ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಬಂದ ಜಾಂಬವ: ಇಬ್ಬರ ಮೇಲೆ ದಾಳಿ

Last Updated 17 ಜುಲೈ 2013, 10:11 IST
ಅಕ್ಷರ ಗಾತ್ರ

ತುಮಕೂರು: ಏಳು ಗಂಟೆ ನಗರದ ಜನರಿಗೆ ಕರಡಿಯೊಂದು ಕುತೂಹಲದ ಕೇಂದ್ರಬಿಂದುವಾಗಿತ್ತು. ನೀರು ಅರಸುತ್ತಾ ದಾರಿ ತಪ್ಪಿ ಮುಂಜಾನೆ ಬಂದ ಕರಡಿ ನಾನಾ ಕಿತಾಪತಿಗಳನ್ನು ಮಾಡಿತ್ತಲ್ಲದೆ ಇಬ್ಬರ ಮೇಲೆ ಎರಗಿ ಗಾಯಗೊಳಿಸಿದ ಘಟನೆಗೆ ಮಂಗಳವಾರ ನಗರ ಸಾಕ್ಷಿಯಾಯಿತು.

ಮೂರಾಲ್ಕು ವರ್ಷಗಳ ಹಿಂದೆ ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ಗೆ ಚಿರತೆಯೊಂದು ಬಂದಿತ್ತು. ಈಗ ಕರಡಿ ಬಂದಿದ್ದು ನಗರದಲ್ಲಿ ಮಾನವ- ಕಾಡುಪ್ರಾಣಿ ನಡುವೆ ಸಂಘರ್ಷ ಹೆಚ್ಚಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಒದಗಿಸಿದೆ. ಇಲ್ಲಿಯವರೆಗೂ ನಗರದ ಹೊರವಲಯಕ್ಕಷ್ಟೇ ಕರಡಿಗಳ ದಾಳಿ ಸೀಮಿತವಾಗಿತ್ತು.

ಮುಂಜಾನೆ ಮೂರರ ಸಮಯದಲ್ಲಿ ಮಸೀದಿಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬರು ಬಿ.ಜಿ.ಪಾಳ್ಯದ ಮನೆಗಳ ಮೇಲೆ ಕರಡಿಯೊಂದು ಓಡಾಡುತ್ತಿರುವುದನ್ನು ಗಮನಿಸಿ ಮಾಧ್ಯಮ ಮಿತ್ರರೊಬ್ಬರಿಗೆ ಸುದ್ದಿ ರವಾನಿಸಿದರು. ನಂತರ ಸುದ್ದಿ ಪೊಲೀಸರಿಗೆ ಮುಟ್ಟಿತು. ಸುದ್ದಿ ತಿಳಿಯುತ್ತಿದ್ದಂತೆ ಮಾಧ್ಯಮದ ಛಾಯಾಚಿತ್ರಗಾರರು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಇಷ್ಟರೊಳಗಾಗಿ ಕರಡಿ ಇಬ್ಬರ ಮೇಲೆ ದಾಳಿ ನಡೆಸಿಯಾಗಿತ್ತು.

ಗಂಗಾವತಿ ಮೂಲದ ಹನುಮೇಶ್, ಬಿ.ಜಿ.ಪಾಳ್ಯದ ಸೀಬಯ್ಯ ಕರಡಿ ದಾಳಿಯಲ್ಲಿ ಗಾಯಗೊಂಡವರು. ನಗರದ ಅಕ್ಕಿಗಿರಣಿಯೊಂದರಲ್ಲಿ ಕೆಲಸ ಮಾಡುವ ಹನುಮೇಶ್ ಕೆಲಸ ಮುಗಿಸಿಕೊಂಡು ವಾಪಸಾಗುವಾಗ ಎದುರಿಗೆ ಬಂದ ಕರಡಿ ದಾಳಿ ನಡೆಸಿದೆ. ಇವರ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳು, ಬಿ.ಜಿ.ಪಾಳ್ಯದ ಸೀಬಯ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಡಿ ನೋಡಲು ಅಪಾರ ಜನಸ್ತೋಮ ಮುಂಜಾನೆಯಿಂದಲೇ ಸೇರತೊಡಗಿದರು. ಸುತ್ತಮುತ್ತಲ ಕಟ್ಟಡಗಳ ಮೇಲೇರಿ ಕರಡಿ ವೀಕ್ಷಿಸಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕರಡಿ ಹಿಡಿಯಲು ಬೇಕಾದ ಪರಿಕರ ಇಲ್ಲದೆ ಅರಣ್ಯ ಸಿಬ್ಬಂದಿ ಪೇಚಾಡಿದರು. ಜನರ ಗಲಾಟೆಗೆ ಬೆದರಿದ ಕರಡಿ ಮನೆಗಳ ಮೇಲೆ ಅತ್ತಿಂದಿತ್ತ ಓಡಾಡುವಾಗ ಮನೆಯೊಂದರ ಆವರಣಗೋಡೆಯಿಂದ ಕೆಳಗೆ ಬಿದ್ದು ಸುಸ್ತಾಯಿತು. ಅತ್ತ ಇತ್ತ ಗೋಡೆ ಇದ್ದ ಕಾರಣ ಮೇಲೆ ಬರಲು ಸಾಧ್ಯವಾಗದೇ ಅಲ್ಲೇ ಮಲಗಿತು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಬನ್ನೇರುಘಟ್ಟದ ಕೇಂದ್ರ ಮೃಗಾಲಯ ಪ್ರಾಧಿಕಾರದ ಸಿಬ್ಬಂದಿ ಸಲಕರಣೆಗಳೊಂದಿಗೆ ಆಗಮಿಸಿದರು. ಮಲಗಿದ್ದ ಕರಡಿಗೆ ಬಂದೂಕು ಮೂಲಕ ಅರಿವಳಿಕೆ ಇಂಜೆಕ್ಷನ್ ಹೊಡೆಯಲಾಯಿತು.

ಇಂಜೆಕ್ಷನ್ ಬಿದ್ದ ತಕ್ಷಣ ಆವರಣಗೋಡೆ ಹಾರಿದ ಕರಡಿ ಮತ್ತೇ ಮನೆಗಳ ಮೇಲೆಯೇ ಓಡ ತೊಡಗಿತು. ಇದರಿಂದ ಜನ ಚೆಲ್ಲಾಪಿಲ್ಲಿಯಾದರು. ಕೆಲನಿಮಿಷದ ನಂತರ ಪ್ರಜ್ಞೆ ತಪ್ಪಿ ಬಿತ್ತು. ನಂತರ ಬನ್ನೇರುಘಟ್ಟ ಅರಣ್ಯಕ್ಕೆ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT