ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸ್ಥಳೀಯ ಸಂಸ್ಥೆಗಳಿಗೆ ಗಡುವು

ಫೆ. 28ರ ಒಳಗೆ ಕೆಲಸ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
Last Updated 12 ಡಿಸೆಂಬರ್ 2012, 8:06 IST
ಅಕ್ಷರ ಗಾತ್ರ

ಶಿವಮೊಗ್ಗ:ನಗರ ಸ್ಥಳೀಯ ಸಂಸ್ಥೆಗಳು ಅನುಮೋದನೆ ಪಡೆದಿರುವ ಕ್ರಿಯಾ ಯೋಜನೆಗಳಿಗೆ ಸಂಬಂಧಿಸಿದಂತೆ ಫೆ. 28ರ ಒಳಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಹಾಗೂ ಆಯುಕ್ತರಿಗೆ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಗಡುವು ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಹಣ ಬಿಡುಗಡೆ ಆದ ನಂತರವೂ ಅಭಿವೃದ್ಧಿ ಕೆಲಸಗಳು ಬಾಕಿ ಉಳಿಸಿಕೊಳ್ಳುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ 2012-13ನೇ ಆರ್ಥಿಕ ವರ್ಷ ಅಂತ್ಯವಾಗುವ ಮುನ್ನ ಫೆ. 28ರ ಒಳಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜನರಿಗೆ ಉತ್ತಮ ಸೌಲಭ್ಯ ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರ ಕ್ರಿಯಾ ಯೋಜನೆಗೆ ತಕ್ಕಂತೆ ಹಣ ಬಿಡುಗಡೆ ಮಾಡಿರುತ್ತದೆ. ಆದಾಗ್ಯೂ ಪ್ರಗತಿ ಕೆಲಸಗಳನ್ನು ಬಾಕಿ ಉಳಿಸಿಕೊಂಡರೆ ಅಧಿಕಾರಿಗಳ ನಿರಾಸಕ್ತಿಯನ್ನು ತೋರಿದಂತಾಗುತ್ತದೆ. ಅಂತಹ ಪ್ರಕರಣಗಳು ಫೆ. 28ರ ಬಳಿಕ ಕಂಡು ಬಂದರೆ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಯೋಜನೆ ರೂಪಿಸುವ ಸಂಬಂಧ ತಕ್ಷಣ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕೆಲಸ ಆರಂಭಿಸಬೇಕು. ಕನಿಷ್ಠ ವಾರಕ್ಕೊಮ್ಮೆ ಎಲ್ಲಾ ಪ್ರಗತಿ ಕಾರ್ಯಗಳ ಬಗ್ಗೆ ಸಭೆ ನಡೆಸಿ, ಯಾವುದೇ ಬಾಕಿ ಇಲ್ಲದಂತೆ ಗಮನ ಹರಿಸಬೇಕು  ಎಂದರು.

ನಗರ  ಸೌಂದರೀಕರಣಕ್ಕೆ ಅಗತ್ಯ ಇರುವ ಎಲ್ಲ  ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದ ಅವರು, ತಮ್ಮ ತಮ್ಮ ನಗರ-ಪಟ್ಟಣಗಳಲ್ಲಿ ಪಾರ್ಕ್, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಸಾಂಸ್ಕೃತಿಕ ಭವನ, ಕಟ್ಟಡ ಮತ್ತಿತರ ಅಭಿವೃದ್ಧಿ ಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ಬಜೆಟ್‌ನೊಂದಿಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿಕೊಳ್ಳ ಬೇಕು ಎಂದರು.

ಜಿಲ್ಲಾ ಪ್ರವಾಸ
ಡಿ. 12ರಿಂದ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರವಾಸ ಮಾಡಿ ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, 12ರಂದು ಶಿವಮೊಗ್ಗ ನಗರಸಭೆ, 13ರಂದು ಭದ್ರಾವತಿ, 15ರಂದು ಶಿಕಾರಿಪುರ, ಶಿರಾಳಕೊಪ್ಪ ಹಾಗೂ ಸೊರಬ ಹಾಗೂ 23ರಂದು ಭಾನುವಾರ ತೀರ್ಥಹಳ್ಳಿ ಹಾಗೂ ಹೊಸನಗರ, 24ರಂದು ಸಾಗರ, ಜೋಗಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.

ಡಿ. 20ರಿಂದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ವಿಲೇವಾರಿ ವಾರ ಎಂದು  ನಿಗದಿಪಡಿಸಿಕೊಂಡು ಎಲ್ಲ ಕಡತಗಳ ವಿಲೇವಾರಿ ಮಾಡಬೇಕೆಂದು ಸೂಚಿಸಿದ ಅವರು, ಫೆಬ್ರವರಿ 28ರ ಒಳಗೆ ಎಲ್ಲಾ ಯೋಜಿತ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕು ಹಾಗೂ ಬಿಡುಗಡೆಯಾದ ಎಲ್ಲಾ ಹಣ ಖರ್ಚು ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಸಭೆಯಲ್ಲಿ ಯೋಜನಾ ನಿರ್ದೇಶಕ ಎ. ರವಿ, ಶಿವಮೊಗ್ಗ ನಗರಸಭೆ ಆಯುಕ್ತ ಪಿ.ಜಿ. ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT