ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಇಂದು ಅಡ್ವಾಣಿ ರಥಯಾತ್ರೆ

Last Updated 29 ಅಕ್ಟೋಬರ್ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರ ಮಹತ್ವಾಕಾಂಕ್ಷೆಯ `ಜನ ಚೇತನ ರಥಯಾತ್ರೆ~ಯ ಅಂಗವಾಗಿ ನಡೆಯಲಿರುವ ಬಹಿರಂಗ ಸಮಾವೇಶಕ್ಕೆ ಉದ್ಯಾನ ನಗರಿ ಸಕಲ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಬಾವುಟ ಮತ್ತು ಅಡ್ವಾಣಿಯವರಿಗೆ ಸ್ವಾಗತ ಕೋರುವ ಕಟೌಟ್‌ಗಳನ್ನು ಹಾಕಲಾಗಿದೆ.

ಬಹಿರಂಗ ಸಭೆ ನಡೆಯಲಿರುವ ಇಲ್ಲಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನ ಕೂಡ ಅಡ್ವಾಣಿ ಸ್ವಾಗತಕ್ಕೆ ಅಣಿಯಾಗಿದೆ.

ಭಾನುವಾರ ಸಂಜೆ 5 ಗಂಟೆಗೆ ಆರಂಭವಾಗಲಿರುವ ಸಮಾವೇಶದ ಆಗುಹೋಗುಗಳನ್ನು ಇಂಟರ್ನೆಟ್ ಮೂಲಕ ನೇರ ಪ್ರಸಾರ ಮಾಡಲು ರಾಜ್ಯ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಸದಸ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಪಕ್ಷದ ವೆಬ್ ಸೈಟ್(http://bjpkarnataka.org)  ಮೂಲಕ ಜಗತ್ತಿನ ಯಾವುದೇ ಪ್ರದೇಶದಿಂದ ಬೆಂಗಳೂರಿನ ಸಮಾವೇಶ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.

ಅಲ್ಲದೆ, ನಗರದ `ಗರುಡ ಮಾಲ್~ ಮತ್ತು `ಮಂತ್ರಿ ಮಾಲ್~ಗಳಲ್ಲೂ ಸಾರ್ವಜನಿಕ ಸಭೆಯ ನೇರಪ್ರಸಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಸ್ಥಳಗಳಲ್ಲಿ ದೊಡ್ಡ ಪರದೆಗಳನ್ನು ಅಳವಡಿಸಿ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ಅವಕಾಶ ಮಾಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಘಟಕದ ಸದಸ್ಯರು ಮಾಹಿತಿ ನೀಡಿದರು.

ಭಾವಚಿತ್ರ ಇಲ್ಲ!: ಸಮಾರಂಭದ ವೇದಿಕೆಯಲ್ಲಿ ಸಾರ್ವಜನಿಕರಿಗೆ ಅಭಿಮುಖವಾಗಿ ಹಾಕಲಾದ ಫ್ಲೆಕ್ಸ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಅಡ್ವಾಣಿ ಅವರ ಭಾವಚಿತ್ರ ಮಾತ್ರ ಇದೆ. ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದ ಯಾವುದೇ ಮುಖಂಡರ ಭಾವಚಿತ್ರ ಇದರಲ್ಲಿ ಇಲ್ಲ. ಅಲ್ಲದೆ, ಮೈದಾನದಲ್ಲಿ ಅಡ್ವಾಣಿ ಅವರ ಕಟೌಟ್‌ಗಳೇ ರಾರಾಜಿಸುತ್ತಿವೆ. ಆದರೆ, ನಗರದ ಪ್ರಮುಖ ಸ್ಥಳಗಳಲ್ಲಿ ಈಶ್ವರಪ್ಪ, ಯಡಿಯೂರಪ್ಪ, ಅನಂತಕುಮಾರ್ ಅವರ ಭಾವಚಿತ್ರಗಳಿರುವ ಬ್ಯಾನರ್‌ಗಳನ್ನು ಹಾಕಲಾಗಿದೆ.

ಬಿಗಿ ಭದ್ರತೆ: ಅಡ್ವಾಣಿ ಅವರಿಗೆ `ಝೆಡ್ ಪ್ಲಸ್~ ಶ್ರೇಣಿಯ ಭದ್ರತೆ ನೀಡಲಾಗಿರುವ ಕಾರಣ, ವೇದಿಕೆಯ ಸುತ್ತ 50 ಅಡಿ ಪ್ರದೇಶದಲ್ಲಿ ಯಾರಿಗೂ ಪ್ರವೇಶ ಇಲ್ಲ. ಅತಿಗಣ್ಯ ವ್ಯಕ್ತಿಗಳಿಗೆ ಒಂದು ಸಾವಿರ ಆಸನಗಳನ್ನು ಮೀಸಲಿಡಲಾಗಿದ್ದು ಅವು ಕೂಡ ವೇದಿಕೆಯಿಂದ 50 ಅಡಿ ದೂರದಲ್ಲಿರುತ್ತವೆ.

ಮಳೆ ಬಂದರೆ?: ಮೈದಾನದಲ್ಲಿ ಏಕಕಾಲಕ್ಕೆ ಸುಮಾರು 40 ಸಾವಿರ ಮಂದಿ ಕುಳಿತುಕೊಳ್ಳಲು ಅವಕಾಶವಿದೆ. ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಂಜೆಯ ವೇಳೆ ಮಳೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಜನ ಸೇರಬಹುದು ಎಂದು ನಿರೀಕ್ಷಿಸಲಾದ ಭಾನುವಾರದ ಕಾರ್ಯಕ್ರಮದ ವೇಳೆಯೂ ಮಳೆ ಬಂದರೆ ಏನು ಮಾಡುವುದುಮಾಡುವುದು ಎಂಬ ಚಿಂತೆ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ.

ಸಚಿವರೆಲ್ಲ ಭಾಗಿ: ಪ್ರಹ್ಲಾದ್ ಜೋಷಿ
ಬೆಂಗಳೂರು: `ಉತ್ತಮ ಆಡಳಿತ ಮತ್ತು ರಾಜಕಾರಣದಲ್ಲಿ ಸ್ವಚ್ಛತೆ~ ತರುವ ಉದ್ದೇಶದಿಂದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಕೈಗೊಂಡಿರುವ `ಜನಚೇತನ ಯಾತ್ರೆ~ಯ ಬೆಂಗಳೂರು ಸಮಾವೇಶದಲ್ಲಿ ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರೂ ಪಾಲ್ಗೊಳ್ಳಲಿದ್ದಾರೆ.

ಇಲ್ಲಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆಯಲಿರುವ ಸಮಾವೇಶದ ಸಿದ್ಧತೆಗಳ ಕುರಿತು ಮಾಹಿತಿ ನೀಡಲು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ ಜೋಷಿ, `ಸಮಾವೇಶದ ವೇದಿಕೆಯಲ್ಲಿ ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರೂ ಉಪಸ್ಥಿತರಿರುತ್ತಾರೆ~ ಎಂದರು.
 
ಇವರ ಜೊತೆ ಸ್ಥಳೀಯ ಸಂಸದರು, ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳು, ಬೆಂಗಳೂರು ಮೇಯರ್ ಮತ್ತು ಉಪ ಮೇಯರ್ ಕೂಡ ಅಡ್ವಾಣಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

`ಅದ್ದೂರಿ ಸ್ವಾಗತ~: ಕೇರಳದ ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಭಾನುವಾರ ಸಂಜೆ ನಾಲ್ಕು ಗಂಟೆಗೆ ಇಲ್ಲಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಡ್ವಾಣಿ ಅವರಿಗೆ ಮಹದೇವಪುರ ಮತ್ತು ಸಿ.ವಿ. ರಾಮನ್ ನಗರದ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಲಿದ್ದಾರೆ.

ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಅಡ್ವಾಣಿಯವರನ್ನು ಬೈಕ್ ರ‌್ಯಾಲಿಯಲ್ಲಿ ಸಮಾವೇಶದ ಸ್ಥಳಕ್ಕೆ ಕರೆತರಲಾಗುವುದು. ಇದೇ ವೇಳೆ ಮಲ್ಲೇಶ್ವರದಲ್ಲಿರುವ ಬಿಜೆಪಿಯ ಹಳೆ ಕಚೇರಿ ಭಾವೂರಾವ್ ದೇಶಪಾಂಡೆ ಭವನದಿಂದ ಇನ್ನೊಂದು ಬೈಕ್ ರ‌್ಯಾಲಿ ನ್ಯಾಷನಲ್ ಕಾಲೇಜು ಮೈದಾನದತ್ತ ಹೊರಡಲಿದೆ ಎಂದು ತಿಳಿಸಿದರು.

ಭಾನುವಾರ ಅವರು ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂದು ಜೋಷಿ ಸ್ಪಷ್ಟಪಡಿಸಿದರು. ಶಾಸಕ ಬಿ.ಎನ್. ವಿಜಯಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ, ಮುಖಂಡರಾದ ಸಚ್ಚಿದಾನಂದಮೂರ್ತಿ, ಪಕ್ಷದ ಮಾಧ್ಯಮ ಘಟಕದ ಮುಖ್ಯಸ್ಥ ಎಸ್. ಪ್ರಕಾಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಸಮಾವೇಶಕ್ಕೆ ಬಿಗಿ ಬಂದೋಬಸ್ತ್
ಬೆಂಗಳೂರು: 
ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಜನ ಚೇತನ ಯಾತ್ರೆ ಮತ್ತು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಗೆ ಬಿಗಿ ಬಂದೋಬಸ್ತ್ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ಸಭೆಗೆ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು ಒಂದೂವರೆ ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಅಡ್ವಾಣಿ ಅವರಿಗೆ ಝಡ್ ಪ್ಲಸ್ ಭದ್ರತೆ ಇದ್ದು ಅದಕ್ಕೆ ತಕ್ಕಂತಹ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ನ್ಯಾಷನಲ್ ಕಾಲೇಜು ಮೈದಾನಕ್ಕೆ ತೆರಳಿದ ಅವರು ಪರಿಶೀಲನೆಯನ್ನೂ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT