ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಅನುರಣಿಸಿದ ಗಾಂಧಿ ಸ್ಮೃತಿ

Last Updated 2 ಅಕ್ಟೋಬರ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸರ್ವಧರ್ಮ ಪ್ರಾರ್ಥನಾ ಸಭೆ, ಪಾದಯಾತ್ರೆ, ಬೂಟು ಪಾಲೀಶ್, ಬೈಕ್ ರ‌್ಯಾಲಿ, ಉಚಿತ ನೇತ್ರ ತಪಾಸಣೆ... ಗಾಂಧಿ ಜಯಂತಿ ಹಾಗೂ ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ `ಬಾಪು~ವನ್ನು ಸ್ಮರಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಯಿಂದ ಕುಮಾರಕೃಪ ಪಾರ್ಕ್ ರಸ್ತೆಯ ಗಾಂಧಿ ಸ್ಮಾರಕದವರೆಗೆ `ಸದ್ಭಾವನಾ ಜಾಗೃತಿ ಯಾತ್ರೆ~ ಹಮ್ಮಿಕೊಂಡಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಪತ್ನಿ ಡಾಟಿ, `ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮದ್ಯಪಾನ, ದೂಮಪಾನ, ಹಾಗೂ ಮಾದಕ ವಸ್ತುಗಳ ಬಗ್ಗೆ ಜನ ಜಾಗೃತಿ ಹೋರಾಟಗಳು ನಡೆದಿದ್ದವು. ಈಗ ಅಂತಹ ಹೋರಾಟ ನಡೆಸುವ ಸಂದರ್ಭ ಒದಗಿ ಬಂದಿದೆ. ಗಾಂಧೀಜಿಯವರ ಮೌಲ್ಯಗಳನ್ನು ಅನುಸರಿಸಿ ಸಮಾಜಕ್ಕೆ ಪಿಡುಗಾಗಿರುವ ದುಶ್ಚಟಗಳ ನಿವಾರಣೆಗೆ ಮುಂದಾಗಬೇಕು~ ಎಂದರು.

ಕಾರ್ಯಕ್ರಮದಲ್ಲಿ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, ಗಾಂಧಿವಾದಿ ಹೊ.ವೆ.ಶ್ರೀನಿವಾಸಯ್ಯ, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಸಿದ್ಧಾರ್ಥ ಶರ್ಮ, ಪ್ರೊ.ಎಚ್.ಆರ್.ದಾಸೇಗೌಡ, ಮಂಡಳಿಯ ಕಾರ್ಯದರ್ಶಿ ಎಚ್.ಬಿ. ದಿನೇಶ್ ಮುಂತಾದವರು ಭಾಗವಹಿಸಿದ್ದರು.

ಬಡವರ ಪರ ನಿಲುವು: ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಆರ್ಥಿಕ ಬದಲಾವಣೆ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ.ಎಂ.ವಿ.ನಾಡಕರ್ಣಿ ಅವರು `ಅಭಿವೃದ್ಧಿ ಕುರಿತು ಗಾಂಧೀಜಿ ನಿಲುವು~ ಕುರಿತು ವಿಶೇಷ ಉಪನ್ಯಾಸ ನೀಡಿದರು.

`ಗಾಂಧೀಜಿಯವರ ಅಭಿವೃದ್ಧಿ ನೀತಿ ಕೇವಲ ಸಮಗ್ರವಾದುದಷ್ಟೇ ಅಲ್ಲದೆ ಬಡವರ ಪರವಾಗಿತ್ತು. ಪ್ರಜೆಗಳಿಂದ ನಡೆಯುವ ಅಭಿವೃದ್ಧಿಯಾಗಿದ್ದರಿಂದ ಅದು ಹೆಚ್ಚು ಪ್ರಜಾಸತ್ತಾತ್ಮಕವಾಗಿತ್ತು. ವಿಕೇಂದ್ರೀಕೃತವಾದ ಗ್ರಾಮೀಣ ಪ್ರದೇಶಗಳಿಗೆ ಒತ್ತು ನೀಡಿತ್ತು. ಪಾರದರ್ಶಕತೆಯನ್ನು ನಂಬಿದ್ದ ಅದು ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಿತ್ತು. ಪರಿಸರ ಸ್ನೇಹಿಯಾಗಿ ಸಕಲ ಜೀವ ಸಂಕುಲಗಳ ಒಳಿತನ್ನು ಎತ್ತಿ ಹಿಡಿದಿತ್ತು ಎಂದು ಅವರು ಹೇಳಿದರು.

`ಭಾರತವನ್ನೂ ಒಳಗೊಂಡಂತೆ ವಿಶ್ವದಲ್ಲಿ ಶಿಶುಮರಣ, ತಾಯಂದಿರ ಮರಣ ಹೆಚ್ಚಿರುವಾಗ ಆರ್ಥಿಕ ಬೆಳವಣಿಗೆಗೆ ಅರ್ಥ ಇಲ್ಲದಂತಾಗಿದೆ. ನಗರಗಳು ಪಟ್ಟಣಗಳಲ್ಲಿ ಮಾತ್ರ ಅಭಿವೃದ್ಧಿಯಾಗುತ್ತಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಕುಸಿದಿದೆ. ಜಾಗತೀಕರಣ ವೈವಿಧ್ಯತೆಯನ್ನು ಬದಿಗೊತ್ತಿ ಏಕರೂಪತೆಯನ್ನು ಬೆಂಬಲಿಸುತ್ತಿದೆ~ ಎಂದು ಟೀಕಿಸಿದರು.

ವಿವಿಯ ಪ್ರದರ್ಶನ ಕಲಾ ವಿಭಾಗದ ಪ್ರಾಧ್ಯಾಪಕಿ ಪ್ರೊ. ಬಿ.ಎಂ.ಜಯಶ್ರೀ ಅವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಗಾಂಧಿ ಅವರನ್ನು ಕುರಿತು ಆಕ್ಸಫರ್ಡ್ ವಿವಿ ಪ್ರಕಾಶನ ಪ್ರಕಟಿಸಿರುವ ಗ್ರಂಥಗಳನ್ನು ಪ್ರದರ್ಶಿಸಲಾಯಿತು. ಕುಲಪತಿ ಪ್ರೊ. ಎನ್.ಪ್ರಭುದೇವ್, ಕಾರ್ಯಕ್ರಮ ಸಂಯೋಜಕಿ ಕೆ.ಕೃಪಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಬಿಬಿಎಂಪಿ ಸರ್ವಧರ್ಮ ಪ್ರಾರ್ಥನಾ ಸಭೆ ನಡೆಸಿತು. ಹಿಂದೂ, ಕ್ರೈಸ್ತ, ಸಿಖ್, ಬೌದ್ಧ ಧರ್ಮಗಳ ನಾಯಕರು ಪವಿತ್ರ ಗ್ರಂಥಗಳಿಂದ ಆಯ್ದ ಸಂದೇಶಗಳನ್ನು ವಾಚಿಸಿದರು. ಮೇಯರ್ ಶಾರದಮ್ಮ, ಉಪ ಮೇಯರ್‌ಎಸ್.ಹರೀಶ್, ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ವಿರೋಧ ಪಕ್ಷದ ನಾಯಕ ಉದಯಶಂಕರ್, ಪಾಲಿಕೆ ಆಯುಕ್ತ ಸಿದ್ದಯ್ಯ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಬೂಟ್ ಪಾಲಿಶ್: ಸರ್ವರ ಸೇವೆಗಾಗಿ ಸರ್ವರ ಏಕತಾ ಪ್ರತಿಷ್ಠಾನದ ಸದಸ್ಯರು ಭಾನುವಾರ ಪ್ರತಿಮೆ ಎದುರು ಬೂಟು ಪಾಲಿಶ್ ಮಾಡಿದರು. ಇದೇ ಸ್ಥಳದಲ್ಲಿ ಅಣ್ಣಾ ಹಜಾರೆ ಅವರಿಗೆ ಬೆಂಬಲ ವ್ಯಕ್ತಪಡಿಸಿ `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಯ ಸದಸ್ಯರು ಘೋಷಣೆಗಳನ್ನು ಕೂಗಿದರು.

ಬೆಂಗಳೂರು ಉತ್ತರ ಜಿಲ್ಲೆ ಶಿವಾಜಿನಗರ ಸ್ಥಳೀಯರ ಸಂಘಟನೆ ಕೋಲ್ಸ್‌ಪಾರ್ಕ್‌ನಲ್ಲಿ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡಿತ್ತು. ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧ ಹೇರುವಂತೆ ಒತ್ತಾಯಿಸಿ ಓಂ ಶ್ರೀ ನಾರಾಯಣ ಪ್ರತಿಷ್ಠಾನದ ಸದಸ್ಯರು ಹೊರಮಾವು ವೃತ್ತದಿಂದ ಗಾಂಧಿ ಪ್ರತಿಮೆಯವರೆಗೆ ಬೈಕ್ ರ‌್ಯಾಲಿ ನಡೆಸಿದರು.

ದೊಮ್ಮಲೂರು ಬಡಾವಣೆ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೊಂದಿಗೆ ಪಾಲಿಕೆ ಸದಸ್ಯೆ ಗೀತಾ ಬಾಲಸುಬ್ರಹ್ಮಣ್ಯ ಭಾಗವಹಿಸಿದ್ದರು. ನಗರದ ಮಾಲ್ ಒಂದರಲ್ಲಿ ಗ್ರಾಹಕರಿಗೆ `ಈಶ್ವರ ಅಲ್ಲಾ ತೇರೊ ನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್~ ಸಂದೇಶವಿರುವ ಗಾಂಧಿ ಟೋಪಿಯನ್ನು ಉಚಿತವಾಗಿ ವಿತರಿಸಲಾಯಿತು.

ನೇತ್ರ ಶಿಬಿರ: ಗಾಂಧಿ ಜಯಂತಿ ಅಂಗವಾಗಿ ಬನಶಂಕರಿಯ ಅಕ್ಷಯ ಪ್ರತಿಷ್ಠಾನ ಉಚಿತ ನೇತ್ರ ತಪಾಸಣೆ, ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. 62 ಮಂದಿಗೆ ನೇತ್ರ ತಪಾಸಣೆ ಹಾಗೂ 13 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪಾಲಿಕೆ ಸದಸ್ಯ ವೆಂಕಟಸ್ವಾಮಿ ನಾಯ್ಡು, ದೊಡ್ಡಬಳ್ಳಾಪುರದ ಪುಷ್ಯ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ದಯಾನಂದ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೋಟೆ ಕಲಾ ಅಕಾಡೆಮಿ ಟ್ರಸ್ಟ್, ಗಾಂಧಿ ಜಯಂತಿ ದಿನ ಗಾಂಧೀಜಿ ದೇಶಕ್ಕೆ ಬಂದರೆ ಏನಾಗಬಹುದು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸುವ `ತಾತ ಬಂದ್ರು~ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಬುದ್ಧ, ಬಸವ, ಗಾಂಧಿ ಸ್ಮಾರಕ ಟ್ರಸ್ಟ್ `ಗಾಂಧಿ ವಿಚಾರಗಳ ಪ್ರಸ್ತುತತೆ- ವಚನ- ದಾಸ ಸಾಹಿತ್ಯ~ ವಿಚಾರಗೋಷ್ಠಿ ಹಮ್ಮಿಕೊಂಡಿತ್ತು. ಸುಚಿತ್ರ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಪತ್ರಕರ್ತರಾದ ಎಸ್.ಕೆ. ಶೇಷಚಂದ್ರಿಕ ಅವರು `ಪತ್ರಕರ್ತರಾಗಿ ಗಾಂಧಿ~ ವಿಷಯ ಕುರಿತು ಉಪನ್ಯಾಸ ನೀಡಿದರು.

ಗಾಂಧಿ ಬ3ಜಾರ್ ವಿಚಾರ ವೇದಿಕೆ ಗಾಂಧಿವಾದಿ ವಿ. ಅಣ್ಣಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಜನರು ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT