ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸ್ವಚ್ಛತೆ ನಿರ್ಲಕ್ಷಿಸಿದ ನಗರಸಭೆ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಪ್ರಾಶಸ್ತ್ಯ ನೀಡಿ ಆರೋಗ್ಯವಂತ ಪ್ರಜೆಗಳನ್ನು ರೂಪಿಸಬೇಕಾದ ನಗರಸಭೆಯೇ ಅದರತ್ತ ಗಮನ ಹರಿಸದೇ ನಿರ್ಲಕ್ಷ್ಯ ತಾಳಿದೆ !

ಜಿಲ್ಲಾ ಕೇಂದ್ರವಾದ ರಾಮನಗರದ ವಿವಿಧ ಬಡಾವಣೆಗಳಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ನಗರದ ಹೊರವಲಯದಲ್ಲಿ ಸುರಿಯಬೇಕಾದ ನಗರಸಭೆ ನಗರದ ಪ್ರಮುಖ ಬಡಾವಣೆಯಲ್ಲಿ ತಂದು ಸುರಿಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಅದೂ ನಗರದ ಐದು ವಿದ್ಯಾಸಂಸ್ಥೆಗಳ ನಡುವೆ ಇರುವ ಖಾಸಗಿ ಬಯಲು ಪ್ರದೇಶದಲ್ಲಿ ನಗರಸಭೆ ಇಡೀ ನಗರದ ತ್ಯಾಜ್ಯವನ್ನು ತಂದು ಸುರಿಯುತ್ತಿದೆ ! ಇದರಿಂದ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾದ ಆತಂಕ ಎದುರಾಗಿದೆ ಎಂದು ನಿವಾಸಿಗಳು ದೂರುತ್ತಾರೆ.

ವಾರದಿಂದ ನಿತ್ಯ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಟ್ರ್ಯಾಕ್ಟರ್‌ಗಳಲ್ಲಿ ತ್ಯಾಜ್ಯವನ್ನು ತಂದು ಇಲ್ಲಿ ಸುರಿಯಲಾಗುತ್ತಿದೆ. `ಈ ಕುರಿತು ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಬದಲಿಗೆ ಆ ಅಧಿಕಾರಿಗಳು ದೂರು ನೀಡಿದವರಿಗೆ ಚಿತ್ರ ಸಹಿತ ದಾಖಲೆ ನೀಡುವಂತೆ ಕೇಳುತ್ತಾರೆ~ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ನಗರದ ತ್ಯಾಜ್ಯವನ್ನೆಲ್ಲ ನಗರಸಭೆ ವಸತಿ ಪ್ರದೇಶದಲ್ಲಿ ತಂದು ಸುರಿಯುತ್ತಿರುವುದರಿಂದ ಈ ಭಾಗದಲ್ಲಿ ದುರ್ವಾಸನೆ ಬೀರುತ್ತಿದೆ. ಶಾಲಾ- ಕಾಲೇಜುಗಳ ಬಳಿ ತ್ಯಾಜ್ಯದ ಕೆಟ್ಟ ವಾಸನೆ ರಾಚುತ್ತಿದೆ. ತ್ಯಾಜ್ಯದ ರಾಶಿಗೆ ಮುಗಿಬೀಳುವ ಹಂದಿ ಮತ್ತು ಬೀದಿ ನಾಯಿಗಳು ರಾಜಾರೋಷವಾಗಿ ಸಾರ್ವಜನಿಕರ ಮೇಲೆರಗುತ್ತಿವೆ~ ಎಂದು ಪಟೇಲ್ ಶಾಲೆಯ ಮುಖ್ಯಸ್ಥ ರಾಜು ಹೇಳುತ್ತಾರೆ.

ಕೆಂಪೇಗೌಡ ವೃತ್ತದಿಂದ ಸ್ವಲ್ಪ ಮುಂದೆ ಬಂದರೆ ಸಾಕು ದಾರಿ ಹೋಕರಿಗೂ ಈ ದುರ್ವಾಸನೆ ಮೂಗಿಗೆ ಅಡರುತ್ತದೆ. ಇನ್ನು ಶಾಲೆಗಳಲ್ಲಿ ಪಾಠ ಮಾಡುವುದು ಹೇಗೆ. ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ ಎಂದು ಅವರು ಬೇಸರದಿಂದ ಹೇಳುತ್ತಾರೆ.

ಕಸ ತಂದು ಸುರಿಯುತ್ತಿರುವ ಪ್ರದೇಶದ ಸುತ್ತಮುತ್ತ ಐದು ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಶರತ್ ಮೆಮೋರಿಯಲ್ ಶಾಲೆ, ಪಟೇಲ್ ಶಾಲೆ, ಹೋಲಿ ಕ್ರೆಸೆಂಟ್ ಇಂಗ್ಲಿಷ್ ಶಾಲೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ಈ ವಿದ್ಯಾಸಂಸ್ಥೆಗಳಲ್ಲಿ ಎರಡರಿಂದ ಮೂರು ಸಾವಿರ ವಿದ್ಯಾರ್ಥಿಗಳು ಈ ಭಾಗದಲ್ಲಿ ಓಡಾಡುತ್ತಾರೆ. ಇವರೆಲ್ಲ ಈ ದುರ್ನಾತದ ವಾಸನೆ ಸೇವಿಸುವ ದುಸ್ಥಿತಿ ಬಂದೆರಗಿದೆ ಎಂದು ಅವರು ದೂರುತ್ತಾರೆ.

ನಗರಸಭೆಯ ಸದಸ್ಯರಿಗೆ, ಅಧಿಕಾರಿಗಳಿಗೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ನಗರದ ಜನತೆಯ ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲವಾಗಿದೆ. ಎಲ್ಲೆಂದರಲ್ಲಿ ಕಸದ ತ್ಯಾಜ್ಯವನ್ನು ತಂದು ಸರಿಯಲು ನಗರಸಭೆಯವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸುತ್ತಾರೆ.

ನಗರದ ನಿವಾಸಿಗಳ ಆರೋಗ್ಯ ಕಾಪಾಡದ ನಗರಸಭೆಗೆ ಜನತೆಯ ಆರೋಗ್ಯವನ್ನು ಕೆಡಿಸುತ್ತಿದೆ. ಒಂದು ವೇಳೆ ಮಳೆ ಬಂದು ತ್ಯಾಜ್ಯದ ರಾಶಿ ಚೆಲ್ಲಾಪಿಲ್ಲಿಯಾದರೆ, ಸೊಳ್ಳೆ, ನೊಣ, ಕ್ರಿಮಿ, ಕೀಟಗಳಿಂದ ಸಾಂಕ್ರಾಮಿಕ ರೋಗ ಸುಲಭವಾಗಿ ಹರಡುವ ಸಾಧ್ಯತೆ ಇದೆ. ಇದರಿಂದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಸುತ್ತಮುತ್ತಲ ನಿವಾಸಿಗಳಿಗೆ ಕಾಲರಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ.
 
ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಕೂಡಲೇ ನಗರಸಭೆಯ ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಿ, ಇಲ್ಲಿನ ತ್ಯಾಜ್ಯ ವಿಲೇವಾರಿ ಮಾಡಿಸಬೇಕು. ಇಲ್ಲದಿದ್ದರೆ ಈ ಪ್ರದೇಶದ ನಾಗರಿಕರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಜತೆಗೂಡಿ ನಗರಸಭೆ ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.

ನಗರದ ಜನತೆಯ ಆರೋಗ್ಯ ಕಾಯ್ದುಕೊಳ್ಳುವ ಸಲುವಾಗಿ ನಗರಸಭೆಯಲ್ಲಿ ಆರೋಗ್ಯ ಇಲಾಖೆ ಇದೆ. ಆದರೆ ಈ ಇಲಾಖೆ ಸೂಕ್ತ ರೀತಿಯಲ್ಲಿ ಮೇಲುಸ್ತುವಾರಿ ವಹಿಸದ ಕಾರಣ ನಗರದಲ್ಲಿ ಸಾಂಕ್ರಾಮಿಕ ರೋಗ ಎದುರಾಗುವ ಆತಂಕ ನಿರ್ಮಾಣವಾಗಿದೆ ಎಂದು ಅವರು ಕಿಡಿಕಾರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT