ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ `ವಿವೇಕ ಎಕ್ಸ್‌ಪ್ರೆಸ್'

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾಮಿ ವಿವೇಕಾನಂದ ಅವರ 150 ನೇ ಜನ್ಮ ದಿನದ ಅಂಗವಾಗಿ ನಗರದ  ಕಂಟೋನ್‌ಮೆಂಟ್ ರೈಲು ನಿಲ್ದಾಣದಲ್ಲಿ ವಿವೇಕಾನಂದರ ಜೀವನ, ತತ್ವ ಮತ್ತು ಆದರ್ಶಗಳನ್ನು ಸಾರುವ `ವಿವೇಕ ಎಕ್ಸ್‌ಪ್ರೆಸ್' ಪ್ರದರ್ಶನವು ಶುಕ್ರವಾರದಿಂದ ಆರಂಭವಾಗಿದೆ.

ದೇಶದ ಯುವಕರಿಗೆ ಆದರ್ಶಪ್ರಾಯವಾಗಿದ್ದ ಸ್ವಾಮಿ ವಿವೇಕಾನಂದರ ವಿರಳವಾಗಿರುವ ಭಾವಚಿತ್ರಗಳು, ಅವರ ಜೀವನದ ಅಂಶಗಳನ್ನು ಬಿಂಬಿಸುವ ಚಿತ್ರಗಳು, 1893 ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸ್ವಾಮಿ ವಿವೇಕಾನಂದರ ಚಿತ್ರಗಳು ಮತ್ತು ಅವರು ಧ್ಯಾನಾಸಕ್ತರಾಗಿ ಕುಳಿತ ಚಿತ್ರಗಳು ರೈಲಿನಲ್ಲಿ ಪ್ರದರ್ಶನಗೊಂಡಿವೆ.

ಪೇಂಟಿಂಗ್ ಮಾಡಿರುವ ಅವರ ಕೆಲವು ಚಿತ್ರಗಳು, ಆಧ್ಯಾತ್ಮ ಗುರು ಪರಮಹಂಸರ ಚಿತ್ರಗಳು ಕೂಡ ಪ್ರದರ್ಶನಗೊಂಡಿವೆ.ವಿವೇಕಾನಂದರ ಅತಿ ವಿರಳವಾಗಿರುವ ಭಾವಚಿತ್ರಗಳನ್ನು ನೋಡಿ ತುಂಬಾ ಸಂತಸವಾಗುತ್ತಿದೆ. ಅವರ ಬಾಲ್ಯದ ಮತ್ತು ಶಾಲೆಯ ಕೆಲವು ಚಿತ್ರಗಳು ಕಣ್ಣು ತುಂಬುತ್ತವೆ' ಎಂದು ಹಿರಿಯ ನಾಗರಿಕರಾದ ಶಾಲಿನಿ ಶಿನೋಯ್ ಅವರು ಚಿತ್ರ ಪ್ರದರ್ಶನವನ್ನು ನೋಡಿ ಹರ್ಷ ವ್ಯಕ್ತಪಡಿಸಿದರು.

`ಪ್ರದರ್ಶನದ ಸ್ಥಳಕ್ಕೆ ಹೋಗಲು ಸರಿಯಾದ ದಾರಿ ಯಾವುದು ಎಂದು ವೀಕ್ಷಕರಿಗೆ ಹೇಳುವ ಸಹಾಯಕರು ಯಾರೂ ಇಲ್ಲ. ಇದರಿಂದ ಮುಖ್ಯ ದ್ವಾರದ ಪ್ರವೇಶದ ಬಗ್ಗೆ ಯಾರಿಗೂ ಮಾಹಿತಿಯಿಲ್ಲ' ಎಂದು ವಿದ್ಯಾರ್ಥಿನಿ ಕೆ.ಭಾಮಿನಿ ಅಸಮಾಧಾನ ವ್ಯಕ್ತಪಡಿಸಿದರು.ಈ ಪ್ರದರ್ಶನವು ಶನಿವಾರದವರೆಗೆ (ಡಿ.8) ನಡೆಯಲಿದೆ. ಆದರೆ, ಮೊದಲ ದಿನವಾದ ಶುಕ್ರವಾರ ಸಾರ್ವಜನಿಕರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರು.

2013ರ ವರೆಗೆ ದೇಶದೆಲ್ಲೆಡೆ ಸಂಚಾರ
`ವಿವೇಕ ಎಕ್ಸ್‌ಪ್ರೆಸ್' ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆಯನ್ನು ಒಳಗೊಂಡಿರುವ ಪ್ರದರ್ಶನವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಹೌರಾ ರೈಲು ನಿಲ್ದಾಣದಿಂದ ಹೊರಟಿರುವ ಇದು ದೇಶದ ಬೇರೆ ಬೇರೆ ನಗರಗಳಲ್ಲಿ ಸಂಚರಿಸಿದೆ. ಜನವರಿ 2013ರವರೆಗೆ ಇನ್ನೂ ಕೆಲವು ನಗರಗಳಲ್ಲಿ ಸಂಚರಿಸಲಿದೆ.

`ಇನ್ನು ಆಕರ್ಷಕವಾಗುವಂತೆ ಮಾಡಬಹುದಿತ್ತು'
`ಪ್ರದರ್ಶನವನ್ನು ಇನ್ನೂ ಹೆಚ್ಚು ಆಕರ್ಷಕವಾಗುವಂತೆ ಮಾಡಬಹುದಿತ್ತು. ಇಂದು ತಂತ್ರಜ್ಞಾನ ಮುಂದುವರಿದಿದೆ. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ತಿಳಿಸಲು ಆಡಿಯೋ ವಿಡಿಯೋ ವ್ಯವಸ್ಥೆಯನ್ನು ಮಾಡಲು ಅವಕಾಶವಿತ್ತು' -ಕೆ.ತರುಣ್, ವಿದ್ಯಾರ್ಥಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT