ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ 10,899 ವಿದೇಶಿ ವಿದ್ಯಾರ್ಥಿಗಳು

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 10,899 ವಿದೇಶಿ ವಿದ್ಯಾರ್ಥಿಗಳು ವಾಸಿಸುತ್ತಿದ್ದು, ಈ ಪೈಕಿ 62 ಮಂದಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಗೃಹ ಸಚಿವ ಆರ್.ಅಶೋಕ ಅವರು ಸೋಮವಾರ ವಿಧಾನ ಪರಿಷತ್‌ಗೆ ತಿಳಿಸಿದರು.

ಬಿಜೆಪಿ ಸದಸ್ಯ ಮೋಹನ ಎ.ಲಿಂಬಿಕಾಯಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಇರಾನ್, ಇರಾಕ್, ಅಪ್ಘಾನಿಸ್ತಾನ, ನೈಜೀರಿಯಾ ಮತ್ತು ಮಂಗೋಲಿಯಾ ಮೂಲದ ವಿದೇಶಿ ವಿದ್ಯಾರ್ಥಿಗಳು ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. 62 ವಿದ್ಯಾರ್ಥಿಗಳ ವಿರುದ್ಧ 44 ಮೊಕದ್ದಮೆಗಳನ್ನು ಈವರೆಗೆ ದಾಖಲಿಸಲಾಗಿದೆ. 18 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, 26 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದರು.

ವಿದೇಶಿ ವಿದ್ಯಾರ್ಥಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಆಯಾ ದೇಶಗಳ ಆಡಳಿತಕ್ಕೆ ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳೂ ಸೇರಿದಂತೆ ವಿದೇಶಿಯರ ಚಲನವಲನಗಳ ಮೇಲೆ ನಿರಂತರವಾಗಿ ನಿಗಾ ಇಡಲಾಗುತ್ತದೆ ಎಂದರು.

ಮೂರು ಹೊಸ ಜೈಲು
ರಾಜ್ಯದ ಕಾರಾಗೃಹಗಳಲ್ಲಿ ನಿಗದಿತ ಮಿತಿಗಿಂತಲೂ ಹೆಚ್ಚಿನ ಕೈದಿಗಳಿದ್ದಾರೆ. ಇದರಿಂದಾಗಿ ಅವರನ್ನು ಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ನಗರಗಳಲ್ಲಿ ಹೊಸ ಕಾರಾಗೃಹಗಳನ್ನು ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಬಂದಿಖಾನೆ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.

ಬಿಜೆಪಿ ಸದಸ್ಯ ಲೆಹರ್ ಸಿಂಗ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಒಟ್ಟು 12,088 ಕೈದಿಗಳನ್ನು ಇಡಲು ಅವಕಾಶವಿದೆ. ಆದರೆ ಈಗ ಒಟ್ಟು 12,940 ಕೈದಿಗಳಿದ್ದಾರೆ. ಕೆಲವು ಕಾರಾಗೃಹಗಳಲ್ಲಿ ನಿಗದಿತ ಮಿತಿಗಿಂತಲೂ ಹೆಚ್ಚು ಕೈದಿಗಳಿದ್ದಾರೆ. ಇದರಿಂದಾಗಿ ಅವರ ಚಲನವಲನವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕೈದಿಗಳು ಮೊಬೈಲ್ ದೂವಾಣಿ ಮೂಲಕ ಹೊರಗಿನ ಪಾತಕಿಗಳನ್ನು ಸಂಪರ್ಕಿಸಲು ಇದೇ ಕಾರಣ ಎಂದರು.

ಮೈಸೂರು ಕಾರಾಗೃಹದಲ್ಲಿ ಈಗಾಗಲೇ `ಮೊಬೈಲ್ ಜಾಮರ್~ ಅಳವಡಿಸಲಾಗಿದೆ. ಶೇಕಡ 80ರಷ್ಟು ತರಂಗಾಂತರಗಳನ್ನು ತಡೆಯುವಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ. ಇನ್ನೂ ಹಲವು ಕಾರಾಗೃಹಗಳಿಗೆ ಜಾಮರ್ ಅಳವಡಿಸಲು 9 ಕೋಟಿ ರೂಪಾಯಿ ಅನುದಾನ ನೀಡಿದ್ದು, ಅದಕ್ಕಾಗಿ ಅನುಮತಿಗೆ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆಗಾಗ ಕೈದಿಗಳ ಕೊಠಡಿಗಳ ತಪಾಸಣೆ ನಡೆಸುತ್ತಿದ್ದು, ಈವರೆಗೆ ನಾಲ್ಕು ಸಾವಿರ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರಾಗೃಹಗಳಲ್ಲಿ 24 ಗಂಟೆಗಳ ಕಣ್ಗಾವಲು ವ್ಯವಸ್ಥೆ ಮಾಡುವ ಯೋಚನೆಯೂ ಇದೆ ಎಂದು ಹೇಳಿದರು.

ಹಾಲು, ಮೊಟ್ಟೆ ವಿತರಣೆ
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದ ವತಿಯಿಂದ ಹಾಲು ಮತ್ತು ಮೊಟ್ಟೆ ಪೂರೈಸಲು ಯೋಚಿಸಿದ್ದು, ಶೀಘ್ರದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಕಾಂಗ್ರೆಸ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, `ಅಪ್ರಾಪ್ತ ವಯಸ್ಸಿನ ಬಾಲಕಿಯರ ವಿವಾಹವೇ ಮಕ್ಕಳಲ್ಲಿನ ಅಪೌಷ್ಟಿಕತೆಗೆ ಪ್ರಮುಖ ಕಾರಣ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಪೌಷ್ಟಿಕತೆಯಿಂದ ಬಳಲುವ ಎಲ್ಲ ಮಕ್ಕಳಿಗೆ ಸರ್ಕಾರದ ವತಿಯಿಂದಲೇ ಹಾಲು ಮತ್ತು ಮೊಟ್ಟೆ ಒದಗಿಸಲಾಗುವುದು~ ಎಂದರು.

ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಪಿಜಿಇಟಿ) ಎಲ್ಲ ಉತ್ತರ ಪತ್ರಿಕೆಗಳನ್ನು ಪರೀಕ್ಷೆ ನಡೆದ 24 ಗಂಟೆಗಳ ಒಳಗಾಗಿ ಸ್ಕ್ಯಾನಿಂಗ್ ಮಾಡಿ, ಕಂಪ್ಯೂಟರ್‌ಗಳಲ್ಲಿ ಸಂಗ್ರಹಿಸಿಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಹೇಳಿದರು.

ಬಿಜೆಪಿ ಸದಸ್ಯ ಮೋಹನ ಲಿಂಬಿಕಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, `2011-12ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಪಿಜಿಇಟಿ ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದರೆ, ಸರ್ಕಾರಕ್ಕೆ ಈವರೆಗೂ ಅಂತಿಮ ವರದಿ ಸಲ್ಲಿಸಿಲ್ಲ~ ಎಂದರು. `ಇತ್ತೀಚೆಗೆ ನಡೆದ ಪಿಜಿಇಟಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಪ್ರಯತ್ನಿಸಿದ ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಪರೀಕ್ಷೆ ನಡೆದ ದಿನವೇ ಎಲ್ಲ ಉತ್ತರ ಪತ್ರಿಕೆಗಳನ್ನೂ ಸ್ಕ್ಯಾನಿಂಗ್ ಮಾಡಿ ಸಂಗ್ರಹಿಸಿ ಇಡಲಾಗಿದೆ. ಅಕ್ರಮಕ್ಕೆ ಯಾವುದೇ ರೀತಿಯ ಅವಕಾಶ ನೀಡಿಲ್ಲ~ ಎಂದರು.
42,252 ಮಂದಿ ನಾಪತ್ತೆ

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 42,252 ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗಿದ್ದು, ಈ ಪೈಕಿ 26,719 ಜನರನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವ ಆರ್.ಅಶೋಕ ತಿಳಿಸಿದರು.
ಜೆಡಿಎಸ್ ಸದಸ್ಯ ಅಬ್ದುಲ್ ಅಜೀಂ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಕುರಿತು ವಿವರ ಒದಗಿಸಿರುವ ಸಚಿವರು, 2007ರಿಂದ 2011ರ ಅವಧಿಯಲ್ಲಿ 22,447 ಮಹಿಳೆಯರು ಮತ್ತು 22,805 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಪೈಕಿ 12,570 ಮಹಿಳೆಯರು ಮತ್ತು 14,419 ಮಕ್ಕಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT