ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ವಿದ್ಯಾರ್ಥಿ ಸೌವಿಕ್ ಅಂತ್ಯಕ್ರಿಯೆ

Last Updated 31 ಜನವರಿ 2013, 20:07 IST
ಅಕ್ಷರ ಗಾತ್ರ

ಬೆಂಗಳೂರು: ಲಂಡನ್‌ನ ಮ್ಯಾಂಚೆಸ್ಟರ್ ನಗರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆಂಗಳೂರು ವಿದ್ಯಾರ್ಥಿ ಸೌವಿಕ್ ಪಾಲ್ (18) ಶವವನ್ನು ಗುರುವಾರ ನಗರಕ್ಕೆ ತರಲಾಯಿತು. ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಅಂತ್ಯಕ್ರಿಯೆ ನಡೆಯಿತು.

ಶವ ನಗರಕ್ಕೆ ಬರುವ ಸುದ್ದಿ ತಿಳಿದಿದ್ದ ಸೌವಿಕ್ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಹೆಬ್ಬಾಳ ಮೂರನೇ ಮುಖ್ಯರಸ್ತೆಯಲ್ಲಿರುವ ಆತನ ಮನೆ ಬಳಿ ಬೆಳಿಗ್ಗೆಯೇ ಜಮಾಯಿಸಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ಶವ ಪಡೆಯಲು ಪಾಲಿಸಬೇಕಾದ ನಿಯಾಮವಳಿಗಳು ಮುಗಿಯುವುದು ತಡವಾಯಿತು. ಅಂತಿಮವಾಗಿ ಮಧ್ಯಾಹ್ನ12 ಗಂಟೆಗೆ ಶವವನ್ನು ಮನೆಗೆ ತರಲಾಯಿತು. ಶವ ತಂದ ವಾಹನ ಅಪಾರ್ಟ್‌ಮೆಂಟ್ ಬಳಿ ಬರುತ್ತಿದ್ದಂತೆ ಸೌವಿಕ್‌ನ ತಾಯಿ ಮಾಹುಯಾ ಪಾಲ್ ಅವರ ಆಕ್ರಂದನ ಮುಗಿಲು ಮುಟ್ಟಿತು. ಕುಟುಂಬ ಸದಸ್ಯರು ವಾಹನವನ್ನು ಸುತ್ತುವರಿದು ರೋದಿಸಿದರು.

`ದಾದಾಬಾಯಿ ಐ ಲವ್ ಯು' ಎಂದು ಬರೆಯಲಾಗಿದ್ದ ಫಲಕವನ್ನು ಸೌವಿಕ್‌ನ ಸೋದರ ಸಂಬಂಧಿಯೊಬ್ಬರು ಶವದ ಪೆಟ್ಟಿಗೆ ಬಳಿ ತಂದಿಟ್ಟರು. ಅಲ್ಲದೇ, ಸೌವಿಕ್ ಇಷ್ಟಪಟ್ಟಿದ್ದ ಕಿತ್ತಳೆ ಬಣ್ಣದ ಟಿ-ಶರ್ಟ್ ಅನ್ನು ಶವದ ಪೆಟ್ಟಿಗೆ ಸಮೀಪ ಇಟ್ಟರು. ಈ ಮೂಲಕ ಸೌವಿಕ್ ಮೇಲಿದ್ದ ಅಕ್ಕರೆಯನ್ನು ಅವರು ಹೊರ ಹಾಕಿದರು.

ಅಪಾರ್ಟ್‌ಮೆಂಟ್‌ನಲ್ಲಿ ಕೇವಲ 30 ನಿಮಿಷ ಮಾತ್ರ ಶವವನ್ನು ಇಡಲಾಗಿತ್ತು. ನಂತರ ಹೆಬ್ಬಾಳ ವಿದ್ಯುತ್ ಚಿತಾಗಾರಕ್ಕೆ ಶವ ಕೊಂಡೊಯ್ಯಲಾಯಿತು. ಕೊನೆಯ ಬಾರಿ ಮಗನ ಮುಖ ತೋರಿಸುವಂತೆ ಮಾಹುಯಾ ರೋದಿಸಿದ ಪರಿ ಮನಕಲಕುವಂತಿತ್ತು.
`ಐದಾರು ವರ್ಷಗಳಿಂದ ಸೌವಿಕ್‌ನನ್ನು ನೋಡುತ್ತಿದ್ದೇವೆ. ಶಾಂತಸ್ವಭಾವದ ಹುಡುಗ. ಅಂತಹ ಮಗನ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಸ್ಥಳೀಯ ನಿವಾಸಿ ಗೌರಮ್ಮ ಹೇಳಿದರು.

`ಮಕ್ಕಳನ್ನು ವಿದೇಶಕ್ಕೆ ಕಳುಹಿಸುವ ಮುನ್ನ ಹಲವು ಬಾರಿ ಯೋಚಿಸಬೇಕಾದ ಸ್ಥಿತಿ ಬಂದೊದಗಿದೆ. ನಾಪತ್ತೆಯಾಗಿ ತಿಂಗಳು ಕಳೆದ ಬಳಿಕ ಶವ ಪತ್ತೆಯಾಯಿತು. ಆತನ ಶವ ಪತ್ತೆಯಾಗಿ ಏಳೆಂಟು ದಿನಗಳು ಕಳೆದಿವೆ. ಪೊಲೀಸರು ಪ್ರಕರಣ ಭೇದಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ' ಎಂದು ಸ್ಥಳೀಯರಾದ ಆರ್.ನಾರಾಯಣ್ ಬೇಸರ ವ್ಯಕ್ತಪಡಿಸಿದರು.

2012ರ ಡಿಸೆಂಬರ್ 31ರ ರಾತ್ರಿ ಮ್ಯಾಂಚೆಸ್ಟರ್‌ನ ನೈಟ್ ಕ್ಲಬ್‌ನಲ್ಲಿ ಹೊಸ ವರ್ಷಾಚರಣೆ ಆಚರಿಸಿದ ನಂತರ ಸೌವಿಕ್ ನಾಪತ್ತೆಯಾಗಿದ್ದ. ಈ ಸಂಬಂಧ ಆತನೊಡನೆ ಫ್ಲಾಟ್‌ನಲ್ಲಿದ್ದ ಸ್ನೇಹಿತರು ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರ ತೀವ್ರ ಶೋಧದ ನಂತರ ಸೌವಿಕ್, ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಫುಟ್‌ಬಾಲ್ ಮೈದಾನದ ಬಳಿ ಇರುವ ಬ್ರಿಡ್ಜ್‌ವಾಟರ್ ಕಾಲುವೆಯಲ್ಲಿ ಜನವರಿ 22ರಂದು ಶವವಾಗಿ ಪತ್ತೆಯಾಗಿದ್ದ.

ತನಿಖೆಗೆ ನೆರವು
`ಮಗನ ಸಾವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ವಾಸ್ತವ ತಿಳಿಯಲು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ತನಿಖೆ ಪೂರ್ಣಗೊಳ್ಳುವವರೆಗೂ ಕಾಯುತ್ತೇವೆ. ಅಗತ್ಯಬಿದ್ದರೆ ನಾನು ಕೂಡ ಲಂಡನ್‌ಗೆ ತೆರಳಿ ತನಿಖೆಗೆ ಸಹಕರಿಸುತ್ತೇನೆ' ಎಂದು ಸೌವಿಕ್ ತಂದೆ ಶಾಂತಾನುಪಾಲ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT