ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಪ್ರಪ್ರಥಮ ಆಕರ ಕೋಶ ಚಿಕಿತ್ಸೆ

Last Updated 15 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗುಣಪಡಿಸಲಾಗದ ಮತ್ತು ಸಾಮಾನ್ಯವಾದ ನಾಲ್ಕು ಕಾಯಿಲೆಗಳಿಗೆ ಇದೇ ಏಪ್ರಿಲ್‌ನಲ್ಲಿ ಆಕರ ಕೋಶದ ಚಿಕಿತ್ಸಾ ಪ್ರಯೋಗ ನಡೆಯಲಿದೆ.

ಆಕರ ಕೋಶ ಚಿಕಿತ್ಸೆಯ ಫಲದಾಯಕತೆ ಪತ್ತೆ ಹಚ್ಚುವ ಸಲುವಾಗಿ ಎರಡನೇ ಹಂತದ ಚಿಕಿತ್ಸಾ ಪ್ರಯೋಗ ನಡೆಸಲು ಭಾರತೀಯ ಔಷಧ ಮಹಾ ನಿಯಂತ್ರಕರು ಬೆಂಗಳೂರು ಮೂಲದ ಸ್ಟೆಂಪ್ಯುಟಿಕ್ಸ್ ರೀಸರ್ಚ್ ಕಂಪೆನಿಗೆ  ಅನುಮತಿ ನೀಡಿದ್ದಾರೆ.

ಮಧುಮೇಹ- ಟೈಪ್ 2, ಆಲ್ಕೋಹಾಲಿಕ್ ಲಿವರ್ ಸಿರೋಸಿಸ್, ಆಸ್ಟಿಯೊ ಆರ್ಥರೈಟಿಸ್ ಮತ್ತು ಶ್ವಾಸಕೋಶದ ಅಂಗಾಂಶಗಳು ಕ್ರಮೇಣ ನಾಶವಾಗುವುದು- ಈ ನಾಲ್ಕು ಕಾಯಿಲೆಗಳ ಸುಮಾರು 200 ರೋಗಿಗಳನ್ನು ಒಳಗೊಂಡಂತೆ ಚಿಕಿತ್ಸಾ ಪ್ರಯೋಗ ನಡೆಯಲಿದೆ.

ಬೆಂಗಳೂರು, ದೆಹಲಿ ಮತ್ತು ಕೊಚ್ಚಿಯಲ್ಲಿ ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ಈ ಪ್ರಯೋಗ ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿದ್ದು ರೋಗಿಗಳಿಗೆ ಆರು ತಿಂಗಳವರೆಗೆ ಚಿಕಿತ್ಸೆ ನೀಡಲಾಗುವುದು. ನಂತರ ಫಲಿತಾಂಶವನ್ನು ವಿಶ್ಲೇಷಿಸಿ ರೋಗಿಗಳ ಬಗ್ಗೆ ಎರಡು ವರ್ಷಗಳವರೆಗೆ  ನಿಗಾ ವಹಿಸಲಾಗುವುದು ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎನ್. ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಯೋಗ ಸಫಲವಾದರೆ, ನಾಲ್ಕು ಕಾಯಿಲೆಗಳನ್ನು ಈ ಚಿಕಿತ್ಸೆ ಶಾಶ್ವತವಾಗಿ ಗುಣಪಡಿಸಲಿದೆ. ಚಿಕಿತ್ಸೆಯಲ್ಲಿ ಬಳಸುವ ಆಕರಕೋಶವನ್ನು ‘ಮೆಸೆಂಕೈಮಲ್ ಆಕರ ಕೋಶ’ ಎಂದು ಕರೆಯಲಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ಅಸ್ಥಿ ಮಜ್ಜೆಯಿಂದ ಇದನ್ನು ಪಡೆಯಲಾಗುತ್ತದೆ.

ಕಂಪೆನಿಯು ಚಿಕಿತ್ಸಾ ಪ್ರಯೋಗಕ್ಕಾಗಿ ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಮತ್ತು ಮಹಾವೀರ್‌ಜೈನ್ ಆಸ್ಪತ್ರೆ ಹಾಗೂ ದೆಹಲಿಯಲ್ಲಿ ಮೆದಾಂತ ಮೆಡಿಸಿಟಿಯ ಸಹಯೋಗ ಪಡೆಯಲಿದೆ.

ರಾಷ್ಟ್ರದಲ್ಲಿ ಇದು ಮೊದಲ ಪ್ರಯೋಗ ಆದ್ದರಿಂದ ಔಷಧ ಮಹಾ ನಿಯಂತ್ರಕರು ಪ್ರಸ್ತಾವನೆ ಪರಿಶೀಲಿಸಲು ಮತ್ತು ಅನುಮತಿ ನೀಡಲು ಸುಮಾರು 15 ತಿಂಗಳು ತೆಗೆದುಕೊಂಡಿದ್ದಾರೆ.

2009ರ ಮಾರ್ಚ್‌ನಲ್ಲಿ ಆಕರ ಕೋಶದ ಚಿಕಿತ್ಸೆಯ ಸುರಕ್ಷತೆ ಬಗ್ಗೆ ಪ್ರತಿ ಕಾಯಿಲೆಗೆ 20 ಮಂದಿ ರೋಗಿಗಳನ್ನು ಒಳಗೊಂಡಂತೆ ಪರೀಕ್ಷಿಸಲಾಗಿದ್ದು ಸುರಕ್ಷತೆ ಸಾಬೀತಾಗಿದೆ.

ಈಗ ಈ ಚಿಕಿತ್ಸಾ ಪ್ರಯೋಗ ಯಶಸ್ವಿಯಾದರೆ, ಭಾರತದ ಮೊದಲ ಆಕರ ಕೋಶದ ಚಿಕಿತ್ಸೆಯನ್ನು 2014- 2015ರ ವೇಳೆಗೆ ನಿರೀಕ್ಷಿಸಬಹುದು ಎಂದು ಆಕರ ಕೋಶ ಕುರಿತ ಭಾರತದ ಪ್ರಮುಖ ಸಂಶೋಧಕ ಸತೀಶ್ ಟೊಟೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT