ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಏಳು ಮಂದಿ ಆತ್ಮಹತ್ಯೆ

ನೇಣಿಗೆ ಶರಣಾದ ವಿದ್ಯಾರ್ಥಿನಿಯರು
Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ಸಿಟಿ, ಪೀಣ್ಯ, ಗಿರಿನಗರ, ವಿದ್ಯಾರಣ್ಯಪುರ, ಚಂದ್ರಾಲೇಔಟ್, ಮಹಾಲಕ್ಷ್ಮಿಲೇಔಟ್, ಸೆಂಟ್ರಲ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಪತ್ನಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಪ್ರಗತಿನಗರ ನಿವಾಸಿ ಅಜಯ್ ಎಂಬುವರ ಪತ್ನಿ ಮಮತಾ (25) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಡಿಶಾ ಮೂಲದ ಅಜಯ್ ಮತ್ತು ಮಮತಾ ಅವರ ವಿವಾಹವಾಗಿ ಎರಡು ವರ್ಷವಾಗಿತ್ತು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅಜಯ್ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಮತಾ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಒಡಿಶಾದಲ್ಲಿರುವ ಮೃತರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರ ಹೇಳಿಕೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೀಣ್ಯ: ದೊಡ್ಡ ಬಿದರಕಲ್ಲು ಬಳಿಯ ಮಾರುತಿ ಬಡಾವಣೆ ನಿವಾಸಿ ಆಂಜನಪ್ಪ ಎಂಬುವರ ಪುತ್ರಿ ಹರ್ಷಿತಾ (16) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಕೆ ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು. ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಗಳಾಗಿರುವ ಆಂಜನಪ್ಪ ಮತ್ತು ಅವರ ಪತ್ನಿ ಪ್ರೇಮಾ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹರ್ಷಿತಾ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾಳೆ. ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಿರಿನಗರ: ಹೊಸಕೆರೆಹಳ್ಳಿ ಸಮೀಪದ ಡಿಸೋಜಾನಗರ ಎರಡನೇ ಅಡ್ಡರಸ್ತೆ ನಿವಾಸಿ ಸುದರ್ಶನ್ ಭಟ್ ಎಂಬುವರ ಮಗಳು ಸುರಭಿ ಭಟ್ (16) ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಆಕೆ ಕುಟುಂಬ ಸದಸ್ಯರೆಲ್ಲಾ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಗಿರಿನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ವಿದ್ಯಾರಣ್ಯಪುರ: ದೊಡ್ಡಬೊಮ್ಮಸಂದ್ರ ನಿವಾಸಿ ಸತೀಶ್ ಎಂಬುವರ ಪತ್ನಿ ಸುಧಾಮಣಿ (31) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರ ಮದುವೆಯಾಗಿ ಆರೂವರೆ ವರ್ಷವಾಗಿತ್ತು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಮೂರು ತಿಂಗಳ ಗರ್ಭಿಣಿಯಾಗಿದ್ದರು. ಯಲಹಂಕ ಬಳಿಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತೀಶ್, ಕೆಲಸಕ್ಕೆ ಹೋಗಿದ್ದಾಗ ಅವರು ನೇಣು ಹಾಕಿಕೊಂಡಿದ್ದಾರೆ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದ್ದಾರೆ.

`ತವರು ಮನೆಯಿಂದ ಹಣ ಹಾಗೂ ಚಿನ್ನಾಭರಣ ತರುವಂತೆ ಪತಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ, ಸಣ್ಣಪುಟ್ಟ ಕಾರಣಕ್ಕೂ ನಿಂದಿಸುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸುಧಾಮಣಿ ಪತ್ರ ಬರೆದಿಟ್ಟಿದ್ದಾರೆ.

ಘಟನೆ ಸಂಬಂಧ ಅವರ ತಂದೆ ಸತ್ಯನಾರಾಯಣ ಅವರು ದೂರು ನೀಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಂದ್ರಾಲೇಔಟ್: ಅತ್ತಿಗುಪ್ಪೆ ಬಸ್ ನಿಲ್ದಾಣದ ಬಳಿಯ ಬಿಬಿಎಂಪಿ ಉದ್ಯಾನದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ವ್ಯಕ್ತಿಯ ವಯಸ್ಸು ಸುಮಾರು 35 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ಆ ವ್ಯಕ್ತಿ ಉದ್ಯಾನದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾಗಿದೆ.

ಮಹಾಲಕ್ಷ್ಮಿಲೇಔಟ್: ಬಡಾವಣೆಯ 17ನೇ ಅಡ್ಡರಸ್ತೆ ನಿವಾಸಿ ಸುರೇಶ್ (40) ಎಂಬುವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೀತಲ್ ಎಂಬುವರನ್ನು ವಿವಾಹವಾಗಿದ್ದ ಸುರೇಶ್, ವ್ಯವಹಾರದಲ್ಲಿ ನಷ್ಟ ಅನುಭವಿಸಿ ಸುಮಾರು ಹತ್ತು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಅಲ್ಲದೇ, ದಂಪತಿ ನಡುವೆ ಆಸ್ತಿ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿ ಜಗಳವಾಗಿತ್ತು. ಇದರಿಂದ ಬೇಸರಗೊಂಡಿದ್ದ ಶೀತಲ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿಗೆ ಬೆದರಿಕೆ ಹಾಕುತ್ತಿದ್ದರು. ಈ ವಿಷಯವಾಗಿ ಪರಸ್ಪರರ ನಡುವೆ ಮಧ್ಯಾಹ್ನ ವಾಗ್ವಾದ ನಡೆದಿದೆ. ಇದರಿಂದ ಮನನೊಂದ ಸುರೇಶ್, ಪತ್ನಿ ನಿದ್ರಿಸುತ್ತಿದ್ದಾಗ ಪ್ರತ್ಯೇಕ ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾಲಕ್ಷ್ಮಿಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸೆಂಟ್ರಲ್ ಠಾಣೆ: ಪಾರ್ವತಿಪುರ ನಿವಾಸಿ ರಾಜು (34) ಎಂಬುವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಒಂಬತ್ತು ವರ್ಷವಾಗಿದ್ದರೂ ರಾಜು ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಬೇಸರಗೊಂಡು ಅವರು ನೇಣು ಹಾಕಿಕೊಂಡಿದ್ದಾರೆ. ಸೆಂಟ್ರಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT