ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಸರಣಿ ಪ್ರತಿಭಟನೆ: ವಿದ್ಯುತ್ , ಪಿಜಿ ಕಟ್ಟಡಕ್ಕಾಗಿ ಧರಣಿ

Last Updated 4 ಅಕ್ಟೋಬರ್ 2011, 10:15 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಸೋಮವಾರ ಮೂರು ಸರಣಿ ಧರಣಿ-ಪ್ರತಿಭಟನೆಗಳು ನಡೆದವು. ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಆಗ್ರಹಿಸಿ ರೈತರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟಿಸಿದರೆ, ಹೊಸ ಕಟ್ಟಡ ಕಾಮಗಾರಿ ಆರಂಭಿಸಲು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಕೇಂದ್ರದ ಆವರಣದಲ್ಲಿ ಧರಣಿ ನಡೆಸಿದರು.

ರೈತರ ಧರಣಿ: ವಿದ್ಯುತ್ ಪೂರೈಕೆಯ ಅವ್ಯವಸ್ಥೆಯಿಂದ ಜಿಲ್ಲೆಯ ರೈತರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಅಲ್ಲದಿದ್ದರೂ, ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡುವಷ್ಟಾದರೂ ವಿದ್ಯುತ್ ಅನ್ನು ಪೂರೈಸಬೇಕು ಎಂದು ಆಗ್ರಹಿಸಿ ರೈತ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ರೈತರು ಬೆಂಗಳೂರು ರಸ್ತೆಯಲ್ಲಿರುವ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದರು.

ಕೃಷಿಯನ್ನೆ ಅವಲಂಬಿಸಿರುವ ಜಿಲ್ಲೆಯ ರೈತರಿಗೆ ನೀರಿನ ಸಮಸ್ಯೆಯ ಜೊತೆಗೆ ವಿದ್ಯುತ್ ಸಮಸ್ಯೆಯೂ ಸೇರಿ ಜೀವನ ದುರ್ಭರವಾಗಿದೆ. ಸಮರ್ಪಕವಾಗಿ ಮಳೆಯೂ ಬಾರದೆ ಬೆಳೆಗಳು ಒಣಗುತ್ತಿವೆ. ವಿದ್ಯುತ್‌ಪೂರೈಕೆ ಅಸ್ತವ್ಯಸ್ತಗೊಂಡಿರುವುದು ಸನ್ನಿವೇಶವನ್ನು ಘೋರವಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದ್ದರ ಫಲವನ್ನು ರಾಜ್ಯದ ಜನತೆ ಮತ್ತು ಬಡಪಾಯಿ ರೈತರು ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಟ್ಟಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸಲು ಬೆಸ್ಕಾಂ ಸಿಬ್ಬಂದಿ ಲಂಚ ನೀಡಬೇಕೆಂದು ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅ.12ರಿಂದ ಪದವಿ ಪರೀಕ್ಷೆಗಳೂ ಶುರು ವಾಗುವುದರಿಂದ ಸಂಜೆ ವೇಳೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದೂ ಹಾಜರಿದ್ದ ವಿದ್ಯಾರ್ಥಿ ಮುಖಂಡರು ಆಗ್ರಹಿಸಿ ಬೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್ ನಟರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಮಿತಿಯ ಹೊಳಲಿ ಪ್ರಕಾಶ್, ಎಂ,ಗೋವಿಂದಗೌಡ, ಎಸ್.ಆರ್.ರುದ್ರಸ್ವಾಮಿ, ಬಣಕನಹಳ್ಳಿ ನಟರಾಜ್, ಎಪಿಎಂಸಿ ಅಧ್ಯಕ್ಷ ಎಂ.ಈರಪ್ಪ, ಸದಸ್ಯೆ ರಾಜರಾಜೇಶ್ವರಿ, ಬಿ.ಸುರೇಶ್‌ಗೌಡ, ಪುಟ್ಟರಾಜು, ಅಬ್ಬಣಿ ಸಂಪತ್, ರಾಮು, ಕೆಂಭೋಡಿ ರಾಮು, ರಾಮಕೃಷ್ಣಪ್ಪ, ನಾಗರಾಜ್ ನೇತೃತ್ವ ವಹಿಸಿದ್ದರು.

ವಿದ್ಯಾರ್ಥಿಗಳ ಧರಣಿ: ತಾಲ್ಲೂಕಿನ ಮಂಗಸಂದ್ರದಲ್ಲಿ ಸ್ಥಗಿತಗೊಂಡಿರುವ ಸ್ನಾತಕೋತ್ತರ ಕೇಂದ್ರ ಕಟ್ಟಡ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ನಗರದ ಬಾಲಕರ ಸರ್ಕಾರಿ ಕಾಲೇಜಿನ ಆವರಣದಲ್ಲಿರುವ ಸ್ನಾತಕೋತ್ತರ ಕೇಂದ್ರದ ಮುಂದೆ ಶನಿವಾರ ಅನಿರ್ದಿಷ್ಟ ಧರಣಿ ಆರಂಭಿಸಿದ್ದ ವಿದ್ಯಾರ್ಥಿಗಳು ಸೋಮವಾರ ಕಪ್ಪುಪಟ್ಟಿ ಧರಿಸಿ ಧರಣಿಯನ್ನು ಮುಂದುವರಿಸಿದರು.

ಕಾಮಗಾರಿ ಸ್ಥಗಿತಗೊಂಡು ಮೂರ‌್ನಾಲ್ಕು ತಿಂಗಳಾದರೂ ವಿಶ್ವವಿದ್ಯಾಲಯ ಗಂಭೀರ ಗಮನ ಹರಿಸಿಲ್ಲ. ಆ.15ರ ಹೊತ್ತಿಗೆ ಕೇಂದ್ರವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಕುಲಪತಿಗಳು ನೀಡಿದ ಭರವಸೆ ಈಡೇರಿಲ್ಲ. ಧರಣಿ ಆರಂಭಿಸಿರುವ ಕುರಿತು ಕೇಂದ್ರದ ನಿರ್ದೇಶಕರ ಮೂಲಕವೇ ಕುಲಪತಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದರು. ಕಾಮಗಾರಿ ಆರಂಭಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಓಂಶಕ್ತಿ ಚಲಪತಿ ಭೇಟಿ ನೀಡಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು. ಬಿ.ಸುರೇಶ್‌ಗೌಡ, ಶಂಕರ್, ಪ್ರದೀಪ್, ದೇವರಾಜ್, ಶ್ರೀನಿವಾಸ್, ಅಂಬರೀಶ್, ಮಮತಾ, ಆಶಾ, ಸರಳಾ ನೇತೃತ್ವ ವಹಿಸಿದ್ದರು.

ಸಿಐಟಿಯು: ಜಾಗತಿಕ ಕಾರ್ಮಿಕ ಸಂಘಟನೆಗಳ ಒಕ್ಕೂಟ ನೀಡಿದ್ದ ಕರೆಯ ಮೇರೆಗೆ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಆಗ್ರಹಿಸಿ ಸಿಐಟಿಯು ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರವಾಸಿ ಮಂದಿರದಿಂದ ಶುರುವಾದ ಮೆರವಣಿಗೆ ಎಂ.ಜಿ.ರಸ್ತೆ, ಬಾಲಕರ ಕಾಲೇಜು ವೃತ್ತ, ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೊನೆಗೊಂಡಿತು. ಹೆಚ್ಚುವರಿ ಜಿಲ್ಲಾಧಿಕಾರಿ                  ಎನ್.ಬಾಬಣ್ಣನವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಉಪಾಧ್ಯಕ್ಷ ಜಿ.ಅರ್ಜುನನ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ನಾಗರತ್ನ ಮಾತನಾಡಿದರು.

ಕಾರ್ಮಿಕರ ಪರವಾದ ಹಕ್ಕುಗಳು ಬದಲಾವಣೆಯಾಗುತ್ತಿವೆ. ಮಾಲಿಕರ ಪರವಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಎಚ್.ಎಂ.ಯಲ್ಲಪ್ಪ, ಬಿ.ವಿ.ಸಂಪಂಗಿ, ಮುನಿರಾಜಮ್ಮ, ಬಿ,.ಈಶ್ವರಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT