರ್ಣವಾಗಿ ನಾಶ ವಾಗಿಲ್ಲವೆಂಬುದಕ್ಕೆ ಸ್ವಂತ ಅನುಭವಿಸಿದ ಘಟನೆ ಯೊಂದನ್ನು ಉಲ್ಲೇಖಿಸುತ್ತೇನೆ. ನಾನು ತುಮಕೂರು ನಗರದಲ್ಲಿ ವಿದ್ಯಾ ಭ್ಯಾಸಕ್ಕಾಗಿ ಬಂದು ಮೇಲ್ವರ್ಗದವರೇ ಹೆಚ್ಚಾಗಿರುವ ಪ್ರದೇಶ ದಲ್ಲಿ ಬಾಡಿಗೆ ಕೋಣೆಯೊಂದರಲ್ಲಿದ್ದಾಗ ಘಟಿಸಿದ ಸಂದರ್ಭ.

ಬೀದಿ ಕೊಳಾಯಿನಲ್ಲಿ ನೀರು ಹಿಡಿಯಬೇಕಾಗಿತ್ತು. ಒಂದು ತುಂಬಿದ ಬಿಂದಿಗೆ ಇತ್ತು. ಅದನ್ನೆತ್ತಿ ಪಕ್ಕಕ್ಕೆ ಇಟ್ಟು ನಾನು ನೀರನ್ನು ತುಂಬಿಸಿಕೊಳ್ಳುತ್ತಿದ್ದೆ. ಒಬ್ಬ ಮಹಿಳೆ ಬಂದು ಬಿಂದಿಗೆ ಬದಲಾದ ಜಾಗದಲ್ಲಿದ್ದುದನ್ನು ಕಂಡು ಎಂತಹ ಕೋಪವಿತ್ತೋ ಏನೋ ನೀರನ್ನು ಕೊಡದಿಂದ ಒಂದೇ ಸಮನೆ ಸುರಿದು ಮತ್ತೊಮ್ಮೆ ನೀರಿನಿಂದ ಶುದ್ಧಿ ಮಾಡಿ ಮನೆಗೆ ತೆಗೆದುಕೊಂಡು ಹೋದರು. ನನಗೆ ತಡೆಯಲಾರದ ಅವಮಾನ, ಅಳುವೆಂಬುದು ತಡೆಯಲಾಗಲಿಲ್ಲ. ಬಿಕ್ಕಿ ಬಿಕ್ಕಿ ರೂಂ ಗೆ ಹೋಗಿ ಸ್ನೇಹಿತನಿಗೆ ವಿವರವಾಗಿ ಹೇಳಿದೆ. ತಪ್ಪು ನಿನ್ನದಲ್ಲ, ನಿನ್ನ ಜಾತಿಯದು ಎಂದು ಅವನು ಹೇಳಿದ. `ನೀರ‌್ಯಾಕೆ ಚೆಲ್ಲಬೇಕಿತ್ತು? ಒಂದು ಗಿಡಕ್ಕಾದರೂ ಹಾಕಬಹುದಿತ್ತಲ್ಲ? ನಾವು ಮುಟ್ಟಿದ್ದು ಗಿಡಕ್ಕೂ ಹಾಕಬಾರದೇ?' ಎಂದು ನಾನು ಕೇಳಿದೆ. ಅವನಲ್ಲಿಯೂ ಉತ್ತರ ಇಲ್ಲ.
- ಮಿಡಿಗೇಶಿ ಶಿವರಾಮ, ಬೆಂಗಳೂರು

ಅಂತರಂಗದ ಕತ್ತಲೆ

ಹುಟ್ಟಿನಿಂದಲೇ ಬೇತಾಳನಾಗಿ ಬೆನ್ನತ್ತಿರುವ ಜಾತಿ, ನಗರಗಳಿಗೆ ಬಂದ ತಕ್ಷಣ ನಾಶವಾಗುತ್ತದೆನ್ನುವುದು ಬರೀ ಭ್ರಮೆಯಷ್ಟೇ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನಗರಗಳಿಗೆ ಬರುವವರನ್ನು ಬೇರೆಬೇರೆ ರೂಪಗಳಲ್ಲಿ ಜಾತಿ ಕಾಡುತ್ತಿರುತ್ತವೆ. ಅಧಿಕಾರದ ಹುದ್ದೆಗಳಲ್ಲಿ ಬೇರೆ ಬಲಿಷ್ಠ ಜಾತಿಗಳ ಜನ ಇರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹುಟ್ಟಿನಿಂದಲೇ ಜಾತಿಸೂಚಕ ಹೆಸರುಗಳನ್ನಿಡುವುದು ಮೇಲ್ಜಾ ತಿಗಳಲ್ಲಿ ಸರ್ವೇಸಾಮಾನ್ಯ ಅವರ ಹೆಸರಿನ ಜೊತೆಯಲ್ಲಿಯೇ ಜಾತಿಯೂ ಅಂಟಿಕೊಂಡಿರುತ್ತದೆ. ಶ್ರೀನಿವಾಸಗೌಡ ಎಂಬ ಹೆಸರಿನ ಅಧಿಕಾರಿಗೆ ಅವರ ಕೈ ಕೆಳಗೆ ಕೆಲಸ ಮಾಡುವ ಮತ್ತೊಬ್ಬ ಮಂಜುನಾಥಗೌಡ ಪರಿಚಯವೇ ಆಗಬೇಕಿಲ್ಲ. ಹಾಗೇನೇ ವಿಷ್ಣು ಭಟ್ಟರಿಗೆ, ಮಂಜು ಭಟ್ಟರು ಅಷ್ಟೇನೂ ದೂರದವನಾಗಿರಲಾರ. ಆದುದರಿಂದ ಅಲ್ಲಿ ಕೆಲಸ ಮಾಡುವ ಸಲುವಾಗಿಯೇ, ಆಯಾಚಿತವಾಗಿ ಹಾಗೂ ಪ್ರಜಾಸತ್ತಾತ್ಮಕ ವಾಗಿ ದೊರಕುವ ಹಲವಾರು ಸೌಲಭ್ಯಗಳು, ಅವಕಾಶಗಳು ಕೆಲವರಿಗೆ ಜಾತಿ ಕಾರಣವಾಗಿಯೇ ವಂಚಿತವಾಗುವುದು. ಮತ್ತೊಬ್ಬರಿಗೆ ಅದರಿಂದ ಅನುಕೂಲವಾಗುವುದನ್ನು ಕಂಡಿದ್ದೇನೆ.

ಜಾತಿ ಸೂಚಕ ವಾಡಿಕೆಗಳು, ಆಚರಣೆಗಳು ಇಂದು ಗ್ರಾಮಗಳಿಗಿಂತ ನಗರಗಳಲ್ಲೇ ಹೆಚ್ಚು ಢಾಳಾಗಿ ಅಸಹ್ಯಕರವಾಗಿ ರೂಢಿಯಲ್ಲಿರುತ್ತದೆ. ಜಾತಿ ಸಂಪ್ರದಾಯಗಳನ್ನೇ ಬಹಳ ದೊಡ್ಡ ಸಾಂಸ್ಕೃತಿಕ ಮೌಲ್ಯಗಳೆಂದು ಸಾರುವ ಆಧುನಿಕ ಗುರುಗಳು, ಆಧ್ಯಾತ್ಮಿಕ ಚಿಂತಕರು, ಜಾತಿಯ ಹೆಸರನ್ನು ಹೇಳದೆ ಅದೇ ಕಂದಾಚಾರಗಳನ್ನು, ಮೌಢ್ಯದ ವ್ಯರ್ಥ ಆಚರಣೆಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುತ್ತಾರೆ. ಆದುದರಿಂದ ಜಾತಿ ವಿನಾಶ ನಗರೀಕರಣದಿಂದ ಮಾತ್ರ ಸಾಧ್ಯ ಎನ್ನುವುದು ಒಂದು ಮರೀಚಿಕೆಯಷ್ಟೇ.
ನಾಡಿನ ಖ್ಯಾತ ಬರಹಗಾರರಾದ ದೇವನೂರು ಮಹದೇವರವರು ಬರೆದಿರುವಂತೆ `ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ; ಹೋಟೆಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ; ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ; ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ, ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು, ಅಂತರಂಗ ಕತ್ತಲಲ್ಲೇ ಇದೆ.'
ದೇವರಾಜ್ ಎನ್., ಬೆಂಗಳೂರು.

ಜಾತಿ ಪದ್ಧತಿ ದೂರವಾಗುತ್ತಿದೆ

ಇತ್ತೀಚಿನ ವರ್ಷಗಳಲ್ಲಿ ಜಾತಿ ಪದ್ಧತಿಯು ನಿಧಾನವಾಗಿ ದೂರ ಸರಿಯಲಾರಂಭಿಸಿದೆ. ಹುಡುಗ, ಹುಡುಗಿಯರು ಹೆಚ್ಚು ಹೆಚ್ಚು ಕಲಿತು ವಿದ್ಯಾವಂತರಾಗುವುದು, ಜೊತೆಯಲ್ಲೇ ನೌಕರಿ ಮಾಡುವುದು, ನಗರಕ್ಕೆ ಬಂದು ಸೇರುವುದು, ದೂರದೂರಿನಲ್ಲಿ ಕುಟುಂಬದವರಿಂದ ಪ್ರತ್ಯೇಕವಾಗಿ ಒಬ್ಬಂಟಿತನದ ಕಾಡುವುದು ಇವೆಲ್ಲ ಯುವ ಜನರಿಗೆ ಅಂತರ್ಜಾತಿಯ ವಿವಾಹಗಳಿಗೆ ಪ್ರೇರೇಪಣೆ ನೀಡುತ್ತವೆ.
ಇರುವುದೇ ಒಂದಿಬ್ಬರು ಮಕ್ಕಳು, ಎಲ್ಲಿಯಾದರೂ ಸುಖವಾಗಿರಲಿ ಎಂದು ಹೆತ್ತವರು ಕೂಡ ಇಂತಹ ವಿವಾಹಗಳಿಗೆ ತಮ್ಮ ಒಪ್ಪಿಗೆ ನೀಡಿ ಮದುವೆ ಮಾಡಿಸುವುದು ಸಾಮಾನ್ಯವಾಗಿದೆ. ಈ ಹಿಂದಿನಷ್ಟು ವಿರೋಧ ಯಾರಿಂದಲೂ ಅಷ್ಟೊಂದಾಗಿ ಕಂಡುಬರುತ್ತಿಲ್ಲ.

ನಾವು ಹುಟ್ಟಿದ ಜಾತಿಯ ಬಗ್ಗೆ ನಮ್ಮೆಲ್ಲರಿಗೂ ಅಭಿಮಾನ ಇದ್ದೇ ಇರುತ್ತದೆ. ನಮ್ಮ ಜಾತಿಯವರ ಆಚರಣೆಯಲ್ಲಿ ಆಕ್ಷೇಪಣೆ ಇದ್ದರೆ ಅದಕ್ಕಾಗಿ ಸಂಬಂಧಪಟ್ಟ ಜನರನ್ನು ದೂಷಿಸಬೇಕು, ಇಡೀ ಜಾತಿಯನ್ನು ಬೊಟ್ಟು ಮಾಡಿ ತೋರಿಸುವುದರಲ್ಲಿ ಅರ್ಥವಿಲ್ಲ. ಜಾತಿ ಪದ್ಧತಿಯು ವೈಯುಕ್ತಿಕ ನಂಬಿಕೆ, ಆಚರಣೆ. ಸಾರ್ವಜನಿಕವಾಗಿ ಇದನ್ನು ಪ್ರದರ್ಶಿಸುವ ಅಗತ್ಯವಂತೂ ಖಂಡಿತ ಇಲ್ಲ. ನಮ್ಮ ತಂದೆಯವರು ನಮ್ಮನ್ನೆಲ್ಲ ಶಾಲೆಗೆ ಸೇರಿಸುವಾಗ ಜಾತಿಯ ಹೆಸರು ಬರುವ ಅಡ್ಡ ಹೆಸರನ್ನು ಹೆಸರಿನ ಜೊತೆಗೆ ಸೇರಿಸದಿದ್ದುದಕ್ಕಾಗಿ ನಾವೆಲ್ಲರೂ ಅವರಿಗೆ ಚಿರಋಣಿ.
ಬಿ.ಎನ್. ಭರತ, ಹುಬ್ಬಳ್ಳಿ.


ಬಾಡಿಗೆ ಮನೆಗೂ ಜಾತಿ
ನಾವು ಜಾತಿಯಲ್ಲಿ ಪರಿಶಿಷ್ಟರಾಗಿದ್ದು, ತುಮಕೂರಿನಲ್ಲಿ ನಮ್ಮ ತಂದೆ ತಾಯಿ ವಾಸವಾಗಿದ್ದಾರೆ. ನಮ್ಮ ಮನೆಯೊಂದು ಖಾಲಿ ಬಿದ್ದು ತಿಂಗಳುಗಳೇ ಕಳೆದಿತ್ತು, ಮನೆ ಹುಡುಕಿಕೊಂಡು ಬಂದವರು  ಗೋಡೆಯ ಮೇಲೆ ನೇತಾಡುತಿದ್ದ ``ಗುಬ್ಬಿ  ಚನ್ನಬಸವೇಶ್ವರಸ್ವಾಮಿ'' ಪೋಟೊ ನೋಡಿ ಏನೋ ಲೆಕ್ಕ ಹಾಕಿ ಒಪ್ಪಿಕೊಂಡು ಹೋದರು.ಅದೇ ಭಾನುವಾರ ರಜೆ ನಿಮಿತ್ತ ನಾನು ಊರಿಗೆ ಹೋಗಿದ್ದವನು ಸ್ನೇಹಿತರು ಕೊಟ್ಟಿದ್ದ  ಅಂಬೇಡ್ಕರ್ ಭಾವಚಿತ್ರವನ್ನು ಮನೆಯಲ್ಲಿ ತೂಗುಹಾಕಿ ಬಂದಿದ್ದೆ.ಮರುದಿನ ಬಾಡಿಗೆದಾರರು ತನ್ನ ಕುಟುಂಬವರ್ಗದವರಿಗೆ ಬಾಡಿಗೆ ಮನೆ ತೋರಿಸಲು ಬಂದಿದ್ದಾರೆ. ಈ ವೇಳೆ ಅಂಬೇಡ್ಕರ್ ಭಾವಚಿತ್ರವನ್ನು ನೋಡಿ ಗಾಬರಿಯಾಗಿದ್ದಾರೆ, ಕುಡಿಯಲು ಎತ್ತಿದ ನೀರಿನ ತಂಬಿಗೆಯನ್ನು ಕೆಳಗಿಳಿಸಿದ್ದಾರೆ. ಒಂದು ಕ್ಷಣ ವಿಚಲಿತರಾಗಿ ಅಲ್ಲಿಂದ ಪಲಾಯನ ಮಾಡಿದ್ದಾರೆ.

ಇದೆ ರೀತಿಯ ಇನ್ನೊಂದು ಉದಾಹರಣೆ ನೀಡುವುದಾದರೆ, ನಾನು ಬೆಂಗಳೂರಿನಲ್ಲಿ ವಾಸ ಮಾಡಲು ಮನೆ ಹುಡುಕುವಾಗ ಜಾತಿ ಪೆಡಂಭೂತ ಕಾಡಿದ ರೀತಿ ಹೇಳಲು ಅಸಾಧ್ಯವಾದದ್ದು. ಬಾಡಿಗೆ ಮನೆ ಎಲ್ಲೂ ಸಿಗಲಿಲ್ಲ. ಕೊನೆಗೆ ನನ್ನ ಸ್ನೇಹಿತ (ಅವನು ಪರಿಶಿಷ್ಟ) ತಾವು ಗೌಡರೆಂದು ಸುಳ್ಳು ಹೇಳಿ ಮನೆ ಕೊಡಿಸಿದ್ದ. ಆದರೆ ಇದು ನನಗೆ ತಿಳಿದಿರಲಿಲ್ಲ. ಮನೆಯ ಗೋಡೆಗೆ ಅಂಬೇಡ್ಕರ್ ಪೋಟೊ ಹಾಕುವಾಗ ಅದನ್ನು ತಡೆಯುತಿದ್ದ, ಕೊನೆಗೆ ಅವನಿಗೆ ಬೈದು ಪೋಟೊ ಹಾಕಿದೆ. ಅಷ್ಟರಲ್ಲಿ ಮನೆಯೊಳಗೆ ಪ್ರವೇಶಿಸಿದ ಮನೆಯ ಮಾಲಿಕರು ಪೋಟೊ ನೋಡಿ ನಾನು ದಲಿತನೆಂದು ಕ್ಷಣಾರ್ಧದಲ್ಲಿ ಅವರಿಗೆ ತಿಳಿದು ಬಿಟ್ಟಿತು. ನಂತರ ನನ್ನ ಮನೆಯಿಂದ ಹೊರಹಾಕಲು ಅನೇಕ ಸಂಚು ಹೂಡಿದ್ದರು. ಇದ್ದಕಿದ್ದ ಹಾಗೆ ಮನೆ ಬಾಡಿಗೆ ಹೆಚ್ಚಿಸಿದರು. ಅನೇಕ ನಿಯಮಗಳನ್ನು ಹಾಕಿದರು. ಇದರ ಹಿಂದಿನ ಸತ್ಯ ಏನೆಂದು ಗೊತ್ತಾದ ಮೇಲೆ ಬಹಳ ಬೇಸರವಾಗಿತ್ತು. ಬೆಂಗಳೂರು ಎಂಬ ಮಾಯ ನಗರಿಯಲ್ಲೂ ಜಾತಿ ತಾಂಡವವಾಡುತ್ತಿರುವುದು ನೋವನ್ನು ತಂದಿತ್ತು. ಮನುಷ್ಯ ಸತ್ತರು ಅವನ ಜಾತಿ ಸಾಯುವುದಿಲ್ಲ.
- ವಿಜಯ ಕುಮಾರ್, ಕೆ.ಟಿ, ಬೆಂಗಳೂರು

ಸಂವಾದಕ್ಕೆ ಆಹ್ವಾನ
ಜಾತಿ ಸಂವಾದದ ಮಾಲಿಕೆಯಲ್ಲಿ ಓದುಗರು ಮುಕ್ತವಾಗಿ ಭಾಗವಹಿಸಬಹುದು. ಇಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆಗಳ ಮೂಲಕವೇ ಚರ್ಚೆಯನ್ನು ಬೆಳೆಸಿಕೊಂಡು ಹೋಗುವುದು ನಮ್ಮ ಉದ್ದೇಶ. ನಗರಪ್ರದೇಶಗಳ ್ಲಜಾತೀಯತೆ ಬಗ್ಗೆ ಕಳೆದ ಬಾರಿ ನಾವು ಕೇಳಿದ್ದ ಪ್ರಶ್ನೆಗೆ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ನಗರ ಜೀವನದ ಮತ್ತೊಂದು ಆಯಾಮಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆ.

- ಮದುವೆ, ಮುಂಜಿ, ತಿಥಿ ಅಥವಾ ಮನೆಯಲ್ಲಿ ಒಂದು ಸಮಾರಂಭದಂತೆ ನಡೆಯುವ ಪೂಜೆ ಇತ್ಯಾದಿಗಳಲ್ಲಿ ಜಾತಿ ಬದ್ಧವಾದ ಆಚರಣೆಗಳಿರುತ್ತವೆ. ಇಂಥವುಗಳಿಗೆ ನೀವು ನಿಮ್ಮದಲ್ಲದ ಜಾತಿಯವರನ್ನು ಆಹ್ವಾನಿಸುತ್ತೀರಾ? ಹಾಗೆಯೇ ನಿಮ್ಮದಲ್ಲದ ಜಾತಿಯವರ ಇಂಥ ಸಮಾರಂಭಗಳಲ್ಲಿ ಭಾಗವಹಿಸಿದ್ದೀರಾ? ಈ ಪ್ರಶ್ನೆಗೆ ಉತ್ತರಿಸುವಾಗ ಆಚರಣಾತ್ಮಕ ಕ್ರಿಯೆಗಳಿಲ್ಲದ ಎಲ್ಲರೂ ಭಾಗವಹಿಸುವ ಆರತಕ್ಷತೆಯಂಥ ಸಮಾರಂಭಗಳನ್ನು ಪರಿಗಣಿಸಬೇಡಿ.

- ನೀವು ಎಲೆಕ್ಟ್ರಿಷಿಯನ್, ಪ್ಲಂಬರ್, ಬಡಗಿ ಅಥವಾ ಇದೇ ಬಗೆಯ ಯಾವುದಾದರೂ ವೃತ್ತಿಯವರಾಗಿದ್ದರೆ ನೀವು ಕೆಲಸ ಮಾಡಲು ಹೋಗುವ ಮನೆಯವರು ನಿಮ್ಮ ಜಾತಿ ಯಾವುದೆಂದು ಅರಿತು ನಿಮ್ಮನ್ನು ನಡೆಸಿಕೊಳ್ಳುವ ವಿಧಾನ ಬದಲಾಗುತ್ತದೆ ಎಂದು ಅನ್ನಿಸಿದೆಯೇ? ಈ ವೃತ್ತಿಯಲ್ಲಿ ಇಲ್ಲದವರಾಗಿದ್ದರೆ ಇಂಥ ವೃತ್ತಿಯವರು ನಿಮ್ಮ ಮನೆಯ ಕೆಲಸಕ್ಕೆ ಬಂದಾಗ ಅವರ ಜಾತಿ ಯಾವುದಾದರೂ ಕಾರಣಕ್ಕೆ ನಿಮಗೆ ಮುಖ್ಯವೆನಿಸಿದೆಯೇ?

ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ ಡಿಸೆಂಬರ್ 21ರ ಒಳಗೆ ಕಳುಹಿಸಬಹುದು. 
ವಿಳಾಸ: `ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001'

ಇಮೇಲ್: jathisamvada@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT