ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಶಿಕ್ಷಕಿಗೆ ರಾಷ್ಟ್ರಪ್ರಶಸ್ತಿ ಗರಿ

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತಂತ್ರಜ್ಞಾನದ ಪ್ರಭಾವದಿಂದ ಶಿಕ್ಷಕರನ್ನೇ ಅವಲಂಬಿಸಿದ್ದ ಶಿಕ್ಷಣ ಪದ್ಧತಿ ಬದಲಾಗಿದ್ದು, ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ. ಕಪ್ಪುಹಲಗೆ, ಸೀಮೆಸುಣ್ಣದ ಬದಲು ಇಂದು ಗಣಕಯಂತ್ರ, ವೀಡಿಯೊ, ಕಲಿಕಾ ಸಾಧನಗಳಾಗಿವೆ.
ಈ ನಿಟ್ಟಿನಲ್ಲಿ ಜಾರಿಗೆ ಬಂದ ಯೋಜನೆಯೇ ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಬಳಕೆ. ಇದನ್ನು ಪ್ರೋತ್ಸಾಹಿಸಲು ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ರಾಜ್ಯದ ಇಬ್ಬರು ಶಿಕ್ಷಕರಾದ ರಾಧಾ ಎನ್. ಎ. ಹಾಗೂ ರಾಜೇಶ್ ಅವರಿಗೆ ಈ ಗೌರವ ಸಂದಿದೆ.

ಬೆಂಗಳೂರಿನ ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಗಣಿತ ಶಿಕ್ಷಕಿಯಾಗಿರುವ ರಾಧಾ, ರಾಷ್ಟ್ರ ಪ್ರಶಸ್ತಿ ದೊರೆತ ಸಂಭ್ರಮದಲ್ಲಿ ಐಸಿಟಿ ಕಲಿಕೆಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ:

‘2012ನೇ ಸಾಲಿನಲ್ಲಿ ದೇಶದ ಒಟ್ಟು 63 ಶಿಕ್ಷಕರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್‌ಡಿ) ಹಾಗೂ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿ (ಎನ್ ಸಿಇಆರ್ ಟಿ) ಒಂಬತ್ತು ಶಿಕ್ಷಕರನ್ನು ಆಯ್ಕೆ ಮಾಡಿತು. ಅವರಲ್ಲಿ ಮೊದಲ ಬಾರಿಗೆ ರಾಜ್ಯದ ಇಬ್ಬರಿಗೆ ಪ್ರಶಸ್ತಿ ದೊರೆತಿದ್ದು, ನಾನೂ ಒಬ್ಬಳಾಗಿರುವುದು ತುಂಬಾ ಖುಷಿ ಕೊಟ್ಟಿದೆ’.

ಕೇಂದ್ರ ಸರ್ಕಾರದ ಯೋಜನೆ ‘ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ’ 2004ರಿಂದ ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬಂದಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಈಚೆಗೆ. ಆದರೆ ರಾಷ್ಟ್ರ ಪ್ರಶಸ್ತಿ ನೀಡುವ ಯೋಜನೆ ಆರಂಭವಾಗಿದ್ದು 2010ರಿಂದ. 

ಈ ಮೊದಲು ಶಾಲೆಗಳಲ್ಲಿ ಇನ್ನಿತರ ವಿಷಯಗಳ ಜತೆ ಕಂಪ್ಯೂಟರ್ ಕಲಿಕೆ ಸಹ ಒಂದು ವಿಷಯವಾಗಿತ್ತಷ್ಟೆ. ಕಳೆದ ಮೂರ್ನಾಲ್ಕು ವರ್ಷಗಳಿಂದೀಚೆಗೆ ಶಿಕ್ಷಣದಲ್ಲಿ ಐಸಿಟಿ ಅಳವಡಿಕೆಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿತು. ಪರಿಣಾಮವಾಗಿ ಸರ್ವ ಶಿಕ್ಷಾ ಅಭಿಯಾನದಡಿ ರಾಜ್ಯದ ಶಿಕ್ಷಕರಿಗೆ ಐಸಿಟಿ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಯಿತು. ಆದರೆ ಕೇವಲ 13 ಶಿಕ್ಷಕರು ತರಬೇತಿಗೆ ಹಾಜರಾದೆವು. ಬಳಿಕ ತಮ್ಮನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ (ಆರ್‌ಎಂಎಸ್‌ಎ) ರಾಜ್ಯ ಸಂಪನ್ಮೂಲ ವ್ಯಕ್ತಿಗಳನ್ನಾಗಿ ನೇಮಿಸಿಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಬೋಧಿಸುವುದಲ್ಲದೆ ರಾಜ್ಯದಿಂದ ಆಯ್ಕೆಯಾದ ಶಿಕ್ಷಕರಿಗೆ ತರಬೇತಿ ನೀಡುವುದು ಆರಂಭವಾಯಿತು ಎಂದು ಅವರು ಹೇಳಿಕೊಂಡರು.

ಶೈಕ್ಷಣಿಕ ಸಂಪನ್ಮೂಲಗಳು
ತಂತ್ರಜ್ಞಾನ ಬಳಕೆ ವ್ಯಾಪಕವಾದ ಮಾಹಿತಿ ಜಾಲವನ್ನು ಒದಗಿಸುತ್ತದೆ. ಇದರ ಮಧ್ಯೆ ತಮಗೆ ಬೇಕಾದ ಮಾಹಿತಿ ಅಥವಾ ಸಂಪನ್ಮೂಲವನ್ನು ಎಲ್ಲಿ, ಹೇಗೆ ಪಡೆಯವುದು ಎಂಬುದೇ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರವಾಗಿ ನಿರ್ಮಾಣವಾಗಿದ್ದೇ ‘ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು’ (ಕೆಒಇಆರ್) ಎಂಬ ವೆಬ್‌ಸೈಟ್‌. ರಾಜ್ಯ ಸರ್ಕಾರದ ನೆರವಿನಿಂದ ಶಿಕ್ಷಕರ ಸಮುದಾಯವೇ ಇದನ್ನು ನಿರ್ಮಿಸಿದೆ.

ಶಿಕ್ಷಕರು ತಮ್ಮ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸಂಪನ್ಮೂಲಗಳನ್ನು ಇಲ್ಲಿ ಉಚಿತವಾಗಿ ಪಡೆಯಬಹುದು. ರಾಜ್ಯದ ಯಾವುದೇ ಶಾಲೆಗಳ ಪಠ್ಯ ರಚನೆ, ಪ್ರಶ್ನೆಪತ್ರಿಕೆ, ಬೋಧನಾ ವಿಧಾನಗಳನ್ನು ಸಹ ಇಲ್ಲಿ ವೀಕ್ಷಿಸಬಹುದು
ಎನ್ನುತ್ತಾರೆ ರಾಧಾ.

ಅಷ್ಟೇ ಅಲ್ಲದೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಹಯೋಗದಲ್ಲಿ  ಮುಕ್ತ ಆಕರ ತಂತ್ರಾಂಶಗಳ (Open Source Softwares) ಕಾರ್ಯಕ್ರಮಗಳನ್ನು ರಚಿಸಲಾಗಿದ್ದು, ಇಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಗೆ ಬೇಕಾಗುವ ತಂತ್ರಾಂಶಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು. 

ಕರ್ನಾಟಕದಲ್ಲಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವು “ವಿಷಯ ಶಿಕ್ಷಕರ ವೇದಿಕೆ’ (Subject Teachers Forum) ಎಂಬ ಗೂಗಲ್ ಗ್ರೂಪ್ ರಚಿಸಿದೆ. ಸದ್ಯ 1500 ಸದಸ್ಯರು ಈ ವೇದಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ, ಆಸಕ್ತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ವೇದಿಕೆಯಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳುವ ಮೂಲಕ ಕ್ರಿಯಾತ್ಮಕ ಕಲಿಕೆಗೆ ಸಹಾಯವಾಗುವಂತಹ ಯಾವುದೇ ವಿಷಯಗಳ ಬಗ್ಗೆ ಚರ್ಚೆ, ವಿಚಾರ ವಿನಿಮಯ ನಡೆಸಬಹುದು ಎನ್ನುತ್ತಾರೆ ರಾಧಾ.

ಪಠ್ಯದಲ್ಲಿ ಐಸಿಟಿ ಬಳಕೆ
‘ಗಣಿತ ವಿದ್ಯಾರ್ಥಿಗಳಿಗೆ ಸದಾ ಭಯ ಹುಟ್ಟಿಸುವ ವಿಷಯ. ಗಣಿತದೆಡೆಗೆ ವಿದ್ಯಾರ್ಥಿಗಳ ಆಕರ್ಷಿಸಲು ಈ ಮುಕ್ತ ಆಕರ ತಂತ್ರಾಂಶಗಳು ನನಗೆ ಹೆಚ್ಚು ಸಹಾಯಕ. ಒಂದು ವೀಡಿಯೊ ತುಣುಕು, ಇಲ್ಲವೇ ಒಂದು ಚಿತ್ರ ತೋರಿಸುವದರಿಂದ ವಿದ್ಯಾರ್ಥಿಗಳಿಗೆ ಬೇಗ ವಿಷಯ ಅರ್ಥವಾಗುತ್ತೆ ಅಂತಾದ್ರೆ ಗಂಟೆಗಟ್ಟಲೆ ಪಾಠ ಮಾಡುವುದು ವ್ಯರ್ಥ ಎನಿಸುತ್ತೆ. ಈ ನಿಟ್ಟಿನಲ್ಲಿ ಕಂಪ್ಯೂಟರಿನಲ್ಲಿ ಜಿಯೋಜಿಬ್ರಾ (ರೇಖಾಗಣಿತ, ಬೀಜಗಣಿತ ಮತ್ತು ಕಲನಶಾಸ್ತ್ರದ ಅಪ್ಲಿಕೇಶನ್)ಬಳಸಿ ಬಹುಭುಜಾಕೃತಿಗಳ ರಚನೆ ಮಾಡುವ ಮಾದರಿ ರೂಪಿಸಿದ್ದೇನೆ. banglore.karnatakaeducation.org.in  ವೆಬ್ ಸೈಟ್ ನಲ್ಲಿ ಅದು ಲಭ್ಯ’ ಎಂದರು.

ಪ್ರಶಸ್ತಿಗೆ ಅರ್ಹರು
ಸರ್ಕಾರಿ ಶಾಲೆಗಳು, ಸರ್ಕಾರದ ಅನುದಾನಿತ ಶಾಲೆಗಳು, ಕೇಂದ್ರ ಸರ್ಕಾರದ ಶಾಲೆಗಳು, ಸಿಬಿಎಸ್‌ಸಿ ಹಾಗೂ ಸಿಐಎಸ್‌ಸಿಇ ಶಾಲೆಗಳ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಈ ಪ್ರಶಸ್ತಿಗೆ ಅರ್ಹರು. ಪ್ರಶಸ್ತಿ ಪುರಸ್ಕೃತರಿಗೆ ಪ್ರಮಾಣ ಪತ್ರದ ಜತೆಗೆ ಲ್ಯಾಪ್‌ಟ್ಯಾಪ್ ಮತ್ತು ಐಸಿಟಿ ಕಿಟ್ ನೀಡಲಾಗುವುದು.

ಮಾಹಿತಿ ಕೊರತೆ

ತಾಂತ್ರಿಕ ದೋಷವಷ್ಟೇ ಅಲ್ಲದೆ ಮಾಹಿತಿ ಕೊರತೆ ಮತ್ತು ನಿರ್ಲಕ್ಷ್ಯದಿಂದಲೂ ರಾಜ್ಯದ ಶೇಕಡ 5ರಷ್ಟು ಶಾಲೆಗಳು ಮಾತ್ರ ಐಸಿಟಿ ಕಲಿಕೆಯ ಪ್ರಯೋಜನ ಪಡೆದುಕೊಳ್ಳುತ್ತಿವೆ. ಸರ್ಕಾರ ಮತ್ತು ಶಿಕ್ಷಣ  ಇಲಾಖೆ ಗಣಕಾಧಾರಿತ ಶಿಕ್ಷಣಪದ್ಧತಿಯ ಮಹತ್ವದ ಅರಿವು ಮೂಡಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ .
–ರಾಜೇಶ್ ವೈ ಎನ್, ಶಿಕ್ಷಕ ಮಲ್ಲುಪುರ ಸರ್ಕಾರಿ ಪ್ರೌಢಶಾಲೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT