ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಗರಿ ಮೂಡಿಸಿದ ಚಂದ್ರಕಲಾ

Last Updated 7 ಮೇ 2012, 7:55 IST
ಅಕ್ಷರ ಗಾತ್ರ

ದಾವಣಗೆರೆ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 800ನೇ ರ‌್ಯಾಂಕ್ ಗಳಿಸುವ ಮೂಲಕ ನಗರದ ಯುವತಿ ಜೆ.ಯು. ಚಂದ್ರಕಲಾ `ಶೈಕ್ಷಣಿಕ ನಗರಿ~ ದಾವಣಗೆರೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮಾಡಬೇಕು. ರೈತರಿಗೆ ಸರ್ಕಾರಿ ಸೌಲತ್ತು ಲಭಿಸಬೇಕೆಂಬ ಹಂಬಲದಿಂದ ಕೃಷಿ ವಿಷಯ ಆಯ್ದುಕೊಂಡು ಅಭ್ಯಾಸ ನಡೆಸಿದೆ. ಮನೆಯಲ್ಲಿ ತಂದೆ-ತಾಯಿ, ಸಹೋದರರ ಸಹಕಾರ, ಪ್ರೋತ್ಸಾಹ ಹಾಗೂ ಸಾರ್ವಜನಿಕರ ಸೇವೆ ಮಾಡುವ ತುಡಿತ ನನ್ನನ್ನು ನಾಗರಿಕ ಸೇವೆ ಪರೀಕ್ಷೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿತು ಎನ್ನುತ್ತಾರೆ ಅವರು.

ಚಂದ್ರಕಲಾ ಅವರ ತಂದೆ ಎಲ್. ಉಮ್ಮಣ್ಣ ರೈಲ್ವೆ ಇಲಾಖೆಯ ರಕ್ಷಣಾ ದಳದಲ್ಲಿ ಎಎಸ್‌ಐ ಮತ್ತು ತಾಯಿ ಗೌರಮ್ಮ  ತಮ್ಮ ಓದಿಗೆ  ಪ್ರೋತ್ಸಾಹ  ನೀಡುತ್ತಿದ್ದರು.  ಇವರಿಗೆ ಇಬ್ಬರು  ಅಣ್ಣಂದಿರಿದ್ದು,  ಶಶಿಕಾಂತ ವೈದ್ಯರು, ರಮೇಶ್ ಹಾಸ್ಟೆಲ್ ಸೂಪರ್‌ವೈಸರ್ ಆಗಿದ್ದಾರೆ. ಈಗಲೂ ಸಹ ಪೋಷಕರು ತಾವು ಐಎಎಸ್ ಅಧಿಕಾರಿ ಆಗಲು ಸಹಕಾರ ನೀಡುತ್ತಿರುವುದು ತಮ್ಮ ಛಲ, ವಿಶ್ವಾಸ ಇಮ್ಮಡಿ ಆಗಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ ಚಂದ್ರಕಲಾ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿಯಲ್ಲಿ 8 ಬಂಗಾರದ ಪದಕ ಪಡೆದ ಹೆಗ್ಗಳಿಕೆ ಚಂದ್ರಕಲಾ ಅವರದು. ನಂತರ ಉನ್ನತ ಶಿಕ್ಷಣಕ್ಕಾಗಿ ಹೈದರಾಬಾದ್‌ನ ಭಾರತೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಂಎಸ್ಸಿ ಪ್ಲಾಂಟ್ ಫಿಜಿಯಾಲಜಿಯಲ್ಲಿ 9ನೇ ರ‌್ಯಾಂಕ್ ಪಡೆದರು. ಅಲ್ಲಿಯೇ ಕೃಷಿ ವಿಜ್ಞಾನಿ ಹುದ್ದೆಗೆ ಆಹ್ವಾನ ಬಂದಿದ್ದು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ಲಾಂಟ್ ಫಿಜಿಯಾಲಜಿ ವಿಷಯದಲ್ಲಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಓದಿದ್ದು ಕೃಷಿ ವಿಷಯವಾದರೂ, ಪರೀಕ್ಷೆಗೆ ಕೃಷಿ ಮತ್ತು ಭೂಗೋಳ ಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡೆ. ಚಿಕ್ಕಂದಿನಿಂದಲೇ ಭೂಗೋಳ ಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅಲ್ಲದೇ, ಕೃಷಿ ಸಂಬಂಧಿತ ವಿಷಯ ಆಗಿದ್ದರಿಂದ ಸಹಾಯಕವಾಗಿದೆ. ಈ ವಿಷಯಕ್ಕೆ ಯಾವುದೇ ಕೋಚಿಂಗ್ ಹೋಗುವ ಅವಶ್ಯಕತೆ ಎದುರಾಗಲಿಲ್ಲ. ಆದರೆ, ಸಾಮಾನ್ಯ ವಿಷಯಕ್ಕೆ ಹೆಚ್ಚಿನ ಅಭ್ಯಾಸ ಅಗತ್ಯವಿದ್ದ ಕಾರಣ ನವದೆಹಲಿಯ ಕೋಚಿಂಗ್ ಕೇಂದ್ರಕ್ಕೆ ಸೇರಬೇಕಾಯಿತು. ಸಂಶೋಧನೆಯ ನಡುವೆಯೂ ಪರೀಕ್ಷಾ ತಯಾರಿಗೆ ದಿನವೂ 8ರಿಂದ 10 ತಾಸು ಓದಿಕೊಳ್ಳುತ್ತಿದ್ದೆ ಎನ್ನುತ್ತಾರೆ ಅವರು.

2010ರಲ್ಲಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಲಭಿಸಲಿಲ್ಲ. ಇದರಿಂದ ಹಿಂದೆ ಸರಿಯದೇ 2011ನೇ ಸಾಲಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು 2ನೇ ಪ್ರಯತ್ನದಲ್ಲಿ 800ನೇ ರ‌್ಯಾಂಕ್ ಪಡೆದುಕೊಂಡರು. `ಈಗ, ನನಗೆ ಕಂದಾಯ ಇಲಾಖೆಯಲ್ಲಿ ಕೆಲಸ ಸಿಗಬಹುದು. ಆದರೆ, ಇಷ್ಟಕ್ಕೆ ತೃಪ್ತಿಪಡುವುದಿಲ್ಲ. ಹೀಗಾಗಿ, ಮತ್ತೆ ಪರೀಕ್ಷೆ ಬರೆಯುತ್ತಿದ್ದೇನೆ. ಇದಕ್ಕಾಗಿ 10 ತಾಸು ಓದುತ್ತಿದ್ದೇನೆ.  ಐಎಎಸ್ ಅಧಿಕಾರಿ ಆಗಲೇಬೇಕು ಎಂಬ ಛಲವಿದೆ~ ಎಂದು ಚಂದ್ರಕಲಾ ಹೇಳುತ್ತಾರೆ.

ಕೃಷಿ ಕ್ಷೇತ್ರದ ಸಾಧನೆ ಜತೆಗೆ ನಾಗರಿಕ ಸೇವೆಯೇ ಅವರ ಧ್ಯೇಯವಾಗಿದೆ. ಸಾಧನೆ ಮಾಡುವವರಿಗೆ ಕೆಲಸದಲ್ಲಿ ಪ್ರಾಮಾಣಿಕತೆ, ಓದಿನಲ್ಲಿ ಏಕಾಗ್ರತೆ, ಶ್ರದ್ಧೆಯಿದ್ದರೆ ಫಲಿತಾಂಶ ಖಂಡಿತ ಎನ್ನುತ್ತಾರೆ ಚಂದ್ರಕಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT