ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಕಸ ನಗರದಲ್ಲೇ ಸಂಸ್ಕರಣೆಯಾಗಲಿ

ಬಿಬಿಎಂಪಿಗೆ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ಕುಮಾರ್‌ ಸೂಚನೆ
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ತ್ಯಾಜ್ಯ ಸಂಸ್ಕರಿಸುವ ಮೂಲಕ ನಗರದ ಕಸ ನಗರದಿಂದ ಹೊರ ಹೋಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌ ನ್ಯಾಯ­ಮೂರ್ತಿ ಎನ್‌.ಕುಮಾರ್‌ ಬಿಬಿಎಂಪಿ ಅಧಿಕಾರಿ­ಗಳಿಗೆ ಸೂಚನೆ ನೀಡಿದರು. ಮಾವಳ್ಳಿಪುರದ ತ್ಯಾಜ್ಯ ಸಂಗ್ರಹಣಾ ಕೇಂದ್ರ ಹಾಗೂ ದೊಡ್ಡಬಳ್ಳಾಪುರ ಸಮೀಪದ ಟೆರ್ರಾಫಾರ್ಮ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ನಗರ­ದಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಆಯಾ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲೇ ಸಂಸ್ಕರಣೆಯಾಗಬೇಕು. ಯಾವುದೇ ರೀತಿಯ ತ್ಯಾಜ್ಯ ನಗರದಿಂದ ಹೊರ ಹೋಗದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು. ಹಸಿ ಹಾಗೂ ಒಣ ತ್ಯಾಜ್ಯ ಖರೀದಿಸುವ ಮಾರುಕಟ್ಟೆ ಇತ್ತೀಚೆಗೆ ಬೆಳವಣಿಗೆಯಾಗುತ್ತಿದೆ. ಇದರ ನೆರವಿನಿಂದ ತ್ಯಾಜ್ಯದ ಸಮಸ್ಯೆಯನ್ನು ತಗ್ಗಿಸಲು ಪಾಲಿಕೆ ಮುಂದಾಗಬೇಕು’ ಎಂದರು.

‘ಮಾವಳ್ಳಿಪುರದಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಬಯೊ ಮೈನಿಂಗ್‌ ವಿಧಾನದ ಮೂಲಕ ಸಂಸ್ಕರಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು. ರಾಶಿ ಬಿದ್ದಿರುವ ತ್ಯಾಜ್ಯದಿಂದ ಪ್ಲಾಸ್ಟಿಕ್‌, ಗಾಜು ಮತ್ತಿತರ ವಸ್ತುಗಳನ್ನು ಬೇರ್ಪ­ಡಿಸಿ, ಗೊಬ್ಬರ ಉತ್ಪಾದನೆಗೆ ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ಕೆ ಸ್ಥಳೀಯರ ಸಹಕಾರವೂ ಅಗತ್ಯ’ ಎಂದು ಹೇಳಿದರು.

‘ಟೆರ್ರಾಫಾರ್ಮ ತ್ಯಾಜ್ಯ ಸಂಗ್ರಹಣಾ ಕೇಂದ್ರದಲ್ಲಿ ಆಧುನಿಕ ವಿಧಾನದ ಮೂಲಕ ತ್ಯಾಜ್ಯ-ವನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯದ ಮರುಬಳಕೆ, ಬಯೊಗ್ಯಾಸ್‌ ಉತ್ಪಾದನೆ, ಗೊಬ್ಬರ ತಯಾರಿಕೆ ಸೇರಿದಂತೆ ಕಸವನ್ನು ರಸವಾಗಿ ಪರಿವರ್ತಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ನಗರದ ತ್ಯಾಜ್ಯದ ಸಂಸ್ಕರಣೆಗೆ ಬಿಬಿಎಂಪಿ ಮುಂದಾಗಬೇಕು’ ಎಂದು ಹೇಳಿದರು.

ನಂತರ ಮಾತನಾಡಿದ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ, ‘ಟೆರ್ರಾಫಾರ್ಮ ಕೇಂದ್ರಕ್ಕೆ ಸದ್ಯ ಪ್ರತಿದಿನ 450 ಟನ್‌ ತ್ಯಾಜ್ಯ ಬರುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ ಇಲ್ಲಿಗೆ ಸುಮಾರು 700 ಟನ್‌ ತ್ಯಾಜ್ಯ ವಿಲೇವಾರಿ ಮಾಡಲಾಗುವುದು. ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲೇ ತ್ಯಾಜ್ಯ ಸಂಸ್ಕರಣೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಇದರಿಂದ ತ್ಯಾಜ್ಯದ ಸಾಗಾಣಿಕೆ ವೆಚ್ಚವೂ ಕಡಿಮೆಯಾಗುತ್ತದೆ’ ಎಂದರು.

ಇದಕ್ಕೂ ಮುನ್ನ ಎನ್‌.ಕುಮಾರ್‌ ಹಾಗೂ ತಜ್ಞರ ತಂಡ, ಯಲಹಂಕ ಬಳಿಯ ಕುವೆಂಪು­ನಗರದಲ್ಲಿ ಬಿಬಿಎಂಪಿಯು ಮೈಲ್‌ಹೆಮ್‌ ಕಂಪೆನಿಯ ಸಹಯೋಗದಲ್ಲಿ ಆರಂಭಿಸಿರುವ ತ್ಯಾಜ್ಯದಿಂದ ಬಯೊಗ್ಯಾಸ್‌ ಉತ್ಪಾದಿಸುವ ಘಟಕಕ್ಕೆ ಭೇಟಿ ನೀಡಿತು.

ಮಂಡೂರಿಗೂ ಶಾಶ್ವತ ಪರಿಹಾರ
‘ನಗರದ ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ಮಂಡೂರಿಗೆ ಕಳಿಸ­ಲಾಗುತ್ತಿದೆ. ಮಂಡೂರಿನ ಸಮಸ್ಯೆಗೂ ಶಾಶ್ವತ ಪರಿಹಾರ ಅಗತ್ಯ. ನಗರದಲ್ಲೇ ತ್ಯಾಜ್ಯ ಸಂಸ್ಕರಣೆ ಮಾಡಿ ಮಂಡೂರಿಗೆ ಹೋಗುವ ಕಸವನ್ನು ಕ್ರಮೇಣ ತಗ್ಗಿಸಲು ಯೋಜನೆ ರೂಪಿಸಬೇಕು’ ಎಂದು ನ್ಯಾಯ­ಮೂರ್ತಿ ಎನ್‌.ಕುಮಾರ್‌ ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದರು.

‘ಹಸಿ ಹಾಗೂ ಒಣ ಕಸವನ್ನು ಬೇರೆ­ಯಾಗಿಯೆ ಸಂಗ್ರಹಿಸಿದರೂ ಅದನ್ನು ಮತ್ತೆ ಬೆರೆಸಿ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸುತ್ತಿರುವ ಬಗ್ಗೆ ದೂರು ಕೇಳಿಬಂದಿವೆ. ಈ ರೀತಿ ಮಾಡುವ ಗುತ್ತಿಗೆ­­ದಾರರ ಗುತ್ತಿಗೆ ರದ್ದುಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

12 ಮಂದಿ ಸಾವು
‘ಮಾವಳ್ಳಿಪುರದಲ್ಲಿ ಸಂಗ್ರಹವಾಗಿರುವ ಸುಮಾರು 400 ಕೋಟಿ ಟನ್‌ ತ್ಯಾಜ್ಯದ ದುಷ್ಪರಿಣಾಮದಿಂದ 12 ಮಂದಿ ಸಾವನ್ನಪ್ಪಿದ್ದಾರೆ. ಹತ್ತು ವರ್ಷದಿಂದ ನಗರದ ತ್ಯಾಜ್ಯವನ್ನು ಇಲ್ಲಿ ಸುರಿಯ­ಲಾಗು­ತ್ತಿದೆ. ಚರ್ಮರೋಗ, ಉಸಿರಾಟದ ತೊಂದರೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯರು ತುತ್ತಾಗಿದ್ದಾರೆ’ ಎಂದು ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ ಸಂಘಟನೆ ಅಧ್ಯಕ್ಷ ಲಿಯೋ ಎಫ್. ಸಲ್ಡಾನಾ ತಿಳಿಸಿದರು.

ತ್ಯಾಜ್ಯದಿಂದ ಮಾವಳ್ಳಿಪುರದಲ್ಲಿ ಆಗಿರುವ ಹಾನಿಯ ಬಗ್ಗೆ ಸಂಘಟನೆ ನಡೆಸಿರುವ ವೈಜ್ಞಾನಿಕ ಅಧ್ಯಯನದ ವರದಿಯನ್ನು ನ್ಯಾಯಮೂರ್ತಿ ಎನ್‌.ಕುಮಾರ್‌ ಅವರಿಗೆ ಸಲ್ಲಿಸಿದ ಅವರು,  ತ್ಯಾಜ್ಯದ ಕಾರಣದಿಂದ ಆಸ್ತಮಾ, ಜಾಂಡಿಸ್‌, ಡೆಂಗೆ, ಕ್ಯಾನ್ಸರ್‌, ಮೂತ್ರಪಿಂಡ ವೈಫಲ್ಯ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಈ ಭಾಗದಲ್ಲಿ ಹೆಚ್ಚುತ್ತಿವೆ. ಅಂತ­ರ್ಜಲ ಸೇರಿದಂತೆ ಕುಡಿಯುವ ನೀರಿನ ಮೂಲ­ಗಳೆ­ಲ್ಲವೂ ಕಲುಷಿತ­ಗೊಂಡಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

ಎರಡು ವರ್ಷ ಕಳೆದರೂ ಸಮಸ್ಯೆ ತಪ್ಪಿಲ್ಲ
ಮಾವಳ್ಳಿಪುರಕ್ಕೆ ಕಸ ತಂದು ಸುರಿಯುವುದನ್ನು ನಿಲ್ಲಿಸಿ ಸುಮಾರು ಎರಡು ವರ್ಷವಾಗಿದೆ. ಆದರೆ, ಸಮಸ್ಯೆ ಮಾತ್ರ ಇನ್ನೂ ತಪ್ಪಿಲ್ಲ. ಬೈಲಾಪುರ, ಬ್ಯಾಲಕೆರೆ, ಕುರುಬರಹಳ್ಳಿ, ರಾಮಗೊಂಡನಹಳ್ಳಿ, ಕೃಷ್ಣರಾಜಪುರ ಸೇರಿದಂತೆ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಅಂತರ್ಜಲ ಹಾಳಾಗಿದೆ. ಚರ್ಮರೋಗ, ಉಸಿರಾಟದ ಸಮಸ್ಯೆ ಇಂದಿಗೂ ಇದೆ.  –ರಾಮಯ್ಯ, ಮಾವಳ್ಳಿಪುರದ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT